Krishi Thapanda YouTube Vlog: ಮೊದಲೇ ಸಾಕಷ್ಟು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಿದ್ದ ಕನ್ನಡ ನಟಿ ಹಾಗೂ 'ಬಿಗ್ ಬಾಸ್' ಖ್ಯಾತಿಯ ಕೃಷಿ ತಾಪಂಡ ಇದೀಗ ಮೊದಲ ಬಾರಿಗೆ ತಮ್ಮ ಮೌನ ಮುರಿದಿದ್ದಾರೆ.
ಮೊದಲೇ ಸಾಕಷ್ಟು ವೈಯಕ್ತಿಕ ಸಂಕಷ್ಟಗಳನ್ನು ಎದುರಿಸಿದ್ದ ಕನ್ನಡ ನಟಿ ಹಾಗೂ 'ಬಿಗ್ ಬಾಸ್' ಖ್ಯಾತಿಯ ಕೃಷಿ ತಾಪಂಡ ಇದೀಗ ಮೊದಲ ಬಾರಿಗೆ ತಮ್ಮ ಮೌನ ಮುರಿದಿದ್ದಾರೆ. ಇತ್ತೀಚೆಗೆ ನಡೆದ ವಿವಾದಗಳು, ಗೆಳೆಯ ವೈಶಾಖ್ ಆತ್ಮ*ಹ*ತ್ಯೆ ಪ್ರಕರಣದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದ ನಟಿ, ಇದೀಗ ತಮ್ಮ ಯೂಟ್ಯೂಬ್ ವ್ಲಾಗ್ ಮೂಲಕ ಭಾವುಕವಾಗಿ ಮಾತನಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿರುವ ಟ್ರೋಲ್‌ಗಳು ಮತ್ತು ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಈ ಹಿಂದೆ ಕೃಷಿ ತಾಪಂಡ ಹೆಸರು ಹಲವು ವಿವಾದಗಳ ನಡುವೆ ಕೇಳಿಬಂದಿತ್ತು. ಉದ್ಯಮಿ ಎವಿಆರ್ (ಅರವಿಂದ್ ವೆಂಕಟೇಶ್ ರೆಡ್ಡಿ) ವಿರುದ್ಧ ದೂರು ದಾಖಲಿಸಿದ್ದ ಅವರು, ಬಳಿಕ ಎವಿಆರ್‌ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮ್ಮ ಆಪ್ತ ಸ್ನೇಹಿತ ವೈಶಾಖ್ ಬಂಧನಕ್ಕೊಳಗಾದ ಬೆಳವಣಿಗೆ ಎದುರಿಸಿದರು. ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವೈಶಾಖ್ ಕೃಷಿ ತಾಪಂಡ ಅವರ ಮನೆಯಲ್ಲಿ ಆತ್ಮ*ಹ*ತ್ಯೆ ಮಾಡಿಕೊಂಡಿದ್ದು, ಈ ಘಟನೆ ನಟಿಗೆ ಭಾರೀ ಆಘಾತ ನೀಡಿತ್ತು. ಅಂದಿನಿಂದ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದ ಅವರು, ಈಗ ತಮ್ಮ ಮನಸ್ಥಿತಿಯನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.
ಉತ್ತರ ಕೊಡಲು ಕೂಡ ನನಗೆ ಸಾಧ್ಯವಾಗುತ್ತಿಲ್ಲ
ತಮ್ಮ ವ್ಲಾಗ್‌ನಲ್ಲಿ ಮಾತನಾಡಿರುವ ಕೃಷಿ, "ನನ್ನ ಜೀವನದಲ್ಲಿ ಏನಾಗುತ್ತಿದೆ ಅನ್ನೋದೇ ನನಗೆ ಅರ್ಥವಾಗುತ್ತಿಲ್ಲ. ಒಂದರ ಮೇಲೊಂದು ಆಘಾತಗಳು ಬರುತ್ತಿವೆ. ಆದರೂ ಬದುಕಿಗಾಗಿ ಮತ್ತೆ ಎದ್ದು ನಿಲ್ಲಲೇಬೇಕು. ಕೆಲವೊಮ್ಮೆ ಹೆಣ್ಣಾಗಿ ಹುಟ್ಟಿದ್ದೇ ಶಾಪ ಅನಿಸುತ್ತದೆ. 