BBK 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಸೇರಿದಂತೆ ಏಳು ಸ್ಪರ್ಧಿಗಳಿದ್ದಾರೆ. ಇವರಲ್ಲಿ ಯಾರು ಫಿನಾಲೆಗೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಗಿಲ್ಲಿ ನಟ ಯಾಕೆ ಗೆಲ್ಲಬೇಕು ಎಂದು ಸಂಭಾಷಣೆಕಾರ ನಂದೀಶ್ ತೀರ್ಥಹಳ್ಳಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಸೀಸನ್ ಬಗ್ಗೆ ನಾನು ಮೊದಲ ಬಾರಿಗೆ ಹಾಕುತ್ತಿರೋ ಪೋಸ್ಟ್ ಇದು. ಈ ಸಾರಿಯ ಬಿಗ್ ಬಾಸ್ ಅತಿದೊಡ್ಡ ಮಟ್ಟದಲ್ಲಿ ರಂಜಿಸಿದೆ ಎಂದರೆ ಅದರಲ್ಲಿ ಆನೆಗಾತ್ರದ ಪಾತ್ರ ವಹಿಸಿದ್ದು ಇವನೇ.
ಗಿಲ್ಲಿ ನಟ ಬಗ್ಗೆ ಹೊರಗಡೆ ನಾನಾ ರೀತಿಯ ಅಭಿಪ್ರಾಯ ಇರಬಹುದು. ಪಾಸಿಟಿವ್ ಕಾರಣಗಳು, ನೆಗೆಟಿವ್ ಕಾರಣಗಳು ಸಹ ಇರಬಹುದು. ಆದರೆ ಈತನೊಬ್ಬ ನಗೆ ಬಾಂಬ್ ಎಂಬುದು ಸುಳ್ಳಲ್ಲ. ಬಿಗ್ ಬಾಸ್ ವ್ಯಕ್ತಿತ್ವಗಳ ಆಟ ಅನ್ನೋದೇ ಒಂದು ದೊಡ್ಡ ಸುಳ್ಳು. ಇದು ಅತ್ಯುತ್ತಮ ವ್ಯಕ್ತಿತ್ವವನ್ನು ಆಯ್ಕೆ ಮಾಡಿಕೊಳ್ಳುವ ಆಟ ಅಲ್ಲ. ಬದಲಾಗಿ ವಿಭಿನ್ನ ವ್ಯಕ್ತಿತ್ವಗಳು ಒಂದೇ ವೇದಿಕೆಯಲ್ಲಿ ಆಡುವ ಆಟ.
ಇಲ್ಲಿ ಇರುವರೆಲ್ಲ ಸ್ಪರ್ಧಿಗಳೇ ಹೊರತು ಸಮಾನಶಕ್ತಿ ಉಳ್ಳ ಸ್ಪರ್ಧಿಗಳಲ್ಲ. ಯಾಕಂದ್ರೆ ಒಂದೇ ವಯೋಮಾನ, ಒಂದೇ ಹಿನ್ನೆಲೆಯಿಂದ ಬಂದವರ ಕಾಳಗ ಇದಲ್ಲ. ಇಲ್ಲಿ ಅಜಾನುಬಾಹು ರಘು ಕೂಡ ಸ್ಪರ್ಧಿ, ಮಾತಿನಿಂದಲೇ ಬಿಗ್ ಬಾಸ್ ವೇದಿಕೆ ಏರಿದ ರಕ್ಷಿತಾ ಕೂಡ ಸ್ಪರ್ಧಿ. ನಾಯಕಿಯಾಗಿ, ಒಂದು ಸಂಘಟನೆಯ ಮುಂದಾಳುವಾಗಿ ಜನಮನ್ನಣೆ ಗಳಿಸಿದ ಅಶ್ವಿನಿ ಕೂಡ ಸ್ಪರ್ಧಿ, ಹಾಸ್ಯದ ಮೂಲಕವೇ ನಾನಾ ಅವಕಾಶ ಪಡೆದು ಬಿಗ್ ಬಾಸ್ ಪ್ರವೇಶಿಸಿದ ಗಿಲ್ಲಿ ಕೂಡ ಸ್ಪರ್ಧಿ.
