Lakshmi Nivasa: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ, ಕೆಲಸವಿಲ್ಲದೆ ಇರುವ ಶ್ರೀನಿವಾಸ್‌ಗೆ ಸಂತೋಷ್ ವ್ಯಂಗ್ಯವಾಡುತ್ತಾನೆ. ಅದಕ್ಕೆ ಶ್ರೀನಿವಾಸ್ ಮಾತಿನಿಂದಲೇ ತಕ್ಕ ಉತ್ತರ ನೀಡುತ್ತಾರೆ. ವೀಣಾ ಕೂಡಾ ಮಾವನ ಪರವಾಗಿ ಮಾತನಾಡುತ್ತಾ ಗಂಡನಿಗೆ ಬುದ್ಧಿ ಹೇಳುತ್ತಾಳೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಸೀರಿಯಲ್‌ನ ಸಂತೋಷ್ ಪಾತ್ರ ಕೆಲವೊಮ್ಮೆ ಸಿಟ್ಟು, ಮತ್ತೊಮ್ಮೆ ನಗು ತರಿಸುತ್ತದೆ. ಎಲ್ಲದರಲ್ಲಿಯೂ ಹಣದ ಬಗ್ಗೆ ಲೆಕ್ಕ ಹಾಕುವ ಸಂತೋಷ್ ಮನೆ ಹಿರಿಯ ಮಗನಾದ್ರೂ ಯಾವುದೇ ಜವಾಬ್ದಾರಿಯನ್ನು ಮಾತ್ರ ತೆಗೆದುಕೊಳ್ಳಲ್ಲ. ಮಾತಾಡು ಅಂದ್ರೆ ನಾಲ್ಕು ಹೆಚ್ಚು ಮಾತನಾಡುವ ಸಂತೋಷ್, ಒಂದು ರೂಪಾಯಿಯನ್ನು ನೀಡದಷ್ಟು ಜಿಪುಣ. ತಂದೆ ಶ್ರೀನಿವಾಸ್ ಕೆಲಸ ಕಳೆದುಕೊಂಡು ಆಟೋ ಚಲಾಯಿಸುತ್ತಿದ್ದರೂ ಕೊಂಕು ತೆಗೆದಿದ್ದನು. ಆದ್ರೂ ಛಲ ಬಿಡದೇ ಶ್ರೀನಿವಾಸ್ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಆಟೋ ಸಹ ರಿಪೇರಿಗೆ ಬಂದಿದ್ದು, ಶ್ರೀನಿವಾಸ್ ಹೊಸ ಕೆಲಸದ ಹುಡುಕಾಟ ಮಾಡುತ್ತಿರೋದಕ್ಕೂ ಸಂತೋಷ್ ವ್ಯಂಗ್ಯ ಮಾಡಿದ್ದನು. ಈ ವ್ಯಂಗ್ಯಕ್ಕೆ ಸೌಮ್ಯ ಮಾತುಗಳಿಂದಲೇ ತಿರುಗೇಟು ನೀಡಿದ್ದಾರೆ.

ಇಂದಿನ ಪ್ರೋಮೋದಲ್ಲಿ ಸಂತೋಷ್ ಕಾಫಿ ಕುಡಿಯುತ್ತಾ ಮೊಬೈಲ್ ನೋಡುತ್ತಿರುತ್ತಾನೆ. ಅಲ್ಲಿಗೆ ಬಂದ ಶ್ರೀನಿವಾಸ್ ಸಹ ಸೊಸೆ ವೀಣಾಳಿಂದ ಕಾಫಿ ತರಿಸಿಕೊಂಡು ಕುಡಿಯುತ್ತಿರುತ್ತಾರೆ. ಬೆಳಗ್ಗೆಯೇ ಎಲ್ಲೋ ಹೊರಟಿರೋ ಹಾಗಿದೆ. ಈಗಂತೂ ಯಾವ ಕೆಲಸವೂ ಇಲ್ಲ. ಮನೆಯಲ್ಲಿಯೇ ಯಾಕೆ ಸುಮ್ಮನೆ ಇರಬಾರದು. ಹೊರಗಡೆ ಹೋದರೂ ಯಾವುದಾದರೂ ಒಂದು ಪಾರ್ಕ್‌ಗೆ ಹೋಗ್ತಿರಿ. ಅಲ್ಲಿ ನಿಮ್ಮಂತವರೇ ಇರ್ತಾರೆ. ಅವರ ಜೊತೆ ಕುಳಿತು ಹರಟೆ ಹೊಡೆದು ವಾಪಸ್ ಮನೆಗೆ ಬರ್ತಿರಿ ಎಂದು ನಗುತ್ತಾ ತಂದೆಯ ಮನಸ್ಸಿಗೆ ಸಂತೋಷ್ ನೋವುಂಟು ಮಾಡುತ್ತಾನೆ. 

