ಟಾಲಿವುಡ್ ಆ್ಯಂಕರ್ ರಶ್ಮಿ ಗೌತಮ್ ಟ್ರೋಲರ್ಸ್‌ಗೆ ಖಡಕ್ ಮೆಸೇಜ್ ನೀಡಿದ್ದಾರೆ. ಮೂಕಜೀವಿಗಳ ಸಮಸ್ಯೆ, ಪ್ರಾಣಿಗಳ ಸಂರಕ್ಷಣೆ ಹಾಗೂ ಅಧಿಕಾರಿಗಳ ಜವಾಬ್ದಾರಿ ಕುರಿತು ಅವರು ಎತ್ತಿದ ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿವೆ.

ಟಾಲಿವುಡ್‌ ಆ್ಯಂಕರ್ ರಶ್ಮಿ ಗೌತಮ್ ಬಗ್ಗೆ ವಿಶೇಷವಾಗಿ ಪರಿಚಯ ಮಾಡಿಕೊಡಬೇಕಾಗಿಲ್ಲ. ಆ್ಯಂಕರ್ ಆಗಿ ಕಿರುತೆರೆಯಲ್ಲಿ ಮಿಂಚಿರುವ ರಶ್ಮಿ, ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ ಕೇವಲ ಮನರಂಜನೆಗೆ ಸೀಮಿತವಾಗದೆ, ಸಾಮಾಜಿಕ ವಿಚಾರಗಳ ಬಗ್ಗೆಯೂ ತಮ್ಮದೇ ರೀತಿಯಲ್ಲಿ ಧ್ವನಿ ಎತ್ತುತ್ತಿರುತ್ತಾರೆ. ಅದರಲ್ಲೂ ಮೂಕಜೀವಿಗಳ ಪರವಾಗಿ ರಶ್ಮಿ ಹಲವು ಸಂದರ್ಭಗಳಲ್ಲಿ ಮಾತನಾಡುತ್ತಲೇ ಬಂದಿದ್ದಾರೆ.

ಒಳ್ಳೆಯ ಕೆಲಸ ಮಾಡುವವರನ್ನು ಟೀಕಿಸುವವರು ಇದ್ದೇ ಇರುತ್ತಾರೆ ಎಂಬಂತೆ, ರಶ್ಮಿ ಕೂಡ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್‌ಗೆ ಗುರಿಯಾಗುತ್ತಾರೆ. ಆದರೆ ಅಂತಹ ಟ್ರೋಲ್‌ಗಳಿಗೆ ಅವರು ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ನೀಡುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ರಶ್ಮಿ ಮಾಡಿರುವ ಒಂದು ಪೋಸ್ಟ್‌ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

‘ನನಗೆ ಏನು ಬೇಕಾದರೂ ಹೇಳಿ, ಆದರೆ ಮೂಕಜೀವಿಗಳ ವಿಚಾರದಲ್ಲಿ ಅಧಿಕಾರಿಗಳನ್ನು ಪ್ರಶ್ನಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ’ ಎಂಬ ಅರ್ಥದಲ್ಲಿ ರಶ್ಮಿ ಮಾಡಿರುವ ಟ್ವೀಟ್‌ ಇದೀಗ ವೈರಲ್ ಆಗುತ್ತಿದೆ.

‘ನನ್ನನ್ನು ಅವಮಾನಿಸಿ.. ನನಗೆ ಪರವಾಗಿಲ್ಲ!’

ರಶ್ಮಿ ತಮ್ಮ ಪೋಸ್ಟ್‌ನಲ್ಲಿ, ‘ನನ್ನನ್ನು ಅವಮಾನಿಸಿ.. ನನ್ನನ್ನು ಕೀಳಾಗಿ ಕಾಣಿ.. ನನ್ನನ್ನು ನಿಂದಿಸಿ.. ನಾನು ಯಾವುದನ್ನೂ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ. ಆದರೆ ಇದೇ ಸಮಯದಲ್ಲಿ ಜನರು ಅಧಿಕಾರಿಗಳನ್ನು ಪ್ರಶ್ನಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ಅದರೆ ನೀವು ಅಧಿಕಾರಿಗಳನ್ನು ಪ್ರಶ್ನಿಸಲು ಆರಂಭಿಸದಿದ್ದರೆ ಆ ಹಣ ಎಲ್ಲಿಗೆ ಹೋಗುತ್ತಿದೆ? ಪ್ರಾಣಿಗಳ ಸಂರಕ್ಷಣಾ ಕೇಂದ್ರಗಳು ಏಕೆ ಇಷ್ಟು ಕೆಟ್ಟ ಪರಿಸ್ಥಿತಿಯಲ್ಲಿವೆ? ಸರ್ಕಾರಿ ಪಶುವೈದ್ಯ ಆಸ್ಪತ್ರೆಗಳಲ್ಲಿ ಏಕೆ ಸರಿಯಾದ ಸೌಲಭ್ಯಗಳಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

ಇಷ್ಟೇ ಅಲ್ಲದೆ, ಬೀದಿ ನಾಯಿಗಳು ಮತ್ತು ಬೆಕ್ಕುಗಳಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗಳು ಹಾಗೂ ಲಸಿಕೆಗಳನ್ನು ಏಕೆ ಮಾಡಲಾಗುತ್ತಿಲ್ಲ ಎಂದು ಕೂಡ ರಶ್ಮಿ ಪ್ರಶ್ನಿಸಿದ್ದಾರೆ. ಹಸುಗಳು ಮತ್ತು ಎಮ್ಮೆಗಳನ್ನು ಸಾಕುವ ಮಾಲೀಕರಿಗೆ ಸರಿಯಾದ ಮಾರ್ಗದರ್ಶನ ಏಕೆ ನೀಡಲಾಗುತ್ತಿಲ್ಲ ಎಂಬುದನ್ನೂ ಅವರು ಪ್ರಸ್ತಾಪಿಸಿದ್ದಾರೆ.

‘ಮುಂದಿನ ಪೀಳಿಗೆಗೆ ಹಸಿರು ಉಳಿಯುತ್ತದೆಯೇ?’

ಇನ್ನು ವನ್ಯಜೀವಿಗಳು ಪದೇಪದೇ ಮಾನವ ವಸತಿ ಪ್ರದೇಶಗಳಿಗೆ ಏಕೆ ಪ್ರವೇಶಿಸುತ್ತಿವೆ? ಮುಂದಿನ ಪೀಳಿಗೆ ನೋಡಲು ಸಾಕಷ್ಟು ಹಸಿರು ಪರಿಸರವಾದರೂ ಉಳಿಯುತ್ತದೆಯೇ? ಎಂಬಂತಹ ಹಲವು ಪ್ರಶ್ನೆಗಳನ್ನು ರಶ್ಮಿ ತಮ್ಮ ಪೋಸ್ಟ್‌ನಲ್ಲಿ ಎತ್ತಿದ್ದಾರೆ. ಕೊನೆಯಲ್ಲಿ ಟ್ರೋಲರ್ಸ್‌ಗೂ ತಿರುಗೇಟು ನೀಡಿರುವ ರಶ್ಮಿ, ‘ನನ್ನನ್ನು ಟೀಕಿಸುವುದರಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಬುದ್ಧಿವಂತಿಕೆಯಿಂದ ಬಳಸಿ’ ಎಂಬ ಸಂದೇಶ ನೀಡಿದ್ದಾರೆ.

ಇನ್ನು ಮೂಕಜೀವಿಗಳ ಸಮಸ್ಯೆಗಳ ಬಗ್ಗೆ ಜನರು ಹಾಗೂ ಅಧಿಕಾರಿಗಳು ಗಮನ ಹರಿಸಬೇಕು ಎಂಬ ಉದ್ದೇಶದಿಂದ ರಶ್ಮಿ ಮಾಡಿರುವ ಈ ಪೋಸ್ಟ್‌ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ಮಾತುಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಅವರ ಹೇಳಿಕೆಗಳ ಕುರಿತು ನೆಟ್ಟಿಗರು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.