Miss Universe 2026: ಮಿಸ್ ಯೂನಿವರ್ಸ್ 2026ರ ಕಿರೀಟವನ್ನು ಪೋರ್ಟೊ ರಿಕೊದ 27 ವರ್ಷದ ಜೆನ್ನಿಫರ್ ಬ್ಯಾರೆಟೊ ಗೆದ್ದುಕೊಂಡಿದ್ದಾರೆ. 3150 ವಜ್ರಗಳಿಂದ ಅಲಂಕರಿಸಲಾದ ಕಿರೀಟ ಮತ್ತು ಸಿಲ್ವರ್ ಶಿಮ್ಮರ್ ಗೌನ್‌ನಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಇತ್ತ ಭಾರತದ ಕಾಜಿಯಾ ಲಿಜ್ ಮೆಜೊ ಟಾಪ್ 30ರಲ್ಲಿ ಸ್ಥಾನ ಪಡೆದಿದ್ದಾರೆ.

ಮಿಸ್ ಯೂನಿವರ್ಸ್ 2026 ಕಿರೀಟ ಗೆದ್ದ ಜೆನ್ನಿಫರ್ ಬ್ಯಾರೆಟೊ

ಮಿಸ್ ಯೂನಿವರ್ಸ್ 2026ರ ಫಿನಾಲೆಯಲ್ಲಿ ಎಲ್ಲರೂ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದೇ ಬಿಟ್ಟಿತು. 116 ಸ್ಪರ್ಧಿಗಳ ನಡುವೆ ನಡೆದ ತೀವ್ರ ಪೈಪೋಟಿಯ ಬಳಿಕ ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ಅವರು ಮಿಸ್ ಯೂನಿವರ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡರು. ಅವರ ಈ ಗೆಲುವು ಪೋರ್ಟೊ ರಿಕೊಗೆ ಮತ್ತೊಂದು ಐತಿಹಾಸಿಕ ಕ್ಷಣವಾಗಿದೆ..

ಸಿಲ್ವರ್ ಶಿಮ್ಮರ್ ಗೌನ್‌ನಲ್ಲಿ ಜೆನ್ನಿಫರ್ ಗ್ಲಾಮರಸ್ ಲುಕ್

ಜೆನ್ನಿಫರ್ ಬ್ಯಾರೆಟೊ ಅವರ ಗೆಲುವಿನ ಲುಕ್ ಬಗ್ಗೆ ಹೇಳುವುದಾದರೆ, ಅವರು ಸಿಲ್ವರ್ ಮತ್ತು ಶಾಂಪೇನ್ ಬಣ್ಣದ ಅದ್ಭುತವಾದ ಇವನಿಂಗ್ ಗೌನ್ ಧರಿಸಿದ್ದರು. ಈ ಉಡುಪಿನ ಮೇಲೆ ಮಾಡಲಾಗಿದ್ದ ಸೀಕ್ವಿನ್ ಮತ್ತು ಕ್ರಿಸ್ಟಲ್ ವರ್ಕ್ ಅದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಫಿಟೆಡ್ ಸಿಲೂಯೆಟ್ ಮತ್ತು ಹಾಲ್ಟರ್ ನೆಕ್‌ಲೈನ್ ಅವರ ಲುಕ್‌ಗೆ ಮಾಡರ್ನ್ ಹಾಗೂ ಕ್ಲಾಸಿ ಸ್ಪರ್ಶ ನೀಡಿತ್ತು.

3150 ವಜ್ರಗಳ ಕಿರೀಟ ತೊಟ್ಟ ಸುಂದರಿ

ಸಿಲ್ವರ್ ಗೌನ್ ಜೊತೆಗೆ ಜೆನ್ನಿಫರ್ ಅವರ ವಜ್ರದ ಕಿರೀಟವೂ ಸಾಕಷ್ಟು ಗಮನ ಸೆಳೆಯಿತು. ಮಿಸ್ ಯೂನಿವರ್ಸ್‌ನ 75ನೇ ಆವೃತ್ತಿಗಾಗಿ ಸಿದ್ಧಪಡಿಸಲಾದ ಈ ಕಿರೀಟಕ್ಕೆ 'ದಿ ರೇಡಿಯನ್ಸ್ ಆಫ್ ಆನ್ ಎಟರ್ನಲ್ ಲೆಗಸಿ' ಎಂದು ಹೆಸರಿಡಲಾಗಿದೆ. ಆಭರಣ ವಿನ್ಯಾಸಕಾರ ಜಾರ್ಜ್ ವಿಟೆಲ್ಸ್ ಅವರು Maison d'OR ಸಹಯೋಗದಲ್ಲಿ ಈ ಕಿರೀಟವನ್ನು ಸಿದ್ಧಪಡಿಸಿದ್ದಾರೆ. 18 ಕ್ಯಾರಟ್ ವೈಟ್ ಗೋಲ್ಡ್‌ನಿಂದ ತಯಾರಿಸಲಾದ ಈ ಕಿರೀಟದಲ್ಲಿ ಬರೋಬ್ಬರಿ 3150 ವಜ್ರಗಳನ್ನು ಅಳವಡಿಸಲಾಗಿದೆ.

ಯಾರು ಈ ಮಿಸ್ ಯೂನಿವರ್ಸ್ 2026 ಜೆನ್ನಿಫರ್ ಬ್ಯಾರೆಟೊ?

27 ವರ್ಷದ ಜೆನ್ನಿಫರ್ ಬ್ಯಾರೆಟೊ ಪೋರ್ಟೊ ರಿಕೊದವರು. ಅವರು ಸೈಕಾಲಜಿ ಮತ್ತು ಕ್ಲಿನಿಕಲ್ ಸೋಶಿಯಲ್ ವರ್ಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಅಮೆರಿಕದ ಸೇನೆಯೊಂದಿಗೆ ಪ್ರಿವೆನ್ಷನ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೆನ್ನಿಫರ್ ಒಬ್ಬ ಮಗಳ ತಾಯಿಯೂ ಹೌದು. ವಿಶೇಷವೆಂದರೆ, ಮಿಸ್ ಯೂನಿವರ್ಸ್ ಕಿರೀಟ ಗೆದ್ದ ಮೊದಲ ತಾಯಿಯಾಗಿದ್ದಾರೆ. ಅವರ ಈ ಗೆಲುವಿನೊಂದಿಗೆ ಪೋರ್ಟೊ ರಿಕೊ ಆರನೇ ಬಾರಿಗೆ ಮಿಸ್ ಯೂನಿವರ್ಸ್ ಪಟ್ಟವನ್ನು ಗೆದ್ದಂತಾಗಿದೆ. ಮಿಸ್ ಯೂನಿವರ್ಸ್ 2025ರ ವಿಜೇತೆ ಫಾತಿಮಾ ಬಾಷ್ ಅವರು ಜೆನ್ನಿಫರ್‌ಗೆ ಹೊಸ ಕಿರೀಟವನ್ನು ತೊಡಿಸಿದರು.

ಮಿಸ್ ಯೂನಿವರ್ಸ್ 2026ರ ಟಾಪ್ 5 ಸ್ಪರ್ಧಿಗಳು ಇವರೇ

  • ವಿಜೇತೆ: ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ
  • ಫಸ್ಟ್ ರನ್ನರ್ ಅಪ್: ಡೊಮಿನಿಕನ್ ರಿಪಬ್ಲಿಕ್‌ನ ಮೆಲಿಸ್ಸಾ ನುನೆಜ್
  • ಸೆಕೆಂಡ್ ರನ್ನರ್ ಅಪ್: ವೆನೆಜುವೆಲಾದ ಕ್ಲಾರಾ ವೇಗಾಸ್
  • ಮೂರನೇ ರನ್ನರ್ ಅಪ್: ಫಿಲಿಪೈನ್ಸ್‌ನ ಬಿ ಮಿಲಾನ್-ವಿಂಡೋರ್ಸ್ಕಿ
  • ನಾಲ್ಕನೇ ರನ್ನರ್ ಅಪ್: ನ್ಯೂಜಿಲೆಂಡ್‌ನ ಜಾರ್ಜಿಯಾ ವಾಡಿಂಗ್ಟನ್

ಭಾರತದ ಕಾಜಿಯಾ ಲಿಜ್ ಮೆಜೊ ಟಾಪ್ 30ರವರೆಗೆ ಆಯ್ಕೆ

ಈ ಬಾರಿ ಭಾರತದ ಪರವಾಗಿ 19 ವರ್ಷದ ಕಾಜಿಯಾ ಲಿಜ್ ಮೆಜೊ ಅವರು ಮಿಸ್ ಯೂನಿವರ್ಸ್ 2026ರಲ್ಲಿ ಭಾಗವಹಿಸಿದ್ದರು. ಕೇರಳದ ಮಾವೇಲಿಕ್ಕರದವರಾದ ಕಾಜಿಯಾ ಕಾನೂನು ವಿದ್ಯಾರ್ಥಿನಿ ಹಾಗೂ ಮಾಡೆಲ್ ಆಗಿದ್ದಾರೆ. ಅವರು ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್ 30ರವರೆಗೆ ಸ್ಥಾನ ಪಡೆದರು. ಆದರೆ ಟಾಪ್ 12ಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ಭಾರತ ಈವರೆಗೆ ಸುಷ್ಮಿತಾ ಸೇನ್, ಲಾರಾ ದತ್ತಾ ಮತ್ತು ಹರ್ನಾಜ್ ಸಂಧು ಅವರ ಮೂಲಕ ಮೂರು ಬಾರಿ ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದಿದೆ.