ಗೋಲ್ಡನ್‌ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ 'ಚೆಲುವಿನ ಚಿತ್ತಾರ' ಬಿಡುಗಡೆಯಾಗಿ 17 ವರ್ಷಗಳು ಕಳೆದಿವೆ. ಸಿನಿಮಾದ ದುರಂತ ಕ್ಲೈಮ್ಯಾಕ್ಸ್‌ನಲ್ಲಿ ಅಮೂಲ್ಯ ಕೈಲಿದ್ದ ಮಗು ಈಗ ದೊಡ್ಡವನಾಗಿದ್ದು, ನಟಿ ಆತನೊಂದಿಗಿನ ಇತ್ತೀಚಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್ ಅವರ ಇಮೇಜ್‌ಅನ್ನು ಇನ್ನಷ್ಟು ಹೆಚ್ಚಿಸಿದ, ಅಮೂಲ್ಯ ಸಿನಿಮಾ ಜೀವನವನ್ನೇ ಬದಲಿಸಿದ ಚೆಲುವಿನ ಚಿತ್ತಾರಕ್ಕೆ 17 ವರ್ಷವಾಗಿದೆ. ಬಾಕ್ಸಾಫೀಸ್‌ನಲ್ಲಿ ಅದ್ಭುತ ಪ್ರದರ್ಶನ ಕಂಡಿದ್ದ ಈ ಸಿನಿಮಾ ಮೂಲಕ ನಿರ್ದೇಶಕ ಎಸ್ ನಾರಾಯಣ್ ಹಾಗೂ ಗಣೇಶ್ ಮೊದಲ ಬಾರಿಗೆ ಒಂದಾಗಿದ್ದರು.ತಮಿಳಿನಲ್ಲೂ ಸೂಪರ್ ಹಿಟ್ ಆಗಿದ್ದ ಕಾದಲ್ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡಿ ನಾರಾಯಣ್ ಅದ್ಭುತ ಯಶಸ್ಸು ಕಂಡಿದ್ದರು. ಇದೇ ಸಿನಿಮಾದ ಬಳಿಕ ಗಣೇಶ್‌ಗೆ ಗೋಲ್ಡನ್ ಸ್ಟಾರ್ ಎನ್ನುವ ಬಿರುದು ಸಿಕ್ಕಿತ್ತು. ಸಿನಿಮಾ ಬರೋಬ್ಬರಿ 200 ದಿನಗಳ ಕಾಲ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿತ್ತು.
ಯಾರೂ ಮರೆಯದ ಕ್ಲೈಮ್ಯಾಕ್ಸ್
ಸಿನಿಮಾದ ಕ್ಲೈಮ್ಯಾಕ್ಸ್‌ಅನ್ನು ಯಾರೂ ಮರೆಯುವಂತೆಯೇ ಇಲ್ಲ. ಮಾದೇಶ ಪಾತ್ರದಲ್ಲಿ ಅಭಿನಯಿಸಿದ್ದ ಗಣೇಶ್ ಸಿನಿಮಾದ ಕಕೊನೆಯಲ್ಲಿ ಹುಚ್ಚನಾಗುತ್ತಾರೆ. ಇನ್ನು ಆತನನ್ನು ಮದುವೆಯಾಗಿದ್ದ ಐಶ್ವರ್ಯ ಪಾತ್ರದಲ್ಲಿ ನಟಿಸಿದ್ದ ಅಮೂಲ್ಯ ಕುಟುಂಬ ಹಿಂಸೆ ಎದುರಿಸಿ 2ನೇ ಮದುವೆ ಆಗುತ್ತಾಳೆ. ಗಂಡನ ಜೊತೆಯಲ್ಲಿ ಸ್ಕೂಟರ್‌ನಲ್ಲಿ ಬರುವಾಗ ಆಕೆಯ ಕೈಯಲ್ಲಿ ಒಂದು ಮಗುವಿರುವ ದೃಶ್ಯ ನೆನಪಿರಬೇಕಲ್ಲ. ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುತ್ತಾ ನಿಂತ ಮಾದೇಶನನ್ನು ಕಂಡೊಡನೆ ಆಕೆಗೆ ತಲೆ ಸುತ್ತಿ ಬಂದಂತಾಗುತ್ತದೆ. ಆಕೆಯ ಹಾಗೂ ಆಕೆಯ ಕೈಲಿದ್ದ ಮಗುವನ್ನು ಜನ ಕಾಪಾಡುತ್ತಾರೆ.
ಆ ಸೀನ್‌ನಲ್ಲಿ ನಟಿಸಿದ್ದ ಮಗು ಈಗ ಹೇಗಾಗಿದೆ ಅನ್ನೋ ಕುತೂಹಲ ಇರಬೇಕಲ್ಲ. ಇತ್ತೀಚೆಗೆ ಸ್ವತಃ ಅಮೂಲ್ಯ ತನ್ನ 'ಮಗ'ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಮೂಲ್ಯ ಈಗಲೂ ಯಂಗ್ ಆಗಿ ಎನರ್ಜಿಟಿಕ್ ಆಗಿ ಕಾಣುತ್ತಿದ್ದರೆ, ಆಕೆಯ 'ಮಗು' ಈಗ ಅಮೂಲ್ಯ ಹೆಗಲಿಗೆ ಬರುವಷ್ಟು ದೊಡ್ಡವನಾಗಿದ್ದಾನೆ. 17 ವರ್ಷ ಹಿಂದಿನ ಹಾಗೂ ಈಗಿನ ಫೋಟೋ ಹಾಕಿ ಅಮೂಲ್ಯ ಸಂಭ್ರಮಿಸಿದ್ದಾರೆ.

ಸಿನಿಮಾದಲ್ಲಿ ಗಣೇಶ್ ಟೂ-ವೀಲರ್ ಮೆಕಾನಿಕ್ ಪಾತ್ರದಲ್ಲಿ ನಟಿಸಿದ್ದರೆ, ಅಮೂಲ್ಯ ಶಾಲೆಗೆ ಹೋಗುವ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಮಾದೇಶನ ಪ್ರೀತಿಯಲ್ಲಿ ಬೀಳುವ ಅಮೂಲ್ಯ, ಕುಟುಂಬದ ವಿರೋಧವನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸುತ್ತಾಳೆ. ಕೊನೆಗೆ ಮದುವೆಯಾಗುವ ಸಲುವಾಗಿ ಮಾದೇಶನ ಜೊತೆ ಓಡಿ ಹೋಗುತ್ತಾಳೆ. ಸಿನಿಮಾದಲ್ಲಿ ಗಣೇಶ್, ಅಮೂಲ್ಯ ಅಲ್ಲದೆ ಕೋಮಲ್, ದಿ.ಸುರೇಶ್ ಚಂದ್ರ, ಗೌರಮ್ಮ, ಆಶಾರಾಣಿ, ಸರ್ದಾರ್ ಸತ್ಯ, ಅಪ್ಪು ವೆಂಕಟೇಶ್, ಪೈಪ್‌ಲೈನ್ ರಮೇಶ್, ಜಯಶ್ರಿ ರಾಜ್, ವಿಜಯಸಾರಥಿ, ಮಣಿಕಂಠ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಸಿನಿಮಾಕ್ಕೆ ಮನೋಮೂರ್ತಿ ನೀಡಿದ ಸಂಗೀತ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಉಲ್ಲಾಸದ ಹೂಮಳೆ, ಕನಸೋ ಇದು.. ಹಾಡು ಇಂದಿಗೂ ಕೂಡ ಯುವಜನರಲ್ಲಿ ಜನಪ್ರಿಯವಾಗಿದೆ.



