ಒಂದು ಕಡೆ ಹರ್ಷ ಭುವಿ ಮದುವೆಗೆ ಚಾಲನೆ ಸಿಕ್ಕಿದೆ. ಇನ್ನೊಂದು ಕಡೆ ರತ್ನಮಾಲಾ ಆರೋಗ್ಯ ಹದಗೆಟ್ಟಿದೆ. ಸದ್ಯದ ಅವರ ಸ್ಥಿತಿ ನೋಡಿದರೆ ಅವರು ಹರ್ಷ-ಭುವಿ ಮದುವೆವರೆಗಾದ್ರೂ ಇರ್ತಾರಾ ಅನ್ನೋದೇ ಡೌಟು.
ಎರಡು ಬಗೆಯ ಸನ್ನಿವೇಶಗಳಿಗೆ 'ಕನ್ನಡತಿ' ಸೀರಿಯಲ್ ಸಾಕ್ಷಿಯಾಗುತ್ತಿದೆ. ಒಂದು ಅತೀ ಸಂತೋಷದ ಕ್ಷಣವಾದರೆ, ಇನ್ನೊಂದು ಅತ್ಯಂತ ದುಃಖದ ಕ್ಷಣ. ಒಂದು ಕಡೆ ಹರ್ಷ ಭುವಿಯ ಮದುವೆಯ ಸಂಭ್ರಮ ಶುರುವಾಗಿದೆ. ಇದು ಹರ್ಷನ ಎಷ್ಟೋ ದಿನಗಳ ಕನಸು. ಆತ ಭುವಿಗಾಗಿ ಹಂಬಲಿಸಿದ್ದು, ಹಾತೊರೆದದ್ದು, ಪ್ರೀತಿ ಸಿಗದೆ ಒದ್ದಾಡಿದ್ದು, ಈ ಎಲ್ಲ ಘಟನೆಗಳು ಮುಗಿದು ಭುವಿ ಹರ್ಷನ ಪ್ರೀತಿಗೆ ಒಪ್ಪಿ ಅವರ ಮದುವೆ ಸಂಭ್ರಮ ಈಗಾಗಲೇ ಶುರುವಾಗಿದೆ. ಇದು ಹರ್ಷನ ಬದುಕಿನಲ್ಲಿ ಅತೀ ಸಂಭ್ರಮದ ಘಳಿಗೆ.
ಆದರೆ ದುರಾದೃಷ್ಟವಶಾತ್ ಅತೀ ದುಃಖದ ಘಳಿಗೆಯೂ ಹತ್ತಿರದಲ್ಲಿರುವ ಹಾಗೆ ಕಾಣುತ್ತಿದೆ. ಕಾರಣ ರತ್ನಮಾಲಾ ಅವರ ಆರೋಗ್ಯ. ಇದು ಯಾವ ಮಟ್ಟಿಗೆ ಬಿಗಡಾಯಿಸಿದೆ ಅಂದರೆ ಅವರು ಮದುವೆಯ ಕ್ಷಣ ಕಣ್ತುಂಬಿಕೊಳ್ಳೋಕೆ ಇರ್ತಾರ ಇರಲ್ವಾ ಅನ್ನೋ ಅನುಮಾನ ದಟ್ಟವಾಗಿದೆ. ಯಾವ ಕ್ಷಣದಲ್ಲಿ ಬೇಕಿದ್ದರೂ ಮದುವೆ ಮನೆಯಲ್ಲಿ ಸ್ಮಶಾನ ಸದೃಶ ವಾತಾವರಣ ನಿರ್ಮಾಣವಾಗಬಹುದು ಅನ್ನೋ ಮಾತನ್ನು ರತ್ನಮಾಲಾ ಅವರನ್ನು ನೋಡಿಕೊಳ್ತಿರುವ ಡಾಕ್ಟರ್ ಹೇಳಿದ್ದಾರೆ.
Reels: ಹವಿ ಮದ್ವೆ ನಿಲ್ಲಿಸಿದ ಖುಷಿಗೆ ರಾ ರಾ ರಕ್ಕಮ್ಮ ಸಾಂಗ್ ಗೆ ಡ್ಯಾನ್ಸ್ ಮಾಡ್ತಿದ್ದಾರಾ ಮಂಗಳಜ್ಜಿ, ವರೂ?
