ಹೆತ್ತಮನೆ v/s ಅತ್ತೆಮನೆ.... ಹೆಣ್ಣಿನ ಜೀವನ ಏಕಿಷ್ಟು ವಿಚಿತ್ರ ಅಂತಿದ್ದಾಳೆ ಭಾಗ್ಯ! ನಿಮಗೂ ಹೀಗೆ ಅನಿಸತ್ತಾ?
ಗಂಡನಿಗೆ ಚಾಲೆಂಜ್ ಹಾಕಿ ಅಮ್ಮನ ಮನೆ ಸೇರಿದ್ದಾಳೆ ಭಾಗ್ಯ. ಅಪ್ಪ-ಅಮ್ಮನ ಕೈತುತ್ತೇ ಸ್ವರ್ಗ ಎನ್ನುವ ಭಾಗ್ಯಳ ತಲೆಯಲ್ಲಿ ಹೆಣ್ಣಿನ ಜೀವನದ ಬಗ್ಗೆ ನೂರೊಂದು ಪ್ರಶ್ನೆ. ಏನಂತಾಳೆ ಭಾಗ್ಯ?
ಹೆಣ್ಣಿನ ಜೀವನವೇ ಹಾಗಲ್ವಾ? 20-25 ವರ್ಷ ಹುಟ್ಟಿ ಬೆಳೆದು ಆಡಿದ ತವರು ಒಮ್ಮೆ ಮದ್ವೆಯಾದ ಮೇಲೆ ಅಪರಿಚಿತವಾಗಿಬಿಡುತ್ತದೆ. ಸಂಸಾರ ದೊಡ್ಡದಾಗುತ್ತಿದ್ದಂತೆಯೇ ಜವಾಬ್ದಾರಿ ಹೆಚ್ಚು. ಅಮ್ಮನ ಮನೆಗೆ ಬರಬೇಕು ಎಂದರೆ ಎಷ್ಟೋ ಬಾರಿ ಹೋಗಲಾಗದ ಸಂಕಷ್ಟ. ಇನ್ನು ಹೆತ್ತ ಅಪ್ಪ-ಅಮ್ಮಂದಿರನ್ನು ನೋಡಬೇಕು ಎಂದರೆ ಅತ್ತೆ ಮನೆಯಲ್ಲಿ ನೂರೆಂಟು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಅನಿವಾರ್ಯತೆ. ಯಾಕೆ? ಏನು ಎಂಬೆಲ್ಲಾ ಪ್ರಶ್ನೆಗಳ ಸುರಿಮಳೆ. ಆಗಾಗ್ಗೆ ತವರು, ಅಮ್ಮನ ಕೈತುತ್ತು ನೆನಪಾದರೂ ಅಲ್ಲಿಗೆ ಹೋಗಲಾಗದೇ ವಿಲವಿಲ ಒದ್ದಾಡುವ ಸ್ಥಿತಿ. ಎಲ್ಲದ್ದಕ್ಕೂ ಗಂಡನ ಮನೆಯವರ ಪರ್ಮಿಷನ್ ಕೇಳಬೇಕಾದ ಸ್ಥಿತಿ.
ಇನ್ನು ಅಮ್ಮನ ಮನೆಗೆ ಹೋಗಲು ಅವಕಾಶ ಸಿಕ್ಕಿಬಿಟ್ಟರೆ? ಆಹಾ! ಎಂಥ ಭಾಗ್ಯ ಎಂದುಕೊಳ್ಳಲು ಆದೀತೆ? ಖಂಡಿತ ಇಲ್ಲ. ಅಪರೂಪಕ್ಕೆ ಅಮ್ಮನ ಮನೆಗೆ ಹೋದರೆ ಒಂದಿಷ್ಟು ದಿನ ನೆಮ್ಮದಿ ಅಷ್ಟೇ. ನಂತರ ಗಂಡನ ಮನೆ ಬಿಟ್ಟು ಅಮ್ಮನ ಮನೆಗೆ ಯಾಕೆ ಬಂದಿದ್ದಾಳೆ? ತವರಿಗೆ ಬಂದು ಎಷ್ಟೋ ದಿನವಾದ್ರೂ ಇನ್ನೂ ಯಾಕೆ ಗಂಡನ ಮನೆಗೆ ಹೋಗ್ತಿಲ್ಲ? ಏನಾದ್ರೂ ಸಮಸ್ಯೆ ಆಗಿದ್ಯಾ ಎಂದು ನೆರೆಹೊರೆಯವರ ಚುಚ್ಚು ಮಾತುಗಳನ್ನು ಕೇಳುವ ಅನಿವಾರ್ಯತೆ. ಮಗಳು ಎಷ್ಟೋ ದಿನಗಳ ಅಥವಾ ವರ್ಷಗಳ ಬಳಿಕ ಮನೆಗೆ ಬಂದಿದ್ದಾಳೆ ಎಂದು ಖುಷಿ ಪಡುವ ಅಮ್ಮನೂ, ಒಂದು ಹಂತ ಮೀರಿ ಮಗಳು ಮನೆಯಲ್ಲಿಯೇ ಇದ್ದಾಳೆ ಎಂದರೆ ಆಕೆಗೂ ಕಸಿವಿಸಿ. ಮಗಳು ಯಾಕಿಷ್ಟು ದಿನ ಇದ್ದಾಳೆ? ಅಕ್ಕ-ಪಕ್ಕದ ಮನೆಯವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವುದು ಹೇಗೆ? ಎಂಬೆಲ್ಲಾ ಚಿಂತೆಗಳು...
ಗಂಡಂದಿರಿಗೆ ಒಂದು ವಾರದ ಚಾಲೆಂಜ್ ಕೊಡಲು ರೆಡಿಯಾದ 'ಭಾಗ್ಯಲಕ್ಷ್ಮಿ' ಫ್ಯಾನ್ಸ್! ಏನಿದು ವಿಷ್ಯ?
ಹೆಣ್ಣಿನ ಜೀವನ ಎಷ್ಟು ವಿಚಿತ್ರ ಅಲ್ವಾ? ಹುಟ್ಟಿ- ಬೆಳೆದ ತವರನ್ನೇ ಮರೆತು, ಅಮ್ಮನ ಕೈತುತ್ತಿಗಾಗಿ ಪರದಾಡುತ್ತಿದ್ದರೂ ಅಮ್ಮನ ಮನೆಗೆ ಬರಲಾರದ ಸ್ಥಿತಿ, ಬಂದರೂ ಹೆಚ್ಚು ದಿನ ಉಳಿದುಕೊಳ್ಳಲಾಗದ ಸ್ಥಿತಿ... ದೇವರೇ ಹೆಣ್ಣಿನ ಜೀವನವನ್ನು ಏಕೆ ಹೀಗೆ ಮಾಡಿರುವೆ ಎನ್ನುತ್ತಿದ್ದಾಳೆ ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗ್ಯ. ನಿನ್ನಿಂದಲೇ ನನ್ನ ಬದುಕು ನರಕವಾಗಿದ್ದು, ನೀನು ಇಲ್ಲದಿದ್ದರೆ ನಾನು ಹಾಗೂ ಇಡೀ ಕುಟುಂಬ ಸಂತೋಷವಾಗಿರುತ್ತಿದ್ದೆವು. ನೀನು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗಿರುತ್ತೆ, ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎಂದರೆ ನೀನು ಮನೆಬಿಟ್ಟು ಹೋಗಬೇಕು ಎಂದು ತಾಂಡವ್ ಪತ್ನಿ ಭಾಗ್ಯಳಿಗೆ ಹೇಳಿ ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕುವಲ್ಲಿ ತಾಂಡವ್ ಯಶಸ್ವಿಯಾಗಿದ್ದಾನೆ. ಭಾಗ್ಯ ಈಗ ತವರಿಗೆ ಬಂದಿದ್ದಾಳೆ. ತವರು ಮನೆಯಲ್ಲಿ ಅಪ್ಪ-ಅಮ್ಮನ ಕೈತುತ್ತು ತಿಂದು ಖುಷಿಯಾಗಿದ್ದಾಳೆ.
ಅದೆಷ್ಟೋ ವರ್ಷಗಳಿಂದ ಅಮ್ಮನ ಮನೆಯ ಕಡೆ ಬರಲು ಆಗದಿದ್ದ ಭಾಗ್ಯಳಿಗೆ ಖುಷಿಯೇನೋ ಆಗುತ್ತಿದೆ, ಆದರೆ ಪರಿಸ್ಥಿತಿ? ಆದಷ್ಟು ಬೇಗ ಮಗಳು ಗಂಡನ ಮನೆಗೆ ಹೋಗಲಿ ಎಂದು ಅಮ್ಮ ಕಣ್ಣೀರು ಹಾಕುತ್ತಿದ್ದರೆ, ಹೆಣ್ಣಿನ ಸ್ಥಿತಿ ಕಂಡು ಭಾಗ್ಯ ಮರಗುತ್ತಿದ್ದಾಳೆ. ಹೆಣ್ಣಿಗೆ ದೇವರು ಈ ರೀತಿಯ ಕಷ್ಟ ಯಾಕೆ ಕೊಟ್ಟ ಎಂದು ಕೇಳುತ್ತಿದ್ದಾಳೆ. ಬಹುಶಃ ಇದು ಭಾಗ್ಯ ಒಬ್ಬಳ ಸ್ಥಿತಿಯಲ್ಲ. ಬಹುತೇಕ ಹೆಣ್ಣುಮಕ್ಕಳ ಪ್ರತಿನಿಧಿಯಾಗಿದ್ದಾಳೆ ಈ ಭಾಗ್ಯ ಎನ್ನುತ್ತಿದ್ದಾರೆ ನೆಟ್ಟಿಗರು. ಪರಿಸ್ಥಿತಿ ಏನೇ ಇರಲಿ, ಗಂಡ-ಹೆಂಡತಿ ಚೆನ್ನಾಗಿಯೇ ಇರಲಿ ಆದರೆ ತನಗೆ ಬೇಕಾದ ಹಾಗೆ ತವರಿಗೆ ಹೋಗುವ ಭಾಗ್ಯ ಎಷ್ಟು ಮಂದಿಗೆ ಇದ್ದೀತು ಎನ್ನುತ್ತಿದ್ದಾರೆ ಮಹಿಳೆಯರು. ನಿಮಗೂ ಹೀಗೆಯೇ ಅನ್ನಿಸುತ್ತದೆಯೆ?
ಶಿಲ್ಪಾ ಶೆಟ್ಟಿ ಎರಡನೆಯ ಮಗಳಿಗೆ 4ನೇ ಹುಟ್ಟುಹಬ್ಬದ ಸಂಭ್ರಮ: ನಟಿ ಬಾಡಿಗೆ ತಾಯ್ತನ ಆಯ್ದುಕೊಂಡದ್ದೇಕೆ?