Jothe jotheyali: ಕಾರ್ ಆಕ್ಸಿಡೆಂಟ್‌ನಲ್ಲಿ ಆರ್ಯವರ್ಧನ್ ಖಲಾಸ್, ಉಗಿದು ಉಪ್ಪಿನಕಾಯಿ ಹಾಕ್ತಿರೋ ವೀಕ್ಷಕರು!
ಜೊತೆ ಜೊತೆಯಲಿ ಸೀರಿಯಲ್‌ನ ಅನಿರುದ್ಧ ಪಾತ್ರ ಕೊನೆಗೂ ಮುಕ್ತಾಯಗೊಂಡಿದೆ. ಅನಿರುದ್ಧ ನಿರ್ವಹಿಸುತ್ತಿದ್ದ ಆರ್ಯವರ್ಧನ ಹೋಗ್ತಿದ್ದ ಕಾರು ಆಕ್ಸಿಡೆಂಟ್ ಆದಂತೆ ಚಿತ್ರೀಕರಿಸಲಾಗಿದೆ. ಇದನ್ನು ನಿರ್ದೇಶಕರು ಮಹಾ ತಿರುವು ಅಂತ ಬೇರೆ ಕರೆದಿದ್ದಾರೆ. ಅತ್ತ ಪ್ರೇಕ್ಷಕರು ಮಾತ್ರ ಇದನ್ನೊಪ್ಪದೇ ನಿರ್ದೇಶಕರಿಗೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ಮಹಾ ತಿರುವು ಎದುರಾಗಿದೆ. ಆರ್ಯವರ್ಧನ್ ಹೋಗುತ್ತಿದ್ದ ಕಾರು ಆಕ್ಸಿಡೆಂಟ್ ಆಗಿದೆ. ನೂರಾರು ಕೋಟಿ ಸಾಲದಲ್ಲಿ ಮುಳುಗಿ ಸಾಯಲು ಯೋಚಿಸುತ್ತಿದ್ದ ವಿಶ್ವಾಸ್ ದೇಸಾಯಿ ಮನಸ್ಸಲ್ಲಿ ಸಾಯುವ ಯೋಚನೆಗಳು ಬರುತ್ತಿವೆ. ಇತ್ತ ಜೋಗವ್ವ ತಾಯಿಗೆ 'ನಿನ್ನಿಬ್ಬರು ಮಕ್ಕಳಲ್ಲಿ ಒಬ್ಬರ ಜೀವಕ್ಕೆ ಆಪತ್ತಿದೆ' ಎಂಬ ಮಾತನ್ನು ಹೇಳಿದ್ದಾಳೆ. ಸಾಯಲು ಯೋಚಿಸುತ್ತಿರುವ ವಿಶ್ವಾಸ್‌ಗೇ ಆಪತ್ತು ಅಂದುಕೊಳ್ಳುವಂಥಾ ಸನ್ನಿವೇಶ ಸೃಷ್ಟಿಸಿದರೂ ಕೊನೆಯಲ್ಲಿ ಮತ್ತೊಂದು ಡ್ರಾಮಾ ಮೂಲಕ ಆರ್ಯವರ್ಧನ್ ಕಾರು ಆಕ್ಸಿಡೆಂಡ್ ಆಗುವಂತೆ ಕಥೆ ಇದೆ. ಅಲ್ಲಿಗೆ ಅನಿರುದ್ಧನ ಕಥೆಯೂ ಮುಗಿದ ಹಾಗೆ. ಇದಕ್ಕೆ ಪೂರಕ ಎನ್ನುವ ಹಾಗೆ ಈ ಸೀರಿಯಲ್‌ನ ನಿರ್ದೇಶಕ ಆರೂರು ಜಗದೀಶ್, 'ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಮಹಾ ತಿರುವು' ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿಗೆ ಆರ್ಯವರ್ಧನ್ ಕಥೆ ಮುಕ್ತಾಯವಾಗುತ್ತದೆ ಅನ್ನೋದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಈ ಥರ ಆಕ್ಸಿಡೆಂಟ್ ಸೀನ್ ತಂದಿರೋದರಿಂದ ಅವರಿಗೆ ಎರಡು ಲಾಭವಿದೆ. ಈ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋ ಪ್ಲಾನ್‌ನಲ್ಲಿ ಸೀರಿಯಲ್ ಟೀಮ್ ಇದೆ. ಆದರೆ ವೀಕ್ಷಕರು ಮಾತ್ರ ನಿರ್ದೇಶಕರಿಗೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ.