'ನಮ್ಮದು ಕನ್ನಡ ಮದುವೆ ಆಗಬೇಕು. ಮದುವೆಯ ಪ್ರತೀ ಶಾಸ್ತ್ರ, ವಿಧಿಗಳನ್ನೂ ಕನ್ನಡದಲ್ಲಿ ಹೇಳಿ ಅರ್ಥ ಮಾಡಿ ಮದುವೆ ಆಗಬೇಕು' ಇದು ಹವಿ ಮದುವೆಯ ಪ್ಲಾನ್. ಅದರಂತೆಯೇ ಚಪ್ಪರ ಶಾಸ್ತ್ರ ನಡೆದಿದೆ. 'ದೊರೆಸಾನಿ' ಸೀರಿಯಲ್‌ನ ಪುರುಷೋತ್ತಮ ಹಾಗೂ 'ಗೀತಾ' ಸೀರಿಯಲ್‌ನ ವಿಜಯ್ ಈ ಸಂಭ್ರಮಕ್ಕೆ ಜೊತೆಯಾಗಿದ್ದರು. ಇದಾದ ಬಳಿಕ ಬಳೆ ತೊಡಿಸುವ ಶಾಸ್ತ್ರ, ಅರಿಶಿನ ಶಾಸ್ತ್ರಗಳು ನಡೆಯುತ್ತಿವೆ. ಸೀರಿಯಲ್ ಸುಂದರಿಯರಾದ ಅಹಲ್ಯಾ, ದೀಪಿಕಾ ಮೊದಲಾದವರು ಬಂದು ಈ ಕ್ಷಣವನ್ನು ಇನ್ನಷ್ಟು ಕಲರ್‌ಫುಲ್ ಆಗಿಸಿದ್ದಾರೆ. ಮುಂದೆ ಸೀರಿಯಲ್‌ನಿಂದ ಯಾರು ಎಂಟ್ರಿ ಕೊಡಬಹುದು ಅನ್ನೋ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ಶಾಸ್ತ್ರಬದ್ಧವಾಗಿ ಹರ್ಷ ಭುವಿ ಮದುವೆ ಆಗುತ್ತಿರುವುದು ಮತ್ತು ತಾವು ಈ ಶಾಸ್ತ್ರಗಳನ್ನೆಲ್ಲ ಮಾಡಿದ್ದರೂ ಇದರ ಅರ್ಥ ಗೊತ್ತಿಲ್ಲದ ಕಾರಣ ಈ ಸೀರಿಯಲ್‌ನಲ್ಲಿ ಶಾಸ್ತ್ರದ ಅರ್ಥ ತಿಳಿಸಿಕೊಡುವುದು ಎಲ್ಲ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಆದರೆ ತನ್ನ ಆಶಯದಂತೆ ಹರ್ಷ ಭುವಿ ಮದುವೆ ಸಂಭ್ರಮ ನಡೆಯುತ್ತಿದ್ದರೂ ಅರಿಶಿನ ಶಾಸ್ತ್ರದ ವೇಳೆಗೆ ಅಮ್ಮಮ್ಮ ಅಲ್ಲೆಲ್ಲೂ ಕಾಣಿಸಿಕೊಂಡಿಲ್ಲ.
Sathya: ಸತ್ಯ ಮಾಲಾಶ್ರೀ ತರವೇ ಇರಲಿ, ಶ್ರುತಿ ಮಾಡ್ಬೇಡಿ ಪ್ಲೀಸ್!