ಸಂತೋಷ್ ಮಾತಿಗೆ ಸೌಮ್ಯವಾಗಿ ತಿರುಗೇಟು ನೀಡಿದ ಶ್ರೀನಿವಾಸ್, ಮನೆಯಲ್ಲಿ ಕುಳಿತರೆ ಆಗುತ್ತಾ? ಹೊರಗೆ ಹೋಗಿ ನಾಲ್ಕು ಜನರೊಂದಿಗೆ ಮಾತಾಡಿದ್ರೆ ಏನಾದರು ಕೆಲಸ ಸಿಗುತ್ತೆ. ನಾನು ಯಾವ ತಪ್ಪು ಮಾಡಿರಲಿಲ್ಲ. ಆದರೂ ಕೆಲಸದಿಂದ ತೆಗೆದರು. ಕೆಲಸ ಹೋಯ್ತು ಅಂತ ಆಟೋ ಓಡಿಸೋಕೆ ಶುರು ಮಾಡಿದೆ. ಇತ್ತೀಚೆಗೆ ಆಟೋ ಸಹ ತೊಂದರೆ ಕೊಡುತ್ತಿದೆ. ರಾತ್ರಿ ಪಾಳೆಯ ಸೆಕ್ಯುರಿಟಿ ಕೆಲಸಕ್ಕೆ ಹೋದೆ. ಆ ಪುಣ್ಯಾತ್ಮನು ಸಹ ಕೆಲಸದಿಂದ ತೆಗೆದ. ಹಾಗಂತ ಮನೆಯಲ್ಲಿ ಕುಳಿತುಕೊಳ್ಳೋಕೆ ಆಗುತ್ತಾ? ಅನ್ನದ ಋಣ ಎಲ್ಲಿದೆಯೂ ಎಂದು ಶ್ರೀನಿವಾಸ್ ಸೂಕ್ಷ್ಮವಾಗಿ ಹೇಳುತ್ತಾನೆ. 

ಸರಿ, ಯಾವುದಾದರೂ ಒಳ್ಳೆಯ ಕೆಲಸವನ್ನು ಹುಡುಕಿಕೊಳ್ಳಿ. ನಮ್ಮ ಮರ್ಯಾದೆ ಹೋಗುವಂತಹ ಕೆಲಸ ಮಾಡಬೇಡಿ ಎಂದು ಸಂತೋಷ್ ಮತ್ತೆ ಕೊಂಕು ಮಾತುಗಳನ್ನಾಡುತ್ತಾನೆ. ಈ ಮಾತುಗಳಿಗೆ ಕೋಪಗೊಂಡ ಶ್ರೀನಿವಾಸ್, ನಾನು ಯಾವತ್ತೂ ಮರ್ಯಾದೆ ಹೋಗುವಂತಹ ಕೆಲಸ ಮಾಡಿಲ್ಲ. ಮುಂದೆಯೂ ಮಾಡಲ್ಲ. ನಮ್ಮನ್ನು ಆಡಿಕೊಳ್ಳುವ ನಿನ್ನ ಫ್ರೆಂಡ್ಸ್ ಬಳಿ ಕಷ್ಟದ ಸಮಯದಲ್ಲಿ 10 ಸಾವಿರ ಹಣ ಕೇಳಿ ನೋಡು? ನೀನು ಹೇಗಿದ್ರೂ ಜನ ಮಾತಾಡ್ತಾರೆ. ಜನಾರ್ಧನನನ್ನು ಮೆಚ್ಚಿಸಬಹುದು. ಆದ್ರೆ ಸುತ್ತಲಿನ ಜನರನ್ನು ಮೆಚ್ಚಿಸಲು ಆಗಲ್ಲ ಎಂದು ಸೂಕ್ಷ್ಮವಾಗಿ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಮಗನಿಗೆ ತಿರುಗೇಟು ನೀಡಿದರು. 

ಇದನ್ನೂ ಓದಿ: ಗಂಡ ಜಯಂತ್‌ ಹೃದಯಕ್ಕೆ ಒಂದೊಂದೇ ಬಾಣ ಬಿಟ್ಟ ಚಿನ್ನುಮರಿ; ಇನ್ಮುಂದೆ ಏನಿದ್ರೂ ಜಾನು ಹವಾ!

ಮಾವನಿಗೆ ಸಾಥ್ ಕೊಟ್ಟ ವೀಣಾ
ಮೊದಲು ಇವರ ಬಾಯಿಯನ್ನು ಮುಚ್ಚಿಸಬೇಕು. ಈ ತಿಂಗಳು ಸ್ವಲ್ಪ ಖರ್ಚು ಹೆಚ್ಚಿದ್ದು, 500 ರೂಪಾಯಿ ಹೆಚ್ಚು ಕೊಡು ಅಂದ್ರೆ ಆಗಲ್ಲ ಅಂತೀರಿ. ಈಗ ಮಾವನಿಗೆ ಕೆಲಸಕ್ಕೆ ಹೋಗಬೇಡಿ ಅಂತ ಹೇಳ್ತೀರಿ. ಯಾಕೆ ಬೇಡದೇ ಇರೋ ಮಾತುಗಳನ್ನಾಡಿ ಅವರ ಮನಸ್ಸಿಗೆ ನೋವುಂಟು ಮಾಡ್ತೀರಾ? ಇಷ್ಟು ದೊಡ್ಡವರಾಗಿ ದೊಡ್ಡವರ ಜೊತೆ ಹೇಗೆ ಮಾತನಾಡಬೇಕು ಅನ್ನೋದು ನಿಮಗೆ ಗೊತ್ತಿಲ್ಲವಲ್ಲ ಎಂದು ಗಂಡನಿಗೆ ವೀಣಾ ಕ್ಲಾಸ್ ತೆಗೆದುಕೊಂಡಿದ್ದಾಳೆ.

ಇದನ್ನೂ ಓದಿ: ಕೊನೆಗೂ ಜಾನು ಬುದ್ಧಿವಂತೆ ಆದ್ಳು.. ಹೊಡಿರಿ ಚಪ್ಪಾಳೆ; ಒಂಟಿಯಾದ ಸೈಕೋ ಜಯಂತ್!