ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಅಡುಗೆ ಮಾಡಿಕೊಂಡು ಬಂದ ಭಾಗ್ಯಲಕ್ಷ್ಮಿಯನ್ನು ತಾಂಡವ್ ಹೊರಹಾಕಿದ್ದಾನೆ. ಯಾರಿಗೂ ಏನೂ ಮಾಡಲಾಗದ ಸ್ಥಿತಿ? ಫ್ಯಾನ್ಸ್ ಏನನ್ನುತ್ತಿದ್ದಾರೆ?
ಅತ್ತೆ ಮತ್ತು ಸೊಸೆಯನ್ನು ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಹಾವು-ಮುಂಗುಸಿಯಂತೆ ತೋರಿಸುವುದು ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಧಾರಾವಾಹಿಗಳಲ್ಲಿ ಈ ಟ್ರೆಂಡ್ ಬದಲಾಗಿದೆ. ಈಗಿನ ಹೆಚ್ಚಿನ ಸೀರಿಯಲ್ಗಳಲ್ಲಿ ಅತ್ತೆ-ಸೊಸೆ ಚೆನ್ನಾಗಿರುತ್ತಾರೆ. ಆದರೆ ವಿಲನ್ ರೂಪದಲ್ಲಿ ಚಿಕ್ಕಮ್ಮ ಇರುತ್ತಾಳೆ. ಇದು ಮಾಮೂಲಾಗಿಬಿಟ್ಟಿದೆ. ಇಲ್ಲದೇ ಹೋದರೆ ಅತಿ ವಿನಯದ ಪತ್ನಿಗೆ ಕೋಪಿಷ್ಠ ಗಂಡ ಇದ್ದು, ಪತ್ನಿಯ ಬದುಕನ್ನು ನರಕ ಮಾಡುತ್ತಾನೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ ಕೂಡ ಇದೇ ರೀತಿಯದ್ದು. ಇಲ್ಲಿ ಅತ್ತೆ ಮತ್ತು ಸೊಸೆ ಸಂಬಂಧ ಅತ್ಯಂತ ಪ್ರೀತಿದಾಯಕವಾಗಿದೆ. ಇದ್ದರೆ ಇಂಥ ಅತ್ತೆ ಇರಬೇಕು ಎಂದು ಅದೆಷ್ಟೋ ಹೆಣ್ಣುಮಕ್ಕಳು ಹೇಳಿಕೊಂಡಿದ್ದಿದೆ. ಹಲವು ಸಂದರ್ಭಗಳಲ್ಲಿ ಅಮಾಯಕ ಸೊಸೆಯ ಪರವಾಗಿ ನಿಂತು, ಮುಂಗೋಪಿ ಮಗನನ್ನೇ ಎದುರು ಹಾಕಿಕೊಂಡಿದ್ದಾಳೆ ಅತ್ತೆ ಕುಸುಮ.
