BBK 13 Wild Card Entry: ಘಾಟಿ ಗಾನವಿ, ಪ್ರಶಾಂತ್ ಹಾಗೂ ಸೋನಿಕಾ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಎಂಟ್ರಿಗೂ ಮುನ್ನವೇ ಟಾರ್ಗೆಟ್ ಲಿಸ್ಟ್ ರೆಡಿ ಮಾಡಿಕೊಂಡಿರುವ ಈ ಮೂವರು ಯಾರಿಗೆ ಶಾಕ್ ಕೊಡಲಿದ್ದಾರೆ?
‘ಬಿಗ್ ಬಾಸ್ ಕನ್ನಡ ಸೀಸನ್ 13’ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯೊಳಗಿನ ಸ್ಪರ್ಧಿಗಳ ಆಟ, ಜಗಳ, ಸ್ನೇಹ, ಸ್ಟ್ರಾಟಜಿ ಎಲ್ಲವೂ ವೀಕ್ಷಕರ ಗಮನ ಸೆಳೆಯುತ್ತಿರುವ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಮನೆಗೆ ಮೂವರು ಹೊಸ ಸ್ಪರ್ಧಿಗಳ ಎಂಟ್ರಿಯಾಗಿದೆ.
ಅದರಲ್ಲೂ ಈ ಬಾರಿ ಎಂಟ್ರಿ ಕೊಡುತ್ತಿರುವವರು ಸಾಮಾನ್ಯ ವೈಲ್ಡ್ ಕಾರ್ಡ್ ಸ್ಪರ್ಧಿಗಳಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಘಾಟಿ ಗಾನವಿ, ನಟ ಪ್ರಶಾಂತ್ ಮತ್ತು ನಟಿ ಸೋನಿಕಾ ಗೌಡ ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಾರೆ ಎನ್ನಲಾಗಿದ್ದು, ಇವರ ಪ್ರವೇಶದಿಂದ ಮನೆಯೊಳಗಿನ ಸಮೀಕರಣಗಳೇ ಬದಲಾಗುವ ಸೂಚನೆ ಸಿಕ್ಕಿದೆ.
ಇಂದಿನ ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರೇ ಈ ಮೂವರನ್ನು ಬಿಗ್ ಬಾಸ್ ಮನೆಗೆ ಕಳುಹಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಹೊಸ ಸ್ಪರ್ಧಿಗಳ ಎಂಟ್ರಿಯ ಸುಳಿವು ಸಿಕ್ಕಿದ್ದರೂ, ಅವರ ಸಂಪೂರ್ಣ ವಿವರಗಳನ್ನು ರಿವೀಲ್ ಮಾಡಲಾಗಿಲ್ಲ. ಈ ನಡುವೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಹೆಸರುಗಳು ಮತ್ತು ಅವರ ಹಿನ್ನೆಲೆ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಯಾರು ಈ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು?
ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಿರುವ ಮೂವರೂ ಕಿರುತೆರೆ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಈಗಾಗಲೇ ತಮ್ಮದೇ ಗುರುತು ಮೂಡಿಸಿಕೊಂಡವರು.
ಘಾಟಿ ಗಾನವಿ ‘ಹಳ್ಳಿ ಪವರ್’ ಶೋ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದವರು. ‘ಹಳ್ಳಿ ಪವರ್’ ಮೊದಲ ಸೀಸನ್‌ನ ರನ್ನರ್ ಅಪ್ ಆಗಿ ಗುರುತಿಸಿಕೊಂಡಿರುವ ಗಾನವಿ, ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಇದೀಗ ಬಿಗ್ ಬಾಸ್ ಮನೆಯ ಆಟಕ್ಕೆ ಅವರು ಯಾವ ರೀತಿಯ ತಿರುವು ನೀಡುತ್ತಾರೆ ಎಂಬ ಕುತೂಹಲ ಮೂಡಿದೆ.
ಇನ್ನೊಂದೆಡೆ, ನಟ ಪ್ರಶಾಂತ್ ಗೌಡ ಕೂಡ ಬಿಗ್ ಬಾಸ್ ಅಖಾಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ‘ಗಿಚ್ಚಿ ಗಿಲಿಗಿಲಿ’ಯ ಸತತ ಮೂರು ಸೀಸನ್‌ಗಳಲ್ಲಿ ಕಾಣಿಸಿಕೊಂಡಿರುವ ಪ್ರಶಾಂತ್, ‘ಕ್ವಾಟ್ಲೆ ಕಿಚನ್’ ಶೋ ವಿಜೇತರಾಗಿಯೂ ಗುರುತಿಸಿಕೊಂಡಿದ್ದಾರೆ. ‘ಬಾಯ್ಸ್ ವರ್ಸಸ್ ಗರ್ಲ್ಸ್’ ಸೇರಿದಂತೆ ಹಲವು ಶೋಗಳಲ್ಲಿ ಪ್ರೇಕ್ಷಕರನ್ನು ರಂಜಿಸಿರುವ ಅವರು, ಇದೀಗ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ತೋರಿಸಲು ಸಜ್ಜಾಗಿದ್ದಾರೆ.
ಇವರ ಜೊತೆಗೆ ನಟಿ ಸೋನಿಕಾ ಗೌಡ ಕೂಡ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಡುತ್ತಿದ್ದಾರೆ. ‘ಶತಾಯ ಗತಾಯ’, ‘ನಾನೇ ರಾಜ’, ‘ಖುಷಿ ಖುಷಿಯಾಗಿ’ ಸೇರಿದಂತೆ ಸಿನಿಮಾಗಳಲ್ಲಿ ನಟಿಸಿರುವ ಸೋನಿಕಾ, ಮಾಡಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.
ಮನೆಗೆ ಹೋಗುವ ಮುನ್ನವೇ ಶುರುವಾಯ್ತು ಟಾರ್ಗೆಟ್ ಗೇಮ್!
ಹೊಸ ಸ್ಪರ್ಧಿಗಳ ಎಂಟ್ರಿಯಲ್ಲೇ ಬಿಗ್ ಬಾಸ್ ಪ್ರೇಕ್ಷಕರಿಗೆ ದೊಡ್ಡ ಟ್ರೀಟ್ ಸಿಕ್ಕಿದೆ. ಮನೆಯೊಳಗೆ ಕಾಲಿಡುವ ಮುನ್ನವೇ ಈ ಮೂವರು ಹಾಲಿ ಸ್ಪರ್ಧಿಗಳ ಆಟದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳಿದ್ದು, ಕೆಲವರಿಗೆ ಟಾರ್ಗೆಟ್ ಫಿಕ್ಸ್ ಮಾಡಿದಂತಿದೆ. ಘಾಟಿ ಗಾನವಿ, ‘ನನಗೆ ಮಂಜನನ್ನು ಕಂಡರೆ ಆಗುವುದೇ ಇಲ್ಲ. ಅವರೇ ನನ್ನ ಮೊದಲ ಟಾರ್ಗೆಟ್’ ಎಂದು ಹೇಳುವ ಮೂಲಕ ತಮ್ಮ ಗುರಿಯನ್ನು ಬಹಿರಂಗಪಡಿಸಿದ್ದಾರೆ.
ಇನ್ನು ಸೋನಿಕಾ ಗೌಡ ಕೂಡ ಹಿಂದೆ ಸರಿದಿಲ್ಲ. ಸೌಂದರ್ಯ ಶೆಟ್ಟಿ ಅವರ ಆರಂಭದ ‘ಡಾನ್’ ಶೈಲಿ ಈಗ ಎಲ್ಲಿದೆ? ಗಗನ್ ಅವರಲ್ಲಿದ್ದ ‘ರಾವಣ’ನಂತಹ ಅಬ್ಬರದ ಶಕ್ತಿ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಆಸಿಯಾ ಸೋತಾಗಲೆಲ್ಲ ‘ವಿಕ್ಟಿಮ್ ಕಾರ್ಡ್’ ಬಳಸುತ್ತಾರೆ ಎಂಬ ರೀತಿಯಲ್ಲೂ ಸೋನಿಕಾ ಟಾಂಗ್ ನೀಡಿದ್ದಾರೆ.
ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಆಟದ ಲೆಕ್ಕಾಚಾರ ಬದಲಾಗುತ್ತಾ?
ಇದುವರೆಗೆ ತಮ್ಮದೇ ಗುಂಪು, ಸ್ನೇಹ ಮತ್ತು ಸ್ಟ್ರಾಟಜಿಗಳೊಂದಿಗೆ ಆಟವಾಡುತ್ತಿದ್ದ ಹಾಲಿ ಸ್ಪರ್ಧಿಗಳ ನಡುವೆ ಇದೀಗ ಮೂವರು ಹೊಸ ಆಟಗಾರರು ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಮನೆಯೊಳಗೆ ಹೋಗುವ ಮೊದಲೇ ಕೆಲವರನ್ನು ಟಾರ್ಗೆಟ್ ಮಾಡಿರುವ ಈ ವೈಲ್ಡ್ ಕಾರ್ಡ್ ಸ್ಪರ್ಧಿಗಳು ನೇರವಾಗಿ ಆಟಕ್ಕಿಳಿದರೆ, ಮನೆಯೊಳಗಿನ ಸ್ನೇಹ-ಸಮೀಕರಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಾಗಾದರೆ ಘಾಟಿ ಗಾನವಿ, ಪ್ರಶಾಂತ್ ಮತ್ತು ಸೋನಿಕಾ ಗೌಡ ಬಿಗ್ ಬಾಸ್ ಮನೆಯೊಳಗೆ ಯಾವ ರೀತಿಯ ಆಟ ಆಡುತ್ತಾರೆ? ಈಗಾಗಲೇ ಟಾರ್ಗೆಟ್ ಮಾಡಿರುವ ಸ್ಪರ್ಧಿಗಳ ಜೊತೆ ನೇರವಾಗಿ ಮುಖಾಮುಖಿಯಾಗುತ್ತಾರಾ? ಅಥವಾ ತಮ್ಮದೇ ಹೊಸ ತಂಡ ಕಟ್ಟಿಕೊಳ್ಳುತ್ತಾರಾ? ಇನ್ನು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಬಿಗ್ ಬಾಸ್ ಮನೆಯ ಮುಂದಿನ ಸಂಚಿಕೆಗಳನ್ನು ಕಾದು ನೋಡಬೇಕಿದೆ. ಆದರೆ ಒಂದು ಮಾತ್ರ ಸ್ಪಷ್ಟ. ಈ ಮೂವರ ವೈಲ್ಡ್ ಕಾರ್ಡ್ ಎಂಟ್ರಿಯಿಂದ ‘ಬಿಗ್ ಬಾಸ್ ಕನ್ನಡ 13’ ಆಟಕ್ಕೆ ಹೊಸ ಟ್ವಿಸ್ಟ್ ಸಿಗುವ ನಿರೀಕ್ಷೆಯಂತೂ ಹೆಚ್ಚಾಗಿದೆ.


