ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಜಡ್ಜಸ್‌ಗಳ ಆಯ್ಕೆಯ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿದ 'ಮಾಡ್ರನ್ ಮಹಾಕವಿ' ಮಂಜುನಾಥ್ ಅಸಭ್ಯ ವರ್ತನೆ ಹಾಗೂ ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರಗೆ ಬಂದಿದ್ದಾನೆ. ಕಾಮನ್ ಮ್ಯಾನ್ ಆಯ್ಕೆಯಲ್ಲಿ ಜಡ್ಜಸ್‌ಗಳು ಎಡವಿದ್ದೆಲ್ಲಿ? ಇಲ್ಲಿದೆ ಸಂಪೂರ್ಣ ವಿವರ.

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್' ಇತಿಹಾಸದಲ್ಲೇ ಮೊದಲ ಬಾರಿಗೆ ಜನಸಾಮಾನ್ಯರಿಗೆ ದೊಡ್ಡ ವೇದಿಕೆ ಕಲ್ಪಿಸಿಕೊಡಲಾಗಿತ್ತು. ಸತತ ಮೂರು ತಿಂಗಳ ಕಾಲ ನಾನಾ ಜಿಲ್ಲೆಗಳಲ್ಲಿ ಆಡಿಷನ್‌ಗಳು, ಲಕ್ಷಾಂತರ ರೀಲ್ಸ್‌ಗಳ ಪರಿಶೀಲನೆ ಹಾಗೂ ತಿಂಗಳುಗಟ್ಟಲೆ ನಡೆದ ‘ಅಗ್ನಿ ಪರೀಕ್ಷೆ’ ಎಂಬ ವಿಶೇಷ ವೇದಿಕೆಯ ಮೂಲಕ ಕಾಮನ್ ಮ್ಯಾನ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಅಂತಿಮವಾಗಿ 65 ಜನರಿಂದ 10 ಜನರನ್ನು ಆಯ್ಕೆ ಮಾಡಿ, ಅದರಲ್ಲಿ ಮೂವರನ್ನು ಜನರ ವೋಟಿಂಗ್ ಮೂಲಕ ಹಾಗೂ ಒಬ್ಬರನ್ನು ಜಡ್ಜ್‌ಗಳ ತೀರ್ಪಿನ ಆಧಾರದ ಮೇಲೆ ಬಿಗ್ ಬಾಸ್ ಮುಖ್ಯ ಮನೆಗೆ ಕಳುಹಿಸಲಾಗಿತ್ತು.

ಆದರೆ, ಜನರ ನಿರೀಕ್ಷೆಗಳನ್ನೆಲ್ಲ ಹುಸಿಗೊಳಿಸಿ, ಇಡೀ ಬಿಗ್ ಬಾಸ್ ಶೋನ ಮಾನ-ಮರ್ಯಾದೆಯನ್ನು ಹರಾಜು ಹಾಕುವಂತಹ ಘಟನೆಗಳು ಈಗ ಮನೆಯೊಳಗೆ ನಡೆದಿದ್ದು, ಇದೀಗ ಅಗ್ನಿ ಪರೀಕ್ಷೆ ಜಡ್ಜಸ್ ಆಯ್ಕೆ ಮಾಡಿ ಕಳಿಸಿದ ಮಾಡ್ರನ್ ಮಹಾಕವಿ ಮಂಜುನಾಥ್ ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ ಮಾಡಿ ಹೊರಗೆ ಬಂದಿದ್ದಾನೆ.

ಬಾಯಿ ತೆರೆದರೆ ಬರೀ ಅಸಭ್ಯ ಮಾತು: ಗಬ್ಬೆದ್ದು ನಾರಿತೇ ಬಿಗ್ ಬಾಸ್?

ಜನರ ವೋಟಿಂಗ್ ಮೂಲಕ ಆಯ್ಕೆಯಾದ ಮೂವರು ಸ್ಪರ್ಧಿಗಳು ಒಂದು ಮಟ್ಟಿಗೆ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಈ ಪೈಕಿ ಲಿಖಿತ್ ಗೊಂಡಿ ಕಳೆದ ವಾರ ಎಲಿಮಿನೇಟ್ ಆಗಿದ್ದಾರೆ. ಆದರೆ ಉಳಿದ ಮೂವರ ಪೈಕಿ ಅಗ್ನಿ ಪರೀಕ್ಷೆಯ ತೀರ್ಪುಗಾರರ ವಿಶೇಷ ಆಯ್ಕೆಯಾಗಿ ಮನೆ ಪ್ರವೇಶಿಸಿದ ‘ಮಾಡ್ರನ್ ಮಹಾಕವಿ ಮಂಜುನಾಥ್’ ನಡೆದುಕೊಳ್ಳುತ್ತಿರುವ ರೀತಿ ಕನ್ನಡಿಗರನ್ನು ಕೆರಳಿಸಿದೆ. ಮನೆಯೊಳಗೆ ಹೋದ ಮೊದಲ ದಿನದಿಂದಲೇ ಇತರ ಸ್ಪರ್ಧಿಗಳ ವಿರುದ್ಧ ತೀರಾ ಕೀಳುಮಟ್ಟದ ಹಾಗೂ ಅಸಭ್ಯ ಭಾಷಾ ಪ್ರಯೋಗ ಮಾಡುತ್ತಿದ್ದಾನೆ. ಕುಟುಂಬ ಸಮೇತ ಕುಳಿತು ನೋಡುವ ರಿಯಾಲಿಟಿ ಶೋ ಈಗ ‘ಬೀಪ್’ ಶಬ್ದಗಳ ಕಣಜವಾಗಿ ಮಾರ್ಪಟ್ಟಿದೆ. ಎದುರಾಳಿಗಳ ಮನೆತನ, ಅವರ ವೈಯಕ್ತಿಕ ವಿಚಾರಗಳನ್ನು ಬೀದಿಗೆ ತಂದು ಕೊಳಕು ಮಾತುಗಳನ್ನಾಡುತ್ತಿರುವ ಈತನ ವರ್ತನೆ ನೋಡಿದರೆ, 'ಇಂಥ ವ್ಯಕ್ತಿಯನ್ನಾ ಜಡ್ಜಸ್‌ಗಳು ಇಷ್ಟೊಂದು ಆಡಿಷನ್ ಮಾಡಿ ಆಯ್ಕೆ ಮಾಡಿದ್ದು?' ಎಂದು ಪ್ರೇಕ್ಷಕರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಟ್ರೋಫಿ ಗೆಲ್ಲದವರಿಂದ ಆಯ್ಕೆ: ಜಡ್ಜಸ್‌ಗಳ ಸಾಮರ್ಥ್ಯದ ಮೇಲೆಯೇ ಪ್ರಶ್ನೆ!

ಅಗ್ನಿ ಪರೀಕ್ಷೆ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬಂದಿದ್ದವರಲ್ಲಿ ಬಿಗ್ ಬಾಸ್ ವಿನ್ನರ್‌ಗಳಾದ ನಟಿ ಶ್ರುತಿ ಹಾಗೂ ಚಂದನ್ ಶೆಟ್ಟಿ ಅವರ ನಿರ್ಧಾರಗಳು ಒಂದು ಮಟ್ಟಿಗೆ ಪ್ರಬುದ್ಧ ಹಾಗೂ ಮಾನವೀಯವಾಗಿದ್ದವು. ಆದರೆ, ವೀಕ್ಷಕರು 'ಟ್ರೋಫಿ ಗೆಲ್ಲಲು ಅನರ್ಹರು' ಎಂದು ಈ ಹಿಂದೆ ತಿರಸ್ಕರಿಸಿದ್ದ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ಅವರನ್ನು ಜಡ್ಜಸ್ ಆಗಿ ಕೂರಿಸಿದ್ದೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣವೇ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರುತ್ತಿವೆ.