ಇವೆಲ್ಲವುಗಳ ನಡುವೆಯೂ ಇದೀಗ ಅತ್ತೆ ಒಳ್ಳೆಯವಳು ಇರಬೇಕೋ, ಅಥವಾ ಗಂಡನೋ ಎನ್ನುವ ಒಂದು ಚರ್ಚೆಯನ್ನು ಭಾಗ್ಯಲಕ್ಷ್ಮಿ ಸೀರಿಯಲ್ ಹುಟ್ಟುಹಾಕಿದೆ. ಈ ಸೀರಿಯಲ್ ಪ್ರೊಮೋ ಒಂದು ರಿಲೀಸ್ ಆಗುತ್ತಲೇ ಧಾರಾವಾಹಿ ಪ್ರಿಯರಲ್ಲಿ ಈ ಚರ್ಚೆ ಶುರುವಾಗಿದೆ. ಮನೆಯನ್ನು ತಾನು ನಿಭಾಯಿಸಬಲ್ಲೆ ಎಂದು ತೋರಿಸಲು ತಾಂಡವ್ ಕೆಲಸದಾಕೆಯನ್ನು ಕರೆದುಕೊಂಡು ಬಂದಿದ್ದಾನೆ. ಅದೂ ಸಾಮಾನ್ಯದವಳಲ್ಲ. ಹೈ ಫೈಯವಳು. ತಾನು ಒಂದು ಗಂಟೆಯಲ್ಲಿ ಮನೆಯ ಎಲ್ಲಾ ಕೆಲಸವನ್ನೂ ಮಾಡಿ ಮುಗಿಸುವುದಾಗಿ ಹೇಳಿದ್ದಾಳೆ. ಆದರೆ ಒಂದು ಗಂಟೆಯಲ್ಲಿ ಅರ್ಧಂಬರ್ಧ ತಿಂಡಿ ಮಾಡಿ ಹೋಗಿದ್ದಾಳೆ. ಎಲ್ಲರೂ ಅರೆಹೊಟ್ಟೆಯಲ್ಲಿದ್ದಾರೆ. ಗುಂಡನಿಗೆ ಎರಡು ಇಡ್ಲಿ ಸಾಕಾಗದೇ ಅಮ್ಮನಿಗೆ ಕರೆ ಮಾಡಿದ್ದಾನೆ. ಇರುವ ವಿಷಯ ಎಲ್ಲಾ ತಿಳಿಸಿದ್ದಾನೆ. ಎಷ್ಟೆಂದರೂ ಹೆತ್ತ ಕರುಳಲ್ಲವೆ? ಎಲ್ಲರೂ ಮನೆಯಲ್ಲಿ ಅರೆ ಹೊಟ್ಟೆಯಲ್ಲಿ ಇರುವುದನ್ನು ಕೇಳಿ ಚುರುಕ್ ಎಂದ ಭಾಗ್ಯ ಊಟ ರೆಡಿಮಾಡಿಕೊಂಡು ಬಂದಿದ್ದಾಳೆ.
ಹೆಂಡ್ತಿ, ತಾಯಿ ಸ್ಥಾನವನ್ನು ಕೆಲಸದಾಕೆ ತುಂಬಲು ಸಾಧ್ಯನಾ? ಭಾಗ್ಯಲಕ್ಷ್ಮಿ ಹೇಳಿದ್ದೇನು ಕೇಳಿ...
ಆದರೆ ಅವಳನ್ನು ನೋಡುತ್ತಲೇ ತಾಂಡವ್ ಕೋಪ ನೆತ್ತಿಗೇರಿದೆ. ಭಾಗ್ಯಳನ್ನು ಒಳಕ್ಕೆ ಬರಲು ಬಿಡದ ಆತ ಆಕೆ ಕೊಟ್ಟ ಟಿಫನ್ ಬಾಕ್ಸ್ ಅನ್ನು ತೆಗೆದುಕೊಂಡು, ಆಮೇಲೆ ತಿನ್ನುವುದಾಗಿ ಸುಳ್ಳು ಹೇಳಿದ್ದಾನೆ. ಶಾಲೆಗೆ ಹೋಗಲು ರೆಡಿಯಾಗಿದ್ದ ಮಕ್ಕಳನ್ನು ಪಿಕ್ನಿಕ್ಗೆ ಕರೆದುಕೊಂಡು ಹೋಗುವುದಾಗಿ, ಆಮೇಲೆ ಅಲ್ಲಿಯೇ ತಿಂಡಿ ಕೊಡಿಸುವುದಾಗಿ ಹೇಳಿದ್ದಾನೆ. ಅಮ್ಮನೂ ಬರಲಿ ಎಂದು ಗುಂಡ ಹೇಳಿದರೆ, ತಾಂಡವ್ ಏನೇನೋ ಸಬೂಬು ಹೇಳಿದ್ದಾನೆ. ಇದರ ಮಧ್ಯೆಯೇ ಎಲ್ಲರನ್ನೂ ಅರೆ ಹೊಟ್ಟೆ ಇಟ್ಟ ಕಾರಣ, ಕುಸುಮಾ ತಾಂಡವ್ನನ್ನು ಚೆನ್ನಾಗಿ ಬೈದಿದ್ದಾಳೆ.
ಇದಕ್ಕೆ ಕೆಲವರು ಇದ್ದರೆ ಇಂಥ ಅತ್ತೆ ಇರಬೇಕು, ಸೊಸೆಯ ಮೇಲೆ ಅದೆಷ್ಟು ಪ್ರೀತಿ. ನಮಗೂ ಇಂಥ ಅತ್ತೆಯೇ ಸಿಗಬೇಕು ಎಂದಿದ್ದಾರೆ. ಈ ಕಮೆಂಟ್ಗೆ ಉತ್ತರವಾಗಿ ಸ್ಮಿತಾ ಬಾಲು ಎನ್ನುವ ಅಕೌಂಟ್ ಹೋಲ್ಡರ್. ಇದು ನಿಜನೇ. ಆದರೆ ಅತ್ತೆ ಒಳ್ಳೆಯವರು ಆಗಿದ್ರೆ ಪ್ರಯೋಜನ ಇಲ್ಲ, ಕುಸುಮ ಥರ ಮಗನ ಮೇಲೆ ಕೂಗಾಡೋದು ಏಗರಾಡೋದು ಬರೆ ಹಾಕೋದು ಮಾಡಿದರೆ ಯಾವ ಮಗನೂ ಸಹಿಸಲ್ಲ. ಭಾಗ್ಯ ಬಿಟ್ಟು ಉಳಿದವರೆಲ್ಲ ಬೇಕು ಅಂತ ತಾಂಡವ್ ಹೇಳ್ತಾ ಇದ್ದಾನೆ. ನಿಜ ಜೀವನದಲ್ಲಿ ಹೀಗಾದರೆ ಎಲ್ಲರನ್ನೂ ಬಿಟ್ಟು ಮಗ ಡಿವೋರ್ಸ್ ಕೊಟ್ಟು ಬೇರೆ ಮದುವೆ ಆಗಿ ಹೋಗಲು ಹೆಚ್ಚು ಹೊತ್ತು ಬೇಕಾಗಲ್ಲ. ಇಂಥ ಸಂದರ್ಭದಲ್ಲಿ ಹಣದ ಅನಿವಾರ್ಯತೆ ಬಂದಾಗ ಮಗನನ್ನು ಹೆತ್ತವರು ಕ್ಷಮಿಸಿಬಿಡುತ್ತಾರೆ. ಏಕೆಂದರೆ ಜೀವನ ಸೀರಿಯಲ್ ಅಲ್ವಲ್ಲಾ? ಆಗ ಸೊಸೆಯಾದವಳೇ ಎಲ್ಲ ಜವಾಬ್ದಾರಿ ಹೊರುವ ಸ್ಥಿತಿ ಬರುತ್ತದೆ. ಮಕ್ಕಳಿಗೆ ಜೀವನ ರೂಪಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಅತ್ತೆ ಕೆಟ್ಟವರಾದರೂ ಅಡ್ಡಿ ಇಲ್ಲ ಗಂಡ ದೇವರಂಥವನು ಸಿಗಬೇಕು...... ಇಲ್ಲಾಂದ್ರೆ ಜೀವನ ಕಟ್ಟಿಕೊಳ್ಳುವುದು ಬಹಳ ಕಷ್ಟ ಎಂದಿದ್ದಾರೆ. ಅತ್ತೆ ಮತ್ತು ಗಂಡನ ನಡುವಿನ ವಾದ-ಪ್ರತಿವಾದಕ್ಕೆ ಈ ಪ್ರೊಮೋ ಸಾಕ್ಷಿಯಾಗಿದೆ.
