ಅಮೃತಧಾರೆ ಸೀರಿಯಲ್ ಮುಗಿದರೂ ಅಭಿಮಾನಿಗಳಲ್ಲಿ ಅದರ ಗುಂಗು ಕಡಿಮೆಯಾಗಿಲ್ಲ. ನಟಿ ಛಾಯಾ ಸಿಂಗ್ ಲೈವ್ ಬಂದು ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದು, ಪಾರ್ಟ್-2 ಬಗ್ಗೆ ಕುತೂಹಲ ಮೂಡಿದೆ. ನೇರಪ್ರಸಾರದಲ್ಲಿ ಬಂದಿದ್ದ ನಟಿ ಛಾಯಾ ಸಿಂಗ್​ ಹೇಳಿದ್ದೇನು?

ಅಮೃತಧಾರೆ ಸೀರಿಯಲ್ (Amruthadhaare Serial) ಮುಗಿದು ಕೆಲ ದಿನ ಆಗಿದ್ದು, ಅಭಿಮಾನಿಗಳು ಅದರ ಗುಂಗಿನಿಂದ ಇನ್ನೂ ಹೊರಕ್ಕೆ ಬಂದಿಲ್ಲ. ಇದಾಗಲೇ ಸೀರಿಯಲ್​ ನಟ-ನಟಿಯರು ಸೀರಿಯಲ್​ ಪಯಣದ ಕುರಿತು ಮಾತನಾಡಿದ್ದಾರೆ. ಗೌತಮ್​ ರೋಲ್​ ಮಾಡಿದ್ದ ನಟ ರಾಜೇಶ್​ ನಟರಂಗ ಅವರೂ ಲೈವ್​ಗೆ ಬಂದು ಮಾತನಾಡಿದ್ದರು. ಆದರೆ ಎಲ್ಲರೂ ಮೆಚ್ಚಿಕೊಂಡ ಭೂಮಿಕಾ ಅರ್ಥಾತ್​ ನಟಿ ಛಾಯಾ ಸಿಂಗ್​ ಲೈವ್​ಗೆ ಬಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರಲಿಲ್ಲ. ಶೂಟಿಂಗ್​ ಸೆಟ್​ನಲ್ಲಿ ಕೊನೆಯ ದಿನ ಅವರು ಮಾತನಾಡಿದ್ದರೇ ವಿನಾ ಪ್ರತ್ಯೇಕವಾಗಿ ಬಂದು ಮಾತನಾಡಲಿಲ್ಲ ಎಂದು ಹಲವರು ಕಮೆಂಟ್​ ಬಾಕ್ಸ್​ನಲ್ಲಿ ಹೇಳುತ್ತಿದ್ದರು. ಅವರ ಆಸೆ ಇದೀಗ ಈಡೇರಿದೆ.

ನಟಿ ಛಾಯಾ ಸಿಂಗ್​ (Chaya Singh) ಲೈವ್​ಗೆ ಬಂದು ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಅಮೃತಧಾರೆ ಸೀರಿಯಲ್​ನಲ್ಲಿ ಭೂಮಿಕಾಗೆ ತೋರಿರುವ ಪ್ರೀತಿಯ ಬಗ್ಗೆ ಅವರು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅದೇ ರೀತಿ, ಸೀರಿಯಲ್​ನ ಟೆಕ್ನಿಕಲ್​ ಟೀಮ್​ನಿಂದ ಹಿಡಿದು ತೆರೆ ಮರೆಯಲ್ಲಿ ಶ್ರಮಿಸಿರುವ ತಂಡ ಹಾಗೂ ತಮ್ಮ ಜೊತೆ ನಟಿಸಿರುವ ನಟ-ನಟಿಯರಿಗೂ ಧನ್ಯವಾದ ಸಲ್ಲಿಸಿದ್ದಾರೆ. ವೀಕ್ಷಕರು ಇಲ್ಲದಿದ್ದರೆ ನಾನು ಇಷ್ಟು ದೊಡ್ಡ ಮಟ್ಟಿಗೆ ಹೆಸರು ಮಾಡಲು ಆಗ್ತಿರಲಿಲ್ಲ. ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ ಎಂದಿದ್ದಾರೆ ನಟಿ ಛಾಯಾ ಸಿಂಗ್​.

ಪಾರ್ಟ್​-2 ಬರುತ್ತಾ

ಇದರ ನಡುವೆಯೇ, ಅಮೃತಧಾರೆ ಪಾರ್ಟ್​-2 (Amruthadhaare Part-2)ಬರಬೇಕು ಎನ್ನುವುದು ವೀಕ್ಷಕರ ಆಸೆ. ಅದೇ ರೀತಿ ಹಲವರು ಇದೇ ಕಮೆಂಟ್​ ಮಾಡುತ್ತಿರುವ ನಡುವೆಯೇ, ಸೀರಿಯಲ್​ನ ಪಾರ್ಟ್​-2 ಬರಲಿದೆ ಎಂದು ವಾಹಿನಿಯೇ ಕೆಲ ದಿನಗಳ ಹಿಂದೆ ಶೇರ್​ ಮಾಡಿತ್ತು. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ನಟಿಯ ಕುರಿತು

ಇನ್ನು ನಟಿ ಕುರಿತು ಹೇಳುವುದಾದರೆ, ಸ್ಯಾಂಡಲ್​ವುಡ್​ ಸೇರಿದಂತೆ ವಿವಿಧ ಭಾಷೆಗಳಲ್ಲಿ ಛಾಯಾ ಸಿಂಗ್​ ಚಿರಪರಿಚಿತರು. 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನಡಿ' ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇವರು ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಬಳಿಕ ರಾಷ್ಟ್ರಗೀತೆ, ಚಿಟ್ಟೆ, ಗುಟ್ಟು ಸಿನಿಮಾಗಳಲ್ಲಿ ನಟಿಸಿದರು. ನಂತರ ಅನಿರುದ್ಧ್ ನಟನೆಯ 'ತುಂಟಾಟ' ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ತುಂಟಾಟ ಸಿನಿಮಾ ಬಳಿಕ ಕಾಲಿವುಡ್‌ಗೆ ಎಂಟ್ರಿಕೊಟ್ಟ ಛಾಯಾ, ಧನುಷ್ ಜೊತೆ 'ತಿರುಡಾ ತಿರುಡಿ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ನಂತರ ಮಲಯಾಳಂ ಸಿನಿರಂಗಕ್ಕೂ ಕಾಲಿಟ್ಟರು. ಹೀಗೆ ನಟನೆಯಲ್ಲಿ ಮುಂದುವರೆದ ಛಾಯಾ ಸಿಂಗ್, ಬಂಗಾಳಿ, ಬೋಜಪುರಿ, ತೆಲುಗು ಮತ್ತು ಓರಿಯಾ ಚಿತ್ರಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಂಗಾಳಿ ಭಾಷೆಯಲ್ಲಿ 'ಕಿ ಕೋರ್ ಬೋಝಭೋ ತೊಮಾಕೆ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಛಾಯಾ ಕೇವಲ ನಟಿಯಷ್ಟೇ ಅಲ್ಲ, ಅದ್ಭುತ ಡ್ಯಾನ್ಸರ್ ಕೂಡ ಆಗಿದ್ದಾರೆ. ಅವರ ನೃತ್ಯಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ.