ಸರಿಗಮಪ ಖ್ಯಾತಿಯ ಗಾಯಕಿ ಇಂಪನಾ ಜಯರಾಜ್, ತಮ್ಮ ಸರ್‌ನೇಮ್ ಕುರಿತಾದ ಗೊಂದಲಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮಾವ, ಡಾನ್ ಎಂ.ಪಿ. ಜಯರಾಜ್ ಅವರ ಹೆಸರನ್ನು ಬಳಸುತ್ತಿದ್ದಾರೆ ಎಂಬ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ, ಅದು ತಮ್ಮ ಸ್ವಂತ ತಂದೆ ಕೆ. ಜಯರಾಜ್ ಅವರ ಹೆಸರು ಎಂದಿದ್ದಾರೆ.
ಬೆಂಗಳೂರು (ಜೂ.22): ಕನ್ನಡ ಕಿರುತೆರೆಯ ‘ಸರಿಗಮಪ ಸೀಸನ್-13’ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಜನಪ್ರಿಯತೆ ಪಡೆದ ಗಾಯಕಿ ಇಂಪನಾ ಜಯರಾಜ್. ಸೋಶಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ವಲಯದಲ್ಲಿ ತಮ್ಮ ಹೆಸರಿನ ಸುತ್ತ ಎದ್ದಿದ್ದ ದೊಡ್ಡದೊಂದು ಗೊಂದಲಕ್ಕೆ ಬೆಂಗಳೂರು ಭೂಗತ ಲೋಕದ ಡಾನ್ ಎಂ.ಪಿ. ಜಯರಾಜ್ ಅವರ ಸೊಸೆ ಹಾಗೂ ಕೆ. ಜಯರಾಜ್ ಅವರ ಪುತ್ರಿ ಇಂಪನಾ ಜಯರಾಜ್ ಅವರು ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ಫಾದರ್ಸ್ ಡೇ ಸಂದರ್ಭದಲ್ಲಿ ತಮ್ಮ ತಂದೆ ಹಾಗೂ ಮಾವ ಇಬ್ಬರಿಗೂ ಗೌರವ ಸಲ್ಲಿಸುತ್ತಲೇ, ತಮ್ಮ ಸರ್‌ನೇಮ್ ಹೆಸರಿನ ಹಿಂದಿರುವ ಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.
ಮಾವ ಮತ್ತು ತಂದೆಯ ಹೆಸರೊಂದೇ!
ಇಂಪನಾ ಅವರ ಪತಿ ಎಂ.ಪಿ. ಜಯರಾಜ್ ಅವರ ಪುತ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಮದುವೆಯ ನಂತರ ಇಂಪನಾ ಅವರು ತಮ್ಮ ಹೆಸರಿನ ಮುಂದೆ 'ಜಯರಾಜ್' ಎಂದು ಬಳಸುತ್ತಿರುವುದನ್ನು ಕಂಡು, ಅನೇಕರು ಇದು ಅವರ ಮಾವ (ಡಾನ್ ಎಂಪಿ ಜಯರಾಜ್) ಹೆಸರು ಎಂದು ಭಾವಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಂಪನಾ, "ನನ್ನ ಪತಿ ದಿವಂಗತ ಎಂ.ಪಿ. ಜಯರಾಜ್ ಅವರ ಮಗ ಹಾಗೂ ನಾನು ಕೆ. ಜಯರಾಜ್ ಅವರ ಮಗಳು. ನಾವಿಬ್ಬರೂ ನಮ್ಮ ತಂದೆಯ ಹೆಸರನ್ನು ಹೆಮ್ಮೆಯಿಂದ ನಮ್ಮ ಹೆಸರಿನಲ್ಲಿ ಇರಿಸಿಕೊಂಡಿದ್ದೇವೆ. ಆದರೆ, ಜನರು ನನ್ನ ಹೆಸರಿನ ಮುಂದಿರುವ ಜಯರಾಜ್ ಎಂಬ ಸರ್‌ನೇಮ್‌ಅನ್ನು ಮಾವನವರದ್ದೆಂದು ತಪ್ಪು ತಿಳಿಕೊಂಡಿದ್ದಾರೆ. ವಾಸ್ತವವಾಗಿ ನಾನು ನನ್ನ ಸ್ವಂತ ತಂದೆಯ ಹೆಸರನ್ನೇ ಹೆಮ್ಮೆಯಿಂದ ಮುಂದುವರಿಸುತ್ತಿದ್ದೇನೆ," ಎಂದು ಹೇಳಿದ್ದಾರೆ.
ಒಬ್ಬರು ಸಾರ್ವಜನಿಕ ನಾಯಕ, ಮತ್ತೊಬ್ಬರು ರಿಯಲ್ ಹೀರೋ!
ಹೆಸರೊಂದೇ ಆದರೂ ಇಬ್ಬರ ವ್ಯಕ್ತಿತ್ವಗಳು ಭಿನ್ನವಾಗಿದ್ದವು ಎಂದು ನೆನಪಿಸಿಕೊಂಡಿರುವ ಇಂಪನಾ, "ನಮ್ಮಿಬ್ಬರ ತಂದೆಯಂದಿರ ಹೆಸರು ಒಂದೇ ಆಗಿದ್ದರೂ ಅವರ ಹಾದಿ ಬೇರೆಯಾಗಿತ್ತು. ಒಬ್ಬರು ಸಾರ್ವಜನಿಕವಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದ ವ್ಯಕ್ತಿಯಾಗಿದ್ದರೆ, ಮತ್ತೊಬ್ಬರು ಸದಾ ಪ್ರಚಾರದಿಂದ ದೂರವಿದ್ದು ನಿಜ ಜೀವನದಲ್ಲಿ ಹೀರೋ ಆಗಿದ್ದವರು. ನಮ್ಮಿಬ್ಬರ ತಂದೆಯಂದಿರು ಸಾರಿದ ಮೌಲ್ಯಗಳು ನಮಗೆ ಆದರ್ಶವಾಗಿವೆ. ವಿಶೇಷ ಎಂದರೆ, ನಮ್ಮಿಬ್ಬರ ತಂದೆಯಂದಿರ ಹೆಸರಷ್ಟೇ ಒಂದಾಗಿರಲಿಲ್ಲ, ನಮ್ಮಿಬ್ಬರ ದಾರಿಗಳು ಒಂದಾಗಲು ಮತ್ತು ನಾವು ದಾಂಪತ್ಯ ಜೀವನಕ್ಕೆ ಕಾಲಿಡಲು ಅವರೇ ಮುಖ್ಯ ಕಾರಣವಾಗಿದ್ದರು," ಎಂದು ಭಾವುಕರಾಗಿದ್ದಾರೆ. ಇಂಪನಾ ಅವರ ಈ ಪೋಸ್ಟ್ ಸದ್ಯ ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಈ ಅಪರೂಪದ ಕಾಕತಾಳೀಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಹಲವು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇಂಪನಾ
ಸರಿಗಮಪ ಶೋ ಮಾತ್ರವಲ್ಲ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಇಂಪನಾ ಜಯರಾಜ್ ಪಾಲ್ಗೊಂಡಿದ್ದರು.2021ರಲ್ಲಿ ಸ್ಯಾಂಡಲ್‌ವುಡ್ ನಟ ಹಾಗೂ ಡಾನ್ ಜಯರಾಜ್ ಪುತ್ರ ಅಜಿತ್ ಜಯರಾಜ್ ಅವರನ್ನು ವಿವಾಹವಾಗಿದ್ದರು.