ಇನ್ನೊಂದು ಕಡೆ ರತ್ನಮಾಲಾ ಅವರ ಆರೋಗ್ಯ ಹದಗೆಟ್ಟಿರುವ ವಿಚಾರ ಅವರನ್ನು ಟ್ರೀಟ್ ಮಾಡುತ್ತಿರುವ ಡಾಕ್ಟರ್‌ಗೆ ತಿಳಿದು ಅವರು ಮನೆಗೆ ಬಂದಿದ್ದಾರೆ. ರತ್ನಮಾಲಾಳನ್ನು ಆಸ್ಪತ್ರೆಗೆ ದಾಖಲು ಮಾಡದೆ ಇದ್ದರೆ ಯಾವ ಸಂದರ್ಭದಲ್ಲಿ ಬೇಕಿದ್ದರೂ ಅವಳು ಸಾಯಬಹುದು ಎನ್ನುವ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ. ಅಷ್ಟೇ ಅಲ್ಲ, ರತ್ನಮಾಲಾಗೆ ಇರುವ ಅಸಹಜ ಕಾಯಿಲೆ ಬಗ್ಗೆ ವಿವರಿಸಿಯೂ ಹೇಳಿದ್ದಾರೆ. ಈವರೆಗೆ ಅವರಿಗೆ ಜೀವ ತೆಗೆಯುವ ಕಾಯಿಲೆ ಇದೆ ಅಂತ ವೈದ್ಯರು ಹೇಳಿದ್ದರೂ ಈ ಬಗ್ಗೆ ವಿವರಿಸಿದ್ದು ಇದೇ ಮೊದಲು. ಇದೊಂದು ಅತೀ ಅಪರೂಪದ ಕಾಯಿಲೆಯಾಗಿದ್ದು, ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಗದೇ ಇದ್ದರೆ ಅವರಿಗೆ ಅರಳುಮರಳು ಶುರುವಾಗಬಹುದು. ಈ ಮದುವೆಯನ್ನು ರತ್ನಮಾಲಾ ನೋಡದೆಯೂ ಇರಬಹುದು ಎನ್ನುವ ಎಚ್ಚರಿಕೆ ವೈದ್ಯರ ಕಡೆಯಿಂದ ಬಂದಿದೆ. ಹೀಗಾಗಿ, ರತ್ನಮಾಲಾ ಸಾವು ಈ ಜೋಡಿಯ ಮದುವೆ ನಿಲ್ಲಲು ಕಾರಣವಾಗಬಹುದಾ ಅನ್ನುವ ಆತಂಕದಲ್ಲಿ ಪ್ರೇಕ್ಷಕರು ಕಾಯುತ್ತಿದ್ದಾರೆ.
ಇನ್ನೊಂದು ಕಡೆಯಿಂದ ಹರ್ಷ ಭುವಿ ಮದುವೆ ಮುರಿದು ತಾನೇ ಹರ್ಷನ ಪತ್ನಿಯಾಗುವ ತವಕದಲ್ಲಿ ವರೂಧಿನಿ ಇದ್ದಾಳೆ. ಮೊದಲಿಂದಲೂ ಹಠ ತೊಟ್ಟಿದ್ದನ್ನು ಸಾಧಿಸಿಯೇ ಸಾಧಿಸುವ ಅವಳು ಈ ವಿಚಾರದಲ್ಲು ಸೋಲಲು ಸುತಾರಾಂ ರೆಡಿಯಿಲ್ಲ. ವಿಲನ್ ಸಾನಿಯಾ ಅವಳ ಸಪೋರ್ಟ್ ಗೆ ನಿಂತಿದ್ದಾಳೆ. ಇನ್ನೊಂದು ಕಡೆ ಭುವಿಗೆ ಮದುವೆಗೆ ಹಣ ಹೊಂದಿಸಲಾಗದೇ ಅವಳು ಬ್ಯಾಂಕ್‌ನಿಂದ ಸಾಲ ಪಡೆಯಲು ಹೊರಟಿದ್ದಾಳೆ. ಈ ವಿಷಯದಲ್ಲಿ ಯಾರ ನೆರವೂ ಪಡೆಯದ ಸ್ವಾಭಿಮಾನಿ ಅವಳು. ಹೀಗೆ ಏನೇನೆಲ್ಲ ಬೆಳವಣಿಗೆಗಳು ಕನ್ನಡತಿ ಸೀರಿಯಲ್‌ನಲ್ಲಿ ಆಗುತ್ತಿದೆ. ಇದೆಲ್ಲ ಒಳ್ಳೆಯ ರೀತಿಯಲ್ಲಿ ಕೊನೆಯಾಗಲಿ ಅಂತ ಪ್ರೇಕ್ಷಕರು ಹಾರೈಸುತ್ತಿದ್ದಾರೆ.
