‘ಜೋಶ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ, ಬಳಿಕ ‘ಬಿಗ್ ಬಾಸ್’ ಮೂಲಕವೂ ಜನಪ್ರಿಯತೆ ಗಳಿಸಿದ ನಟ ರಾಕೇಶ್ ಅಡಿಗ ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

‘ಜೋಶ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ, ಬಳಿಕ ‘ಬಿಗ್ ಬಾಸ್’ ಮೂಲಕವೂ ಜನಪ್ರಿಯತೆ ಗಳಿಸಿದ ನಟ ರಾಕೇಶ್ ಅಡಿಗ ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಟ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ತಮ್ಮ ಮದುವೆ ಕುರಿತು ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳ ಕುತೂಹಲವೂ ಹೆಚ್ಚಾಗಿದೆ. ಹಾಗಾದರೆ ರಾಕೇಶ್ ಅಡಿಗ ಮದುವೆಯಾಗಲಿರುವ ಹುಡುಗಿ ಯಾರು? ಮದುವೆ ಯಾವಾಗ? ನಟ ಹೇಳಿದ್ದೇನು?

‘ನನಗೆ ಬೇಕಾದ ಹುಡುಗಿ ಸಿಕ್ಕಿದ್ದಾರೆ’

ಜೀವನ ಸಂಗಾತಿಯ ಬಗ್ಗೆ ಮಾತನಾಡಿರುವ ರಾಕೇಶ್ ಅಡಿಗ, ತಮ್ಮ ನಿರೀಕ್ಷೆಗೆ ತಕ್ಕ ಹುಡುಗಿ ಸಿಕ್ಕಿದ್ದಾರೆ ಎನ್ನುವುದಕ್ಕಿಂತ, ತಮ್ಮ ಜೀವನಕ್ಕೆ ಅಗತ್ಯವಿರುವಂತಹ ವ್ಯಕ್ತಿ ಸಿಕ್ಕಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. “ನನಗೆ ಬೇಕಾಗಿರೋ ತರಹ ಹುಡುಗಿ ಅನ್ನೋದಕ್ಕಿಂತ, ನನಗೆ ಅವಶ್ಯಕತೆ ಇರುವಂತಹ ಹುಡುಗಿ ಸಿಕ್ಕಿದ್ದಾರೆ. ನಾನು ಒಬ್ಬ ಬೆಟರ್ ಪರ್ಸನ್ ಆಗೋದಕ್ಕೆ ಯಾವ ತರಹ ಬೇಕೋ, ಆ ತರಹ ಹುಡುಗಿ ಸಿಕ್ಕಿದ್ದಾರೆ,” ಎಂದು ಸಂದರ್ಶನವೊಂದರಲ್ಲಿ ರಾಕೇಶ್ ಅಡಿಗ ಹೇಳಿದ್ದಾರೆ. ನಟನ ಈ ಮಾತುಗಳಿಂದಲೇ ಅವರ ಜೀವನದಲ್ಲಿ ಮದುವೆಯ ಸಿದ್ಧತೆಗಳು ನಡೆಯುತ್ತಿರುವುದು ಸ್ಪಷ್ಟವಾಗಿದ್ದು, ಸದ್ಯ ಅಭಿಮಾನಿಗಳ ಗಮನವೆಲ್ಲಾ ಅವರ ಬಾಳಸಂಗಾತಿ ಯಾರು ಎಂಬುದರತ್ತ ನೆಟ್ಟಿದೆ.

ಮುಂದಿನ ವರ್ಷ ಮದುವೆ!

