'ಕಲರ್ಸ್ ಕನ್ನಡ' ವಾಹಿನಿಯ ತನ್ನ 12ನೇ ವರ್ಷದ 'ಅನುಬಂಧ ಅವಾರ್ಡ್ಸ್' ಸಂಭ್ರಮ ಶುರುವಾಗಿದೆ. ಸತತ ಮೂರು ದಿನಗಳ ಕಾಲ ಜನವರಿ 24, 25 ಮತ್ತು 26ರಂದು ಸಂಜೆ 7ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಬಾರಿಯ ಅವಾರ್ಡ್ಸ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ?
ನಟ ಮುಖ್ಯಮಂತ್ರಿ ಚಂದ್ರು ಹಾಗೂ ನಟಿ ಸುಷ್ಮಾ ರಾವ್‌ಗೆ ವಿಶೇಷ ಗೌರವ ನೀಡಲಾಗಿದೆ. ಹೌದು, 'ಭಾಗ್ಯಲಕ್ಷ್ಮೀ' ಧಾರಾವಾಹಿಯ ಇಬ್ಬರು ಪ್ರಮುಖ ಕಲಾವಿದರು ನಟನೆ ವಿಚಾರದಲ್ಲಿ ಈ ಬಾರಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದರೆ, 'ಭಾಗ್ಯ' ಪಾತ್ರಧಾರಿ ಸುಷ್ಮಾ ರಾವ್ ಅವರು ಕಿರುತೆರೆಯಲ್ಲಿ 25 ವರ್ಷಗಳ ಪೂರೈಸಿದ್ದಾರೆ. ಈ ಸಾಧನೆಯನ್ನು ಗುರುತಿಸಿ ಇಬ್ಬರಿಗೂ ಗೌರವ ಸಲ್ಲಿಸಲಾಯಿತು.
ರವಿಚಂದ್ರನ್ ಸಮ್ಮುಖದಲ್ಲಿ ಸಾವಿರದ ಸಂಭ್ರಮ
'ರಾಮಾಚಾರಿ' ಧಾರಾವಾಹಿ 1000 ಸಂಚಿಕೆಗಳನ್ನು ಪೂರೈಸಿದೆ. 'ಕ್ರೇಜಿಸ್ಟಾರ್' ವಿ. ರವಿಚಂದ್ರನ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬೆಳ್ಳಿತೆರೆ ಹಾಗೂ ಕಿರುತೆರೆಯ ರಾಮಾಚಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
'ಸು ಫ್ರಂ ಸೋ' ಚಿತ್ರತಂಡಕ್ಕೆ ವಿಶೇಷ ಪ್ರಶಸ್ತಿ
ಕಳೆದ ವರ್ಷ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ 'ಸು ಫ್ರಂ ಸೋ' ಸಿನಿಮಾ ತಂಡಕ್ಕೆ ಮನ್ನಣೆ ಸಿಕ್ಕಿದೆ. ಈ ಚಿತ್ರದ ನಿರ್ದೇಶಕ ಜೆಪಿ ತೂಮಿನಾಡ್, ಕಲಾವಿದರಾದ ಶನೀಲ್ ಗೌತಮ್, ಪುಷ್ಪರಾಜ್ ಬೋಳಾರ್ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪುನೀತ್ ಹೆಸರಿನ 'ಕಲರ್ಸ್ ಕನ್ನಡಿಗ' ಪ್ರಶಸ್ತಿ ಪ್ರದಾನ
ಈ ಬಾರಿಯೂ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ 'ಕಲರ್ಸ್ ಕನ್ನಡಿಗ' ಪ್ರಶಸ್ತಿಯನ್ನು ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ಬಾಗಲಕೋಟೆಯ ಗಟ್ಟಿಗಿತ್ತಿ ಗುರಮ್ಮ ಸಂಕಿನಮಠಗೆ ನೀಡಲಾಗಿದೆ.
ರಾಜ್ ಬಿ. ಶೆಟ್ಟಿಗೆ ಅಮ್ಮನ ಸರ್ಪ್ರೈಸ್; ರೇಖಾ ಕಂಬ್ಯಾಕ್ ಕೌತುಕ
ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿಗೆ ತಾಯಿಯನ್ನು ವೇದಿಕೆಗೆ ಕರೆಸುವ ಮೂಲಕ ಸರ್ಪ್ರೈಸ್ ನೀಡಲಾಗಿದೆ. 'ಹುಚ್ಚ' ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಕನ್ನಡದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುವ ಬಗ್ಗೆ ಮಾತನಾಡಿದ್ದಾರೆ.
ನಾ. ಸೋಮೇಶ್ವರ್ ಪ್ರಶ್ನೆಗೆ ಥಟ್ ಅಂತ ಹೇಳಿದ ಕಲಾವಿದರು
ʻಥಟ್ ಅಂತ ಹೇಳಿʼ ಕಾರ್ಯಕ್ರಮ ಖ್ಯಾತಿಯ ಡಾ. ನಾ. ಸೋಮೇಶ್ವರ್ ಅವರು ಕಲಾವಿದರಿಗೆ ಫನ್ನಿಯಾಗಿಯೇ ಪ್ರಶ್ನೆ ಕೇಳಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ರಾಜಕೀಯ ಭಾಷಣ ಬದಿಗಿಟ್ಟು, ಅನುಬಂಧ ವೇದಿಕೆ ಮೇಲೆ ಕಾಮಿಡಿ ಕಚಗುಳಿ ಇಟ್ಟರು.
ನಿರ್ದೇಶಕ ತರುಣ್ ಸುಧೀರ್- ಸೋನಲ್ ಮೊಂತೇರೋ, ಅನು ಪ್ರಭಾಕರ್- ರಘು ಮುಖರ್ಜಿ ಕೂಡ ಭಾಗವಹಿಸಿದ್ದರು. ಒಟ್ಟಾರೆಯಾಗಿ 37 ಪ್ರಶಸ್ತಿಗಳು, 15ಕ್ಕೂ ಹೆಚ್ಚು ಡ್ಯಾನ್ಸ್ ಕಾರ್ಯಕ್ರಮ ಇತ್ತು. ಗಿಚ್ಚಿ ಗಿಲಿಗಿಲಿ ತಂಡದ ಕಾಮಿಡಿ ಸ್ಕಿಟ್‌ಗಳು ಹಾಸ್ಯದಿಂದ ಕೂಡಿತ್ತು.


