ಅಮೃತಧಾರೆ ಸೀರಿಯಲ್​ನಲ್ಲಿ ತನ್ನ ಪತಿಗೆ ಮದುವೆ ಮಾಡಿಸಲು ಮಧುರಾಳನ್ನು ಕರೆದುಕೊಂಡು ಬಂದಿದ್ದಾಳೆ ಭೂಮಿಕಾ. ಗೌತಮ್​ಗೆ ಪರಿಚಯ ಮಾಡಿಸಿದ್ದಾಳೆ. ಮುಂದೇನು? 

ಒಳ್ಳೆಯವಳಂತೆಯೇ ಇಲ್ಲಿಯವರೆಗೆ ಕಾಣಿಸಿಕೊಳ್ತಿರೋ ಉದ್ಯಮಿ ಮಧುರಾ, ಭೂಮಿಕಾ ಮನೆಗೆ ಬಲಗಾಲಿಟ್ಟು ಎಂಟ್ರಿ ಕೊಟ್ಟಾಗಿದೆ. ಅತ್ತೆ ಶಕುಂತಲಾದೇವಿಯ ಕುತಂತ್ರದಿಂದ ಬಂದಾಕೆ ಮಧುರಾ. ಭೂಮಿಕಾ ಎದುರು ಒಳ್ಳೆಯವಳಂತೆಯೇ ನಟಿಸುತ್ತಿದ್ದಾಳೆ ಸದ್ಯದ ಮಟ್ಟಿಗೆ. ಆದರೆ ಆಕೆ ನಿಜವಾಗಿಯೂ ಒಳ್ಳೆಯವಳೆ, ಭೂಮಿಕಾ ಮತ್ತು ಗೌತಮ್​ ಅವರನ್ನು ಒಂದು ಮಾಡ್ತಾಳೋ ಅಥವಾ ಸಹಸ್ರ ಕೋಟಿ ಆಸ್ತಿಯ ಒಡತಿಯಾಗಲು ಸಂಚು ರೂಪಿಸ್ತಾಳೋ ಎನ್ನುವುದು ಕಾದು ನೋಡಬೇಕಿದೆಯಷ್ಟೇ. ಇದು ಜೀ ಕನ್ನಡದ ಅಮೃತಧಾರೆ ಸೀರಿಯಲ್​ ಕಥೆ. ತನಗೆ ಮಕ್ಕಳಾಗುವುದಿಲ್ಲ ಎಂದು ತಿಳಿದುಕೊಂಡಿರುವ ಭೂಮಿಕಾ, ಅತ್ತೆಯ ಮಾತು ಕೇಳಿ ಗಂಡ ಗೌತಮ್​ಗೆ ಮತ್ತೊಂದು ಮದುವೆ ಮಾಡಿಸಲು ಮುಂದಾಗಿದ್ದಾಳೆ. ಕುತಂತ್ರಿ ಅತ್ತೆ ಶಕುಂತಲಾ ಮೊದಲೇ ಹೆಣ್ಣನ್ನು ಫಿಕ್ಸ್​ ಮಾಡಿದ್ದಾಳೆ. ತನ್ನ ಗಂಡನಿಗೆ ಮದುವೆಯಾಗುವ ಹುಡುಗಿಯ ಬಗ್ಗೆ ತಿಳಿದುಕೊಳ್ಳಲು ಇದೀಗ ಖುದ್ದು ಭೂಮಿಕಾ ಹೋಟೆಲ್​ಗೆ ಹೋಗಿದ್ದಾಳೆ. ಅಲ್ಲಿ ಬಂದದ್ದು ರಾಧಾ ಮಿಸ್ಸು ಅರ್ಥಾತ್​ ರಾಧಾ ರಮಣ ಸೀರಿಯಲ್​ ಮೂಲಕ ರಾಧಾ ಮಿಸ್​ ಎಂದೇ ಫೇಮಸ್​ ಆಗಿರುವ ನಟಿ ಶ್ವೇತಾ ಆರ್. ಪ್ರಸಾದ್. ಇಲ್ಲಿ ಈಕೆಯ ಹೆಸರು ಮಧುರ. ಇದೀಗ ಭೂಮಿಕಾ ಮಿಸ್ಸು ಈ ರಾಧಾ ಮಿಸ್​ ಅನ್ನು ಹೋಟೆಲ್​ನಲ್ಲಿ ಭೇಟಿ ಮಾಡಿದ್ದಾಳೆ. ತನ್ನದು ದೊಡ್ಡ ದೊಡ್ಡ ಬಿಜಿನೆಸ್​ ಇದೆ ಎಂದು ಮಧುರಾ, ಭೂಮಿಕಾ ಬಳಿ ಹೇಳಿದ್ದಾಳೆ. ಇದಾಗಲೇ ಭೂಮಿಕಾ ತನ್ನ ಗಂಡನಿಗೆ ಹೆಣ್ಣು ಹುಡುಕುತ್ತಿರುವ ವಿಷಯವನ್ನು ಅತ್ತೆ ಶಕುಂತಲಾ ಮಧುರಾಗೆ ಹೇಳಿರುವ ಕಾರಣ, ಎಲ್ಲ ವಿಷಯವೂ ಆಕೆಗೆ ಗೊತ್ತಿದೆ.


ನೀವು ತುಂಬಾ ವಯಸ್ಸಾದವರು ಎಂದುಕೊಂಡಿದ್ದೆ, ನೀವಿನ್ನೂ ಯಂಗ್​ ಆಗಿದ್ದೀರಿ ಎಂದು ಭೂಮಿಕಾಳನ್ನು ಮಧುರಾ ಹೊಗಳಿದ್ದಾಳೆ. ಜೊತೆಗೆ ನಿಮಗೆ ಏನು ಪ್ರಶ್ನೆಗಳು ಇವೆಯೋ ಕೇಳಿ ಎಂದಿದ್ದಾಳೆ. ಜೊತೆಗೆ, ಗಂಡನನ್ನು ಇಷ್ಟು ಕೇರ್​ ಮಾಡುತ್ತಿರುವುದನ್ನು ನೋಡಿದರೆ ನೀವೆಷ್ಟು ಒಳ್ಳೆಯವರು ಎಂದು ತಿಳಿಯುತ್ತದೆ ಎಂದೂ ಹೇಳಿದ್ದಾಳೆ. ಇದೀಗ ಭೂಮಿಕಾ ತನ್ನ ಪ್ರಶ್ನೆಗಳನ್ನು ಮಧುರಾ ಬಳಿ ಕೇಳತೊಡಗಿದ್ದಾಳೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದೆ. ಮಧುರಾ ನೋಡಿದ್ರೆ ತುಂಬಾ ಒಳ್ಳೆಯವಳು ಇದ್ದ ಹಾಗೆ ಇದ್ದಾಳೆ. ಅವಳು ಖಂಡಿತವಾಗಿಯೂ ಗೌತಮ್​ನನ್ನು ಮದುವೆಯಾಗಲ್ಲ, ಬದಲಿಗೆ ಇಬ್ಬರನ್ನೂ ಒಂದು ಮಾಡುತ್ತಾಳೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಬಂದ ದಾರಿಯಲ್ಲಿಯೇ ವಾಪಸ್​ ಹೋಗು ಎಂದು ಮಧುರಾಳನ್ನು ಕಮೆಂಟ್​ನಲ್ಲಿಯೇ ಉಗಿಯುತ್ತಿದ್ದಾರೆ.

ಮಗಳನ್ನೇ ಮೀರಿಸ್ತಿರೋ ಅಮ್ಮ; ತುಂಡುಡುಗೆ ನಿವೇದಿತಾಗೆ, ಸೀರೆಯಲ್ಲಿ 'ಮಾಯಾವಿ ಬೆಡಗಿ' ಎಂದ ತಾಯಿ!

