ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ಯಲ್ಲಿ ಇದೀಗ ಸಂಭ್ರಮದ ವಾತಾವರಣ. ಕ್ಯಾನ್ಸರ್‌ನಿಂದ ಭೂಮಿಕಾ ಸಾವನ್ನಪ್ಪುತ್ತಾಳೆ ಎಂದುಕೊಂಡಿದ್ದ ವೀಕ್ಷಕರ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ.
ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ಯಲ್ಲಿ ಇದೀಗ ಸಂಭ್ರಮದ ವಾತಾವರಣ. ಕ್ಯಾನ್ಸರ್‌ನಿಂದ ಭೂಮಿಕಾ ಸಾವನ್ನಪ್ಪುತ್ತಾಳೆ ಎಂದುಕೊಂಡಿದ್ದ ವೀಕ್ಷಕರ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ. ಗೌತಮ್‌ನ ಪ್ರೀತಿ, ಆರೈಕೆ ಹಾಗೂ ಕುಟುಂಬಸ್ಥರ ಪ್ರಾರ್ಥನೆಯಿಂದ ಭೂಮಿಕಾ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಹೊಸ ರೂಪದಲ್ಲಿ ಮತ್ತೆ ಕಾಣಿಸಿಕೊಂಡಿರುವ ಭೂಮಿಕಾ ಅಭಿಮಾನಿಗಳ ಗಮನ ಸೆಳೆದಿದ್ದಾಳೆ. ಭೂಮಿಕಾ ಗುಣಮುಖಳಾಗಿರುವ ಖುಷಿಯಲ್ಲಿ ಗೌತಮ್ ಪಾರ್ಟಿ ಆಯೋಜಿಸಿದ್ದಾನೆ. ಈ ಪಾರ್ಟಿಯಲ್ಲಿ ನಡೆದಿರುವ ತಮಾಷೆಯ ಸನ್ನಿವೇಶ ಇದೀಗ ಧಾರಾವಾಹಿಯ ಪ್ರಮುಖ ಹೈಲೈಟ್ ಆಗಿದೆ.
ಈ ಬಾರಿ ‘ಡುಮ್ಮ ಸರ್’ ಸರದಿ!
‘ಅಮೃತಧಾರೆ’ಯಲ್ಲಿ ಆನಂದ್ ಮಾಡುವ ಒಂದು ತಮಾಷೆಯೇ ಬೇರೆ. ಭೂಮಿಗೆ ಗೊತ್ತಾಗದಂತೆ ಜ್ಯೂಸ್‌ನಲ್ಲಿ ಡ್ರಿಂಕ್ಸ್ ಮಿಕ್ಸ್ ಮಾಡಿ, ಆಕೆಯ ಮನದ ಮಾತುಗಳನ್ನು ಹೊರಗೆ ಹಾಕಿಸುವ ಸನ್ನಿವೇಶಗಳನ್ನು ವೀಕ್ಷಕರು ಸಾಕಷ್ಟು ಬಾರಿ ನೋಡಿದ್ದಾರೆ. ಆದರೆ ಇದೀಗ ಕಥೆಯಲ್ಲಿ ಅದೇ ಆಟ ಬೇರೆ ರೀತಿಯಲ್ಲಿ ನಡೆದಿದೆ. ಇಷ್ಟು ದಿನ ಭೂಮಿಕಾ ಟೈಟ್ ಆಗುವುದನ್ನು ನೋಡಿದ್ದ ವೀಕ್ಷಕರಿಗೆ ಈ ಬಾರಿ ‘ಡುಮ್ಮ ಸರ್’ ಗೌತಮ್ ಅವರ ಸರದಿ! ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ಗೌತಮ್ ಭೂಮಿಕಾಳನ್ನು ಮನಸಾರೆ ಹೊಗಳಿದ್ದಾನೆ. ಪತ್ನಿಯ ಬಗ್ಗೆ ಗೌತಮ್ ಆಡಿರುವ ಮಾತುಗಳು ಇದೀಗ ವೀಕ್ಷಕರಿಗೆ ಸಖತ್ ಇಷ್ಟವಾಗಿವೆ.
