ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ತನ್ನ ವೈಯಕ್ತಿಕ ವಿಚಾರಗಳನ್ನು ಮಾಧ್ಯಮಗಳಲ್ಲಿ ಹೀಯಾಳಿಸಿದ ಮಂಡ್ಯದ ಲಕ್ಷ್ಮೀ ಗೌಡ ವಿರುದ್ಧ ಹಳ್ಳಿ ಹುಡುಗಿ ಕುಮಾರಿ ಕಿಡಿಕಾರಿದ್ದಾರೆ. ಸ್ನಾನ ಮತ್ತು ಚೆಕ್ ವಿವಾದದ ಹಿಂದಿನ ಕಣ್ಣೀರಿನ ಕಥೆ ಬಿಚ್ಚಿಟ್ಟ ಕುಮಾರಿ ಹೇಳಿದ್ದೇನು? ಇಲ್ಲಿದೆ ವಿವರ.

ಬಿಗ್ ಬಾಸ್ ಮನೆಯೊಳಗಿನ ಜಗಳ, ಕಿತ್ತಾಟಗಳು ಮನೆ ಬಿಟ್ಟು ಆಚೆ ಬಂದ ಮೇಲೂ ಮುಂದುವರಿಯುತ್ತಿವೆ. ಬಿಗ್ ಬಾಸ್ ವೇದಿಕೆಯಲ್ಲಿ ತಮ್ಮ ಮುಗ್ಧತೆಯಿಂದಲೇ ಗಮನ ಸೆಳೆದಿದ್ದ ಹಳ್ಳಿ ಹುಡುಗಿ ಕುಮಾರಿ ವಿರುದ್ಧ ವೈಲ್ಡ್ ಕಾರ್ಡ್ ಸ್ಪರ್ಧಿ ಲಕ್ಷ್ಮೀ ಗೌಡ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಲಕ್ಷ್ಮೀ ಗೌಡ ಅವರ ಮಾತುಗಳಿಗೆ ಕುಮಾರಿ ಖಾರವಾಗಿ ಪ್ರತಿಕ್ರಿಯಿಸಿದ್ದು, 'ವಯಸ್ಸಿನಲ್ಲಿ ದೊಡ್ಡವರು, ದೊಡ್ಡತನ ತೋರಿಸಿ ಸಣ್ಣಬುದ್ಧಿ ತೋರಿಸಬೇಡಿ' ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

'ಅಕ್ಕ ಅಂತ ಸ್ಥಾನ ಕೊಟ್ಟಿದ್ದೆ, ಆ ಮರ್ಯಾದೆ ಉಳಿಸಿಕೊಳ್ಳಿ'

ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಮಾತನಾಡಿದ್ದ ಲಕ್ಷ್ಮೀ ಗೌಡಗೆ ತಿರುಗೇಟು ನೀಡಿದ ಕುಮಾರಿ, "ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದ ಮೇಲೆ ಮಾಧ್ಯಮಗಳ ಮುಂದೆ ನನ್ನ ಬಗ್ಗೆ ಏನೆಲ್ಲಾ ಮಾತನಾಡಿದ್ದೀರಿ. ನಾನು ನಿಮಗೆ 'ಅಕ್ಕ' ಅಂತ ಒಂದು ಗೌರವದ ಸ್ಥಾನ ಕೊಟ್ಟಿದ್ದೆ. ನೀವು ನನ್ನ ಬಗ್ಗೆ ಮಾತನಾಡಿದ್ರಿ ಅಂತ ನಾನೂ ನಿಮ್ಮ ಬಗ್ಗೆ ಮಾತನಾಡಿದರೆ ನನಗೂ-ನಿಮಗೂ ವ್ಯತ್ಯಾಸವೇ ಇರುವುದಿಲ್ಲ. ವಯಸ್ಸಿನಲ್ಲಿ ದೊಡ್ಡವರು ನೀವು. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಯಾವ ವಿಷಯ ಮಾತನಾಡಬೇಕು, ಯಾವುದನ್ನು ಮಾತನಾಡಬಾರದು ಎಂಬ ವಿವೇಚನೆ ಇರಲಿ. ದೊಡ್ಡತನ ಬಿಟ್ಟು ಇಂಥ ಸಣ್ಣಬುದ್ಧಿ ತೋರಿಸಬೇಡಿ" ಎಂದು ಗುಡುಗಿದ್ದಾರೆ.

'ಸ್ನಾನ ಮಾಡ್ತಾರಾ' ಅನ್ನೋರಿಗೆ ಕಣ್ಣೀರಿನ ಉತ್ತರ!

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರು "ಇವತ್ತಾದರೂ ಸ್ನಾನ ಮಾಡಿದ್ದೀರಾ?" ಎಂದು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವುದಕ್ಕೆ ಭಾವುಕರಾಗಿ ಉತ್ತರಿಸಿದ ಅವರು, "ಯಾವುದೇ ಮುಚ್ಚುಮರೆ ಇಲ್ಲದೆ ಒಂದು ಹೆಣ್ಣಾಗಿ ನಾನು ಸತ್ಯ ಹೇಳ್ತಾ ಇದ್ದೀನಿ. ಬಿಗ್ ಬಾಸ್ ಮುಗಿಸಿ ಮನೆಗೆ ಬಂದ ದಿನದಿಂದ ಹಿಡಿದು, ದೀಪಾವಳಿ ವಿಡಿಯೋ ಮಾಡುವವರೆಗೂ ನನ್ನನ್ನು ಸ್ನಾನ ಮಾಡಿಸಿ ನೋಡಿಕೊಂಡಿದ್ದು ನನ್ನ ತಾಯಿ! ಯಾಕೆಂದರೆ ಬಿಗ್ ಬಾಸ್ ಮನೆಯಲ್ಲಿ ನನ್ನ ದೇಹ ಅಷ್ಟೊಂದು ವೀಕ್ ಆಗಿತ್ತು. ಮೈ ಮೇಲೆ ನೀರು ಬಿದ್ದರೆ ಸಾಕು ಇಡೀ ಮೈ ನಡುಗುತ್ತಿತ್ತು. ನನ್ನ ಆರೋಗ್ಯವೇ ನನಗೆ ಮುಳುವಾಗುತ್ತದೆ ಎಂದು ಮೊದಲೇ ಗೊತ್ತಿದ್ದರೆ ನಾನು ಆ ದೊಡ್ಮನೆಗೆ ಕಾಲಿಡುತ್ತಲೇ ಇರಲಿಲ್ಲ" ಎಂದು ತಮ್ಮ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾರೆ.

'ಚೆಕ್' ಬಗ್ಗೆ ಆಡಿದ್ದ ಆ ಮಾತಿಗೆ ತಾಯಿ ಮೇಲೆ ಆಣೆ!

ಇನ್ನು ಬಿಗ್ ಬಾಸ್ ಮನೆಯಲ್ಲಿ 'ಚೆಕ್ (Cheque) ಅಂದ್ರೆ ಏನು ಅಂತಾನೇ ಗೊತ್ತಿಲ್ಲ' ಎಂದು ಕುಮಾರಿ ನಾಟಕವಾಡಿದ್ದರು ಎಂಬ ಆರೋಪಕ್ಕೂ ಸ್ಪಷ್ಟನೆ ನೀಡಿದ್ದಾರೆ. "ಚೆಕ್ ಅಂದರೆ ಏನು? ಅಂತ ನಾನು ನಿಜವಾಗಿಯೂ ಕೇಳಿಲ್ಲ. ಈ ಚೆಕ್ ತೆಗೆದುಕೊಂಡು ಬ್ಯಾಂಕ್‌ಗೆ ಹಾಕಿದರೆ ದುಡ್ಡು ಕೊಡ್ತಾರಾ? ಅಥವಾ ಯಾರು ಚೆಕ್ ಕೊಟ್ಟಿದ್ದಾರೋ ಅವರ ಬಳಿಯೇ ಹೋಗಬೇಕಾ ಎನ್ನುವ ಗೊಂದಲದಲ್ಲಿ ಆ ಮಾತು ಕೇಳಿದ್ದೆ. ಜೀವನದಲ್ಲಿ ನನಗಿರೋದು ಒಬ್ಬಳೇ ತಾಯಿ. ಆ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ, ಚೆಕ್ ಅಂದರೆ ಏನೆಂದು ನಾನು ಕೇಳಿಯೂ ಇಲ್ಲ, ಈ ಬಗ್ಗೆ ಯಾವುದೇ ನಾಟಕ ಮಾಡಿಲ್ಲ. ಈ ಸತ್ಯದ ವಿಚಾರ ಗೊತ್ತಾದ ಮೇಲೂ ನನ್ನ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರೂ ನಾನು ಸಹಿಸಿಕೊಳ್ಳಲು ಸಿದ್ಧಳಿದ್ದೇನೆ" ಎಂದಿದ್ದಾರೆ.

ಅಷ್ಟಕ್ಕೂ ಲಕ್ಷ್ಮೀ ಗೌಡ ಹೇಳಿದ್ದೇನು? ವಿವಾದದ ಹಿನ್ನೆಲೆ:

ಮಂಡ್ಯ ಮೂಲದ ಲಕ್ಷ್ಮೀ ಗೌಡ ಕಾಮನ್ ಮ್ಯಾನ್ ಆಗಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಕೇವಲ ಎರಡೇ ವಾರದಲ್ಲಿ ಎಲಿಮಿನೇಟ್ ಆಗಿದ್ದರು. ಹೊರಬಂದ ಬಳಿಕ ಯೂಟ್ಯೂಬ್ ಚಾನೆಲ್ ಸಂದರ್ಶನಗಳಲ್ಲಿ, "ಬಿಗ್ ಬಾಸ್ ಮನೆಯಲ್ಲಿ ಕುಮಾರಿ ಸ್ನಾನ ಮಾಡಿದರೆ ಮನೆ ಮಂದಿಯೆಲ್ಲಾ ಹಬ್ಬ ಆಚರಿಸಿದಷ್ಟು ಖುಷಿಪಡುತ್ತಿದ್ದರು" ಎಂದು ವ್ಯಂಗ್ಯವಾಡಿದ್ದರು. ಈ ವಿಡಿಯೋ ಕ್ಲಿಪ್ ವೈರಲ್ ಆಗಿ ನೆಟ್ಟಿಗರು ಕುಮಾರಿ ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಲು ಶುರುಮಾಡಿದ್ದರು.

ವೀಕ್ಷಕರಿಗೆ ಕ್ಷಮೆಯಾಚಿಸಿದ ಕುಮಾರಿ:

ಕೊನೆಯದಾಗಿ ಮಾತನಾಡಿದ ಕುಮಾರಿ, "ನನ್ನ ಆರೋಗ್ಯ ನನ್ನನ್ನು ಈ ಮಟ್ಟಿಗೆ ಕುಗ್ಗಿಸುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಚೆನ್ನಾಗಿ ಆಟವಾಡಿ ನಿಮ್ಮೆಲ್ಲರ ಮನಸ್ಸು ಗೆಲ್ಲಬೇಕೆಂದು ಹೋದೆ, ಆದರೆ ನಿಮ್ಮ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ನನ್ನಿಂದ ಸಾಧ್ಯವಾಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ. ಯಾವುದೇ ನಿರೀಕ್ಷೆಯಿಲ್ಲದೆ ಇಂದಿಗೂ ನನ್ನನ್ನು ಬೆಂಬಲಿಸುತ್ತಿರುವ ಜನರಿಗೆ ನಾನು ಸದಾ ಋಣಿಯಾಗಿರುತ್ತೇನೆ" ಎಂದು ವೀಕ್ಷಕರಿಗೆ ಧನ್ಯವಾದ ಅರ್ಪಿಸಿದ್ದಾರೆ.