Divya Suresh: ಬೆಂಗಳೂರಿನಲ್ಲಿ ರಾತ್ರಿ ನಟಿ ಹಾಗೂ ಬಿಗ್‌ಬಾಸ್ ಕನ್ನಡ ಖ್ಯಾತಿಯ ದಿವ್ಯಾ ಸುರೇಶ್‌ಗೆ ಯುವಕನಿಂದ ಕಿರುಕುಳ ಆರೋಪ. ಘಟನೆದ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರು (ಜೂ.29): ನಟಿ ಹಾಗೂ ಬಿಗ್‌ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ಅವರಿಗೆ ಭಾನುವಾರ ತಡರಾತ್ರಿ ಬೆಚ್ಚಿಬೀಳಿಸುವ ಅನುಭವವಾಗಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಏನಾಯಿತು?
ಭಾನುವಾರ ರಾತ್ರಿ ಸುಮಾರು 11:30ರ ವೇಳೆಗೆ, ತಮ್ಮ ಕಸಿನ್ ಜೊತೆ ರಸ್ತೆಯಲ್ಲಿ ನಡೆದುಕೊಂಡು ಕಾರಿನತ್ತ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದೇ ವೇಳೆ ಯುವಕನೊಬ್ಬ ಅವರನ್ನು ಹಿಂಬಾಲಿಸುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದಿವ್ಯಾ ಆರೋಪಿಸಿದ್ದಾರೆ.
ಯುವಕನ ವರ್ತನೆಯಿಂದ ಆತಂಕಗೊಂಡ ದಿವ್ಯಾ ಮತ್ತು ಅವರ ಕಸಿನ್ ತಕ್ಷಣ ಕಾರಿನೊಳಗೆ ಕುಳಿತು ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಆದರೆ ಕಾರಿನೊಳಗೆ ಕುಳಿತ ಬಳಿಕವೂ ಆತ ತನ್ನ ಅಸಭ್ಯ ವರ್ತನೆಯನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ.
ಅದೇ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಆರೋಪಿಯನ್ನು ತರಾಟೆಗೆ ತೆಗೆದುಕೊಂಡು ಅಲ್ಲಿಂದ ಹೋಗುವಂತೆ ಎಚ್ಚರಿಸಿದ್ದರೂ, ಆತ ತನ್ನ ವರ್ತನೆ ಬದಲಿಸದೆ ಮಹಿಳೆಯರ ಎದುರೇ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ದಿವ್ಯಾ ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋವನ್ನು ದಿವ್ಯಾ ಸುರೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


