ಬೆಂಗ್ಳೂರಲ್ಲಿ 150 ಮನೆ ಬಾಡ್ಗೆಗ್ ಕೊಟ್ಟಿರೋರ್ ಮುಂದೆ, ಹಳ್ಳಿಯಿಂದ ನಾಕ್ ಬಟ್ಟೆ ತಕಂಡ್ ಬಂದು ಎಲ್ಲಪ್ಪಾ ಮನಿಕಳ್ಳಿ? ಎಲ್ಲಪ್ಪಾ ಉಣ್ಲಿ ತಿನ್ಲಿ ಅಂತ ಯೋಚ್ನೆ ಮಾಡ್ದೋರ್ ಗೆದ್ಬುಟ್ರೆ ಬೇಜಾರಾಗಲ್ವ? ಗಿಲ್ಲಿ ನಟ 'ಈ ಮೇಡಂ ಆಚೆಗೋದ್ಮೇಲೆ ಈ ಸೋವ್ವೇ ಸರಿ ಇಲ್ಲ ಅಂತದೆ ಸುದೀಪಣ್ಣ' ಅಂದಿದ್ದ, ಅಂಗೇ ಆಯ್ತಲ್ಲ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳ ಇತಿಹಾಸದಲ್ಲೇ ಈ ಬಾರಿಯ ಬಿಗ್ ಬಾಸ್ ಫಿನಾಲೆ ಕೇವಲ ಒಬ್ಬ ವಿಜೇತನನ್ನು ಆರಿಸುವ ವೇದಿಕೆಯಾಗಲಿಲ್ಲ, ಬದಲಿಗೆ ಅದು 'ಅಹಂಕಾರ' ಮತ್ತು 'ಅಸಲಿ ಪ್ರೀತಿ'ಯ ನಡುವಿನ ಯುದ್ಧವಾಗಿ ಮಾರ್ಪಟ್ಟಿತ್ತು. ಲೇಖಕಿ ಕುಸುಮ ಆಯರಹಳ್ಳಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಬರಹ, ಇಂದು ಕನ್ನಡಿಗರ ಮನದಾಳದ ದನಿಯಾಗಿ ಹೊರಹೊಮ್ಮಿದೆ.

ಲೇಖಕಿಯ ಅಸಲಿ ಬರಹ ಇಲ್ಲಿದೆ ನೋಡಿ..

ಷೋ ಅಂತ ಹೇಳಕ್ ಬರ್ದೇ ಇರೋನು, 'ಸೋವ್' ಅನ್ನೋನು, ಷೋ ಗೆದ್ಬಿಟ್ರೆ, ಇಂಗ್ಲಿಷ್ ಕಾನ್ವೆಂಟಲ್ ಓದ್ಕಂಡ್ ಬಂದಿರೋರ್ಗೆ ಬೇಜಾರಾಗಲ್ವ?

ಅಂತಾ ಸಾಹುಕಾರನ ಮಗಳ ಮುಂದೆ ಚೆಡ್ಡಿ ಇಕ್ಕಂಡು, ಕುರಿ‌ಮೇಯಿಸ್ಕಂಡು, ಕಾಡ್ ತಿರಿಕಂಡಿರೋರ್ ಮಗ ಗೆದ್ವುಟ್ರೆ ಬೇಜಾರಾಗಲ್ವ?

ಬೆಂಗಳೂರಂತಾ ಬೆಂಗ್ಳೂರಲ್ಲಿ 150 ಮನೆಯಾ ಬಾಡ್ಗೆಗ್ ಕೊಟ್ಟಿರೋರ್ ಮುಂದೆ, ಹಳ್ಳಿಯಿಂದ ನಾಕ್ ಬಟ್ಟೆ ತಕಂಡ್ ಬಂದು ಎಲ್ಲಪ್ಪಾ ಮನಿಕಳ್ಳಿ? ಎಲ್ಲಪ್ಪಾ ಉಣ್ಲಿ ತಿನ್ಲಿ ಅಂತ ಯೋಚ್ನೆ ಮಾಡ್ದೋರ್ ಗೆದ್ಬುಟ್ರೆ ಬೇಜಾರಾಗಲ್ವ?

ಡಿಜೈನರುಗಳ ಸ್ವಂತಕ್ ಮಡಿಕಂಡಿರೋರ್ ಮುಂದೆ, ಸಿಕ್ಕಿದ್ ನೇತಾಕಂಡು, ಎಂಗೆಂಗೋ ಕುಂತ್ಕಳೋ ಹೆಣ್ಣು , ಬನೀನಾಕಳೋ ಗಂಡು ಗೆದ್ ಬುಟ್ರೆ ಬೇಜಾರಾಗಲ್ವ?

