ಕಿರುತೆರೆ ನಟ ಧ್ರುವಂತ್‌, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ ಹಾಗೂ ಮಾನಹಾನಿಕಾರಕ ಪೋಸ್ಟ್‌ಗಳನ್ನು ಪ್ರಕಟಿಸುತ್ತಿರುವ ಟ್ರೋಲರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

'ಬಿಗ್ ಬಾಸ್ ಕನ್ನಡ' ಸೀಸನ್‌ 12ರ ಮಾಜಿ ಸ್ಪರ್ಧಿ ಹಾಗೂ ಕಿರುತೆರೆ ನಟ ಧ್ರುವಂತ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ ಹಾಗೂ ಮಾನಹಾನಿಕಾರಕ ಪೋಸ್ಟ್‌ಗಳನ್ನು ಪ್ರಕಟಿಸುತ್ತಿರುವ ಟ್ರೋಲರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಸೆಲ್‌ನಲ್ಲಿ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಧ್ರುವಂತ್, "ಹುಚ್ಚು ಹುಚ್ಚರ ಥರ ಆಡುವವರಿಗೆ ಬೆಲೆ ಜಾಸ್ತಿ" ಎಂದು ಹೇಳಿದ್ದರು. ಈ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳು, ಟ್ರೋಲ್ ವಿಡಿಯೊಗಳು ಹಾಗೂ ಮಾನಹಾನಿಕಾರಕ ಪೋಸ್ಟ್‌ಗಳನ್ನು ಹರಿಬಿಡಲು ಆರಂಭಿಸಿದ್ದರು ಎನ್ನಲಾಗಿದೆ. ಘಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಇದೀಗ ಅವರು ಪೊಲೀಸರ ಮೊರೆ ಹೋಗಿದ್ದಾರೆ.

ದೂರಿನಲ್ಲೇನಿದೆ?

ದೂರಿನಲ್ಲಿ ಧ್ರುವಂತ್, ತಾವು ಕನ್ನಡ ಚಿತ್ರರಂಗ ಹಾಗೂ ದೂರದರ್ಶನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಟರಾಗಿದ್ದು, 'ಬಿಗ್ ಬಾಸ್ ಕನ್ನಡ' ಸೀಸನ್‌ 12ರ ಫೈನಲಿಸ್ಟ್ ಆಗಿ ಸಾರ್ವಜನಿಕರಲ್ಲಿ ಗೌರವ ಮತ್ತು ವಿಶ್ವಾಸ ಗಳಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಆದರೆ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಅವಾಚ್ಯ, ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಒಡ್ಡುವ ರೀತಿಯ ಪೋಸ್ಟ್‌, ಕಾಮೆಂಟ್ ಮತ್ತು ಸಂದೇಶಗಳನ್ನು ನಿರಂತರವಾಗಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ರೀತಿಯ ಪೋಸ್ಟ್‌ಗಳು ತಮ್ಮ ವೈಯಕ್ತಿಕ ನೆಮ್ಮದಿಯಷ್ಟೇ ಅಲ್ಲ, ವೃತ್ತಿಜೀವನದ ಮೇಲೂ ಗಂಭೀರ ಪರಿಣಾಮ ಬೀರಿವೆ ಎಂದು ಧ್ರುವಂತ್ ದೂರಿನಲ್ಲಿ ತಿಳಿಸಿದ್ದಾರೆ. ನಿರ್ಮಾಪಕರು, ನಿರ್ದೇಶಕರು, ಬ್ರಾಂಡ್‌ಗಳು ಹಾಗೂ ಇತರ ವೃತ್ತಿಪರ ವಲಯದಲ್ಲಿ ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಲಾಗುತ್ತಿದ್ದು, ತಮ್ಮ ಸಾರ್ವಜನಿಕ ಇಮೇಜ್, ಖ್ಯಾತಿ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದರ ಜೊತೆಗೆ, ನಿರಂತರವಾಗಿ ಅವಾಚ್ಯ ಪದಗಳಿಂದ ನಿಂದಿಸುವುದು, ಸುಳ್ಳು ಆರೋಪಗಳನ್ನು ಹರಡುವುದು, ಬೆದರಿಕೆ ಹಾಕುವುದು ಹಾಗೂ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕವಾಗಿ ಅವಮಾನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಧ್ರುವಂತ್ ಆರೋಪಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ತಮಗೆ ತೀವ್ರ ಮಾನಸಿಕ ಯಾತನೆ ಹಾಗೂ ಸಾಮಾಜಿಕ ಅವಮಾನ ಉಂಟಾಗಿದ್ದು, ಇಂತಹ ಕೃತ್ಯ ಎಸಗುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅಗತ್ಯ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಸದ್ಯ ಧ್ರುವಂತ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಹಾಗೂ ಸೈಬರ್ ಸೆಲ್ ಅಧಿಕಾರಿಗಳು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕಾರಕ ಪೋಸ್ಟ್‌ಗಳನ್ನು ಪ್ರಕಟಿಸಿರುವ ಖಾತೆಗಳ ವಿರುದ್ಧ ಮುಂದಿನ ಕಾನೂನು ಕ್ರಮದ ಸಾಧ್ಯತೆ ಇದೆ.