ಸಹಜ ಹಾಸ್ಯಕ್ಕೆ ಫೇಮಸ್
ಹಿಂದಿನ ಸೀಸನ್ ಗಳನ್ನು ನೋಡಿ ಬಂದ ಕೂಡಲೇ ಅವರಂತೆಯೇ ಆಡಲು ಆಗುವುದಿಲ್ಲ, ಹಿಂದೆಂದು ಬಿಗ್ ಬಾಸ್ ನೋಡದೇ ಬಂದವ ಫೈನಲ್ ಹಂತಕ್ಕೆ ಏರಲಾಗುವುದಿಲ್ಲ ಎಂಬುದು ನಿಜವಲ್ಲ. ಗಿಲ್ಲಿ ಸಹಜ ಹಾಸ್ಯಕ್ಕೆ ಹೆಸರಾದವನು. ಅದನ್ನು ಹಿಂದಿನ ಶೋಗಳಲ್ಲಿ ತೋರಿಸಿದ್ದ. ಅವನ ಮಾತಿನಲ್ಲಿ, ಹಾಸ್ಯದಲ್ಲಿ ಆಶ್ಲೀಲತೆಯ ಸೋಂಕು ಇರುವುದಿಲ್ಲ. ಅವನ ಮೇಲೆ ಇರೋ ಆರೋಪವೆಂದರೆ ಆತ ವೈಯಕ್ತಿಕ ನಿಂದನೆ ಮಾಡುತ್ತಾನೆಂಬುದು. ಅದು ತಪ್ಪು. ಅದನ್ನು ಒಪ್ಪಲು ಸಾಧ್ಯವೇ ಇಲ್ಲ. ಹಾಗಂತ ಈತ ಎಲ್ಲರಿಗೂ ವೈಯಕ್ತಿಕ ಅವಹೇಳನ ಮಾಡಿದ್ದಾನಾ..? ಉತ್ತರ - ಇಲ್ಲ.
ಎಲ್ಲ ಸ್ಪರ್ಧಿಗಳಿಗೂ ಇದು ಅನ್ವಯ
ಆತ ಹೀಗಳೆದದ್ದು ಆತನ ಕಾಲೆಳೆದವರನ್ನೇ, ಅದಕ್ಕೆ ತಕ್ಕ ಬೆಲೆಯನ್ನು ಆಯಾ ಎಪಿಸೋಡ್‌ಗಳಲ್ಲೇ ಪಡೆದಿದ್ದಾನೆ. ಅದು ನಾಮಿನೇಷನ್ ಆಗುವುದಿರಬಹುದು, ಕಳಪೆಯಾಗಿ ಆಯ್ಕೆಯಾದದ್ದು ಇರಬಹುದು. ಇದು ಎಲ್ಲ ಸ್ಪರ್ಧಿಗಳಿಗೂ ಅನ್ವಯಿಸುತ್ತೆ.
ಗಿಲ್ಲಿ ಜಟಾಪಟಿ ಹೆಚ್ಚು ನಡೆದಿದ್ದು ಅಶ್ವಿನಿಯವರೊಂದಿಗೆ ಎಂಬುದು ನಿಜ. ಮಾತಿಗೆ ಮಾತು, ಜಗಳಕ್ಕೆ ಜಗಳ ಎಂಬಂತೆ ಅವರಿಬ್ಬರ ನಡುವಿನ ಬೆಳವಣಿಗೆಯನ್ನು ಜನ ವಿಟ್ನೆಸ್ ಮಾಡಿದ್ದಾರೆ. ಈಗ ವಿನ್ನರ್ ಆಯ್ಕೆ ಮಾಡುವ ಅವಕಾಶ ಜನರ ಕೈಯಲ್ಲೇ ಇದೆ.
ಜನರ ಆಯ್ಕೆಯ ಪ್ರಕಾರವೇ, ಜನಪ್ರಿಯತೆಯನ್ನು ಆಧರಿಸಿ ವಿನ್ನರ್ ಆಯ್ಕೆಯಾಗಬೇಕಿದೆ. ಇಲ್ಲಿರುವ ಯಾವ ಸ್ಪರ್ಧಿಯು ಪರಿಪೂರ್ಣ ವ್ಯಕ್ತಿತ್ವದವರಲ್ಲ. ಅಂಥ ವ್ಯಕ್ತಿ ಜಗತ್ತಿನಲ್ಲಿಯೇ ಸಿಗೋದಿಲ್ಲ, ಇರೋದಿಲ್ಲ. ಕೆಲವು ಪ್ಲಸ್ ಇರುವಂತೆ ಕೆಲವು ಮೈನಸ್ ಗಳು ಕೂಡ ನಮ್ಮ ನಡವಳಿಕೆಯೇ ಭಾಗವಾಗಿರುತ್ತೆ. ಬಿಗ್ ಬಾಸ್ ಅತ್ಯುತ್ತಮ ವ್ಯಕ್ತಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮವಂತು ಅಲ್ಲ. ಇದೊಂದು ಮನರಂಜನಾ ಕಾರ್ಯಕ್ರಮವಾದ ಕಾರಣ, ಹೆಚ್ಚು ರಂಜಿಸಿದವರು, ಹೆಚ್ಚು ಮತ ಪಡೆದವರು ಆಯ್ಕೆಯಾಗುತ್ತಾರೆ. ಅವರು ದಿ ಬೆಸ್ಟ್ ಎನ್ನುವ ಕಾರಣಕ್ಕಲ್ಲ. Liked by the most ಎಂಬ ಕಾರಣಕ್ಕೆ. ಈ ಶೋ ಇರೋದೇ ಹಾಗೆ.
ಫ್ಯಾಮಿಲಿ ರೌಂಡ್ ನಂತರ ಸ್ವಲ್ಪ ಅಹಂ ಬೆಳೆಸಿಕೊಂಡ ಗಿಲ್ಲಿ ಮತ್ತೆರಡು ವಾರ ಕಳೆಯೋದ್ರಲ್ಲಿ ಜನರ ನಿರ್ಣಯವೇ ಅಲ್ಟಿಮೇಟ್ ಎಂಬುದನ್ನು ಅರಿತಿದ್ದಾನೆ. ಒಂದು ಹುಡುಗಿಗೆ 'S' ಪದ ಪ್ರಯೋಗಿಸಿ, ಕ್ಷಮೆ ಕೇಳಿದವರನ್ನು ಕ್ಷಮಿಸಬಹುದು ಎಂದರೆ, ಕ್ರಿಯೆಗೆ ಪ್ರತಿಕ್ರಿಯೆ ಕೊಡೋ ಹಂತದಲ್ಲಿ ಎಡವಿದ ಗಿಲ್ಲಿಯನ್ನು ಸಹ ಕ್ಷಮಿಸಬಹುದು.
ಗಿಲ್ಲಿ ತಪ್ಪು ಮಾಡಿಲ್ಲ ಅಂತಲ್ಲ. ಕಾವ್ಯಳನ್ನು ಆರಂಭದಿಂದ ಕೊನೆ ತನಕ ಅಗತ್ಯಕ್ಕೂ ಮೀರಿ ವಹಿಸಿಕೊಂಡ. ಎಷ್ಟೋ ಟಾಸ್ಕ್ ಗಳನ್ನು ಸೀರಿಯಸ್ ಆಗಿ ಆಡಲೇ ಇಲ್ಲ. ಕೆಲವೊಮ್ಮೆ ನಾಮಿನೇಷನ್ ವೇಳೆ ಎಡವಿದ್ದಾನೆ. ಇದು ಇಲ್ಲಿರುವ ಪ್ರತಿ ಸ್ಪರ್ಧಿಗಳು ಮಾಡಿರುವ ತಪ್ಪೇ. ಆದರೆ ಕೆಲವರು ಹೇಳುವಂತೆ ಗಿಲ್ಲಿ ತಾನು ಬಡವ ಅನ್ನೋ ಕಾರ್ಡ್ ಪ್ಲೇ ಮಾಡಿಲ್ಲ. ಎಲ್ಲರ ತಪ್ಪು ಒಪ್ಪುಗಳನ್ನು ಜನ ನೋಡಿದ್ದಾರೆ.
ಜನಪ್ರಿಯತೆಯ ಆಧಾರದಲ್ಲೇ ಫಲಿತಾಂಶ ಬಂದರೆ ಫಲಿತಾಂಶ ಹೇಗಿರುತ್ತೆ ? ಏನಾಗುತ್ತೆ ? ಎಂಬುದು ನಿಮಗೆಲ್ಲಾ ಗೊತ್ತು.
ಅದರಾಚೆಗೆ ಏನೇ ಬಂದರೂ ಈ ಶೋ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಎದ್ದೇ ಏಳುತ್ತೆ. ಹಾಗೊಂದು ವೇಳೆ ಬಿಗ್ ಬಾಸ್ ಅತ್ಯುತ್ತಮರನ್ನೇ ಆಯ್ಕೆ ಮಾಡುವ ಶೋ ಆದಲ್ಲಿ ಅದಕ್ಕೊಂದು ಜಡ್ಜ್ ಪ್ಯಾನೆಲ್ ಇಟ್ಟು, ವೋಟಿಂಗ್ ನಿಲ್ಲಿಸಿ ಆಯ್ಕೆ ಮಾಡಬೇಕಿತ್ತು.
ವೋಟಿಂಗ್ ಜನರ ಕೈಯಲ್ಲಿದೆ. ಅಂತಿಮ ತೀರ್ಪನ್ನು ಅವರೇ ಕೊಡುತ್ತಾರೆ.
ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ಯಾರು ಅರ್ಹರೋ ಅವರೇ ಗೆಲ್ಲಲಿ.
ಬಡವ ಎಂಬ ಕಾರಣಕ್ಕಲ್ಲ, ಹುಡುಗ ಎಂಬ ಕಾರಣಕ್ಕಲ್ಲ. ಪರಿಪೂರ್ಣ ವ್ಯಕ್ತಿತ್ವದವನು ಎಂಬುವುದಕ್ಕಲ್ಲ. ಎಲ್ಲರಂತೆ ಇವನ ವ್ಯಕ್ತಿತ್ವದಲ್ಲೂ ಓರೆ ಕೋರೆಗಳಿದೆ. ಆದರೆ ಅದು ಯಾರನ್ನು ವಿಪರೀತ ಬಾಧಿಸಿಲ್ಲ ಎಂಬುದೆನ್ನ ಅನಿಸಿಕೆ.
ಈತ ನನ್ನನ್ನು ರಂಜಿಸಿದ್ದಾನೆ. ಈ ವೇದಿಕೆಯೇರಲು ಸಹ ಬಹಳಷ್ಟು ಶ್ರಮಿಸಿದ್ದಾನೆ.
ನಗುವಿನ ಋಣ ತೀರಿಸಲು ನನ್ನ ವೋಟು ಗಿಲ್ಲಿಗೆ.....


