ಮೂರೂವರೆ ವರ್ಷಗಳ ಯಶಸ್ವಿ ಪ್ರಸಾರದ ನಂತರ ಅಮೃತಧಾರೆ ಧಾರಾವಾಹಿ ಅಂತ್ಯಗೊಂಡಿದ್ದು, ಕೊನೆಯ ದಿನದ ಚಿತ್ರೀಕರಣದಲ್ಲಿ ಕಲಾವಿದರು ಭಾವುಕರಾಗಿದ್ದಾರೆ. ವೀಕ್ಷಕರ ಬೇಡಿಕೆಯ ಮೇರೆಗೆ ಅಮೃತಧಾರೆ ಪಾರ್ಟ್-2 ಬರುವ ಸಾಧ್ಯತೆಗಳ ಬಗ್ಗೆ ತೀವ್ರ ಕುತೂಹಲ ಮೂಡಿದೆ.

ಅಮೃತಧಾರೆ ಸೀರಿಯಲ್​ (Amruthadhaare Serial) ತನ್ನ ಮೂರೂವರೆ ವರ್ಷಗಳ ಪ್ರಯಾಣವನ್ನು ಮುಗಿಸಿದೆ. ಒಂದು ಪ್ರಾಜೆಕ್ಟ್​ನಲ್ಲಿ ಇಷ್ಟು ಸುದೀರ್ಘ ಅವಧಿಯವರೆಗೆ ಕೆಲಸ ಮಾಡುವುದು, ಆಮೇಲೆ ದೂರ ಹೋಗುವುದು ಎಂದರೆ ಅದು ಹಲವು ಕಲಾವಿದರಿಗೆ ನೋವಿನ ಮಾತು. ಒಂದರ್ಥದಲ್ಲಿ ಇಷ್ಟು ವರ್ಷ ಒಂದೇ ಕ್ಲಾಸ್​​ನಲ್ಲಿ ಓದಿ, ಕೊನೆಯ ವರ್ಷ ಪರೀಕ್ಷೆ ಮುಗಿದ ಮೇಲೆ ಆಗುವ ನೋವಿನ ರೀತಿಯಲ್ಲಿ ಈ ಭಾವನೆ ಕೂಡ. ಇದು ಒಂದೆಡೆಯಾದರೆ, ಅಮೃತಧಾರೆಯನ್ನು ಕೊನೆಯವರೆಗೂ ಮೆಚ್ಚಿಕೊಂಡು ಅಪ್ಪಿಕೊಂಡಿದ್ದ ವೀಕ್ಷಕರಿಗೂ ಇದು ತುಂಬಲಾಗದ ನೋವು ಕೊಟ್ಟಿದೆ.

ಕೊನೆಯ ದಿನದ ಶೂಟಿಂಗ್​ನಲ್ಲಿ ಎಲ್ಲಾ ಕಲಾವಿದರೂ ಬಂದು ತಮ್ಮ ಜರ್ನಿಯ ಬಗ್ಗೆ ಮಾತನಾಡಿದ್ದಾರೆ. ಗೌತಮ್​ ಅರ್ಥಾತ್​ ರಾಜೇಶ್​ ನಟರಂಗ ಅವರು, ತಮ್ಮನ್ನು ಇಷ್ಟು ಪ್ರೀತಿ ಕೊಟ್ಟು ಬೆಳೆಸಿದ ವೀಕ್ಷಕರಿಗೆ ಧನ್ಯವಾದ ಸಲ್ಲಿಸುತ್ತಾ ಭಾವುಕರಾದರೆ, ಭೂಮಿಕಾ ಅರ್ಥಾತ್​ ನಟಿ ಛಾಯಾ ಸಿಂಗ್​ ಕೂಡ ಭಾವುಕರಾಗಿ ಮಾತನಾಡಿದ್ದಾರೆ. ವಿಲನ್​ ರೋಲ್​ನಲ್ಲಿ ಮಿಂಚಿದ್ದ ಜೈದೇವ್​ ಅರ್ಥಾತ್​ ರಾಣವ್​ ಗೌಡ ಅವರು, ನಾನು ಎಲ್ಲಿಯೇ ಹೋದರೂ ಜನ ನನ್ನನ್ನು ನೀವ್ಯಾಕೆ ಇಷ್ಟು ಕೆಟ್ಟೋರು ಎಂದು ಬೈದು, ಕೊನೆಗೆ ಸೆಲ್ಫಿ ತಗೊಂಡು ಹೋಗ್ತಿದ್ರು, ಅಷ್ಟು ಪ್ರೀತಿ ಕೊಟ್ಟಿದ್ದೀರಾ ಎಂದಿದ್ದಾರೆ.

ಪಾರ್ಟ್​-2 ಬರುತ್ತಾ?

ಅದೇ ರೀತಿ, ಶಕುಂತಲಾ ಪಾತ್ರಧಾರಿ ವನಿತಾ ವಾಸು ಅವರಿಂದ ಹಿಡಿದು ಸೀರಿಯಲ್​ನ ಎಲ್ಲಾಕಲಾವಿದರೂ, ವೀಕ್ಷಕರಿಗೆ ಚಿರಋಣಿಯಾಗಿರುವುದಾಗಿ ಹೇಳಿದ್ದಾರೆ. ಒಂದರ್ಥದಲ್ಲಿ ನೋಡುವುದಾದರೆ ಬಹುತೇಕ ಕಲಾವಿದರಕಣ್ಣಲ್ಲಿ ನೀರು ತುಂಬಿಕೊಂಡಿದ್ದೂ ನಿಜ. ಅಷ್ಟು ಭಾವುಕರಾಗಿ ಈ ಸೀರಿಯಲ್​ಗೆ ವಿದಾಯ ಹೇಳಿದ್ದಾರೆ.

ಇದರ ನಡುವೆಯೇ, ಅಮೃತಧಾರೆ ಪಾರ್ಟ್​-2 (Amruthadhaare Part-2)ಬರಬೇಕು ಎನ್ನುವುದು ವೀಕ್ಷಕರ ಆಸೆ. ಅದೇ ರೀತಿ ಹಲವರು ಇದೇ ಕಮೆಂಟ್​ ಮಾಡುತ್ತಿರುವ ನಡುವೆಯೇ, ಸೀರಿಯಲ್​ನ ಪಾರ್ಟ್​-2 ಬರಲಿದೆ ಎನ್ನುವ ಪೋಸ್ಟ್​ ಒಂದು ಕೂಡ ವೈರಲ್​ ಆಗಿದೆ. ಆದರೆ, ಇದರ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ವೀಕ್ಷಕರ ಒತ್ತಾಯದ ಮೇರೆಗೆ ಪಾರ್ಟ್​-2 ಬಂದರೂ ಅಚ್ಚರಿ ಏನಿಲ್ಲ. ಆದಷ್ಟು ಬೇಗೆ ಎರಡನೆಯ ಭಾಗಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.