ಸುದ್ವಾಗ್ ಸ್ವಚ್ಚವಾಗ್ ಎಂತೆಂತಾ ಪದಬಳಕೆ ಮಾಡಿ ಮಾತಾಡೋರ್ ಮುಂದೆ ಊರ್ ಬಾಸೆಲಿ ಮೀನು, ದ್ವಾಸೆ, ಚಿಗವ್ವ, ದೊಡ್ಡವ್ವ‌ ಅನ್ಕಂಡ್ ಮಾತಾಡೋರ್ ಗೆದ್ಬುಟ್ರೆ ಬೇಜಾರಾಗಲ್ವ?

ಇವೆಲ್ಲಾ ಎಲ್ಲೆಲ್ಲಿಂದ್ಲೋ ಬಂದಿರೋ S ಕೆಟಗರಿ, ನನ್ ಉಗುರಿಗೂ ಸಮವಲ್ಲ ಅನ್ಕಂಡಿದ್ ಪುಟ್ ಜೀವ, K for kobbu ನ ಇಳಿಸಿ ಪಟ್ಟಕ್ಕೇರಿದ್ರೆ ಬೇಜಾರಾಗಲ್ವ?

ನೂರ್ ಪಿಚ್ಚರ್ ಮಾಡಿರೋ ಮಾರಾಣಿ ಮುಂದೆ, ಯಾವ್ದೋ ಮೂಲೆ ಯೂಟ್ಯೂಟರಂತೆ‌ ಅವರು ಗೆದ್ಬಿಟ್ರೆ ಬೇಜಾರಾಗಲ್ವ?

ತಲೆ ಮೇಲ್ ಇಮೇಜ್ ಕಿರೀಟ ಮಡಿಕಂಡೇ ಇರೋರ್ ಮುಂದೆ, ಯಾವ ಭಾರ ಇಲ್ದೆ ಬಂದು ಹೊರೋಕಾಗದ ಪ್ರೀತಿ ಮೂಟೆ ಹೊತ್ಕೊಂಡೋದ್ರೆ ಬೇಜಾರಾಗಲ್ವ?

ಒಳಗೆ ಕ್ಷಮೆ ಗಿಮೆ ಕೇಳಿ ಡ್ರಾಮಾ ಮಾಡಿದ್ರೂ, ಆ ಡ್ರಾಮಾ ಕೂಡ work out ಆಗದೇ ಓದ್ರೆ ಎಲ್ಲೋ ಒಂದ್ ಕಡೆ ಅಲ್ಲಾ , ಎಲ್ಲಾ ಕಡೆ ಬೇಜಾರಾಗಲ್ವ?

ಮುಖಕ್ಕೆ ಚೆಂದ ಕಾಣ್ಲಿಕ್ಕೆ ಮೇಕಪ್ ಹಾಕ್ತೀರ. ಮನಸು ಗಲೀಜಾದ್ರೆ ಅದಕೆಂತ ಮಾಡ್ತೀರ? ಅಂತ ಕೇಳಿದ ರಕ್ಷಿತಾ ಮಾತಿನ ಸತ್ಯಕ್ಕೆ ಜನ ಈಪಾಟಿ ವೋಟಾಕ್ಬಿಟ್ರೆ ಬೇಜಾರಾಗಲ್ವ?

ಶ್ರೀಮಂತಿಕೆ+ ಅಹಂಕಾರ+ ನಾಟಕ+ ಪಾಳೇಗಾರಿಕೆ ಮುಂದೆ ಬಡತನ, ನಿರಹಂಕಾರ, ಸಹಜತೆ ಗೆದ್ಬುಟ್ರೆ ಬೇಜಾರಾಗಲ್ವ?

ಗೆದ್ ಮೇಲೂ ಜನ ಈಪಾಟಿ ಪ್ರೀತಿ ಮಾಡದ್ರೆ ಬೇಜಾರಾಗಲ್ವ? EGO ಅನ್ನತಕ್ಕಂತದು ಹುಚ್ಚಾಗಿ ಪರಿವರ್ತನೆ ಆಗಲ್ವ? P for ಪಾಳೇಗಾರಿಗೆ ರಕ್ತ ಬಿಸಿಯಾಗಲ್ವ?

ಪಾಪ ಅವರಿಬ್ರೂ...

ಆ ಗಂಡು: 'ಇಷ್ಟು ಖ್ಯಾತಿ, ಪ್ರೀತಿ ಈ ಭಾರನೆಲ್ಲ ಹೊರದೆಂಗೆ ಅನಿಸ್ತದೆ ಕಣಣ್ಣ. ಭಯ ಆಯ್ತದೆ. ಕಡೇಗಂಟ ಉಳಿಸ್ಕಂಡೊಂಟೋದ್ರೆ ಸಾಕಪಾ ಅನಿಸ್ತದೆ' ಅಂತಾ ಅದೆ.

ಆ ಹೆಣ್ಣು: 'ನಾನು ಕೂತ್ಕೊಳೋ ರೀತಿ ಸರಿ ಇಲ್ಲ. ಅದ್ಕೇ ಚಿಕ್ಕ ಬಟ್ಟೆ ಒಳಗೆ ಹಾಕಲಿಲ್ಲ. ನಾನು ಉದ್ದ ಬಟ್ಟೆ ಹಾಕದು ನಾಟಕ ಅಲ್ಲ. ಈಗ ಬೀಚಿಗೆ ಹೋದ್ರೆ ಚಿಕ್ಕ ಕೂಡ ಹಾಕ್ತೀನಿ. ಹಾಗೆ ಎಂತ ಇಲ್ಲ' ಅಂತ ಸೀದಾಸಾದಾ ಮಾತಾಡ್ತಾದೆ.

ಅವರಿಬ್ರೂ ಯಾರನ್ನೂ ದೂಷಿಸಿಲ್ಲ. ಯಾರ ಬಗ್ಗೆಯೂ ಕೆಟ್ಟ ಮಾತಾಡಿಲ್ಲ. ಆದರೆ, ಒಳಗಿದ್ದಾಗ

ಅವನು ಹೇಳಿದ್ದ: 'ಈ ಮೇಡಂ ಆಚೆಗೋದ್ಮೇಲೆ ಈ ಸೋವ್ವೇ ಸರಿ ಇಲ್ಲ ಅಂತದೆ ಸುದೀಪಣ್ಣ' ಅಂತ. ಅಂಗೇ ಆಯ್ತಲ್ಲ.

ಅವಳು ಹೇಳಿದ್ಲು: 'ನಿಮ್ಮನ್ನ ಈ ಮನೆಯಿಂದ ಆಚೆ ಕಳಿಸಿಯೇ ನಾನು ಆಚೆ ಹೋಗದು' ಅಂತ. ಅಂಗೇ ಆಯ್ತಲ್ಲ.

ಈ ಸಲ ನನ್ನನ್ನೂ ಸೇರಿ ಇಷ್ಟು ವರ್ಷ ನೋಡ್ದೇ ಇರೋರೆಲ್ಲ ಬಿಗ್ ಬಾಸ್ ನೋಡಿದ ಕಾರಣ ಇದೇ. ಏನ್ರೋ ಮಾಡ್ಕೋತೀರ ನೀವು ನಮ್ಮನ್ನು S ಕೆಟಗರಿಯೋರೆ? ಅಂದವರ K ಇಳಿಸಬೇಕಲ್ಲಾಂತ ನೋಡಿದ್ರು ಜನ. ಅಕ್ಕ ಸಂಪತ್ತಿಗೆ ಸವಾಲ್ ಮಂಜುಳ ಪಾತ್ರ ಮಾಡ್ತು. ಜನ ಅವನಿಗೆ ರಾಜ್ಕುಮಾರ್ ಪಾತ್ರ ಕೊಟ್ಟು ಚಚ್ಚು ಅಂದ್ರು. ಫಲಿತಾಂಶವೇನೋ ಹಾಗೇ ಬಂದಿದೆ. ನೆಲಕ್ ಬಿದ್ರೂ ಜಡೆ ಮಣ್ಣಾಗಿಲ್ಲ ಅಂತಾ ಇದೆ ಅಕ್ಕ.

ಈ P ಕೆಟಗರಿಯೇ ಹಾಗೆ, ಪಾಳೇಗಾರಿಕೆ ರಕ್ತದಲ್ಲಿರ್ತದೆ.

ಈ ಕೆಟಗರಿ ಏನಾದ್ರೂ ಅಪ್ಪಿ ತಪ್ಪಿ ಗೆದ್ದಿದ್ರೆ ಯಾವ ಚಿನ್ನದ ಸರಪಳೀಲಿ ಕಟ್ಟಾಕ್ಬೇಕಿತ್ತೋ ಏನು ಕತೆಯೋ.

ರಕ್ಷಿತಾ...ನೀನು ಕೂತ ಈ ಭಂಗಿ ನನಗಿಷ್ಟ ಕಣೇಮ. ಈ ಭಂಗಿಗೆ ಹೊಂದೋ ನಿನ್ನದೇ ಮಾತು: 'ಒಳ್ಳೆಯವರಿಗೆ ನಾನು ಒಲ್ಲೆಯವಳೇ, ರಾಕ್ಸಸಿಗೆ ನಾನು ರಾಕ್ಸಸಿನೇ ಆಗ್ತೀನಿ'

ನೀನು ಅಬ್ಬರಿಸಿದ್ದಕ್ಕೆ ನಮ್ಮ ಮರ್ಯಾದೆ ಉಳೀತು.

ನಿಮ್ಮಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಜನ ಗೆದ್ದರು.

S ಕೆಟಗರಿ ಗೆದ್ದಿತು.

ಲೇಖಕಿ - ಕುಸುಮ ಆಯರಹಳ್ಳಿ.