"ಕರ್ಣ" ಧಾರಾವಾಹಿಯ ಪ್ರೋಮೋ ಭಾರಿ ಸಂಚಲನ ಮೂಡಿಸಿದ್ದು, ದಾಖಲೆಗಳನ್ನು ಮುರಿದಿದೆ. ನಾಯಕ ಕಿರಣ್ ರಾಜ್, ಪ್ರೇಕ್ಷಕರ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ನಟಿಯರ ಬಗ್ಗೆ ನಕಾರಾತ್ಮಕ ಟೀಕೆಗಳಿಗೆ ಪ್ರತಿಕ್ರಿಯಿಸಿ, ಧಾರಾವಾಹಿ ವೀಕ್ಷಿಸಿದ ನಂತರ ಅಭಿಪ್ರಾಯ ವ್ಯಕ್ತಪಡಿಸುವಂತೆ ಕೋರಿದ್ದಾರೆ. ಪಾತ್ರಗಳನ್ನು ಇಷ್ಟಪಡುವುದರ ಜೊತೆಗೆ ವೈಯಕ್ತಿಕ ಜೀವನದೊಂದಿಗೆ ಬೆಸೆಯದಂತೆಯೂ ಮನವಿ ಮಾಡಿದ್ದಾರೆ. ಚಿತ್ರರಂಗದಲ್ಲೂ ಸಕ್ರಿಯರಾಗಿರುವ ಕಿರಣ್, "ಕರ್ಣ" ಧಾರಾವಾಹಿಯ ಯಶಸ್ಸಿಗೆ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
‘ಕರ್ಣ’ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದೇ ಆಗಿದ್ದು, ಎಲ್ಲ ದಾಖಲೆಗಳು ಪುಡಿ ಪುಡಿ ಆದವು. ಸೀರಿಯಲ್ ಶುರುವಾಗುವ ಮುನ್ನವೇ ಈ ರೀತಿ ಕ್ರೇಜ್ ಸೃಷ್ಟಿ ಆಗಿರೋದು ನಿಜಕ್ಕೂ ಅಚ್ಚರಿಯ ವಿಷಯ ಎನ್ನಬಹುದು. ಈ ಧಾರಾವಾಹಿಯ ಪ್ರೋಮೋ ಶೂಟಿಂಗ್ BTS ಕೂಡ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ಬಗ್ಗೆ ‘ಕರ್ಣ’ ಧಾರಾವಾಹಿಯ ಹೀರೋ ನಟ ಕಿರಣ್ ರಾಜ್ ಅವರು Asianet Suvarna News ಜೊತೆಗೆ ಮಾತನಾಡಿದ್ದಾರೆ.
ಹಾಯ್, ಹೇಗಿದ್ದೀರಿ?
ಚೆನ್ನಾಗಿದ್ದೀನಿ. ಲೈಫ್ ಬ್ಯುಸಿ ಆಗಿದೆ. ಜನರನ್ನು ರಂಜಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.
ಕರ್ಣ ಧಾರಾವಾಹಿ ಪ್ರೋಮೋ ದೊಡ್ಡ ಸಂಚಲನ ಮೂಡಿಸಿದೆ!
ಹೌದು, ಈ ರೀತಿ ಪ್ರತಿಕ್ರಿಯೆ ಬಂದಿರೋದು ನಿಜಕ್ಕೂ ಖುಷಿ ಕೊಟ್ಟಿದೆ. ಪ್ರೋಮೋಗೆ ಜನರು ಇಷ್ಟು ಪ್ರೀತಿ ತೋರಿಸಿದ್ದಾರೆ. ಇನ್ನು ಧಾರಾವಾಹಿಯನ್ನು ಕೂಡ ಜನರು ಒಪ್ಪಿಕೊಂಡು, ಅಪ್ಪಿಕೊಳ್ತಾರೆ ಎನ್ನುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ವಾಹಿನಿ, ನಮ್ಮ ತಂಡ ಸಿಕ್ಕಾಪಟ್ಟೆ ಶ್ರಮ ಹಾಕುತ್ತಿದೆ. ಇನ್ನು ಧಾರಾವಾಹಿ ಶೂಟಿಂಗ್ ಕೂಡ ನಡೆಯುತ್ತಿದೆ.
ಧಾರಾವಾಹಿಯಲ್ಲಿರುವ ಇಬ್ಬರು ನಾಯಕಿಯರ ಕೆಲವರು ನೆಗೆಟಿವ್ ಮಾತುಗಳನ್ನಾಡಿದ್ದಾರೆ. ನಿಮಗೆ ಅವರು ಹೊಂದಿಕೆ ಆಗೋದಿಲ್ಲ ಎಂಬೆಲ್ಲ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ.
ನಮ್ರತಾ ಗೌಡ, ಭವ್ಯಾ ಗೌಡ ಅವರು ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನು ಸೀರಿಯಲ್ ಶುರು ಆಗಿಲ್ಲ. ಈಗ ನೆಗೆಟಿವ್ ಮಾತುಗಳನ್ನಾಡುತ್ತಿರೋದು ಸರಿಯಲ್ಲ. ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ, ಅದನ್ನು ನಾನು ಒಪ್ಪುವೆ. ಆದರೆ ಇನ್ನೂ ಸೀರಿಯಲ್ ಶುರುವಾಗದೆ ಹೀರೋಯಿನ್ಸ್ ಬಗ್ಗೆ ಮಾತನಾಡೋದು ಸರಿ ಅಲ್ಲ. ಧಾರಾವಾಹಿ ಶುರು ಆದ್ಮೇಲೆ ನಟಿಯರ ನಟನೆ ನೋಡಿ, ಪಾತ್ರ ನೋಡಿ, ನಟನೆ ಚೆನ್ನಾಗಿಲ್ಲ ಅಂದ್ಮೇಲೆ ಮಾತನಾಡಿ. ಅದನ್ನು ಬಿಟ್ಟು ನೆಗೆಟಿವ್ ಮಾತನಾಡಬೇಡಿ. ಪ್ರತಿಯೊಬ್ಬರೂ ಇಲ್ಲಿ ಕಷ್ಟಪಟ್ಟು ಬರುತ್ತಾರೆ. ಅವರಿಗೆ ಅವರದ್ದೇ ಆದ ಕಷ್ಟವಿದೆ. ಪಾಸಿಟಿವ್ ವಿಷಯದಲ್ಲಿ ನಡೆಯಬೇಕು. ಸೀರಿಯಲ್‌ನಲ್ಲಿ ಅದ್ಭುತವಾದ ಕಥೆಯಿದೆ, ಗಟ್ಟಿಯಾದ ಪಾತ್ರಗಳಿವೆ. ಜನರಿಗೆ ಪಾತ್ರಗಳು ಇಷ್ಟವಾಗುತ್ತವೆ.
ಸೀರಿಯಲ್ ಶುರು ಆದ್ಮೇಲೆ ಲಿಂಕಪ್ ಮಾಡುತ್ತಾರಲ್ಲ…!
ಹೌದು, ನಾನು ಪ್ರತಿ ಬಾರಿ ಧಾರಾವಾಹಿ ಮಾಡುವಾಗಲೂ ಈ ರೀತಿ ಆಗುತ್ತದೆ. ಧಾರಾವಾಹಿ ಪಾತ್ರಗಳ ಕೆಮಿಸ್ಟ್ರಿಯನ್ನು ಇಷ್ಟಪಡಿ. ಆದರೆ ರಿಯಲ್ ಲೈಫ್‌ನಲ್ಲೂ ಧಾರಾವಾಹಿ ಪಾತ್ರಗಳು ನಿಜ ಎಂದು ಭಾವಿಸಿ, ಇವರಿಬ್ಬರು ಲವ್ ಮಾಡ್ತಿದ್ದಾರೆ, ಮದುವೆ ಆಗುತ್ತಿದ್ದಾರೆ ಎಂಬ ಮಾತುಗಳು ಬೇಡ. ನಿಜಕ್ಕೂ ಈ ರೀತಿ ಲಿಂಕಪ್ ಮಾಡಿದರೆ ನಮ್ಮ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಇದು ಯಾರಿಗೂ ಒಳ್ಳೆಯದಲ್ಲ. ಧಾರಾವಾಹಿಗಳ ಪಾತ್ರಗಳನ್ನು ಇಷ್ಟಪಡಿ, ಆದರೆ ಪಾತ್ರಧಾರಿಗಳನ್ನು ಲಿಂಕಪ್ ಮಾಡಬೇಡಿ.
ಸಿನಿಮಾದಲ್ಲಿ ಬ್ಯುಸಿ ಆಗಿದ್ದೀರಿ
ಸೀರಿಯಲ್ ಜೊತೆಯಲ್ಲಿ ಸಿನಿಮಾ ಕೆಲಸಗಳು ನಡೆಯುತ್ತಿವೆ. ಹೀಗಾಗಿ ತಿಂಗಳು ಪೂರ್ತಿ ಬ್ಯುಸಿಯಾಗಿರುತ್ತೇನೆ. ಜನರನ್ನು ರಂಜಿಸೋದು ನಮ್ಮ ಗುರಿ. ಹೀಗಾಗಿ ಎಲ್ಲ ವಿಧದಲ್ಲಿಯೂ ನಾವು ಶ್ರಮ ಹಾಕಿ ವೀಕ್ಷಕರಿಗೆ ಖುಷಿಯಾಗುವ ರೀತಿಯಲ್ಲಿ ಕಂಟೆಂಟ್ ನೀಡುವ ಯತ್ನದಲ್ಲಿದ್ದೇವೆ. ನಾವು ದಿನದಿಂದ ದಿನಕ್ಕೆ ಅಪ್‌ಡೇಟ್ ಆಗಬೇಕು, ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿರಬೇಕು. ನಮ್ಮ ಶ್ರಮವೇ ನಮಗೆ ಪ್ರತಿಫಲ ಕೊಡುವುದು, ಅಲ್ಲಿಯವರೆಗೆ ನಾವು ಕಾಯಬೇಕು.
ಕರ್ಣ ಧಾರಾವಾಹಿ ಪ್ರೋಮೋ ನೋಡಿ ನಿಮಗೆ ಯಾವ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ?
ಎಲ್ಲರೂ ಪ್ರೋಮೋ ನೋಡಿ ಖುಷಿಪಟ್ಟಿದ್ದಾರೆ. ನಿಮ್ಮ ಧಾರಾವಾಹಿಯನ್ನು ನೋಡ್ತೀವಿ ಎನ್ನುವ ಮಾತುಗಳನ್ನಾಡಿದ್ದಾರೆ. ಟೈಟಲ್ ಪಾತ್ರ ಮಾಡಬೇಕು ಎನ್ನುವ ಆಸೆ ಇತ್ತು, ಅದೀಗ ನೆರವೇರುತ್ತಿದೆ.