'ಜೊತೆ ಜೊತೆಯಲಿ' ಸೀರಿಯಲ್ ನ ಏಳು ನೂರ ಐವತ್ತಕ್ಕೂ ಅಧಿಕ ಎಪಿಸೋಡ್ ಗಳು ಪ್ರಸಾರವಾಗಿವೆ. ಇತ್ತೀಚೆಗೆ ಈ ಸೀರಿಯಲ್ ಟಿಆರ್ ಪಿಯಲ್ಲಿ ಕೊಂಚ ಇಳಿಕೆ ಆಗಿದ್ದರೂ ಜನ ಇದನ್ನು ಪೂರ್ತಿ ಕೈ ಬಿಟ್ಟಿರಲಿಲ್ಲ. ಇಂಥಾ ಹೊತ್ತಲ್ಲಿ ಸೀರಿಯಲ್ ಟೀಮ್ ಹಾಗೂ ಈ ಸೀರಿಯಲ್‌ನಲ್ಲಿ ನಾಯಕ ಆರ್ಯವರ್ಧನ ಪಾತ್ರ ಮಾಡುತ್ತಿದ್ದ ಅನಿರುದ್ಧ ನಡುವೆ ದೊಡ್ಡ ಜಗಳವಾಗಿದೆ. ಅನಿರುದ್ಧ ದುರಹಂಕಾರದಿಂದ ವರ್ತಿಸುತ್ತಿದ್ದಾರೆ, ಸೀನ್ ವಿಚಾರಕ್ಕೆ ಜಗಳ ತೆಗೆದು ಶೂಟಿಂಗ್ ಅರ್ಧದಿಂದಲೇ ನಾನಿನ್ನು ಈ ಸೀರಿಯಲ್‌ನಲ್ಲಿ ನಟಿಸೋದಿಲ್ಲ ಎಂದು ಹೋಗಿದ್ದಾರೆ. ಅವರು ಈ ರೀತಿ ಮಾಡೋದು ಇದು ಮೂರನೇ ಸಲ. ಇನ್ನು ನಾವು ಅವರನ್ನು ವಾಪಾಸ್ ಕರೆಯೋದಿಲ್ಲ ಅಂತ ಸೀರಿಯಲ್ ಟೀಮ್ ಸ್ಪಷ್ಟಪಡಿಸಿತ್ತು. ಅತ್ತ ಅನಿರುದ್ಧ ಅವರೂ ಸೀರಿಯಲ್ ಟೀಮ್ ವಿರುದ್ಧ, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಮಾತನಾಡಿದರು. ಅಲ್ಲಿಗೆ ಇಲ್ಲೀವರೆಗೆ ಸೀರಿಯಲ್ ಟೀಮ್ ಒಳಗೆ ನಡೆಯುತ್ತಿದ್ದ ಒಳ ಜಗಳ ಬೀದಿ ರಂಪವಾಗಿ ಅನಿರುದ್ಧ ಅವರನ್ನು ಸೀರಿಯಲ್ ಟೀಮ್ ನವರು ಕೈ ಬಿಡೋದಾಗಿ ಹೇಳಿದರು.
ನಟ ಅನಿರುದ್ದ್ ಅಭಿಮಾನಿಗಳಿಂದ ಜೀ ಕನ್ನಡ ವಾಹಿನಿ ಮುಂದೆ ಪ್ರತಿಭಟನೆ!
ಇದೀಗ ಅನಿರುದ್ಧ (Aniruddha) ಅವರ ಪಾತ್ರವನ್ನೂ ಕೊನೆ ಮಾಡಿದ್ದಾರೆ. ತನ್ನ ತಾಯಿ ಸಮಸ್ಯೆ ಇದೆ ಎಂದು ಹೇಳಿದ್ದನ್ನೇ ನೆಪವಾಗಿಟ್ಟುಕೊಂಡು ಆರ್ಯವರ್ಧನ ತಾಯಿಯನ್ನು ನೋಡಲು ಹೊರಡುತ್ತಾನೆ. ಹಾಗೆ ಹೋಗುವಾಗ ತಾಯಿಯ ಪ್ರೀತಿ (Mother's Love), ಆಕೆಯ ಮಮತೆ ಎಲ್ಲ ನೆನಪಾಗಿ ಆ ನೆನಪಲ್ಲೇ ಕಾರು ಚಲಾಯಿಸುತ್ತಾ ಮುಂದೆ ಹೋಗುತ್ತಿರುತ್ತಾನೆ. ಇತ್ತ ಅವನ ತಮ್ಮ ವಿಶ್ವಾಸ್ ದೇಸಾಯಿ ನೂರಾರು ಕೋಟಿ ಸಾಲ ಮೈಮೇಲೆ ಇರುವಾಗ ಅದರಿಂದ ಹೊರಬರಲಾಗದೇ ಸಾಯುವ ಯೋಚನೆ ಮಾಡುತ್ತಾ ಮನೆಯಿಂದ ಹೊರಬೀಳುತ್ತಾನೆ. ಅತ್ತ ಇವರಿಬ್ಬರ ತಾಯಿಗೆ ಜೋಗವ್ವ ನಿನ್ನಿಬ್ಬರು ಮಕ್ಕಳಲ್ಲಿ ಒಬ್ಬರಿಗೆ ಪ್ರಾಣ ಕಂಟಕ ಇದೆ ಎಂದು ಬೇರೆ ಹೇಳಿದ್ದಾಳೆ. ದಾರಿ ಮಧ್ಯೆ ಆರ್ಯನ ಕಾರು ಆಕ್ಸಿಡೆಂಟ್ ಆಗುತ್ತೆ. ಇದೀಗ ಒಂದೋ ಆರ್ಯ ಸಾಯಬೇಕು, ಬದುಕುಳಿದರೂ ಅಪಘಾತದಿಂದ ಆತನ ಮುಖ ಬದಲಾಗಿದೆ ಎಂದು ಬೇರೆ ನಟನನ್ನು ಈ ಪಾತ್ರಕ್ಕೆ ಹಾಕಿಕೊಳ್ಳೋದು ಸುಲಭ.
ಆದರೆ ಇದಕ್ಕೆ ಜನ ಮಾತ್ರ ಉಗಿದು ಉಪ್ಪಿನ ಕಾಯಿ ಹಾಕ್ತಿದ್ದಾರೆ. ಹಲವಾರು ಜನ ಆರ್ಯವರ್ಧನ್ ಇಲ್ಲದ ಸೀರಿಯಲ್ (Serial) ನೋಡೋದಿಲ್ಲ ಅನ್ನುತ್ತಿದ್ದರೆ, ಇನ್ನೂ ಕೆಲವರು, 'ಅನಿರುದ್ಧ ಪಾತ್ರವನ್ನು ಸಾಯಿಸುವಷ್ಟು ಕೋಪ ಯಾಕೆ?' ಎಂದು ಪ್ರಶ್ನಿಸಿದ್ದಾರೆ. ಜೊತೆಗೆ 'ಇಲ್ಲಿ ಅಪಘಾತ ಆದಂತೆ ತೋರಿಸಿರುವ ಕಾರು ಸಣ್ಣ ಕಾರು. ಆರ್ಯವರ್ಧನ್ ನಂಥಾ ಕೋಟ್ಯಧಿಪತಿಗೆ ಇಂಥಾ ಕಾರಲ್ಲಿ ಆಕ್ಸಿಡೆಂಟ್ ಆಯ್ತಾ? ಸಾವಿರಾರು ಕೋಟಿಯ ಒಡೆಯ ಹೀಗಿರ್ತಾನಾ?' ಎಂದೂ ಪ್ರಶ್ನೆ ಮಾಡಿದ್ದಾರೆ. 'ನಿರ್ದೇಶಕರೇ ನೀವೇ ನಿಮ್ಮ ಸೀರಿಯಲ್ ನೋಡ್ಕೊಳ್ಳಿ' ಅಂತಲೂ ಜನ ಹೇಳಿದ್ದಾರೆ.
Jothe Jotheyali ಕಿರಿಕ್; ಕಿರುತೆರೆಯಿಂದ ಕಿಕ್ ಔಟ್ ಆದ ಅನಿರುದ್ಧ್ ಈಗ ಏನ್ಮಾಡ್ತಿದ್ದಾರೆ?
ಅಲ್ಲಿಗೆ ಆರ್ಯವರ್ಧನ್ ಪಾತ್ರ ಕೊನೆಯಾಗೋದು, ಆ ಪಾತ್ರವನ್ನು ಬದಲಿಸೋದೂ ಜನಕ್ಕೆ ಇಷ್ಟ ಆಗ್ತಿಲ್ಲ. ಆದರೆ ಸೀರಿಯಲ್ ಟೀಮ್ ಪಾತ್ರ ಪಟ್ಟು ಬಿಡದೇ ಕಥೆ ಮುಂದುವರಿಸುತ್ತಿದೆ.