ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ ಓಪನ್ ಮಾಡಿ ಸ್ಕ್ರಾಲ್ ಮಾಡುತ್ತಿದ್ದರೆ ತಾರೇಶ್ ಹಾಗೂ ಸ್ವಾತಿ ಅವರ ರೀಲ್ಸ್‌ಗಳಲ್ಲಿ ಒಂದಾದರೂ ಕಣ್ಣಿಗೆ ಬೀಳುವುದು ಸಾಮಾನ್ಯ.ತಾರೇಶ್ ಹಾಗೂ ಸ್ವಾತಿ ಅವರು ಗರ್ಭಧರಿಸಲು ಯೋಜಿಸುತ್ತಿರುವ ದಂಪತಿಗಳಿಗೆ ಉಪಯುಕ್ತವಾಗುವಂತಹ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ ಓಪನ್ ಮಾಡಿ ಸ್ಕ್ರಾಲ್ ಮಾಡುತ್ತಿದ್ದರೆ ತಾರೇಶ್ ಹಾಗೂ ಸ್ವಾತಿ ಅವರ ರೀಲ್ಸ್‌ಗಳಲ್ಲಿ ಒಂದಾದರೂ ಕಣ್ಣಿಗೆ ಬೀಳುವುದು ಸಾಮಾನ್ಯ. ತಮ್ಮ ಫನ್ನಿ ವೀಡಿಯೋಗಳು, ವೈಯಕ್ತಿಕ ಜೀವನದ ಅಪ್‌ಡೇಟ್‌ಗಳ ಮೂಲಕ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಬರೋಬ್ಬರಿ 13-14 ವರ್ಷಗಳ ಪ್ರೀತಿ ಹಾಗೂ ದಾಂಪತ್ಯ ಜೀವನದ ಪಯಣ ಇವರದ್ದು. ಪೋಷಕರ ವಿರೋಧದ ನಡುವೆಯೂ ಸ್ವಾತಿ ಮನೆ ಬಿಟ್ಟು ಬಂದು ತಾರೇಶ್ ಅವರನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ಸ್ವಾತಿ ಅವರ ತವರು ಮನೆಯವರು ದಂಪತಿಯಿಂದ ದೂರವಾಗಿದ್ದರು. ಆದರೆ ಇತ್ತೀಚೆಗೆ ಪೋಷಕರು ಈ ಸಂಬಂಧವನ್ನು ಒಪ್ಪಿಕೊಂಡಿದ್ದು, ಸುಮಾರು ಮೂರು ವರ್ಷಗಳ ಬಳಿಕ ಸ್ವಾತಿ ಪತಿ ಸಮೇತ ತವರು ಮನೆಗೆ ತೆರಳಿ ಬಂದಿದ್ದಾರೆ. ಈ ನಡುವೆ ತಾರೇಶ್ ಹಾಗೂ ಸ್ವಾತಿ ಅವರು ಗರ್ಭಧರಿಸಲು ಯೋಜಿಸುತ್ತಿರುವ ದಂಪತಿಗಳಿಗೆ ಉಪಯುಕ್ತವಾಗುವಂತಹ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ‘ಬೇಬಿ ಪ್ಲಾನಿಂಗ್’ ಸಂದರ್ಭದಲ್ಲಿ ಓವ್ಯುಲೇಷನ್ ಟೆಸ್ಟ್ ಕಿಟ್ ಹೇಗೆ ಬಳಸಬೇಕು ಎಂಬುದರ ಕುರಿತು ಸರಳವಾಗಿ ವಿವರಿಸಿದ್ದಾರೆ.

ಓವ್ಯುಲೇಷನ್ ಟೆಸ್ಟ್ ಕಿಟ್ ಎಂದರೇನು?

ಮಹಿಳೆಯರ ಮಾಸಿಕ ಚಕ್ರದಲ್ಲಿ ಅಂಡಾಣು ಬಿಡುಗಡೆಯಾಗುವ ಅವಧಿಯನ್ನು ‘ಓವ್ಯುಲೇಷನ್’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮುಂದಿನ ಮುಟ್ಟಿಗೆ ಸುಮಾರು 12ರಿಂದ 16 ದಿನಗಳ ಮೊದಲು ಓವ್ಯುಲೇಷನ್ ಸಂಭವಿಸಬಹುದು. ಈ ಅವಧಿಯ ಸುತ್ತಮುತ್ತ ಲೈಂಗಿಕ ಸಂಪರ್ಕ ಹೊಂದುವುದರಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿರುತ್ತದೆ. ಓವ್ಯುಲೇಷನ್ ಯಾವ ಸಮಯದಲ್ಲಿ ಸಮೀಪಿಸುತ್ತಿದೆ ಎಂಬುದನ್ನು ಅಂದಾಜಿಸಲು ‘ಓವ್ಯುಲೇಷನ್ ಟೆಸ್ಟ್ ಕಿಟ್’ ಸಹಾಯ ಮಾಡುತ್ತದೆ. ಈ ಕಿಟ್ ಮೂತ್ರದಲ್ಲಿರುವ LH ಹಾರ್ಮೋನ್‌ನ ಏರಿಕೆಯನ್ನು ಪತ್ತೆಹಚ್ಚುತ್ತದೆ.

ಓವ್ಯುಲೇಷನ್ ಟೆಸ್ಟ್ ಕಿಟ್ ಎಲ್ಲಿ ಸಿಗುತ್ತದೆ?

ಈ ಟೆಸ್ಟ್ ಕಿಟ್‌ಗಳು ಸಾಮಾನ್ಯವಾಗಿ ಮೆಡಿಕಲ್ ಸ್ಟೋರ್‌ಗಳು ಹಾಗೂ ಆನ್‌ಲೈನ್ ಫಾರ್ಮಸಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತವೆ. ಬೆಲೆ ಬ್ರ್ಯಾಂಡ್ ಮತ್ತು ಪ್ಯಾಕ್‌ನಲ್ಲಿರುವ ಟೆಸ್ಟ್‌ಗಳ ಸಂಖ್ಯೆಯನ್ನು ಅವಲಂಬಿಸಿ ಬದಲಾಗಬಹುದು.

ಕಿಟ್ ಬಳಸುವುದು ಹೇಗೆ?

ಸರಿಯಾದ ದಿನದಿಂದ ಆರಂಭಿಸಿ: ಮಾಸಿಕ ಚಕ್ರದ ಉದ್ದವನ್ನು ಆಧರಿಸಿ ಓವ್ಯುಲೇಷನ್ ಟೆಸ್ಟ್ ಆರಂಭಿಸುವ ದಿನ ಬದಲಾಗಬಹುದು. ಸಾಮಾನ್ಯವಾಗಿ ಚಕ್ರದ ಮಧ್ಯಭಾಗದ ಮುನ್ನವೇ ಪರೀಕ್ಷೆ ಆರಂಭಿಸುವುದು ಸೂಕ್ತ. ಕಿಟ್‌ನಲ್ಲಿರುವ ಸೂಚನೆಗಳನ್ನು ಪಾಲಿಸುವುದು ಮುಖ್ಯ.

ಮೂತ್ರದ ಮಾದರಿ:

ಟೆಸ್ಟ್ ಕಿಟ್‌ನ ಸೂಚನೆಗಳ ಪ್ರಕಾರ ಮೂತ್ರದ ಮಾದರಿ ತೆಗೆದುಕೊಳ್ಳಬೇಕು. ದಿನದ ಯಾವ ಸಮಯದಲ್ಲಿ ಪರೀಕ್ಷೆ ಮಾಡಬೇಕು ಎಂಬುದು ಕಿಟ್‌ಗನುಗುಣವಾಗಿ ಬದಲಾಗಬಹುದು.

ಟೆಸ್ಟ್ ಸ್ಟ್ರಿಪ್ ಬಳಕೆ:

ಸ್ಟ್ರಿಪ್‌ನಲ್ಲಿರುವ ‘MAX’ ಗುರುತನ್ನು ಮೀರದಂತೆ ಸೂಚಿಸಲಾದ ರೀತಿಯಲ್ಲಿ ಮೂತ್ರದ ಮಾದರಿಯಲ್ಲಿ ಇಟ್ಟು, ಪ್ಯಾಕೆಟ್‌ನಲ್ಲಿ ತಿಳಿಸಿರುವ ಸಮಯದವರೆಗೆ ಕಾಯಬೇಕು.

ಎರಡು ಗೆರೆ ಬಂದರೆ ಏನರ್ಥ?