ಅಷ್ಟಕ್ಕೂ, ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ, ಭಾಗ್ಯ ಪತಿಗೆ ಚಾಲೆಂಜ್ ಹಾಕಿದ್ದಾಳೆ. ಏಳು ದಿನಗಳು ನಾನು ಮನೆಯಲ್ಲಿ ಇರುವುದಿಲ್ಲ. ನೀವು ಈ ಏಳು ದಿನಗಳನ್ನು ಚೆನ್ನಾಗಿ ನಿಭಾಯಿಸಿದ್ದೇ ಆದಲ್ಲಿ ನಿಮ್ಮ ಬಾಳಿನಿಂದ ದೂರ ಹೋಗುತ್ತೇನೆ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್ ಖುಷಿಯಾಗಿದ್ದಾನೆ. ಭಾಗ್ಯ ಮನೆಬಿಟ್ಟು ಹೋಗಿದ್ದಾಳೆ. ಮಕ್ಕಳಿಗೆ ಇದರ ಅರಿವು ಇಲ್ಲ. ತಾಂಡವ್ ಮನೆಗೆ ವಾಪಸಾಗಿದ್ದಾನೆ. ಅಮ್ಮ ಸ್ವಲ್ಪ ದಿನ ರೆಸ್ಟ್‌ಗೆ ಅಂತ ತವರಿಗೆ ಹೋಗಿದ್ದಾಳೆ ಎಂದು ಕುಸುಮಾ ಮೊಮ್ಮಕ್ಕಳಿಗೆ ಹೇಳಿದ್ದಾಳೆ. ತಾನು ಗೆದ್ದ ಖುಷಿಯಲ್ಲಿದ್ದಾನೆ ತಾಂಡವ್. ಹಾಗಿದ್ದರೆ ಗೆಲುವು ಯಾರದ್ದಾಗುತ್ತದೆ? ತಾಂಡವ್ ಏಳು ದಿನಗಳಲ್ಲಿ ಮನೆಯನ್ನು ನಿಭಾಯಿಸಲು ಶಕ್ಯನಾಗುತ್ತಾನಾ? ಇದೇನು ದೊಡ್ಡ ಷರತ್ತು ಅಲ್ಲ ಎಂದು ಬೀಗುತ್ತಿರುವ ತಾಂಡವ್ಗೆ ಹೆಂಡತಿ ಇಲ್ಲದೇ ಮನೆಯನ್ನು ನಿಭಾಯಿಸಲು ಸಾಧ್ಯವಾಗುತ್ತಾ? ಒಂದು ವೇಳೆ ಆತ ನಿಭಾಯಿಸಿದರೆ ಏನಾಗುತ್ತದೆ, ಆತ ಸೋತರೆ ಏನಾಗುತ್ತದೆ? ಇದರ ಮೊದಲ ಹಂತದ ಸೋಲನ್ನು ಇದೀಗ ಕಂಡಿದ್ದಾನೆ. ದುಬಾರಿ ಗಿಫ್ಟ್ ಕೊಟ್ಟು ಮಕ್ಕಳ ಪ್ರೀತಿ ಗಳಿಸಬಹುದು ಎನ್ನುವ ಅವನ ಅನಿಸಿಕೆ ಸುಳ್ಳಾಗಿದೆ. ಮಗ ಗಿಫ್ಟ್ ಎಸೆದು ಹೋದರೆ, ಮಗಳು ತನಗೆ ಇದೆಲ್ಲಾ ಬೇಡ ಎಂದು ಅಪ್ಪನ ಮುಖಕ್ಕೆ ಹೊಡೆಯುವಂತೆ ಹೇಳಿದ್ದಾಳೆ. ಅಡುಗೆಯವಳು ಬಂದ ಅರ್ಧಂಬರ್ಧ ಅಡುಗೆ ಮಾಡಿ ಹೋಗಿದ್ದಾಳೆ. ಮುಂದೇನು ಎನ್ನುವುದು ಕುತೂಹಲ.
ಹೆತ್ತಮನೆ v/s ಅತ್ತೆಮನೆ.... ಹೆಣ್ಣಿನ ಜೀವನ ಏಕಿಷ್ಟು ವಿಚಿತ್ರ ಅಂತಿದ್ದಾಳೆ ಭಾಗ್ಯ! ನಿಮಗೂ ಹೀಗೆ ಅನಿಸತ್ತಾ?
