‘ಅಗ್ನಿಪರೀಕ್ಷೆ’ಯ ಹೊಸ ಪ್ರೋಮೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡ್ಯಾನ್ಸ್ ಮಾಡುತ್ತಾ ವೇದಿಕೆಗೆ ಎಂಟ್ರಿ ಕೊಡುತ್ತಾನೆ. ತಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದರೂ ಜಡ್ಜ್‌ಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪ್ರಶ್ನಿಸುತ್ತಾನೆ.

ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ ‘ಅಗ್ನಿಪರೀಕ್ಷೆ’ ವೇದಿಕೆ ಸಖತ್ ಸದ್ದು ಮಾಡುತ್ತಿದೆ. ಸ್ಪರ್ಧಿಗಳ ವಿಭಿನ್ನ ವರ್ತನೆ, ಜಡ್ಜ್‌ಗಳ ಪ್ರಶ್ನೆ-ಉತ್ತರಗಳ ನಡುವೆ ಇದೀಗ ತೀರ್ಪುಗಾರ ವಿನಯ್ ಗೌಡ ಕೇಳಿದ ಒಂದು ಪ್ರಶ್ನೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆಗೆ ಕಾರಣವಾಗಿದೆ. ‘ಒಂದು ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತವೆ?’ ಎಂಬ ಪ್ರಶ್ನೆ ಕೇಳಿದ ವಿನಯ್, ಅದಕ್ಕೆ ನೀಡಿದ ವಿವರಣೆಯಿಂದಲೇ ನೆಟ್ಟಿಗರ ಟ್ರೋಲ್‌ಗೆ ಗುರಿಯಾಗಿದ್ದಾರೆ.

‘ನಿಮ್ಮ ಪ್ರಶ್ನೆಯೇ ತಪ್ಪು!’ ಎಂದ ಸ್ಪರ್ಧಿ

‘ಅಗ್ನಿಪರೀಕ್ಷೆ’ಯ ಹೊಸ ಪ್ರೋಮೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಡ್ಯಾನ್ಸ್ ಮಾಡುತ್ತಾ ವೇದಿಕೆಗೆ ಎಂಟ್ರಿ ಕೊಡುತ್ತಾನೆ. ತಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದರೂ ಜಡ್ಜ್‌ಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಜಡ್ಜ್ ಶ್ರುತಿ, ‘ನಮ್ಮ ಪ್ರತಿಕ್ರಿಯೆಗಾಗಿ ಕಾಯದೆ ಹೀಗೆ ಕಾಮೆಂಟ್ ಮಾಡಬಾರದು’ ಎಂದು ಹೇಳುತ್ತಾರೆ. ಆದರೆ ಯುವಕ ಮಾತ್ರ ತಾನು ಇರುವುದೇ ಹೀಗೆ ಎಂದು ಖಡಕ್ ಆಗಿ ಉತ್ತರಿಸುತ್ತಾನೆ. ನಂತರ ನಿರೂಪಕ ನಿರಂಜನ್ ದೇಶಪಾಂಡೆ, ‘ನಿಮ್ಮನ್ನೇ ಯಾಕೆ ಆಯ್ಕೆ ಮಾಡಬೇಕು?’ ಎಂದು ಕೇಳಿದಾಗಲೂ, ‘ನೀವು ಕೇಳುತ್ತಿರುವ ಪ್ರಶ್ನೆಯೇ ತಪ್ಪು’ ಎಂದು ತಿರುಗೇಟು ನೀಡುತ್ತಾನೆ. ಈ ಉತ್ತರವೇ ವೇದಿಕೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸುತ್ತದೆ.

