ಖ್ಯಾತ ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದಾರೆ. ಅದ್ದೂರಿಯಾಗಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಆಪ್ತರು, ಕುಟುಂಬಸ್ಥರು ಭಾಗವಹಿಸಿದ್ದರು. ನವೆಂಬರ್ 2025ರಲ್ಲಿ ಡೆಲಿವರಿ ನಿರೀಕ್ಷಿಸಲಾಗಿದೆ.
ಬೆಂಗಳೂರು (ಆ.1): ಖ್ಯಾತ ಕನ್ನಡ ನಟಿ ಭಾವನಾ ರಾಮಣ್ಣ ಅವರು ಐವಿಎಫ್ (IVF) ಚಿಕಿತ್ಸೆಯ ಮೂಲಕ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ, ಅವರ ಸೀಮಂತ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಅಭಿಮಾನಿಗಳು ಮತ್ತು ಸ್ನೇಹಿತರು ಶುಭ ಹಾರೈಸಿದ್ದಾರೆ. ಭಾವನಾ ಅವರ ಗರ್ಭಧಾರಣೆಯ ಸುದ್ದಿ ಈ ಹಿಂದೆ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಮದುವೆಯಾಗದೇ ಐವಿಎಫ್ ಮೂಲಕ ತಾಯಿಯಾಗುವ ಅವರ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅವರ ಈ ಧೈರ್ಯಶಾಲಿ ನಿರ್ಧಾರವನ್ನು ಅನೇಕರು ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ಭಾವನಾ ರಾಮಣ್ಣ ಹಸಿರು ಮತ್ತು ಗುಲಾಬಿ ಬಣ್ಣದ ರೇಷ್ಮೆ ಸೀರೆಯಲ್ಲಿ ಸೀಮಂತದ ಸಂಭ್ರಮದಲ್ಲಿದ್ದಾರೆ. ಅವರ ಮುಖದಲ್ಲಿ ತಾಯ್ತನದ ಹೊಳಪು ಕಾಣಿಸುತ್ತಿದ್ದು, ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಭಾಗವಹಿಸಿದ್ದರು. ಈ ಫೋಟೋವನ್ನು ಅವರ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದು, ಸದ್ಯ ಇದು ಎಲ್ಲೆಡೆ ವೈರಲ್ ಆಗಿದೆ.
ಭಾವನಾ ರಾಮಣ್ಣ ಅವರಿಗೆ ಈಗಾಗಲೇ 45 ವರ್ಷ ವಯಸ್ಸಾಗಿದ್ದು, ಈ ವಯಸ್ಸಿನಲ್ಲಿ ತಾಯಿಯಾಗಲು ನಿರ್ಧರಿಸಿದ ಅವರ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಐವಿಎಫ್ ಚಿಕಿತ್ಸೆ ಮೂಲಕ ಗರ್ಭಿಣಿಯಾಗಿರುವುದರಿಂದ, ಇಬ್ಬರು ಮಕ್ಕಳನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ವೈದ್ಯಕೀಯ ವರದಿಗಳ ಪ್ರಕಾರ, ಅವರ ಡೆಲಿವರಿ ದಿನಾಂಕವನ್ನು ನವೆಂಬರ್ 2025ರ ಸುಮಾರಿಗೆ ನಿಗದಿಪಡಿಸಲಾಗಿದೆ.
ಭಾವನಾ ರಾಮಣ್ಣ ಅವರು ಕನ್ನಡ ಚಿತ್ರರಂಗದ ಜನಪ್ರಿಯ ನಟಿಯಾಗಿದ್ದು, 'ಶಾಂತಿ', 'ಚಂದ್ರಮುಖಿ ಪ್ರಾಣಸಖಿ', 'ಇಂತಿ ನಿನ್ನ ಪ್ರೀತಿಯ'ಯಂತಹ ಹಲವು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮದುವೆಯ ಕುರಿತು ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಮಕ್ಕಳಾದ ಬಳಿಕ ಮುಂದೆ ತಮ್ಮ ಜೀವನಕ್ಕೆ ಹೊಂದಿಕೊಳ್ಳುವ ವ್ಯಕ್ತಿ ಸಿಕ್ಕರೆ ಮದುವೆ ಆಗಲೂ ಬಹುದು ಎಂದು ಭಾವನಾ ಹೇಳಿದ್ದರು. ಆದರೆ, ಐವಿಎಫ್ ಮೂಲಕ ತಾಯ್ತನದ ಕನಸು ಕಂಡಿರುವುದು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಪ್ರಯಾಣವು ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದೆ.
