ಇಂಡೋನೇಷ್ಯಾದ ನರಭಕ್ಷಕರ ಜೊತೆ Dr Bro! ಹುಷಾರು ದೇವ್ರು ಅಂತಿದ್ದಾರೆ ಫ್ಯಾನ್ಸ್
ಡಾ ಬ್ರೊ ಈಗ ಹೋಗಿರೋ ಜಾಗ ಅಂತಿಥದ್ದಲ್ಲ. ಮನುಷ್ಯರನ್ನೇ ತಿನ್ನೋ ನರಭಕ್ಷಕರ ಜೊತೆ ಒಂದಿಷ್ಟು ಹೊತ್ತು ಕಳೆದು ಬಂದಿದ್ದಾರೆ ಈ ಯಂಗ್ ವ್ಲಾಗರ್. ಈತ ನರಭಕ್ಷಕರ ಜೊತೆ ಕಳೆದಿರೋ ಕ್ಷಣ ನಿಜಕ್ಕೂ ರೋಚಕ.
ಇಂಡೋನೇಷ್ಯಾದ ವೆಸ್ಟ್ ಪಪುವಾ ರಾಜ್ಯ. ಅಲ್ಲಿಂದ ಸುಮಾರು ಕಿಮೀ ದೂರದಲ್ಲಿದೆ ಡಕಾಯ ಅನ್ನೋ ಪ್ರದೇಶ. ಈ ಜಾಗದಲ್ಲಿ ಚರ್ಚ್ ಒಂದರಲ್ಲಿ ಮಲಗಿ ರಾತ್ರಿ ಕಳೆದ ಡಾ. ಬ್ರೋ ಮರುವಿನ ಬೆಳಗ್ಗೆ ಎದ್ದಾಗ ಸ್ಪೀಡ್ ಮೋಟಾರ್ ಬೋಟ್ ರೆಡಿ ಆಗಿತ್ತು. ಅದು ಯಾವುದೋ ನಯನ ಮನೋಹರ ತಾಣಕ್ಕೋ, ಪಿಕ್‌ನಿಕ್ ಸ್ಪಾಟ್‌ಗೋ ಅಲ್ಲ. ಬದಲಾಗಿ ಎದೆ ನಡುಗಿಸೋ ಒಂದು ಜಾಗಕ್ಕೆ ಅಂದರೆ ನರಭಕ್ಷಕರಿರೋ ತಾಣಕ್ಕೆ. ಚರ್ಚ್ ನಲ್ಲಿ ಹಾಡು ಹಾಡುತ್ತಾ ರಾತ್ರಿ ಮಲಗಲಿಕ್ಕೆ ಜಾಗ, ಹೊಟ್ಟೆಗೆ ಊಟ, ತಿಂಡಿ ಒದಗಿಸಿದ ಚರ್ಚ್ ಗುರುಗಳಿಗೆ ಥ್ಯಾಂಕ್ಸ್ ಹೇಳಿ ಅವರ ಸುಂದರ ಹಾಡನ್ನು ತನ್ನ ಅಭಿಮಾನಿ ದೇವ್ರಿಗೆ ಕೇಳಿಸಿದ ಡಾ ಬ್ರೋ ಧೈರ್ಯದಿಂದ ಮೋಟಾರ್ ಬೋಟ್ ಏರ್ತಾರೆ. ಈ ಬೋಟ್ ತುಂಬ ಸ್ಥಳೀಯರು. ಸಾಮಾನ್ಯ ಎಲ್ಲ ಕಡೆ ತಾನೊಬ್ಬನೇ ಓಡಾಡೋ ಬ್ರೋ ಇಲ್ಲಿ ಜನರ ಜೊತೆ ಹೋಗಲು ಕಾರಣ ಇದೆ. ಮತ್ತೇನಲ್ಲ, ಪಪುವ ರಾಜ್ಯವನ್ನು ಪ್ರತ್ಯೇಕ ದೇಶ ಮಾಡ್ಬೇಕು ಅನ್ನೋ ಕೂಗು, ಗಲಾಟೆ ಅಲ್ಲಿ ಜೋರಾಗಿದೆಯಂತೆ. ಹೀಗಾಗಿ ಅಪಾಯ ಮನಗಂಡು ಊರವರ ಜೊತೆ ಈ ನರಭಕ್ಷಕರ ಜಾಗಕ್ಕೆ ಹೊರಟಿದ್ದಾರೆ.
ಇದು ನದಿಯೋ ರಸ್ತೆಯೋ ಒಂದೂ ಗೊತ್ತಾಗಲ್ಲ. ಹೋಗ್ತಿರೋದು ಬೋಟಲ್ಲಿ, ಕೆಳಗಡೆ ನೀರಿದೆ. ಸುತ್ತ ದಟ್ಟ ಕಾಡು. ಈ ಕಾಡಲ್ಲಿ ಒಳಗೊಳಗೆ ಒಳಗೊಳಗೆ ಹೋದರೆ ಈ ಡಿಸ್ಕವರಿ ಚಾನಲ್‌ನಲ್ಲಿ ಬರುತ್ತಲ್ವಾ ಅಂಥ ಬೇರು, ಬಿಳಲು, ನೀರು ಎಲ್ಲ ಇರೋ ಸೂರ್ಯನ ಬೆಳಕು ಸರಿಯಾಗಿ ಕೆಳಗೆ ಇಳಿಯದಷ್ಟು ದಟ್ಟ ಮರಗಳಿರೋ ಜಾಗ. ಇಂಥಲ್ಲೇ ಮೋಟಾರು ಬೋಟು ಆಗಾಗ ಕೆಟ್ಟು ಹೋಗುತ್ತೆ.
ಹೀಗೆ ಏನೇನೆಲ್ಲ ಸಾಹಸ ಮಾಡಿ ಕೊನೆಗೂ ಡಾ ಬ್ರೋ ಈ ನರಭಕ್ಷಕರ ಜಾಗಕ್ಕೆ ಹೋಗುತ್ತಾರೆ. ಸಿನಿಮಾಗಳಲ್ಲಿ ಕಾಲ್ಪನಿಕವಾಗಿ ಸೃಷ್ಟಿಸಿದ ದೃಶ್ಯಗಳ ಹಾಗೆ ಈ ಕಾಡು ಮನುಷ್ಯರ ಜೀವನ. ಕೆಲವರು ಕೆಳ ಭಾಗವನ್ನು ಮಾತ್ರ ಸೊಪ್ಪಿನಿಂದ ಮುಚ್ಚಿದ್ದರೆ, ಇನ್ನೂ ಕೆಲವರು ಸಂಪೂರ್ಣ ಬೆತ್ತಲೆ. ಆದರೆ ಇಲ್ಲಿನ ವೀಡಿಯೋಗಳಲ್ಲಿ ಗಂಡಸರಷ್ಟೇ ಇದ್ದಾರೆ, ಹೆಂಗಸರ ದರ್ಶನವಾಗಿಲ್ಲ. ಕಾಡಿನ ನಡುವೆ ದೊಡ್ಡ ಮರಗಳನ್ನೇ ಆಧಾರವಾಗಿ ನಿಲ್ಲಿಸಿ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯುತ್ತಾರೆ ಈ ಕಾಡಿನ ಬುಡಕಟ್ಟು ಜನ.
ಮುಸ್ಲಿಂ ದೇಶ ಇಂಡೋನೇಷ್ಯಾದಲ್ಲಿ ಅಷ್ಟೊಂದು ಹಿಂದೂಗಳಿರೋದು ಹೇಗೆ? ಡಾ. ಬ್ರೋ ಏನಂತಾರೆ?
ಅಂದಹಾಗೆ ಈ ನರಭಕ್ಷಕರಿರುವ ಜಾಗದ ಹೆಸರು ಬೊಬಿ. ಕೊರವೆ ಅಂತ ಈ ಬುಡಕಟ್ಟಿನವರನ್ನು ಕರೀತಾರೆ. ಇವರು 1970ರವರೆಗೂ ಮನುಷ್ಯರನ್ನು ಕೊಂದು ಅವರ ಮಾಂಸವನ್ನು ತಿನ್ನುತ್ತಿದ್ದರು. ಆದರೆ ನಂತರ ಮಿಷನರಿಗಳು ಬಂದ ಮೇಲೆ ಈ ಜನರ ಜೀವನದಲ್ಲಿ ಕೊಂಚ ಬದಲಾವಣೆ ಬಂದಿದೆ. ಇವರು ಮನುಷ್ಯರನ್ನು ತಿನ್ನೋದು ಬಿಟ್ಟಿದ್ದಾರೆ. ಹಿಂದಾದರೆ ಅವರ ಗಡಿಯನ್ನು ಅತಿಕ್ರಮಿಸಲು ಬರುವ ಬೇರೆ ಬುಡಕಟ್ಟಿನವರನ್ನು, ಇವರ ಹೆಣ್ಣುಮಗಳನ್ನು ಅಪಹರಿಸುವವರನ್ನು ಇವರು ಬೇಟೆ ಆಡಿ ಸಾಯಿಸಿ ಅವರ ಮಾಂಸ ಭಕ್ಷಣೆ ಮಾಡ್ತಿದ್ದರಂತೆ.
ಡಾ ಬ್ರೊ ಈ ಕೊರವೆ ಬುಡಕಟ್ಟಿನ ವ್ಯಕ್ತಿಯೊಬ್ಬನನ್ನು ಮಾತನಾಡಿಸಿದಾಗ ಆತನ ಬಳಿ ನೀವು ಜನರನ್ನು ಹೇಗೆ ಕೊಲ್ತಿದ್ರಿ ಅಂತ ಕೇಳಿದ್ದಾರೆ. ಆಗ ಆತ ತನ್ನ ಕೈಯಲ್ಲಿದ್ದ ಒಂದು ಆಯುಧ ತೋರಿಸಿದ್ದಾನೆ. ಅದು ಕಸವರಿ ಅನ್ನೋ ಹಕ್ಕಿಯೊಂದರ ಮೂಳೆ. ಬಹಳ ಶಾರ್ಪ್ ಆಗಿರುವ ಗಟ್ಟಿಯಾಗಿರುವ ಈ ಮೂಳೆಯನ್ನು ಮನುಷ್ಯನ ಕತ್ತಿಗೆ ಹಾಕಿದರೆ ಒಂದೇ ಏಟಿಗೆ ಪ್ರಾಣಪಕ್ಷಿ ಹಾರಿ ಹೋಗುತ್ತಂತೆ. ಅದನ್ನು ಕೇಳಿ ಡಾ ಬ್ರೊಗೆ ಬೆವರು ಕಿತ್ತುಕೊಂಡು ಬಂದಿದೆ.
ಈ ಬುಡಕಟ್ಟಿನ ಜನ ಹೇಗೆ ಬದುರ್ತಾರೆ ಅನ್ನೋದನ್ನೂ ಡಾ ಬ್ರೋ(Dr Bro) ವೀಡಿಯೋದಲ್ಲಿ ತೋರಿಸಿದ್ದಾರೆ. ಕಾಡಿನ ನಡುವೆ ಹೋಗಿ ಅಲ್ಲಿನ ಒಂದು ಜಾತಿಯ ಮರವನ್ನು ಕಡಿದು ಅದರೊಳಗಿರುವ ಬೀಟಲ್‌ಗಳನ್ನು, ಹುಳಗಳನ್ನು ತಿನ್ನೋದು, ಗೆಣಸು, ಮರದ ತಿರುಳು ಇತ್ಯಾದಿ ತಿಂದು ಈ ಜನ ಬದುಕ್ತಾರೆ. ಕೆಲವೊಮ್ಮೆ ಬೇಟೆಗೆ ಹೋಗಿ ದೊಡ್ಡ ಹಕ್ಕಿ ಹೊಡೆದುಕೊಂಡು ಬರ್ತಾರಂತೆ. ಬೀಟಲ್‌ಗಳ(Beatles) ಭೋಜನವಿದ್ದರೆ ಈ ಜನರಿಗೆ ಹಬ್ಬದಂತೆ ಅದನ್ನು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ. ಆ ಬಳಿಕ ಕುಣಿಯುತ್ತಾರೆ. ನೀರಲ್ಲಿ ಈಜಾಡುತ್ತಾರೆ.
ಇವೆಲ್ಲವನ್ನ ಡಾ ಬ್ರೋ ತನ್ನ ಅರ್ಧ ಗಂಟೆಯ ಎಪಿಸೋಡ್‌ನಲ್ಲಿ ತೋರಿಸಿದ್ದಾರೆ. ಈ ಹುಡುಗನ ಹೊಸ ಸಾಹಸ(Adventure) ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. 'ಹುಷಾರು ದೇವ್ರೂ.. ಕನ್ನಡದ ಆಸ್ತಿ ನೀನು, ಸೇಫಾಗಿ ವಾಪಾಸ್ ಬಾ' ಅಂತ ಎಲ್ಲರೂ ಮೆಸೇಜ್ ಮಾಡ್ತಿದ್ದಾರೆ. ಯೂಟ್ಯೂಬ್ ಒಂದರಲ್ಲೇ ೨೦ ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋ ನೋಡಿದ್ದಾರೆ.
Dr Bro ಕನ್ನಡ: ನಮಸ್ಕಾರ ದೇವ್ರು... ಡಾ ಬ್ರೋ ಮಾತಾಡ್ತವ್ರೆ!