ಆರ್ಮಿ ವರ್ಸಸ್ ಸಿವಿಲಿಯನ್ಸ್ ನಡುವಿನ ಸಿದ್ಧಾಂತಗಳ ಸಂಘರ್ಷ, ಸ್ನೇಹ ಮತ್ತು ನಿಷ್ಕಲ್ಮಷ ಪ್ರೀತಿಯ ಸುತ್ತ ಇಡೀ ಬದುಕನ್ನೇ ಬಿಚ್ಚಿಟ್ಟ ಸೂಪರ್ ಹಿಟ್ ಧಾರಾವಾಹಿ ‘ಏಕ್ ದೂಜೆ ಕೆ ವಾಸ್ತೆ ಸೀಸನ್ 2’. ಇಂದಿಗೂ ಒಟಿಟಿಯಲ್ಲಿ ಸದ್ದು ಮಾಡುತ್ತಿರುವ ಶ್ರವಣ್-ಸುಮನ್ ಜೋಡಿಯ ರೋಚಕ ಕಥೆ ಇಲ್ಲಿದೆ.
ದಿನವೂ ತಂದೆಯ ಹತ್ತಿರ ಬೈಸಿಕೊಳ್ಳುವ ಆ ಕರಾರುವಾಕ್ ತುಂಟ ಹುಡುಗ, ಬೈಕ್ ರೈಡಿಂಗ್, ವಿಡಿಯೋ ಗೇಮ್ಸ್ ಗೀಳು, ದಿನಾಲೂ ಕ್ಲಾಸ್ ಬಂಕ್ ಮಾಡುವುದು.. ಹೀಗೆ ಬರೀ ತರ್ಲೆ ಮಾಡುತ್ತಲೇ ತಿರುಗುತ್ತಿರುತ್ತಾನೆ. ಆದರೆ, ಕಾಲಚಕ್ರ ಉರುಳಿದಂತೆ ವಿಧಿ ಆತನನ್ನು ತಂದು ನಿಲ್ಲಿಸುವುದೇ ಒಂದು ಕಟ್ಟುನಿಟ್ಟಿನ ಆರ್ಮಿ ಸ್ಕೂಲ್ನಲ್ಲಿ! ತೀರ ಸಾಮಾನ್ಯ ನಾಗರಿಕ ಹಿನ್ನೆಲೆಯಿಂದ (Civilian) ಬಂದ ಆ ತುಂಟನಿಗೆ ಆರಂಭದಲ್ಲಿ ಸೇನಾ ಶಿಸ್ತಿನ ಆ ವಾತಾವರಣ ನರಕದಂತೆ ಭಾಸವಾಗುತ್ತದೆ. ಜೊತೆಗೆ ಸೈನಿಕರ ಮಕ್ಕಳಿಂದ ರ್ಯಾಗಿಂಗ್ ಮಾದರಿಯ ಕಿರುಕುಳವೂ ಎದುರಾಗುತ್ತದೆ. ಆದರೆ ಧೃತಿಗೆಡದ ಆತ, ಎಲ್ಲವನ್ನೂ ಮೆಟ್ಟಿ ನಿಂತು ಅದೇ ಆರ್ಮಿ ಹುಡುಗರಿಗೆ ಸವಾಲಾಗಿ ಬೆಳೆಯುತ್ತಾನೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
'ಏಕ್ ದೂಜೆ ಕೆ ವಾಸ್ತೆ ಸೀಸನ್ 2'!
ಕ್ಯಾಂಪಸ್ ದಿನಗಳು ಕಳೆದಂತೆ ಶತ್ರುಗಳಾಗಿದ್ದವರೇ ಆಪ್ತ ಸ್ನೇಹಿತರಾಗುತ್ತಾರೆ. ಸ್ನೇಹದ ಆ ಸುಂದರ ಪಯಣದಲ್ಲಿ ಕಾಲದ ಅರಿವಿಲ್ಲದೇ ನಿಷ್ಕಲ್ಮಷ ಪ್ರೀತಿಯೊಂದು ಚಿಗುರೊಡೆಯುತ್ತದೆ. ಸ್ನೇಹ, ಪ್ರೀತಿ ಮತ್ತು ಸಿದ್ಧಾಂತಗಳ ನಡುವೆ ಸಾಗುವ ಈ ಕಥೆಯ ಭಾವನಾತ್ಮಕ ಜರ್ನಿ ಎಂತವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಪ್ರತಿಯೊಂದು ಎಪಿಸೋಡ್ ಮುಗಿದದ್ದೇ ತಿಳಿಯದಂತೆ ವೀಕ್ಷಕರನ್ನು ತನ್ನ ಲೋಕಕ್ಕೆ সেಳೆದುಕೊಂಡು ಸಾಗುವ ಈ ಅಪರೂಪದ ಧಾರಾವಾಹಿಯೇ 'ಏಕ್ ದೂಜೆ ಕೆ ವಾಸ್ತೆ ಸೀಸನ್ 2' ಆಗಿದೆ.
ಪಾತ್ರಗಳ ಜೀವಂತಿಕೆ ಮತ್ತು ಹಣೆಬರಹ ಬದಲಿಸಿದ ಆ ಒಂದು ಸಾವು!
ಈ ತುಂಟ ಹುಡುಗ 'ಶ್ರವಣ್' ಪಾತ್ರದಲ್ಲಿ ಮೋಹಿತ್ ಕುಮಾರ್ ಮತ್ತು ಆರ್ಮಿ ಶಿಸ್ತಿನ ಹುಡುಗಿ 'ಸುಮನ್' ಪಾತ್ರದಲ್ಲಿ ಕನ್ನಿಕಾ ಕಪೂರ್ ತಮ್ಮ ಅದ್ಭುತ ನಟನೆಯಿಂದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ದಿನ ಕಳೆದಂತೆ ಇಬ್ಬರ ನಡುವೆ ಗಾಢವಾದ ಪ್ರೀತಿ ಅರಳುತ್ತದೆ. ಇತ್ತ ಶ್ರವಣ್ ತಂದೆ ದೇವ್ರಾಜ್ ಮಲ್ಹೋತ್ರಾ ಮತ್ತು ಸುಮನ್ ತಂದೆ ವಿಜಯ್ ತಿವಾರಿ ಆತ್ಮೀಯ ಸ್ನೇಹಿತರಾಗಿರುತ್ತಾರೆ. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಬ್ಯುಸಿನೆಸ್ ಮ್ಯಾನ್ ಆಗಿದ್ದ ಮಲ್ಹೋತ್ರಾ ಆರ್ಮಿ ಕ್ಯಾಂಟ್ಗೆ ಬುಲೆಟ್ ಪ್ರೂಫ್ ಜಾಕೆಟ್ ಸಪ್ಲೈ ಮಾಡುವ ಆರ್ಡರ್ ಪಡೆಯುತ್ತಾರೆ. ಇದೇ ನಡುವೆ ಮಿಷನ್ ಒಂದರಲ್ಲಿ ಸುಮನ್ ತಂದೆ ವಿಜಯ್ ತಿವಾರಿ ಪ್ರಾಣತ್ಯಾಗ. ಆದರೆ ಇಲ್ಲಿಗೆ ಕಥೆಗೆ ದೊಡ್ಡ ಆಘಾತ ಎದುರಾಗುತ್ತದೆ. ವಿಜಯ್ ತಿವಾರಿ ಅವರ ಸಾವು ಮಲ್ಹೋತ್ರಾ ನೀಡಿದ ಕಳಪೆ ಗುಣಮಟ್ಟದ ಜಾಕೆಟ್ಗಳಿಂದಲೇ ಆಯಿತು ಎಂಬ ಆರೋಪ ಕೇಳಿಬರುತ್ತದೆ. ಇಬ್ಬರು ಆಪ್ತ ಸ್ನೇಹಿತರ ಮನೆಗಳು ಒಂದೇ ರಾತ್ರಿಯಲ್ಲಿ ಇಬ್ಬಾಗವಾಗುತ್ತವೆ. ದೇವ್ರಾಜ್ ಮಲ್ಹೋತ್ರಾ ಮೇಲೆ ದೇಶದ್ರೋಹದ ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗುತ್ತದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಶ್ರವಣ್ ಮತ್ತು ಸುಮನ್ ನಡುವೆ ದ್ವೇಷದ ಗೋಡೆ ನಿರ್ಮಾಣವಾಗುತ್ತದೆ. ಇಲ್ಲೇ ಕಥೆಗೆ ಒಂದು ಬಿಗ್ ಟ್ವಿಸ್ಟ್ ಸಿಗುತ್ತದೆ.
ಯುಎಸ್ ಆಸೆ ಮರೆತು ಆರ್ಮಿ ಸೇರಿದ ಹುಡುಗ!
ಇದೆಲ್ಲಾ ಆದ ನಂತರ ಕಥೆ 7 ವರ್ಷಗಳ ಸುದೀರ್ಘ ಜಿಗಿತವನ್ನು (Leap) ಕಾಣುತ್ತದೆ. ಮೊದಲಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಯುಎಸ್ (US) ಹೋಗಲು ಸಿದ್ಧನಾಗಿದ್ದ ಅದೇ ತರ್ಲೆ ಹುಡುಗ ಶ್ರವಣ್, ಇಂದು ದೇಶ ಕಾಯುವ ಗಂಭೀರ ಆರ್ಮಿ ಆಫೀಸರ್ ಆಗಿ ಪ್ರತ್ಯಕ್ಷನಾಗುತ್ತಾನೆ! ಇತ್ತ ಸುಮನ್ ಸಹ ತನ್ನ ತಂದೆಯ ಹಾದಿಯಲ್ಲೇ ನಡೆದು ಆರ್ಮಿ ಕ್ಯಾಪ್ಟನ್ ಡಾ. ಸುಮನ್ ಆಗಿ ದೇಶದ ಸೇವೆಗೆ ನಿಲ್ಲುತ್ತಾಳೆ. ಹಳೆಯ ಪ್ರೇಮಿಗಳು ಮತ್ತೆ ಮುಖಾಮುಖಿಯಾದಾಗ ಕಥೆ ಮತ್ತೊಂದು ರೋಮಾಂಚನಕಾರಿ ಹಂತದತ್ತ ಸಾಗುತ್ತದೆ. ಕೇವಲ ಮುಖ್ಯ ಪಾತ್ರಗಳಷ್ಟೇ ಅಲ್ಲದೆ, ಶ್ರವಣ್ ಸ್ನೇಹಿತ ಬಂಟಿ, ಸುಮನ್ ಸಹೋದರಿ ಕಂಚನ್, ವಿಕ್ರಮ್, ಬ್ರಿಗೇಡಿಯರ್ ಬುಡ್ಡಾ ಎಲ್ಲರೂ ತಮ್ಮ ಪಾತ್ರಗಳಿಗೆ ಎಲ್ಲಿಲ್ಲದ ಜೀವ ತುಂಬಿದ್ದಾರೆ. ಆದ್ದರಿಂದಲೇ ಈ ಕಥೆ ಮುಗಿದು ಹೋಗುವ ಬದುಕಲ್ಲಿ ಶಾಶ್ವತವಾಗಿ ಜೀವಿಸುವಂಥದ್ದಾಗಿದೆ.
ಒಟಿಟಿಯಲ್ಲಿ ಇಂದಿಗೂ ಇದೆ ಕ್ರೇಜ್!
ಸೋನಿ ಲಿವ್ ಒಟಿಟಿಯಲ್ಲಿ ಇಂದಿಗೂ ಯುವ ಪೀಳಿಗೆ ಈ ಸುಂದರ ದೇಶಪ್ರೇಮ ಮತ್ತು ಪ್ರೇಮಕಾವ್ಯದ ಕಥೆಯನ್ನು ಮುಗಿಬಿದ್ದು ನೋಡುತ್ತಿರುವುದೇ ಇದರ ಅದ್ಭುತ ಯಶಸ್ಸಿಗೆ ಸಾಕ್ಷಿಯಾಗಿದೆ.