ಸಾಮಾನ್ಯವಾಗಿ ಓವ್ಯುಲೇಷನ್ ಟೆಸ್ಟ್‌ನಲ್ಲಿ ಟೆಸ್ಟ್ ಲೈನ್ ಕಂಟ್ರೋಲ್ ಲೈನ್‌ನಷ್ಟೇ ಗಾಢವಾಗಿದ್ದರೆ ಅಥವಾ ಅದಕ್ಕಿಂತ ಗಾಢವಾಗಿದ್ದರೆ LH surge ಪತ್ತೆಯಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ಮುಂದಿನ ಸುಮಾರು 24-36 ಗಂಟೆಗಳಲ್ಲಿ ಓವ್ಯುಲೇಷನ್ ಸಂಭವಿಸುವ ಸಾಧ್ಯತೆ ಇದೆ. ಆದರೆ ಕೇವಲ ಎರಡು ಗೆರೆಗಳು ಕಾಣಿಸಿಕೊಂಡವು ಎಂಬ ಕಾರಣಕ್ಕೆ ಪ್ರತಿಯೊಂದು ಕಿಟ್‌ನಲ್ಲೂ ‘ಪಾಸಿಟಿವ್’ ಎಂದರ್ಥವಲ್ಲ. ಫಲಿತಾಂಶವನ್ನು ಕಿಟ್‌ನ ಸೂಚನಾ ಪತ್ರಿಕೆಯ ಪ್ರಕಾರವೇ ಅರ್ಥೈಸಿಕೊಳ್ಳಬೇಕು.

ಬೇಬಿ ಪ್ಲಾನಿಂಗ್‌ ವೇಳೆ ಒತ್ತಡ ಬೇಡ

ಗರ್ಭಧಾರಣೆಗೆ ಪ್ರಯತ್ನಿಸುವಾಗ ಪ್ರತಿಯೊಬ್ಬ ದಂಪತಿಯ ಅನುಭವವೂ ವಿಭಿನ್ನವಾಗಿರುತ್ತದೆ. ಮೊದಲ ಕೆಲವು ತಿಂಗಳುಗಳಲ್ಲೇ ಗರ್ಭಧಾರಣೆಯಾಗದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಹಾಗೂ ಒತ್ತಡ ನಿಯಂತ್ರಣಕ್ಕೆ ಗಮನ ನೀಡುವುದು ಮುಖ್ಯ.

ಮಗುವಾಗದಿದ್ದರೆ ಮಹಿಳೆಯನ್ನೇ ದೂಷಿಸಬೇಡಿ

ಗರ್ಭಧಾರಣೆ ಎನ್ನುವುದು ಇಬ್ಬರಿಗೂ ಸಂಬಂಧಿಸಿದ ಪ್ರಕ್ರಿಯೆ. ಹೀಗಾಗಿ ಗರ್ಭಧಾರಣೆ ವಿಳಂಬವಾದಾಗ ಮಹಿಳೆಯನ್ನೇ ಹೊಣೆ ಮಾಡುವುದು ಸರಿಯಲ್ಲ. ಅಗತ್ಯವಿದ್ದರೆ ಪುರುಷರು ಕೂಡ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಸಂಗಾತಿಗೆ ಮಾನಸಿಕ ಬೆಂಬಲ ನೀಡುವುದು ಕೂಡ ಬಹಳ ಮುಖ್ಯ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಸಾಮಾನ್ಯವಾಗಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಒಂದು ವರ್ಷ ನಿಯಮಿತವಾಗಿ ಗರ್ಭಧಾರಣೆಗೆ ಪ್ರಯತ್ನಿಸಿದರೂ ಗರ್ಭಧಾರಣೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗುತ್ತದೆ. 35 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿದ್ದರೆ ಆರು ತಿಂಗಳ ಪ್ರಯತ್ನದ ಬಳಿಕ ವೈದ್ಯಕೀಯ ಸಲಹೆ ಪಡೆಯುವುದು ಸೂಕ್ತ. ಅನಿಯಮಿತ ಮುಟ್ಟು, ತೀವ್ರ ನೋವು ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಅದಕ್ಕೂ ಮುನ್ನವೇ ಗೈನೆಕಾಲಜಿಸ್ಟ್‌ರನ್ನು ಭೇಟಿಯಾಗಬಹುದು.

ಗಮನಿಸಿ: ಮೇಲಿನ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಓವ್ಯುಲೇಷನ್ ಟೆಸ್ಟ್ ಕಿಟ್‌ನ ಫಲಿತಾಂಶವನ್ನು ಸರಿಯಾಗಿ ಅರ್ಥೈಸಲು ಹಾಗೂ ಗರ್ಭಧಾರಣೆ ಸಂಬಂಧಿತ ಯಾವುದೇ ಸಮಸ್ಯೆ ಅಥವಾ ಅನುಮಾನವಿದ್ದರೆ ಗೈನೆಕಾಲಜಿಸ್ಟ್ ಅಥವಾ ಅರ್ಹ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.