ತಾವೇ ಸ್ವತಃ ಬಿಗ್ ಬಾಸ್ ಮನೆಯಲ್ಲಿ ಸಂಯಮ ಕಳೆದುಕೊಂಡು, ಜನರ ಮನಗೆಲ್ಲಲು ವಿಫಲರಾಗಿದ್ದ ಸ್ಪರ್ಧಿಗಳು ಮತ್ತೊಬ್ಬ ಹೊಸ ಸ್ಪರ್ಧಿಯ ನಡತೆ ಮತ್ತು ಸಾಮರ್ಥ್ಯವನ್ನು ಹೇಗೆ ಅಳೆಯಲು ಸಾಧ್ಯ? ಈ ಪ್ರಶ್ನೆಗೆ ಈಗ ಮಂಜುನಾಥ್ ಅವರ ವರ್ತನೆಯೇ ಸಾಕ್ಷಿಯಾಗಿದೆ. ಜಡ್ಜ್‌ಗಳ ಕಳಪೆ ಆಯ್ಕೆಯಿಂದಾಗಿ ಇಂದು ಇಡೀ ಶೋ ನಗೆಪಾಟಲಿಗೀಡಾಗಿದೆ ಎಂಬ ಟೀಕೆ ವ್ಯಕ್ತವಾಗಿದೆ. ಇವರ ಆಯ್ಕೆ ಕೂಸು ಇದೀಗ ಇವರಂತೆಯೇ ವರ್ತಿಸಿ ಮನೆಯಿಂದ ಔಟ್ ಆಗಿದ್ದಾನೆ.

ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಬಿಗ್ ಬಾಸ್ ಬಾಗಿಲು ಬಂದ್ ಆಗುತ್ತಾ?

ಹಿಂದಿ, ತಮಿಳು, ತೆಲುಗು ಬಿಗ್ ಬಾಸ್‌ಗಳಲ್ಲಿ ಜನಸಾಮಾನ್ಯರು (ಕಾಮನ್ ಮ್ಯಾನ್) ತಮ್ಮ ಅದ್ಭುತ ವ್ಯಕ್ತಿತ್ವ ಹಾಗೂ ಆಟದ ಮೂಲಕ ಪ್ರಸಿದ್ಧಿಯಾಗುತ್ತಿದ್ದಾರೆ. ಆದರೆ, ಕನ್ನಡದಲ್ಲಿ ಮಾತ್ರ ಭಾಷೆಯ ಮೇಲೆ ಕಿಂಚಿತ್ತೂ ಹಿಡಿತವಿಲ್ಲದ, ಸಂಸ್ಕಾರವಿಲ್ಲದ ವ್ಯಕ್ತಿಯನ್ನು ಅಗ್ನಿ ಪರೀಕ್ಷೆ ಜಡ್ಜಸ್‌ಗಳು ತಮ್ಮ 'ಪ್ರತಿನಿಧಿ'ಯಾಗಿ ಕಳಿಸಿ ಇಡೀ ಜನಸಾಮಾನ್ಯರ ಅವಕಾಶಕ್ಕೇ ಕೊಡಲಿಪೆಟ್ಟು ಹಾಕಲಾಗಿದೆ. ಬಿಗ್ ಬಾಸ್ ಎಂದರೆ ಬರೀ ಜಗಳ, ಬೈಗುಳ ಮತ್ತು ಕೀಳು ಅಭಿರುಚಿಯ ತಾಣ ಎಂಬ ಹಣೆಪಟ್ಟಿ ಮತ್ತೆ ಗಟ್ಟಿಯಾಗುತ್ತಿದ್ದು, ಅದೆಷ್ಟೋ ಸುಸಂಸ್ಕೃತ ವೀಕ್ಷಕರು ಬೇರೆ ಚಾನಲ್‌ಗಳನ್ನು ಟ್ಯೂನ್ ಮಾಡುತ್ತಿದ್ದಾರೆ. ಈ ಒಬ್ಬ ಸ್ಪರ್ಧಿಯ ವಿಕೃತ ವರ್ತನೆಯಿಂದಾಗಿ, ಮುಂದಿನ ಸೀಸನ್‌ಗಳಲ್ಲಿ ಪ್ರತಿಭಾವಂತ ಜನಸಾಮಾನ್ಯರಿಗೆ ಬಿಗ್ ಬಾಸ್ ಬಾಗಿಲು ಮುಚ್ಚಿದರೂ ಆಶ್ಚರ್ಯವಿಲ್ಲ!