ಮರೆಯಲಾಗದ ಕರುಳಬಳ್ಳಿಯ ಅನುಬಂಧ: ತೊರೆದು ಹೋದ ಹೆತ್ತಮ್ಮನ ಹುಡುಕಿ ಭಾರತಕ್ಕೆ ಬಂದ ಸ್ಪೇನಿಶ್ ಯುವತಿ
20 ವರ್ಷಗಳ ಹಿಂದೆ ಒಡಿಶಾದಲ್ಲಿ ತೊರೆದುಹೋದ ತನ್ನ ಜೈವಿಕ ತಾಯಿಯನ್ನು ಹುಡುಕಲು ಸ್ಪೇನಿಶ್ ಯುವತಿ ಭಾರತಕ್ಕೆ ಬಂದಿದ್ದಾಳೆ. ಸ್ಪೇನಿಶ್ ದಂಪತಿಗಳಿಂದ ದತ್ತು ಪಡೆಯಲ್ಪಟ್ಟ ನಂತರ, ಆಕೆ ತನ್ನ ಮೂಲವನ್ನು ಅರಸಿ ಭುವನೇಶ್ವರಕ್ಕೆ ಬಂದಿದ್ದಾಳೆ.
ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿಯೋ, ಸಾಕಲಾಗದ ಕಾರಣಕ್ಕೋ ಅಥವಾ ಇನ್ನೇನೋ ಕಾರಣಗಳಿಗೋ ಕೆಲವರು ತಾವು ಹೆತ್ತ ಮಕ್ಕಳನ್ನೇ ತೊರೆದು ಹೋಗುತ್ತಾರೆ. ಕೆಲವರು ಬೀದಿ ಬದಿ ಎಸೆದು ಹೋದರೆ ಮತ್ತೆ ಕೆಲವರು ಇನ್ನೆಲ್ಲೋ ಬಿಟ್ಟು ಹೋಗುತ್ತಾರೆ. ಅದೃಷ್ಟವಿದ್ದರೆ ಇಂತಹ ಮಕ್ಕಳು ಇನ್ಯಾರೋ ಪುಣ್ಯವಂತರ ಕೈಗೆ ಸಿಕ್ಕಿ ಸುಂದರ ಬದುಕು ರೂಪಿಸಿಕೊಂಡರೆ ಇನ್ಯಾರೋ ಅನಾಥರೆಂಬ ಕೊರಗಿನಲ್ಲೇ ಹೀಗೆ ದಿನ ದೂಡುತ್ತಾರೆ. ಇಂತಹ ಅನೇಕ ಅನಾಥ ಮಕ್ಕಳನ್ನು ವಿದೇಶಿ ಪ್ರಜೆಗಳು/ದಂಪತಿಗಳು ದತ್ತು ಪಡೆದು ಅವರಿಗೆ ಸುಂದರ ಜೀವನವನ್ನು ರೂಪಿಸಿಕೊಟ್ಟಂತಹ ಹಲವು ನಿದರ್ಶನಗಳಿವೆ. ಆದರೆ ಹೀಗೆ ಎಳೆಯ ವಯಸ್ಸಿನಲ್ಲೇ ದತ್ತು ಪಡೆಯಲ್ಪಟ್ಟು ದೇಶ ಬಿಟ್ಟು ಹೋದ ಮೇಲೂ ಸುಂದರವಾದ ಬದುಕು ಸಿಕ್ಕ ಮೇಲೂ ಅನೇಕರಿಗೆ ತಮ್ಮ ತಾಯಿ ಯಾರಿರಬಹುದು, ಎಲ್ಲಿರಬಹುದು? ಆಕೆಯನ್ನೊಮ್ಮೆ ನೋಡುವ ಹಾಗಿದ್ದರೆ ಎಂಬ ಆಸೆ ಕೊರಗು ಎರಡೂ ಕಾಡುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಅನೇಕರು ಎಷ್ಟು ವರ್ಷಗಳ ನಂತರ ತಮ್ಮ ಮೂಲವನ್ನು ಅರಸಿ ತಾಯಿಯನ್ನು ಪೋಷಕರನ್ನು ಹುಡುಕುತ್ತಾ ಭಾರತಕ್ಕೆ ಬಂದ ಹಲವು ಘಟನೆಗಳು ನಡೆದಿದೆ. ಅದೇ ರೀತಿ ಈಗ ಮತ್ತೊಬ್ಬ ಹೆಣ್ಣು ಮಗಳೊಬ್ಬಳು ಅಮ್ಮ ಅರಸಿ ಭಾರತದ ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರಕ್ಕೆ ಆಗಮಿಸಿದ್ದಾಳೆ.
ಅಂದಹಾಗೆ ಅಮ್ಮನ ಅರಸಿ ಭಾರತಕ್ಕೆ ಬಂದ ಯುವತಿಯ ಹೆಸರು ಸ್ನೇಹಾ, 20 ವರ್ಷದ ಹಿಂದೆ ಈಕೆಯನ್ನು ತಾಯಿ ತೊರೆದು ಹೋಗಿದ್ದಳು. ಈಕೆಯನ್ನು ಸ್ಪೇನಿಶ್ ದಂಪತಿಯಾದ ಗೇಮಾ ವಿಡಲ್ ಹಾಗೂ ಜುವಾನ್ ಜೋಶ್ ಎಂಬುವವರು ದತ್ತು ಪಡೆದಿದ್ದರು. ಹೀಗಾಗಿ ಸ್ಪೇನಿಶ್ ಪ್ರಜೆಯಾದ ಯುವತಿ ಈಗ ತನ್ನ ಹಾಗೂ ತನ್ನ ಸಹೋದರನನ್ನು 20 ವರ್ಷದ ಹಿಂದೆ ತೊರೆದು ಹೋದ ಜೈವಿಕ ತಾಯಿಯನ್ನು ಅರಸಿ ವಾಪಸ್ ಬಂದಿದ್ದಾಳೆ. ಪ್ರಸ್ತುತ 21 ವರ್ಷದ ಸ್ನೇಹ ಸ್ವಲ್ಪ ಕಾಲ ತಾಯಿಯನ್ನು ಹುಡುಕಿ ಪ್ರಸ್ತುತ ಶಿಕ್ಷಣಕ್ಕೆ ಸಂಬಂಧಿಸಿದ ಜವಾಬ್ದಾರಿಗಳು ಇರುವುದರಿಂದ ಸಮಯವಿಲ್ಲದ ಕಾರಣ ಮತ್ತೆ ಇಂದು ಸ್ಪೇನ್‌ಗೆ ಹೋಗಲಿದ್ದಾರೆ.
ಅಲ್ಲಿನ ಮಕ್ಕಳ ಶಿಕ್ಷಣದ ಸಂಶೋಧಕರೊಬ್ಬರು ಸ್ನೇಹಾ ಮೂಲ ಬೇರುಗಳನ್ನು ಪತ್ತೆ ಹಚ್ಚಲು ಬಯಸಿದ್ದರು ಹೀಗಾಗಿ ಸ್ನೇಹ ತಮಗೆ ತಿಳಿದ ಅಲ್ಪ ಮಾಹಿತಿಯೊಂದಿಗೆ ಅಮ್ಮನನ್ನು ಹುಡುಕುತ್ತಾ ಭಾರತಕ್ಕೆ ಆಗಮಿಸಿದ್ದರು. ಈಕೆಯ ಸ್ಪೇನಿಶ ಪೋಷಕರಾದ ಗೇಮಾ ವಿಡಲ್ ಹಾಗೂ ಜುವಾನ್ ಜೋಶ್ ಅವರು ಸ್ನೇಹಾಗೆ ಈ ವಿಚಾರದಲ್ಲಿ ಬೆಂಬಲ ವ್ಯಕ್ತಪಡಿಸಿದ್ದು, ಅದರಲ್ಲೂ ತಾಯಿ ಗೇಮಾ ಆಕೆಯ ಜೊತೆ ಭಾರತಕ್ಕೆ ಆಗಮಿಸಿದ್ದರು. ಗೇಮಾ ಅವರು 2010ರಲ್ಲಿ ಸ್ನೇಹಾ ಹಾಗೂ ಆಕೆಯ ಸೋದರ ಸೋಮುವನ್ನು ಭುವನೇಶ್ವರದ ಅನಾಥಾಶ್ರಮದಿಂದ ದತ್ತು ಪಡೆದಿದ್ದರು. 2005ರಲ್ಲಿ ಸ್ನೇಹಾಳ ತಾಯಿ ಭಾನುಲತಾ ಈ ಮಕ್ಕಳನ್ನು ತೊರೆದ ನಂತರ ಈ ಮಕ್ಕಳು ಅನಾಥಾಶ್ರಮದಲ್ಲಿ ನೆಲೆ ಕಂಡು ಕೊಂಡಿದ್ದರು.
ಈ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಯುವತಿ ಸ್ನೇಹಾ, ನಾನು ಸ್ಪೇನ್‌ನಿಂದ ಭುವನೇಶ್ವರಕ್ಕೆ ಬಂದ ಒಂದೇ ಒಂದು ಉದ್ದೇಶವೆಂದರೆ ನನ್ನ ಜೈವಿಕ ಪೋಷಕರ ಪತ್ತೆಗಾಗಿ. ಅದರಲ್ಲೂ ವಿಶೇಷವಾಗಿ ನನ್ನ ತಾಯಿಯ ಪತ್ತೆಗಾಗಿ. ನಾನು ಆಕೆಯನ್ನು ಹುಡುಕಿ ಆಕೆಯನ್ನು ಭೇಟಿಯಾಗಬೇಕು, ಇದಕ್ಕಾಗಿ ನಾನು ಈ ಪ್ರಯಾಣ ಕಷ್ಟವೆನಿಸಿದರೂ ಸಂಪೂರ್ಣ ಸಿದ್ಧಳಾಗಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ನಿಮ್ಮನ್ನು ತೊರೆದು ಹೋಗಿದ್ದಕ್ಕಾಗಿ ಆಕೆಯನ್ನು ದೂಷಿಸುತ್ತೀರಾ ಎಂದು ವರದಿಗಾರರು ಆಕೆಯನ್ನು ಕೇಳಿದಾಗ ಸ್ನೇಹಾ ಮಾತನಾಡದೇ ಮೌನವಾಗಿದ್ದರು. ಅಮ್ಮ ತೊರೆದು ಹೋದ ವೇಳೆ ಸ್ನೇಹಾಗೆ ಕೇವಲ ಒಂದು ವರ್ಷ ಕಳೆದಿದ್ದರೆ, ಆಕೆಯ ಸಹೋದರ ಸೋಮು ಹುಟ್ಟಿ ಕೆಲ ತಿಂಗಳಾಗಿತ್ತಷ್ಟೇ ಎಂದು ತಿಳಿದು ಬಂದಿದೆ.
ಕಳೆದ ಡಿಸೆಂಬರ್ 19ರಂದು ಸ್ನೇಹಾ ಭುವನೇಶ್ವರಕ್ಕೆ ಆಗಮಿಸಿದ್ದರು, ಸ್ಪೇನ್‌ನ ಝರಗೋಜಾ ನಗರದಲ್ಲಿ ಯೋಗ ಶಿಕ್ಷಕಿಯಾಗಿರುವ ತಾಯಿ ಗೇಮಾ ಸ್ನೇಹಾಗೆ ಭಾರತಕ್ಕೆ ಬರಲು ಸಾಥ್ ನೀಡಿದ್ದರು. ಭುವನೇಶ್ವರದ ಹೊಟೇಲ್‌ನಲ್ಲಿ ಉಳಿದ ಇವರು ತನ್ನ ತಾಯಿಯನ್ನು ಹುಡುಕುವ ಯತ್ನ ಮಾಡಿದ್ದರು. ಆದರೆ ಸೋದರ ಸೋಮು ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ಭಾರತಕ್ಕೆ ಆಗಮಿಸಿಲ್ಲ, ಒಂದು ವೇಳೆ ಸೋಮವಾರ ಅಂದರೆ ಇಂದಿನೊಳಗೆ ಅವರ ತಾಯಿ ಸಿಗದೇ ಹೋದರೆ ಮಾರ್ಚ್‌ನಲ್ಲಿ ಮತ್ತೆ ಇಲ್ಲಿಗೆ ಬಂದು ದೀರ್ಘಕಾಲ ಉಳಿದು ತಾಯಿಯನ್ನು ಹುಡುಕುವುದಾಗಿ ಅವರು ಹೇಳಿಕೊಂಡಿದ್ದಾರೆ. ಸ್ನೇಹಾ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಂಡಿದ್ದರಿಂದ ನಾವು ಸ್ಪೇನ್‌ಗೆ ಹಿಂತಿರುಗಬೇಕಾಗಿದೆ, ಅದನ್ನು ನಿಲ್ಲಿಸುವ ಹಾಗಿಲ್ಲ,. ನಮಗೆ ಮುಂದಿನ 24 ಗಂಟೆಗಳಲ್ಲಿ ಬಾನಲತಾ ಸಿಗದಿದ್ದರೆ, ನಾವು ಮಾರ್ಚ್‌ನಲ್ಲಿ ಭುವನೇಶ್ವರಕ್ಕೆ ಮತ್ತೆ ಬರುತ್ತೇವೆ ಎಂದು ಗೆಮಾ ಹೇಳಿದ್ದಾರೆ.
2005ರಲ್ಲಿ ತಾಯಿ ಭಾನುಲತಾ ಅವರು ಸ್ನೇಹ ಮತ್ತು ಸೋಮು ಅವರನ್ನು ಭುವನೇಶ್ವರದ ನಾಯಪಲ್ಲಿ ಪ್ರದೇಶದ ಬಾಡಿಗೆ ಮನೆಯಲ್ಲಿ ಬಿಟ್ಟು ಹೋಗಿದ್ದರು. ಖಾಸಗಿ ಸಂಸ್ಥೆಯೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಭಾನುಲತಾ ಅವರ ಪತಿ ಸಂತೋಷ್ ಅವರು ಈ ಹಿಂದೆ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಒಳಗೊಂಡ ಕುಟುಂಬವನ್ನು ತೊರೆದಿದ್ದರು. ಇದಾದ ನಂತರ ತಾಯಿ ನಂತರ ಭಾನುಲತಾ ಕೂಡ ಬಾಡಿಗೆ ಮನೆ ಬಿಟ್ಟು ಇನ್ನೊಬ್ಬ ಮಗ ಮತ್ತು ಮಗಳೊಂದಿಗೆ ಸ್ನೇಹಾ ಮತ್ತು ಸೋಮು ಅವರನ್ನು ಅಲ್ಲೇ ಬಿಟ್ಟು ಹೋಗಿದ್ದರು. ನಂತರ ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಕ್ಕಳನ್ನು ಅನಾಥಾಶ್ರಮಕ್ಕೆ ಸ್ಥಳಾಂತರಿಸಲಾಗಿತ್ತು.
ನಂತರ 2010 ರಲ್ಲಿ, ಐದು ವರ್ಷದವಳಾಗಿದ್ದ ಸ್ನೇಹಾ ಮತ್ತು ಸುಮಾರು ನಾಲ್ಕು ವರ್ಷದ ಸೋಮು ಅವರನ್ನು ಸ್ಪ್ಯಾನಿಷ್ ದಂಪತಿಗಳು ಕಾನೂನುಬದ್ಧವಾಗಿ ದತ್ತು ಪಡೆದಿದ್ದರು. ಸ್ನೇಹಾ ತುಂಬಾ ಜವಾಬ್ದಾರಿ ಇರುವ ಹುಡುಗಿ ಮತ್ತು ವಿದ್ಯಾವಂತಳು, ಅವಳು ನಮ್ಮ ಮನೆಯ ಸಂತೋಷ, ಅವಳು ನಮ್ಮ ಜೀವನ ಎಂದು ಗೇಮಾ ಹೇಳಿದ್ದಾರೆ. ತಮ್ಮ ಈ ದತ್ತು ಮಕ್ಕಳಿಗೆ ತಮ್ಮ ಮೂಲದ ಬಗ್ಗೆ ತಾಯಿ ಗೇಮಾ ಅವರು ಈ ಹಿಂದೆಯೇ ತಿಳಿಸಿದ್ದರು. ಸ್ನೇಹಾ ವಿದ್ಯಾವಂತಳಾಗಿದ್ದಾಳೆ ಸಂಶೋಧನೆ ನಡೆಸುತ್ತಿದ್ದಾಳೆ. ಆದ್ದರಿಂದ ಆಕೆ ತಮ್ಮ ಜೈವಿಕ ತಾಯಿಯನ್ನು ಪತ್ತೆಹಚ್ಚಲು ನಿರ್ಧರಿಸಿದ್ದಾಳ ಮತ್ತು ನಾನು ಅವಳೊಂದಿಗೆ ಈ ಸ್ಥಳಕ್ಕೆ ಬಂದೆ ಎಂದು ಗೆಮಾ ಹೇಳಿದ್ದಾರೆ.
