Choreographer Bhushan: ತಮಿಳುನಾಡಿನ ರಿಯಾಲಿಟಿ ಶೋ ಒಂದರಲ್ಲಿ ಸ್ಯಾಂಡಲ್‌ವುಡ್‌ನ ಭೂಷಣ್ ಮಾಸ್ಟರ್ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿದ್ದಂತೆ ಇಡೀ ವೇದಿಕೆಯೇ ರೋಮಾಂಚನಗೊಂಡಿದೆ! ಅಷ್ಟಕ್ಕೂ ತಮಿಳು ಮಂದಿಯೇ ಎದ್ದುನಿಂತು ಚಪ್ಪಾಳೆ ತಟ್ಟುವಂತೆ ಅವರು ಹೆಜ್ಜೆ ಹಾಕಿದ ಆ ಸ್ಪೆಷಲ್ ಹಾಡು ಯಾವುದು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.
ಕನ್ನಡದ ಜನಪ್ರಿಯ ನೃತ್ಯ ನಿರ್ದೇಶಕ (ಕೊರಿಯೋಗ್ರಾಫರ್) ಭೂಷಣ್ ಮಾಸ್ಟರ್, ತಮಿಳು ಕಿರುತೆರೆಯ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ‘ಮಾನಾಡ ಮಯಿಲಾಡ’ (Maanada Mayilada) ವೇದಿಕೆಯಲ್ಲಿ ಕನ್ನಡದ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕುವ ಮೂಲಕ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ " ರಾಜ್ " ದಿ ಶೋಮ್ಯಾನ್ ಸಿನಿಮಾದ "ಕುಚ್ ಕುಚ್ ಅಂದಿದೆ ಈ ಹೃದಯ..." ಎಂಬ ಎವರ್‌ಗ್ರೀನ್ ರೊಮ್ಯಾಂಟಿಕ್ ಗೀತೆಗೆ ಭೂಷಣ್ ಮಾಸ್ಟರ್ ಸಖತ್ ಆಗಿ ಡ್ಯಾನ್ಸ್ ಮಾಡಿ ವೇದಿಕೆಯನ್ನು ರಂಗಾಗಿಸಿದ್ದಾರೆ.
ವೇದಿಕೆಯಲ್ಲಿ ಭೂಷಣ್ ಮಾಸ್ಟರ್ ಹೆಜ್ಜೆ ಹಾಕುತ್ತಿದ್ದಂತೆ ಇಡೀ ಸಭಾಂಗಣವೇ ಹುಚ್ಚೆದ್ದು ಕುಣಿದಿದೆ. ಅವರ ಅದ್ಭುತ ನೃತ್ಯ ಮುಗಿಯುತ್ತಿದ್ದಂತೆಯೇ ತೀರ್ಪುಗಾರರ ಪೀಠದಲ್ಲಿದ್ದ ಖ್ಯಾತ ನಟಿ ಖುಷ್ಬು, ಟಾಪ್ ಸ್ಟಾರ್ ಪ್ರಶಾಂತ್ ಮತ್ತು ಪ್ರಸಿದ್ಧ ಕೊರಿಯೋಗ್ರಾಫರ್ ಕಲಾ ಮಾಸ್ಟರ್ ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಬೆರಗು ವ್ಯಕ್ತಪಡಿಸಿದ್ದಾರೆ.
ಭೂಷಣ್ ಮಾಸ್ಟರ್ ಎನರ್ಜಿ ಹಾಗೂ ಎಕ್ಸ್‌ಪ್ರೆಶನ್ಸ್ ನೋಡಿದ ತಕ್ಷಣ ನಟಿ ಖುಷ್ಬು ಸುಂದರ್, "ಅನ್‌ಇಮ್ಯಾಜಿನೇಬಲ್... (Unimaginable - ಊಹಿಸಲೂ ಅಸಾಧ್ಯ)" ಎಂದು ಉದ್ಗರಿಸಿದರು. ಹಾಗೆಯೇ ನಟ ಪ್ರಶಾಂತ್, "ನಿಜ ಹೇಳಬೇಕೆಂದರೆ, 'ಮಾನಾಡ ಮಯಿಲಾಡ' ಸೀಸನ್ 1 ರಿಂದ ಸೀಸನ್ 8 ರವರೆಗೆ ನಾವು ನೋಡಿರುವ ಎಲ್ಲಾ ನೃತ್ಯಗಳ ಪೈಕಿ, ಇಂದು ನೀವು ನೀಡಿದ ಈ ಪರ್ಫಾರ್ಮೆನ್ಸ್ ಇಡೀ ಶೋ ಇತಿಹಾಸದಲ್ಲೇ 'ದ ಬೆಸ್ಟ್ ಪರ್ಫಾರ್ಮೆನ್ಸ್' (The Best Performance)!" ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ದಕ್ಷಿಣ ಭಾರತದ ಲೆಜೆಂಡರಿ ನೃತ್ಯ ನಿರ್ದೇಶಕಿ ಕಲಾ ಮಾಸ್ಟರ್ ಕೂಡ ಭೂಷಣ್ ಅವರ ಟ್ಯಾಲೆಂಟ್‌ಗೆ ಶರಣಾಗಿದ್ದು, "ಭೂಷಣ್... ನೀವು ನಿಜಕ್ಕೂ ಎಕ್ಸ್‌ಟ್ರಾಆರ್ಡಿನರಿ ಡ್ಯಾನ್ಸರ್! ಎಕ್ಸ್‌ಟ್ರಾಆರ್ಡಿನರಿ ಡ್ಯಾನ್ಸರ್! (Extraordinary dancer)" ಎಂದು ಎರಡು ಬಾರಿ ಪುನರುಚ್ಚರಿಸಿದ್ದಾರೆ.
