ಹಿರಿಯ ಗಾಯಕ ದಿ ಎಸ್‌ ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ ‘ಎದೆ ತುಂಬಿ ಹಾಡುವೆನು’ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಆ.14ರಿಂದ ಮರು ಆರಂಭವಾಗಲಿದೆ. ಆ.14ರಿಂದ ಪ್ರತೀ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಆ ಕಾರ್ಯಕ್ರಮ ಪ್ರಸಾರವಾಗಲಿದೆ.

‘ಎಸ್‌ಪಿಬಿ ಅವರು ನಿರೂಪಿಸುತ್ತಿದ್ದ ಮಾದರಿಯಲ್ಲೇ ಯಾವುದೇ ನಾಟಕೀಯತೆ ಇಲ್ಲದೇ ‘ದಿವ್ಯ ಪರಂಪರೆ’ ಎಂಬ ಟ್ಯಾಗ್‌ಲೈನ್‌ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ’ ಎಂದು ಕಲರ್ಸ್‌ ಕನ್ನಡ ಕ್ಲಸ್ಟರ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಈಗಾಗಲೇ ಆಡಿಶನ್‌ ನಡೆದಿದ್ದು 18 ಮಂದಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೆ ವಯಸ್ಸಿನ ಮಿತಿ ಇಲ್ಲ. 32 ವಾರಗಳ ಕಾಲ ಈ ಶೋ ನಡೆಯಲಿದೆ. ಕನಿಷ್ಠ 10 ಲಕ್ಷ ರು. ಮೊತ್ತದ ಬಹುಮಾನವಿರುತ್ತದೆ. ಹಿರಿಯ ಗಾಯಕರಾದ ರಾಜೇಶ್‌ ಕೃಷ್ಣನ್‌, ರಘು ದೀಕ್ಷಿತ್‌ ಹಾಗೂ ಸಂಗೀತ ನಿರ್ದೇಶಕ ಪಿ. ಹರಿಕೃಷ್ಣ ತೀರ್ಪುಗಾರರಾಗಿರುತ್ತಾರೆ. ಎಸ್‌ಬಿಪಿ ಅವರ ಪುತ್ರ ಎಸ್‌.ಪಿ. ಚರಣ್‌ ಸ್ಪೆಷಲ್‌ ಎಪಿಸೋಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್‌ಪಿಬಿ ಅವರು ಬದುಕಿದ್ದಾಗ ಈ ಕಾರ್ಯಕ್ರಮ ಮುಂದುವರಿಸುವಂತೆ ಅವರ ಬಳಿ ಕೇಳಿದ್ದೆ. ಅವರು ಒಪ್ಪಿಗೆ ನೀಡಿದ್ದರು. ಕಾರಣಾಂತರಗಳಿಂದ ಅದು ಮುಂದೆ ಹೋಗಿ, ಇದೀಗ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸುವಂತಾಗಿದೆ’ ಎಂದು ವಿವರಿಸಿದರು.

ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋಗೆ ಹಂಸಲೇಖ ತೀರ್ಪುಗಾರ!

ಎಸ್‌ ಪಿ ಚರಣ್‌ ಮಾತನಾಡಿ, ‘ಎದೆ ತುಂಬಿ ಹಾಡುವೆನು ಕಾರ್ಯಕ್ರಮ ತಂದೆಯವರ ಬ್ರೈನ್‌ ಚೈಲ್ಡ್‌ ಆಗಿತ್ತು. ಆ ವಿಶಿಷ್ಟಪರಂಪರೆಯನ್ನು ಕಲರ್ಸ್‌ ಕನ್ನಡ ವಾಹಿನಿ ಮುಂದುವರಿಸುತ್ತಿದೆ. ಕನ್ನಡ ನಾಡು, ಕನ್ನಡಿಗರ ಬಗ್ಗೆ ಅಪ್ಪನಿಗೆ ಬಹಳ ಮೆಚ್ಚುಗೆ ಇತ್ತು’ ಎಂದರು.

ಹಿರಿಯ ಗಾಯಕರಾದ ರಾಜೇಶ್‌ ಕೃಷ್ಣನ್‌, ರಘು ದೀಕ್ಷಿತ್‌, ಪಿ ಹರಿಕೃಷ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.