ಭುವನೇಶ್ವರದಲ್ಲಿ ತಮ್ಮ ತೀವ್ರ ಹುಡುಕಾಟದಲ್ಲಿ, ಗೆಮಾ ಮತ್ತು ಸ್ನೇಹಾಗೆ ರಮಾ ದೇವಿ ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಶಿಕ್ಷಕಿ ಸ್ನೇಹಾ ಸುಧಾ ಮಿಶ್ರಾ ಅವರು ಸಿಕ್ಕಿದ್ದಾರೆ. ಅವರು ಸ್ನೇಹಾಗೆ ಆಕೆಯ ಮೂಲ ಪೋಷಕರ ಹೆಸರನ್ನು ಕಂಡು ಹಿಡಿಯಲು ಸಹಾಯ ಮಾಡಿದ್ದಾರೆ. ನಾಯಪಲ್ಲಿಯಲ್ಲಿರುವ ಮನೆ ಮಾಲೀಕರಿಂದ ಆಕೆಯ ಪೋಷಕರ ಹೆಸರುಗಳನ್ನು ನಾವು ಕಂಡುಕೊಂಡಿದ್ದೇವೆ ಮತ್ತು ನಂತರ ಪೊಲೀಸರು ಮತ್ತು ಅನಾಥಾಶ್ರಮದಲ್ಲಿ ಹೆಸರುಗಳನ್ನು ಪರಿಶೀಲಿಸಲಾಗಿದೆ ಎಂದು ಶಿಕ್ಷಕಿ ಸ್ನೇಹಾ ಸುಧಾ ಮಿಶ್ರಾ ಹೇಳಿದರು. ಮಿಶ್ರಾ ಅವರ ಸಹಾಯದಿಂದ, ಸ್ನೇಹಾ ಮತ್ತು ಗೇಮಾ ನಗರ ಪೊಲೀಸ್ ಕಮಿಷನರ್ ದೇವ್ ದತ್ತಾ ಸಿಂಗ್ ಅವರನ್ನು ಭೇಟಿಯಾದರು, ಅವರು ಭಾನುಲತಾ ದಾಸ್ ಮತ್ತು ಸಂತೋಷ್ ದಾಸ್ ಅವರನ್ನು ಪತ್ತೆ ಮಾಡುವ ಕೆಲಸವನ್ನು ಇಬ್ಬರು ಪೊಲೀಸ್ ಸಿಬ್ಬಂದಿಗಳಾದ ಅಂಜಲಿ ಛೋಟ್ರೇ ಮತ್ತು ಗಂಗಾಧರ್ ಪ್ರಧಾನ್ ಅವರಿಗೆ ವಹಿಸಿದ್ದಾರೆ. ಭಾನುಲತಾ ದಾಸ್ ಮತ್ತು ಸಂತೋಷ್ ಅವರು ಕಟಕ್ ಜಿಲ್ಲೆಯ ಬದಂಬಾ-ನರಸಿಂಗ್‌ಪುರ ಪ್ರದೇಶದವರು ಎಂದು ತಿಳಿದು ಬಂದಿದೆ. ನಾವು ಅವರನ್ನು ಪತ್ತೆಹಚ್ಚಲು ಪೊಲೀಸರು ಮತ್ತು ಪಂಚಾಯತ್ ಕಾರ್ಯನಿರ್ವಾಹಕರನ್ನು ತೊಡಗಿಸಿಕೊಂಡಿದ್ದೇವೆ ಎಂದು ಇನ್ಸ್‌ಪೆಕ್ಟರ್ ಅಂಜಲಿ ಛೋತ್ರೇ ಹೇಳಿದ್ದಾರೆ.