ತಮಿಳು ಚಿತ್ರರಂಗದ ಈ ದಿಗ್ಗಜ ತೀರ್ಪುಗಾರರಿಂದ ಕನ್ನಡದ ನೃತ್ಯ ನಿರ್ದೇಶಕನಿಗೆ ಇಂತಹ ಅಪ್ರತಿಮ ಪ್ರಶಂಸೆ ಸಿಕ್ಕಿರುವುದು ಇಡೀ ಕರುನಾಡಿಗೆ ಹೆಮ್ಮೆಯ ವಿಷಯವಾಗಿದ್ದು, ಸದ್ಯ ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ.
ಸ್ವತಃ ಭೂಷಣ್ ಮಾಸ್ಟರ್ ಈ ಸ್ಪೆಷಲ್ ಡ್ಯಾನ್ಸ್ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ, “ಹೆಮ್ಮೆಯ ಕನ್ನಡಿಗ, ತಮಿಳು ರಿಯಾಲಿಟಿ ಶೋನಲ್ಲಿ ಕನ್ನಡದ ಕಂಪು” ಎಂದು ಕ್ಯಾಪ್ಶನ್ ಬರೆದುಕೊಂಡು ಸಂಭ್ರಮಿಸಿದ್ದಾರೆ. ನೆರೆರಾಜ್ಯದ ವೇದಿಕೆಯಲ್ಲೂ ಕನ್ನಡದ ಜನಪ್ರಿಯ ಹಾಡಿಗೆ ನರ್ತಿಸಿ, ಕನ್ನಡದ ಕಂಪನ್ನು ಪಸರಿಸಿದ ಅವರ ಈ ನಡೆ ಕನ್ನಡಿಗರ ಮನಗೆದ್ದಿದೆ.
ಸ್ಯಾಂಡಲ್‌ವುಡ್‌ನ ಸ್ಟಾರ್ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್
ಕನ್ನಡ ಚಿತ್ರರಂಗದ ಇಂದಿನ ಅತ್ಯಂತ ಬೇಡಿಕೆಯ ಹಾಗೂ ಯಶಸ್ವಿ ನೃತ್ಯ ನಿರ್ದೇಶಕರಲ್ಲಿ ಭೂಷಣ್ ಮಾಸ್ಟರ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇಡೀ ಕರ್ನಾಟಕವೇ ಹುಚ್ಚೆದ್ದು ಕುಣಿದ ‘ರ‍್ಯಾಂಬೊ 2’ ಸಿನಿಮಾದ ‘ಚುಟು ಚುಟು ಅಂತೈತಿ...’ ಹಾಗೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ...’ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಹಾಡುಗಳಿಗೆ ಮ್ಯಾಜಿಕಲ್ ಸ್ಟೆಪ್ಸ್ ಹಾಕಿಸಿದ ಹೆಗ್ಗಳಿಕೆ ಇವರದ್ದು.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ‘ನಟಸಾರ್ವಭೌಮ’ ಹಾಗೂ ರಿಷಬ್ ಶೆಟ್ಟಿ ನಟನೆಯ ‘ಬೆಲ್ ಬಾಟಂ’ ಒಳಗೊಂಡಂತೆ ಬರೋಬ್ಬರಿ 50ಕ್ಕೂ ಹೆಚ್ಚು ಸಿನಿಮಾಗಳಿಗೆ ಭೂಷಣ್ ಮಾಸ್ಟರ್ ಅದ್ಭುತವಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ.
ಕೇವಲ ತೆರೆಯ ಹಿಂದೆ ಕೊರಿಯೋಗ್ರಾಫರ್ ಆಗಿ ಸ್ಟಾರ್ ನಟರಿಗೆ ನೃತ್ಯ ಹೇಳಿಕೊಡುವುದಷ್ಟೇ ಅಲ್ಲದೆ, ‘ರಾಜ ರಾಣಿ ರೋರರ್ ರಾಕೆಟ್’ ಚಿತ್ರದಲ್ಲಿ ನಾಯಕ ನಟನಾಗಿಯೂ (ಹೀರೋ) ಬಣ್ಣಹಚ್ಚುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.