ಅದೇ ಇನ್ನೊಂದೆಡೆ, ಭೂಮಿಕಾಳ ಪೆದ್ದುತನಕ್ಕೆ ವೀಕ್ಷಕರು ಹಿಡಿಶಾಪ ಹಾಕುತ್ತಿದ್ದಾರೆ. ಇಷ್ಟು ಬೇಗ ಭೂಮಿಕಾ ಪೆದ್ದಿ ಆಗಿದ್ದು ಯಾಕೆ? ಅದೂ ತಮ್ಮನ್ನು ಸಾಯಿಸಲು ಹೊಂಚು ಹಾಕಿರುವ ಅತ್ತೆಯ ಬಗ್ಗೆ ಆಕೆಗೆ ಚೆನ್ನಾಗಿ ಗೊತ್ತು. ಆಕೆ ದುಷ್ಟಳು ಎನ್ನುವುದೂ ಗೊತ್ತು. ಹಾಗಿರುವಾಗ ಅಂಥ ಅತ್ತೆಯ ಮಾತಿನ ಹಿಂದೆ ಎಂಥ ಕುತಂತ್ರ ಇರುತ್ತದೆ ಎನ್ನುವುದು ಇವಳಿಗೆ ಯಾಕೆ ತಿಳಿದಿಲ್ಲ? ತನ್ನನ್ನು ಮತ್ತು ಗಂಡನನ್ನು ದೂರ ಮಾಡಲು ಈ ಹಿಂದೆ ಎಷ್ಟು ಸರ್ಕಸ್​ ಮಾಡಿದ್ದಳು ಎಂದು ಅರಿತಿರುವ ಭೂಮಿಕಾ ಮಿಸ್ಸು, ಇಲ್ಲಿ ಮಿಸ್ಸು ಹೊಡೆದದ್ದೇಕೆ? ಇಂಥ ಅವಿವೇಕತನದಿಂದ ಸೀರಿಯಲ್​ ಯಾಕೆ ಹಾಳು ಮಾಡುತ್ತೀರಿ ಎಂದೆಲ್ಲಾ ಅಭಿಮಾನಿಗಳು ಗರಂ ಆಗುತ್ತಿದ್ದಾರೆ. ಅಷ್ಟಕ್ಕೂ ಇವಳು ಹೇಳಿದ ಮಾತ್ರಕ್ಕೆ ಗೌತಮ್​ ಏನೂ ಬೇರೆ ಮದ್ವೆಯಾಗುವುದಿಲ್ಲ ಎನ್ನುವುದು ನಿಜವಾದರೂ, ಆಣೆ-ಗೀಣೆ ಮಾಡಿಸಿ ಮದ್ವೆ ಮಾಡಿಸಿಬಿಟ್ಟರೆ ಎನ್ನುವ ಚಿಂತೆ ಅಭಿಮಾನಿಗಳಿಗೆ!

ಇನ್ನು ರಾಧಾ ಮಿಸ್ಸು ಎಂದೇ ಫೇಮಸ್​ ಆಗಿ, ಇದೀಗ ಅಮೃತಧಾರೆಯಲ್ಲಿ ಮಧುರಾ ಆಗಿರುವ, ಶ್ವೇತಾ ಅವರು, ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರೂ, ರಾಧಾ ರಮಣ ಇವರಿಗೆ ಜನಪ್ರಿಯತೆ ನೀಡಿತು. ಕೆಲ ಕಾಲ ಸೀರಿಯಲ್ ನಟನೆಯಿಂದ ಕೊಂಚ ದೂರವೇ ಇದ್ದರೂ ಶ್ವೇತಾ ಹವಾ ಮಾತ್ರ ಕಡಿಮೆಯಾಗಿಲ್ಲ. ರಾಧಾ ರಮಣ ಬಳಿಕ ಅಂತರಪಟ, ನನ್ನ ದೇವ್ರು ಧಾರಾವಾಹಿಯಲ್ಲೂ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಶ್ವೇತಾ. ಅಷ್ಟೇ ಯಾಕೆ ಕಾಟೇರ ಸಿನಿಮಾದಲ್ಲಿ ಶ್ವೇತಾ ನಟಿಸಿದ್ದಾರೆ. ಇದೀಗ ಗೌತಮ್​ನನ್ನು ಮದುವೆಯಾಗಲು ಆಕೆ ಒಪ್ಪಿಕೊಂಡು ಬಿಟ್ಟರೆ ಎನ್ನುವ ಆತಂಕ ಸೀರಿಯಲ್​ ಪ್ರೇಮಿಗಳಿಗೆ! 

ದಿನಪೂರ್ತಿ ಭಿಕ್ಷೆ ಬೇಡಿ ಊಟ ಮಾಡಿದ ಬಿಗ್​ಬಾಸ್​ ಕಾವ್ಯಾ ಶಾಸ್ತ್ರಿ: ಅಪ್ಪನಿಗೆ ಮರುಜೀವ ಬಂದ ಆ ಘಟನೆ ನೆನೆದ ನಟಿ