‘ವೃತ್ತಕ್ಕೆ ಎಷ್ಟು ಸೈಡ್ಸ್?’ ಎಂದು ಕೇಳಿದ ವಿನಯ್ ಗೌಡ

ಸ್ಪರ್ಧಿಯ ಆತ್ಮವಿಶ್ವಾಸವನ್ನು ಗಮನಿಸಿದ ವಿನಯ್ ಗೌಡ, ಆತನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಾರೆ. ಬಳಿಕ ಇದ್ದಕ್ಕಿದ್ದಂತೆ, ‘ಒಂದು ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತವೆ?’ ಎಂದು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಸ್ಪರ್ಧಿ, ‘ವೃತ್ತಕ್ಕೆ ಯಾವುದೇ ಸೈಡ್ಸ್ ಇರುವುದಿಲ್ಲ’ ಎಂದು ಉತ್ತರಿಸುತ್ತಾನೆ. ಆದರೆ ಇಲ್ಲೇ ಅಸಲಿ ಟ್ವಿಸ್ಟ್ ಎದುರಾಗುತ್ತದೆ. ಸ್ಪರ್ಧಿಯ ಉತ್ತರವನ್ನು ಒಪ್ಪಿಕೊಳ್ಳುವ ಬದಲು ವಿನಯ್ ಗೌಡ, ‘ವೃತ್ತಕ್ಕೆ ಎರಡು ಸೈಡ್ಸ್ ಇರುತ್ತವೆ. ಒಂದು ಇನ್‌ಸೈಡ್, ಇನ್ನೊಂದು ಔಟ್‌ಸೈಡ್’ ಎಂದು ಹೇಳುತ್ತಾರೆ.

ಇದೇ ಮಾತು ಈಗ ನೆಟ್ಟಿಗರ ಟ್ರೋಲ್‌ಗೆ ಕಾರಣ!

ವಿನಯ್ ಗೌಡ ಅವರ ಈ ಉತ್ತರದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಸಾಮಾನ್ಯ ಜ್ಯಾಮಿತಿಯಲ್ಲಿ ವೃತ್ತಕ್ಕೆ ನೇರ ಅಂಚುಗಳು ಅಥವಾ ‘ಸೈಡ್ಸ್’ ಇರುವುದಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಹಲವರು ವಿನಯ್ ಅವರ ಲಾಜಿಕ್ ಅನ್ನು ಪ್ರಶ್ನಿಸಿದ್ದಾರೆ. ‘ಸ್ಪರ್ಧಿ ಸರಿಯಾದ ಉತ್ತರ ಕೊಟ್ಟಿದ್ದರೂ, ವಿನಯ್ ಗೌಡ ತಪ್ಪು ಲಾಜಿಕ್ ಕೊಟ್ಟು ಕೌಂಟರ್ ಕೊಡಲು ಹೋಗಿದ್ದಾರೆ’ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನೂ ಕೆಲವರು ಈ ಪ್ರೋಮೋವನ್ನು ತಮಾಷೆಯಾಗಿ ತೆಗೆದುಕೊಂಡು ಮೀಮ್ಸ್ ಹಾಗೂ ಟ್ರೋಲ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

‘ಅಗ್ನಿಪರೀಕ್ಷೆ’ಯಲ್ಲಿ ಶುರುವಾಯಿತಾ ಟ್ರೋಲ್ ಪರೀಕ್ಷೆ?

ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೂ ಮುನ್ನ ಪ್ರಸಾರವಾಗುತ್ತಿರುವ ‘ಅಗ್ನಿಪರೀಕ್ಷೆ’ ಈಗಾಗಲೇ ಸ್ಪರ್ಧಿಗಳಿಂದ ಗಮನ ಸೆಳೆಯುತ್ತಿದೆ. ಆದರೆ ಈ ಬಾರಿ ಸ್ಪರ್ಧಿಗಿಂತ ಹೆಚ್ಚಾಗಿ ತೀರ್ಪುಗಾರರೊಬ್ಬರ ಪ್ರಶ್ನೆಯೇ ಸೋಷಿಯಲ್ ಮೀಡಿಯಾದ ಚರ್ಚೆಯ ಕೇಂದ್ರವಾಗಿದೆ. ಅಂತಿಮವಾಗಿ ಈ ಎಪಿಸೋಡ್‌ನಲ್ಲಿ ವಿನಯ್ ಗೌಡ ಅವರ ಪ್ರಶ್ನೆಗೆ ಸಂಬಂಧಿಸಿದಂತೆ ಇನ್ನೇನು ತಿರುವು ಸಿಗಲಿದೆ? ಆ ಸ್ಪರ್ಧಿಯ ಆಯ್ಕೆ ಆಗುತ್ತಾನಾ? ಎಂಬ ಕುತೂಹಲವೂ ಮೂಡಿದೆ. ಒಟ್ಟಿನಲ್ಲಿ, ‘ವೃತ್ತಕ್ಕೆ ಎಷ್ಟು ಸೈಡ್ಸ್?’ ಎಂಬ ಒಂದೇ ಪ್ರಶ್ನೆ ‘ಅಗ್ನಿಪರೀಕ್ಷೆ’ ಪ್ರೋಮೋಗೆ ಹೊಸದೊಂದು ಟ್ರೋಲ್ ಆಂಗಲ್ ಕೊಟ್ಟಿದೆ.