ತಮ್ಮ ಮದುವೆಯ ಸಮಯದ ಬಗ್ಗೆಯೂ ರಾಕೇಶ್ ಅಡಿಗ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಮದುವೆಯಾಗುವ ಯೋಜನೆ ಇದೆ ಎಂದು ಹೇಳಿರುವ ಅವರು, ಮದುವೆಯನ್ನು ಸರಳವಾಗಿ ಮಾಡಿಕೊಳ್ಳುವ ಆಸೆ ಹೊಂದಿರುವುದಾಗಿ ತಿಳಿಸಿದ್ದಾರೆ. “ಮುಂದಿನ ವರ್ಷ ಮದುವೆ. ನನಗೆ ತುಂಬಾ ಸಿಂಪಲ್ ಆಗಿ ಮದುವೆ ಆಗಬೇಕು ಅಂತ ಇಷ್ಟ. ಆದರೆ ಹೆಣ್ಣುಮಕ್ಕಳಿಗೆ ಆಸೆ ಇರುತ್ತೆ ಅಲ್ವಾ? ಅದು ಡಿಸ್ಕಷನ್‌ನಲ್ಲಿದೆ. ಅವರ ಆಸೆ ಜೊತೆಗೆ ನಮ್ಮ ಆಸೆಯನ್ನ ಸೇರಿಸಿ ಕಾಮನ್ ಗ್ರ್ಯಾಂಡ್‌ನಲ್ಲಿ ಏನಾದರೂ ಮಾಡಬಹುದಾ ಅಂತ ಡಿಸ್ಕಷನ್‌ನಲ್ಲಿದೆ,” ಎಂದು ರಾಕೇಶ್ ಹೇಳಿದ್ದಾರೆ. ಹೀಗಾಗಿ ಸರಳ ಮದುವೆ ಮಾಡಿಕೊಳ್ಳಬೇಕೆಂಬುದು ರಾಕೇಶ್ ಅವರ ಆಸೆಯಾಗಿದ್ದರೂ, ಅವರ ಭಾವಿ ಪತ್ನಿಯ ಆಸೆಯನ್ನೂ ಪರಿಗಣಿಸಿ ಮದುವೆಯನ್ನು ಹೇಗೆ ಆಯೋಜಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

‘ಜೋಶ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿ

ರಾಕೇಶ್ ಅಡಿಗ 2009ರಲ್ಲಿ ಬಿಡುಗಡೆಯಾದ ‘ಜೋಶ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿತ್ರದಲ್ಲಿನ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‘ಜೋಶ್’ ಬಳಿಕ ‘ಮನಸಾಲಜಿ’, ‘ಪರಿ’, ‘ಯಾರೇ ಕೂಗಾಡಲಿ’, ‘ನಂದ ಗೋಕುಲ’, ‘ಮಂದಹಾಸ’, ‘ಕರ್ನಾಟಕ ಅಯೋಧ್ಯಪುರಂ’, ‘ಕೋಟಿಗೊಬ್ಬ ಲವ್ ಸ್ಟೋರಿ’, ‘ಪ್ರೀತಿಯಿಂದ’, ‘ಮಂಡ್ಯ ಟು ಮುಂಬೈ’, ‘ನಟೋರಿಯಸ್’, ‘ಡವ್’ ಹಾಗೂ ‘ನೈಟ್ ಔಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನು ಲೂಸ್ ಮಾದ ಯೋಗಿ ಅಭಿನಯದ ‘ಅಲೆಮಾರಿ’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ನಟನಾ ವೈವಿಧ್ಯತೆಯನ್ನೂ ತೋರಿಸಿದ್ದರು. ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ನಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಂಡ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಇತ್ತೀಚೆಗೆ ‘ನಾನು ಮತ್ತು ಗುಂಡ 2’ ಸಿನಿಮಾದಲ್ಲೂ ನಟಿಸಿರುವ ರಾಕೇಶ್ ಅಡಿಗ, ಸಿನಿಮಾ ಜರ್ನಿಯ ಜೊತೆಗೆ ಇದೀಗ ತಮ್ಮ ವೈಯಕ್ತಿಕ ಜೀವನದಲ್ಲೂ ಮಹತ್ವದ ಹೆಜ್ಜೆ ಇಡುತ್ತಿದ್ದಾರೆ.

ಇನ್ನು ಮುಂದಿನ ವರ್ಷ ಮದುವೆಯಾಗುವುದಾಗಿ ರಾಕೇಶ್ ಅಡಿಗ ಖಚಿತಪಡಿಸಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಆದರೆ ಅವರ ಬಾಳಸಂಗಾತಿ ಯಾರು ಎಂಬುದನ್ನು ನಟ ಸದ್ಯ ಬಹಿರಂಗಪಡಿಸಿಲ್ಲ. ಹೀಗಾಗಿ ರಾಕೇಶ್ ಅಡಿಗ ಅವರ ಮದುವೆಯ ದಿನಾಂಕ ಹಾಗೂ ಭಾವಿ ಪತ್ನಿಯ ಕುರಿತ ಅಧಿಕೃತ ಮಾಹಿತಿ ಯಾವಾಗ ಹೊರಬೀಳಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮುಂದುವರಿದಿದೆ.