‘ಬಿಗ್‌ ಬಾಸ್‌ ಕನ್ನಡ ಸೀಸನ್‌-12’ರ ರನ್ನರ್‌ ಅಪ್‌ ಅಶ್ವಿನಿ ಗೌಡ, ಇದೀಗ ಕಿರುತೆರೆಗೆ ಮರಳಲು ಸಜ್ಜಾಗಿದ್ದಾರೆ. ಐದು ವರ್ಷಗಳ ನಂತರ ಸ್ಟಾರ್‌ ಸುವರ್ಣ ವಾಹಿನಿಯ ಹೊಸ ಧಾರಾವಾಹಿಯಲ್ಲಿ ಪವರ್‌ಫುಲ್ ಪಾತ್ರದ ಮೂಲಕ ಅವರು ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದು, ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಬೆಂಗಳೂರು (ಆ.14): ‘ಬಿಗ್‌ ಬಾಸ್‌ ಕನ್ನಡ ಸೀಸನ್‌-12’ರಲ್ಲಿ ರನ್ನರ್‌ ಅಪ್‌ ಪಟ್ಟ ಗೆದ್ದು, ತಮ್ಮ ರಗಡ್‌ ಮತ್ತು ಬೋಲ್ಡ್‌ ಆಟದ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಅಶ್ವಿನಿ ಗೌಡ ಇದೀಗ ಕಿರುತೆರೆಗೆ ಅದ್ಧೂರಿ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಬಿಗ್‌ ಬಾಸ್‌ ಶೋ ಮುಕ್ತಾಯದ ನಂತರ ಸಾರ್ವಜನಿಕ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಅವರು, ಇದೀಗ ಬಹಳ ದಿನಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.

ಬಿಗ್‌ ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೂ ಅಶ್ವಿನಿ ಗೌಡ ಪ್ರತಿಯೊಂದು ವಿಚಾರದಲ್ಲೂ ತಮ್ಮದೇ ಆದ ಸ್ಪಷ್ಟ ನಿಲುವು ತೆಗೆದುಕೊಂಡು ಹೈಲೈಟ್ ಆಗಿದ್ದರು. ಶೋನಲ್ಲಿ ಸಹ-ಸ್ಪರ್ಧಿ ಹಾಗೂ ಹಾಸ್ಯನಟ ಗಿಲ್ಲಿ ನಟರಾಜ್‌ ಅವರೊಂದಿಗಿನ ಜಿದ್ದಾಜಿದ್ದಿ, ಮ್ಯುಟೆಂಟ್‌ ರಘು ಜೊತೆಗಿನ ಭರ್ಜರಿ ಡ್ಯಾನ್ಸ್‌, ಮತ್ತು ರಕ್ಷಿತಾ ಶೆಟ್ಟಿ ಅವರೊಂದಿಗಿನ ಕಿರಿಕ್‌ಗಳ ನಡುವೆಯೂ ಅವರು 'ಸ್ಟಾಂಡ್‌ಔಟ್‌' ಸ್ಪರ್ಧಿಯಾಗಿ ಕಂಟೆಂಟ್ ನೀಡಿದ್ದರು. ಅಂತಿಮವಾಗಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.

ಲಾಯರ್ ಪಾತ್ರದ ಮೂಲಕ ಧಮಾಕ!

ರಿಯಾಲಿಟಿ ಶೋ ಮುಗಿದ ಬೆನ್ನಲ್ಲೇ ಕಲರ್ಸ್‌ ಕನ್ನಡ ವಾಹಿನಿಯ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೋರ್ಟ್‌ ಅಂಗಳದಲ್ಲಿ ಲಾಯರ್‌ ಭಾರ್ಗವಿ ಪಾತ್ರಕ್ಕೆ ಸವಾಲು ಎಸೆಯುವ ಖಡಕ್‌ ಲಾಯರ್ ಪಾತ್ರದಲ್ಲಿ ನಟಿಸಿ, ತಮ್ಮ ಅಭಿನಯದ ಛಾಪು ಮೂಡಿಸಿದ್ದರು.

ಅಶ್ವಿನಿ ಗೌಡ ಅವರು 2021ರಲ್ಲಿ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಟ್ ಧಾರಾವಾಹಿ ‘ರಾಧೆ ಶ್ಯಾಮ’ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತನ್ವಿ ರಾವ್ ಹಾಗೂ ಅನೂಪ್‌ ಗೌಡ ಮುಖ್ಯಭೂಮಿಕೆಯಲ್ಲಿದ್ದ ಈ ಧಾರಾವಾಹಿಯಲ್ಲಿ, ನಾಯಕನ ತಾಯಿಯಾಗಿ, ಖಡಕ್‌ ಅತ್ತೆಯಾಗು ಹಳ್ಳಿ ಸಂಪ್ರದಾಯ-ಸಂಸ್ಕೃತಿಗೆ ಒತ್ತು ನೀಡುವ ಪಾತ್ರ ಮಾಡಿದ್ದರು.

ಇದೀಗ ಬರೋಬ್ಬರಿ ಐದು ವರ್ಷಗಳ ನಂತರ ಮತ್ತೆ ಅದೇ ಸ್ಟಾರ್‌ ಸುವರ್ಣ ವಾಹಿನಿಗೆ ಮರಳುತ್ತಿದ್ದು, ಹೊಸ ಧಾರಾವಾಹಿಯಲ್ಲಿ ಮತ್ತೊಮ್ಮೆ ಪವರ್‌ಫುಲ್ ಹಾಗೂ ಖಡಕ್ ಲುಕ್‌ನಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಪ್ರಾಜೆಕ್ಟ್ ಕುರಿತು ಕಿರುತೆರೆ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಧಾರಾವಾಹಿ ಹೆಸರು ಹಾಗೂ ಉಳಿದ ವಿವರಗಳ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ.