ಕೇರಳದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಪಟ್ಟ ಗೆದ್ದ ಕೇರಳದ ಮೊದಲ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಜೈಪುರ/ತಿರುವನಂತಪುರಂ: ಭಾರತದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ 'ಮಿಸ್ ಯೂನಿವರ್ಸ್ ಇಂಡಿಯಾ 2026'ರ (Miss Universe India 2026) ವಿಜೇತರಾಗಿ ಕೇರಳದ 19 ವರ್ಷದ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ ಹೊರಹೊಮ್ಮಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಭಾನುವಾರ ನಡೆದ ಅದ್ಧೂರಿ ಫಿನಾಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಕಾಜಿಯಾ ಈ ಸಾಧನೆ ಮಾಡಿದ್ದಾರೆ. ಈ ಗೆಲುವಿನ ಮೂಲಕ ಕಾಜಿಯಾ ಅವರು ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಯಾರು ಈ ಕಾಜಿಯಾ ಲಿಜ್ ಮೆಜೊ?

ಕೇರಳದ ಮಾವೇಲಿಕ್ಕರದ ಮೂಲದವರಾದ ಕಾಜಿಯಾ ಸದ್ಯ ಕಾನೂನು ಪದವಿ (Law Student) ವ್ಯಾಸಂಗ ಮಾಡುತ್ತಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ.

ಕಾಜಿಯಾ ಸಾಧನೆಗಳು

ಅಬುಧಾಬಿಯಲ್ಲಿ ಬಾಲ್ಯ: 2007ರಲ್ಲಿ ಜನಿಸಿದ ಕಾಜಿಯಾ ಅವರ ಬಾಲ್ಯದ ಬಹುಪಾಲು ಸಮಯ ಅಬುಧಾಬಿಯಲ್ಲಿ ಕಳೆಯಿತು. ಅಲ್ಲಿನ ಎಮಿರೇಟ್ಸ್ ನ್ಯಾಷನಲ್ ಸ್ಕೂಲ್ ಮತ್ತು ಅಬುಧಾಬಿ ಇಂಡಿಯನ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ.

ಹಲವು ಪ್ರಶಸ್ತಿಗಳ ಒಡತಿ: ಇದು ಕಾಜಿಯಾ ಅವರ ಮೊದಲ ಗೆಲುವೇನಲ್ಲ. 17ನೇ ವಯಸ್ಸಿನಲ್ಲೇ ಅವರು 'ಮಿಸ್ ಟೀನ್ ದಿವಾ 2024' ಪ್ರಶಸ್ತಿ ಗೆದ್ದಿದ್ದರು. ನಂತರ 'ಮಿಸ್ ಟೀನ್ ಇಂಟರ್ನ್ಯಾಷನಲ್ 2025'ರಲ್ಲಿ ರನ್ನರ್ ಅಪ್ ಆಗಿದ್ದರು. ಈ ವರ್ಷದ ಆರಂಭದಲ್ಲಿ 'ಮಿಸ್ ಯೂನಿವರ್ಸ್ ಕೇರಳ' ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ದಾಖಲೆ ಬರೆದಿದ್ದರು.

ಕೇರಳದ ಮೊದಲ ಸಾಧಕಿ: ಮಿಸ್ ಯೂನಿವರ್ಸ್ ಇಂಡಿಯಾ ಪಟ್ಟ ಗೆದ್ದ ಕೇರಳದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಕಾಜಿಯಾ ಪಾತ್ರರಾಗಿದ್ದಾರೆ.

ಕಲೆ ಮತ್ತು ಸಿನಿಮಾದಲ್ಲೂ ಸೈ

ಕೇವಲ ಸೌಂದರ್ಯ ಮಾತ್ರವಲ್ಲದೆ ಕಾಜಿಯಾ ಬಹುಮುಖ ಪ್ರತಿಭೆ. ಅವರು ಕಳೆದ 12 ವರ್ಷಗಳಿಂದ ಶಾಸ್ತ್ರೀಯ ನೃತ್ಯ (Classical Dance) ತರಬೇತಿ ಪಡೆದಿದ್ದಾರೆ. ಹಾಡುಗಾರಿಕೆಯ ಜೊತೆಗೆ ಅವರು ಡ್ರಮ್ಸ್ ಮತ್ತು ವಯಲಿನ್ ನುಡಿಸುವುದರಲ್ಲೂ ಪರಿಣತಿ ಹೊಂದಿದ್ದಾರೆ. ಸಿನಿಮಾ ರಂಗಕ್ಕೂ ಕಾಲಿಟ್ಟಿರುವ ಇವರು ಮಮ್ಮುಟ್ಟಿ ಅಭಿನಯದ ಮಲಯಾಳಂ ಸಿನಿಮಾ 'ಷೈಲಾಕ್' (Shylock) ಮೂಲಕ ನಟನೆಗೂ ಪದಾರ್ಪಣೆ ಮಾಡಿದ್ದಾರೆ.

ಜೈಪುರದಲ್ಲಿ ನಡೆದ ಫಿನಾಲೆಯ ತೀರ್ಪುಗಾರರ ಪಟ್ಟಿಯಲ್ಲಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್, ಮಾಜಿ ಮಿಸ್ ಯೂನಿವರ್ಸ್ ಇಂಡಿಯಾ ವಿಜೇತರಾದ ಊರ್ವಶಿ ರೌಟೇಲಾ ಮತ್ತು ಸೆಲಿನಾ ಜೇಟ್ಲಿ ಅವರಂತಹ ದೊಡ್ಡ ಹೆಸರಿದ್ದವು. ಅವರ ಸಮ್ಮುಖದಲ್ಲೇ ಕಾಜಿಯಾ ಈ ಕಿರೀಟವನ್ನು ಧರಿಸಿದರು. ಇನ್ನುಳಿದಂತೆ ತಮಿಳುನಾಡಿನ ವೈಷ್ಣವಿ ಗಣೇಶ್ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರೆ, ಗುಜರಾತ್‌ನ ಅನುಶ್ರೀ ಸತವಲೇಕರ್ ಎರಡನೇ ರನ್ನರ್ ಅಪ್ ಆಗಿ 'ಮಿಸ್ ಇಂಟರ್ನ್ಯಾಷನಲ್ ಇಂಡಿಯಾ 2026' ಪ್ರಶಸ್ತಿ ಪಡೆದಿದ್ದಾರೆ.

ಈಗ ಇಡೀ ದೇಶದ ಕಣ್ಣು ನವೆಂಬರ್‌ನಲ್ಲಿ ನಡೆಯುವ ವಿಶ್ವ ಸುಂದರಿ ಸ್ಪರ್ಧೆಯ ಮೇಲಿದೆ. 19ರ ಹರೆಯದ ಈ ಕೇರಳದ ಕುವರಿ ಭಾರತಕ್ಕೆ ಮತ್ತೊಮ್ಮೆ ವಿಶ್ವ ಸುಂದರಿ ಪಟ್ಟ ತರುತ್ತಾರೆಯೇ ಎಂದು ಕಾದು ನೋಡಬೇಕಿದೆ.