ತೆರೆಯ ಮೇಲೆ ಕಾಣುವ ದೃಶ್ಯಗಳೆಲ್ಲವೂ ಸತ್ಯವಾಗಿರುವುದಿಲ್ಲ, ಅದರ ಹಿಂದೆ ತಂತ್ರಜ್ಞರ ಕೈಚಳಕವಿರುತ್ತದೆ. ವೈರಲ್ ಆಗಿರುವ ಸೀರಿಯಲ್ ಶೂಟಿಂಗ್ ವಿಡಿಯೋವೊಂದು, ನಾಯಕ ನಾಯಕಿಯನ್ನು ಆಸ್ಪತ್ರೆಗೆ ಎತ್ತಿಕೊಂಡು ಓಡುವ ದೃಶ್ಯ ನೋಡಬಹುದು.
ತೆರೆಯ ಮೇಲೆ ಕಾಣುವುದೆಲ್ಲವೂ ಸತ್ಯವಿಲ್ಲ. ಅದರ ಹಿಂದೆ ಕ್ಯಾಮೆರಾಮನ್ಗಳ ಚಳಕ ಬಹಳ ಇರುತ್ತದೆ. ಗುಡ್ಡದಿಂದ ಹಾರುವುದು, ಫೈಟಿಂಗ್ ಮಾಡುವುದು, ಚಾಕುವಿನಿಂದ ಇರಿಯುವುದು, ಬೆಂಕಿ ಬೀಳುವುದು, ನಟ ಅಥವಾ ನಟಿಯನ್ನು ಎತ್ತುಕೊಂಡು ಹೋಗುವುದು... ಹೀಗೆ ಒಂದು ದೃಶ್ಯವನ್ನು ಜನರಿಗೆ ನೈಜ ಎನ್ನುವಂತೆ ಬಿಂಬಿಸುವಲ್ಲಿ ತಂತ್ರಜ್ಞರ ದುಡಿಮೆ, ಕಷ್ಟ ಅಷ್ಟೇ ಇರುತ್ತದೆ. ಆದರೆ ಅವರೆಲ್ಲರೂ ತೆರೆಮರೆಯ ಕಲಾವಿದರು. ನಮ್ಮ ಕಣ್ಣಿಗೆ ಕಾಣುವುದು ಪಾತ್ರಧಾರಿಗಳು ಮಾತ್ರ, ಅವರಿಗೇ ಎಲ್ಲಾ ಕ್ರೆಡಿಟ್ ಕೊಟ್ಟು ಬಿಡುತ್ತೇವೆ. ಆದರೆ ಇದರ ಹಿಂದಿರೋ ಸೂತ್ರಧಾರಿಗಳು ಯಾರ ಕಣ್ಣಿಗೂ ಬೀಳುವುದೇ ಇಲ್ಲ. ಆದರೆ ನಿಜವಾಗಿಯೂ ಅಂಥ ದೃಶ್ಯಗಳ ಮೊದಲ ಚಪ್ಪಾಳೆ ಹೋಗಬೇಕಿರುವುದು ಸೂತ್ರಧಾರಿಗಳಿಗೆ.
ಭಾರವಿದ್ರೂ ಹೇಗಪ್ಪಾ ಇದು ಸಾಧ್ಯ?
ಇದೀಗ ಅಂಥದ್ದೇ ಒಂದು ದೃಶ್ಯದ ವಿಡಿಯೋ ವೈರಲ್ ಆಗಿದೆ. ಸಾಮಾನ್ಯವಾಗಿ ಆಸ್ಪತ್ರೆಯ ದೃಶ್ಯಗಳು ಬಂದಾಗ ಡಾಕ್ಟರ್ ಡಾಕ್ಟರ್ ಎಂದು ಕೂಗಿಕೊಂಡು ನಾಯಕನೋ ಅಥವಾ ಇನ್ನಾರೋ ನಟಿಯರನ್ನು ಸಲೀಸಾಗಿ ಎತ್ತುಕೊಂಡು ಓಡೋಡಿ ಬರುತ್ತಾರೆ. ಕೆಲವೊಮ್ಮೆ ನಾಯಕಿ ಭಾರವಾಗಿದ್ದರೂ ಅಥವಾ ನಾಯಕನಲ್ಲಿ ಶಕ್ತಿ ಅಷ್ಟೊಂದು ಇಲ್ಲ ಎನ್ನಿಸಿದರೂ, ಇಷ್ಟು ಸಲೀಸಾಗಿ ಹೇಗೆ ಮಾಡ್ತಾರಪ್ಪಾ ಎಂದು ಎನ್ನಿಸುವುದು ಉಂಟು. ತೆಳ್ಳಗೆ ಇರುವ ಪತ್ನಿನೋ, ಗರ್ಲ್ಫ್ರೆಂಡೋ ಅಥವಾ ಇನ್ನಾರನ್ನೇ ಎಷ್ಟು ಕಷ್ಟಪಟ್ಟರೂ ನಿಜ ಜೀವನದಲ್ಲಿ ಎತ್ತಲು ಸಾಧ್ಯವಾಗದೇ ಇರುವಾಗ, ಅಬ್ಬಬ್ಬಾ ಇಂಥನಾಯಕಿಯನ್ನೂ ಅದ್ಹೇಗೆ ಎತ್ತಿಬಿಡ್ತಾರಪ್ಪಾ ಎಂದು ಎನ್ನಿಸುವುದು ಸಹಜವೇ.
ಸೀರಿಯಲ್ ಶೂಟಿಂಗ್ ವಿಡಿಯೋ
ಆದರೆ, ಇಲ್ಲಿ ನಿಜವಾಗಿಯೂ ನಾಯಕಿಯನ್ನು ಅಥವಾ ಇನ್ನಾರನ್ನೋ ಎತ್ತುವುದು ನಾಯಕರಲ್ಲ, ಬದಲಿಗೆ ತೆರೆಮರೆಯಲ್ಲಿ ಇರುವ ಇದೇ ಸೂತ್ರಧಾರಿಗಳು ಅರ್ಥಾತ್ ಅದು ಕ್ಯಾಮೆರಾ ಕೈಚಳಕ. ಇಲ್ಲಿ ಎತ್ತುವ ದೃಶ್ಯ ಬಂದಾಗ, ಆ ಶೂಟಿಂಗ್ ಸೆಟ್ ಹೇಗೆ ರೆಡಿ ಮಾಡಲಾಗುತ್ತದೆ ಎನ್ನುವ ವಿಡಿಯೋ ಒಂದನ್ನು ಇಲ್ಲಿ ಶೇರ್ ಮಾಡಲಾಗಿದೆ. ksc_vlogs_mawa ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಬಹುಶಃ ಇದು ಯಾವುದೋ ಸೀರಿಯಲ್ ಶೂಟಿಂಗ್.
ಡಾಕ್ಟರ್ ಡಾಕ್ಟರ್ ಎಂದು ಓಡೋಡಿ ಬರೋದು ಹೀಗೆ
ಇದರಲ್ಲಿ ನಾಯಕಿಯನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಆಗ ನಾಯಕ ಎಂದಿನಂತೆ ಸಲೀಸಾಗಿ ಆಕೆಯನ್ನು ಎತ್ತಿಕೊಂಡು ಡಾಕ್ಟರ್ ಡಾಕ್ಟರ್ ಎಂದು ಓಡೋಡಿ ಬರುತ್ತಾನೆ. ಇದನ್ನು ತೆರೆಯ ಮೇಲೆ ನೋಡಿದಾಗ ಅಬ್ಬಬ್ಬಾ ಈ ನಟರಿಗೆ ಇಷ್ಟು ಎನರ್ಜಿ ಹೇಗಪ್ಪಾ ಬರುತ್ತೆ ಎನ್ನುವುದು ಉಂಟು. ಆದರೆ ನಿಜವಾಗಿಯೂ ಅಲ್ಲಿ ನಡೆಯುವುದೇ ಬೇರೆ. ಹಳಿಗಳನ್ನು ಸೃಷ್ಟಿಮಾಡಿ ಅದರ ಮೇಲೆ ಗಾಲಿ ಇರುವ ಖುರ್ಚಿಯನ್ನು ಓಡಿಸಲಾಗುತ್ತದೆ. ಅದರ ಮೇಲೆ ನಟಿಯನ್ನು ಮಲಗಿಸಲಾಗುತ್ತದೆ. ನಟಿಯನ್ನು ಎತ್ತಿಕೊಂಡಂತೆ ನಟ ಪೋಸ್ ಕೊಡುತ್ತಾನೆ. ಆ ಗಾಲಿ ತಾನಾಗಿಯೇ ಚಲಿಸುತ್ತದೆ. ಆ ಮೇಲೆ ಎಡಿಟಿಂಗ್ ಮಾಡುವವರು ತಮ್ಮ ಕೈಚಳಕ ತೋರಿಸಿ ಅಲ್ಲಿರುವ ಎಲ್ಲಾ ಪ್ರಾಪರ್ಟಿಗಳನ್ನೂ ತೆಗೆಯುತ್ತಾರೆ. ಅಲ್ಲಿ ನಮಗೆ ಕಾಣಿಸುವುದು ಡಾಕ್ಟರ್ ಡಾಕ್ಟರ್ ಎಂದು ನಾಯಕ, ನಾಯಕಿಯನ್ನು ಎತ್ತಿಕೊಂಡು ಓಡೋಡಿ ಬರುವ ದೃಶ್ಯವಷ್ಟೇ. ಅದರ ವಿಡಿಯೋ ಈ ಕೆಳಗೆ ಇದೆ ನೋಡಿ.