'ಹೇಗಿದ್ದೀರಾ?' ಎಂದು ಯಾರಾದರೂ ಕೇಳಿದರೆ ಉತ್ತರ ಕೊಡಲು ಕೂಡ ನನಗೆ ಸಾಧ್ಯವಾಗುತ್ತಿಲ್ಲ" ಎಂದು ಭಾವುಕರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೆಗೆಟಿವ್ ಕಾಮೆಂಟ್‌ಗಳ ಕುರಿತು ಪ್ರತಿಕ್ರಿಯಿಸಿದ ಅವರು, "ಒಳ್ಳೆಯ ಟೊಮ್ಯಾಟೋಗಳ ಮಧ್ಯೆ ಒಂದು ಕೊಳೆತ ಟೊಮ್ಯಾಟೋ ಇದ್ದರೆ ಮೊದಲು ಅದನ್ನೇ ತೆಗೆದು ಬಿಸಾಡುತ್ತೇವೆ. ಅದೇ ರೀತಿ ನನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರನ್ನು ನಾನು ಬ್ಲಾಕ್ ಮಾಡುತ್ತೇನೆ. ಎಲ್ಲರ ಮಾತಿಗೂ ಉತ್ತರ ಕೊಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ನನ್ನ ಬಿಲ್‌ಗಳನ್ನು ಕಟ್ಟುವುದಿಲ್ಲ
ಇತ್ತೀಚೆಗೆ ಜಾಹೀರಾತು ಹಾಗೂ ವೃತ್ತಿಪರ ಕೆಲಸಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಂಡಿದ್ದಕ್ಕೆ ಟೀಕೆ ಮಾಡಿದವರ ವಿರುದ್ಧವೂ ಕೃಷಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಾನು ತುಂಬಾ ಪ್ರೀತಿಯಿಂದ ಕಟ್ಟಿದ ಮನೆಯಲ್ಲಿ ಇಂದು ನಾನು ವಾಸಿಸುತ್ತಿಲ್ಲ. ಆದರೂ ಅದರ ಬಾಡಿಗೆ, ನನ್ನ ಇಎಂಐ, ವೈದ್ಯಕೀಯ ವೆಚ್ಚ ಎಲ್ಲವನ್ನೂ ನಾನೇ ಭರಿಸಬೇಕು. ನಾನು ಕೆಲಸ ಮಾಡದೇ ಇದ್ದರೆ ನನ್ನ ಖರ್ಚುಗಳನ್ನು ಯಾರು ನೋಡಿಕೊಳ್ಳುತ್ತಾರೆ? ನನ್ನ ಕೆಲಸದ ಬಗ್ಗೆ ಪ್ರಶ್ನೆ ಮಾಡುವವರು ನನ್ನ ಬಿಲ್‌ಗಳನ್ನು ಕಟ್ಟುವುದಿಲ್ಲ" ಎಂದು ನೇರವಾಗಿ ಹೇಳಿದ್ದಾರೆ.
ಇದೇ ವೇಳೆ, ತಮ್ಮ ಮೌನವನ್ನು ದುರ್ಬಲತೆ ಎಂದು ಭಾವಿಸಿ ಟೀಕೆ ಮಾಡುವವರ ವಿರುದ್ಧವೂ ಅವರು ಕಿಡಿಕಾರಿದ್ದಾರೆ. "ಒಬ್ಬರು ಸುಮ್ಮನಿದ್ದಾರೆ ಅಂದ್ರೆ ಅವರನ್ನೇ ಗುರಿಯಾಗಿಸಿ ಮಾತನಾಡುವುದು, ಎಲ್ಲದಕ್ಕೂ ಅವರನ್ನೇ ಹೊಣೆ ಮಾಡುವುದು ತುಂಬಾ ನೋವು ಕೊಡುತ್ತದೆ. ನಿಮಗೆ ಅದು ಕೇವಲ ಒಂದು ಸುದ್ದಿ ಇರಬಹುದು. ಆದರೆ ನನಗೆ ಅದು ಜೀವನಪೂರ್ತಿ ಮರೆಯಲಾಗದ ನಷ್ಟ. ನಾನು ನಗಿದರೆ ಬೇಗ ಮರೆತಳು ಅಂತೀರಾ, ಅತ್ತರೆ ನಾಟಕ ಅಂತೀರಾ. ನನ್ನ ಹೃದಯ ಒಡೆದಿದ್ದರೂ ಬದುಕಿಗಾಗಿ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಬೇಕಾಗಿದೆ" ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಕೃಷಿ ತಾಪಂಡ ಅವರ ಈ ಭಾವುಕ ವ್ಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನೇಕ ಅಭಿಮಾನಿಗಳು ಅವರಿಗೆ ಧೈರ್ಯ ತುಂಬುವ ಸಂದೇಶಗಳನ್ನು ಕಳುಹಿಸುತ್ತಿದ್ದರೆ, ಮತ್ತೊಂದೆಡೆ ಈ ವಿಡಿಯೋ ಮತ್ತೆ ಅವರ ವೈಯಕ್ತಿಕ ಜೀವನದ ಕುರಿತ ಚರ್ಚೆಗೆ ವೇದಿಕೆಯಾಗಿದೆ.