ಸಾವಿಗೆ ಸವಾಲು ಹಾಕಿ ಗೆದ್ದ ಭೂಮಿಕಾ
ಭೂಮಿಕಾಗೆ ಕ್ಯಾನ್ಸರ್ ಇದೆ ಎಂಬ ವಿಚಾರ ಗೊತ್ತಾದಾಗಿನಿಂದ ಧಾರಾವಾಹಿ ಮತ್ತೊಂದು ಹಂತಕ್ಕೆ ತಲುಪಿತ್ತು. ಆರಂಭದಲ್ಲಿ ಚಿಕಿತ್ಸೆ ಪಡೆಯಲು ಭೂಮಿಕಾ ಹಿಂದೇಟು ಹಾಕಿದ್ದಳು. ಆದರೆ ಗೌತಮ್ ಪತ್ನಿಯನ್ನು ಹೇಗಾದರೂ ಗುಣಪಡಿಸಬೇಕೆಂದು ಪಟ್ಟು ಹಿಡಿದು ಚಿಕಿತ್ಸೆ ಕೊಡಿಸಿದ್ದಾನೆ. ಪತ್ನಿಯ ಆರೈಕೆಗಾಗಿ ಗೌತಮ್ ತನ್ನ ಕೆಲಸ ಸೇರಿದಂತೆ ಹಲವು ವಿಚಾರಗಳನ್ನು ಬದಿಗೊತ್ತಿದ್ದ. ಒಂದು ಕಡೆ ಪತಿಯ ಆರೈಕೆ, ಮತ್ತೊಂದೆಡೆ ಕುಟುಂಬಸ್ಥರ ಪ್ರಾರ್ಥನೆ—ಇವೆಲ್ಲದರ ನಡುವೆ ಭೂಮಿಕಾ ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿ ಗೆದ್ದಿದ್ದಾಳೆ. ಭೂಮಿಕಾ ಸಾವನ್ನಪ್ಪುತ್ತಾಳೆ ಎಂದುಕೊಂಡಿದ್ದ ವೀಕ್ಷಕರಿಗೆ ಇದೀಗ ಈ ಬೆಳವಣಿಗೆ ಖುಷಿ ನೀಡಿದೆ. ಭೂಮಿಕಾಳ ಹೊಸ ಲುಕ್‌ಗೂ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭೂಮಿಕಾಗೆ ತೊಂದರೆ ಕೊಡಬೇಕೆಂದಿದ್ದ ಶಕುಂತಲಾ-ಜೈದೇವ್ ಪ್ಲ್ಯಾನ್ ಏನಾಯ್ತು?
ಇನ್ನೊಂದೆಡೆ ಭೂಮಿಕಾಳ ಅನಾರೋಗ್ಯವನ್ನೇ ಬಳಸಿಕೊಂಡು ಆಕೆಗೆ ಮಾನಸಿಕ ಹಿಂಸೆ ನೀಡಬೇಕು ಎಂಬ ಶಕುಂತಲಾ ಮತ್ತು ಜೈದೇವ್ ಅವರ ಕುತಂತ್ರಕ್ಕೂ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಆದರೆ ಈ ಇಬ್ಬರ ಸಂಚು ಮಾತ್ರ ಇನ್ನೂ ಮುಗಿದಿಲ್ಲ. ಗೌತಮ್ ಕುಟುಂಬವನ್ನು ಬೀದಿಗೆ ತರುವ ಉದ್ದೇಶದಿಂದ ಜೈದೇವ್ ಮತ್ತು ಶಕುಂತಲಾ ನಿರಂತರವಾಗಿ ಕುತಂತ್ರ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಹಲವು ಬಾರಿ ತಮ್ಮ ತಪ್ಪುಗಳಿಂದ ತಪ್ಪಿಸಿಕೊಂಡಿರುವ ಇವರಿಬ್ಬರ ನಿಜ ಬಣ್ಣ ಯಾವಾಗ ಬಯಲಾಗುತ್ತದೆ ಎಂಬುದೇ ಈಗ ಕುತೂಹಲ.
ಅದರಲ್ಲೂ ದಿಯಾ ಕೊಲೆಯ ಹಿಂದಿರುವ ಜೈದೇವ್‌ನ ಕೈವಾಡ ಇನ್ನೂ ಯಾರಿಗೂ ಗೊತ್ತಾಗಿಲ್ಲ. ಶಕುಂತಲಾಳ ಕುತಂತ್ರವೂ ಒಂದೊಂದಾಗಿ ಬಯಲಾಗುತ್ತಿದ್ದು, ಕೊನೆಗೆ ತಾಯಿ-ಮಗ ಇಬ್ಬರೂ ಒಟ್ಟಿಗೆ ಜೈಲು ಸೇರುವ ಸ್ಥಿತಿ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ಭೂಮಿಕಾ ಸಾವನ್ನು ಗೆದ್ದು ಹೊಸ ಉತ್ಸಾಹದೊಂದಿಗೆ ಮರಳಿರುವುದು ‘ಅಮೃತಧಾರೆ’ ವೀಕ್ಷಕರಿಗೆ ಸಂತಸ ತಂದಿದೆ. ಗೌತಮ್-ಭೂಮಿಕಾ ನಡುವಿನ ಈ ಹೊಸ ಹಂತ ಮುಂದಿನ ದಿನಗಳಲ್ಲಿ ಕಥೆಯನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಿದೆ ಎಂಬುದೇ ಕುತೂಹಲ.


