Anchor Jhanvi s Second Wedding: ನಿರೂಪಕಿ ಜಾನ್ವಿ ಅವರ ಎರಡನೇ ಮದುವೆಗೆ ಸಂಬಂಧಪಟ್ಟಂತೆ ಒಂದಿಷ್ಟು ಫೇಕ್ ನ್ಯೂಸ್ ಹರಡ್ತಿದೆ. ಈ ಬಗ್ಗೆ ಜಾನ್ವಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಿರೂಪಕಿ, ನಟಿ ಜಾನ್ವಿ ( Anchor Jhanvi ) ಅವರು ಸದ್ಯ ಮದುವೆ ವಿಚಾರವಾಗಿ ಭಾರೀ ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಡಿವೋರ್ಸ್ ಬಗ್ಗೆ ಮಾತನಾಡಿದ್ದರು. ಆ ಡಿವೋರ್ಸ್ ವಿಷಯ ಬೇರೆ ಸ್ವರೂಪ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಬಗ್ಗೆ ಜಾನ್ವಿ ಅವರು ದೂರು ನೀಡಿದ್ದಾರಂತೆ.
ಫೇಕ್ ಪೋಸ್ಟ್‌ನಲ್ಲಿ ಏನಿದೆ?
“ನಾನು ಡಿವೋರ್ಸ್ ಕೊಟ್ಟ ಗಂಡ ಇವತ್ತು ಮದುವೆಯಾಗಿ ಮಗು ಮಾಡಿಕೊಂಡಿದ್ದಾನೆ. ನಾವು ಇವತ್ತಿಗೂ ಒಂಟಿಯಾಗಿದ್ದೇನೆ, ನನ್ನ ಆಸೆಗೆ ತಕ್ಕ ವರ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಐಷಾರಾಮಿ ಮನೆ ಬೇಕು, ಬಿಎಂಡಬ್ಲ್ಯೂ ಕಾರ್ ಬೇಕು, ರಾಜಕಾರಣಿಯಾಗಿದ್ದರೆ ತುಂಬ ಒಳ್ಳೆಯದು” ಎಂದು ಜಾನ್ವಿ ಹೇಳಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಪೋಸ್ಟ್ ಜಾನ್ವಿ ಗಮನಕ್ಕೆ ಬಂದಿದ್ದು, ಅವರೀಗ ದೂರು ನೀಡಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.
ಎರಡನೇ ಮದುವೆ ಬೇಡ!
ಜಾನ್ವಿ ಅವರು ನಿರೂಪಕಿ ವಿದ್ಯಾ ಮಲ್ನಾಡ್ ಎನ್ನುವ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ “ನನ್ನ ಮಗ ಗ್ರಂಥನಿಗೆ ಪ್ರೀತಿ ಕೊರತೆಯಾಗಿದೆ. ನಾನು ಆ ಪ್ರೀತಿಯನ್ನು ನೀಡಬೇಕು. ನನ್ನ ಮಗನಿಗೆ ಅಪ್ಪ ಇಲ್ಲದಿದ್ರೂ ಕೂಡ ನಾನು ಇದ್ದೀನಿ, ಅವನಿಗೆ ಅಜ್ಜಿ ಇದ್ದಾಳೆ, ಸಾಕು. ಮೊದಲ ಮದುವೆಯೇ ಭರ್ಜರಿ ಅನುಭವ ಕೊಟ್ಟಿದ್ದಕ್ಕೆ, ಎರಡನೇ ಮದುವೆ ಬಗ್ಗೆ ಯೋಚನೆ ಇಲ್ಲ. ನಾನು ಹನ್ನೆರಡು ವರ್ಷ ಮದುವೆ ಜೀವನ ಮಾಡಿದ್ದೀನಿ, ಈಗ ಮತ್ತೆ ಮದುವೆ ಬೇಡ. ನಾನೀಗ ವೃತ್ತಿ ಜೀವನ, ಮಗನ ಬಗ್ಗೆ ಗಮನ ಕೊಡಬೇಕಿದೆ. ನಾನು ಬದುಕೋಕೆ ಈಗ ಇನ್ನೊಬ್ಬ ವ್ಯಕ್ತಿಯ ಆಗಮನ ಆಗಬೇಕು ಅಂತಿಲ್ಲ” ಎಂದು ಹೇಳಿದ್ದಾರೆ.
ಡಿವೋರ್ಸ್ ತಗೊಂಡಿದ್ದು ಯಾಕೆ?
“ಡಿವೋರ್ಸ್ ಆದಬಳಿಕವೂ ಕೂಡ ನನ್ನ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಮತ್ತೆ ಬರಬೇಕು ಅಂತ ಅನಿಸಿಲ್ಲ. ನನ್ನ ಮಗ ಈಗ 8ನೇ ಕ್ಲಾಸ್. ನನ್ನ ಜೀವನಕ್ಕೆ ಇನ್ನೊಬ್ಬ ವ್ಯಕ್ತಿಯೊಬ್ಬನನ್ನು ಸೇರಿಸಿಕೊಳ್ಳೋಕೆ ಇಷ್ಟವಿಲ್ಲ” ಎಂದು ಜಾನ್ವಿ ಹೇಳಿದ್ದಾರೆ.
“ಮದುವೆ ಲೈಫ್‌ನಲ್ಲಿದ್ದಾಗ ನಟಿಸೋಕೆ ಬಿಡುತ್ತಿರಲಿಲ್ಲ. ಆದರೆ ಚಿತ್ರರಂಗದಲ್ಲಿ ಇರಬೇಕು, ಸಿನಿಮಾದಲ್ಲಿ ನಟಿಸಬೇಕು ನಾನು ಡಿವೋರ್ಸ್ ತಗೊಂಡಿಲ್ಲ. ನನ್ನ ಮದುವೆ ಜೀವನದಲ್ಲಿ ಏನಾಯ್ತು ಅಂತ ಯಾರಿಗೂ ಗೊತ್ತಿಲ್ಲ, ನಾನು ಯಾರಿಗೂ ಹೇಳಿಕೊಂಡಿಲ್ಲ. ನಾನು ಎಷ್ಟು ಅನುಭವಿಸಿದ್ದೀನಿ ಅಂತ ನನಗೆ ಗೊತ್ತಿದೆ. ಓರ್ವ ವ್ಯಕ್ತಿ ಎಂದಿಗೂ ಸರಿಹೋಗಿಲ್ಲ ಅಂತ ಗೊತ್ತಾದ್ಮೇಲೆ ಅವರಿಂದ ದೂರ ಇರಬೇಕು. ನಾನೀಗ ಆರಾಮಾಗಿದ್ದೀನಿ, ಅವರು ಕೂಡ ಎಲ್ಲೇ ಇದ್ದರೂ ಕೂಡ ಚೆನ್ನಾಗಿರಲಿ” ಎಂದು ಜಾನ್ವಿ ಹೇಳಿದ್ದರು.
ನಿರೂಪಕಿ ಜಾನ್ವಿ ಅವರು ಕನ್ನಡ ಕೆಲ ಟಿವಿ ಮಾಧ್ಯಮಗಳಲ್ಲಿ ನಿರೂಪಕಿಯಾಗಿ ಕೆಲ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆ ಬಳಿಕ ಅವರು ʼನನ್ನಮ್ಮ ಸೂಪರ್‌ಸ್ಟಾರ್ʼ, ʼಗಿಚ್ಚಿ ಗಿಲಿಗಿಲಿʼ ಶೋನಲ್ಲಿಯೂ ಭಾಗವಹಿಸಿದ್ದರು. ಅದಾದ ಬಳಿಕ ರೂಪೇಶ್ ಶೆಟ್ಟಿ ಅವರ ʼಅಧಿಪತ್ರʼ ಸಿನಿಮಾದಲ್ಲಿಯೂ ನಟಿಸಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿದ್ದಾರಂತೆ.

