ದೃಷ್ಟಿಬೊಟ್ಟು ಧಾರಾವಾಹಿಯಿಂದ ನಟಿ ಅಂಬಿಕಾ ಹೊರ ನಡೆದಿದ್ದು, ಅವರ ಸ್ಥಾನದಲ್ಲಿ ವಿಜಯಲಕ್ಷ್ಮೀ ಸಿಂಗ್ ಅವರು ಅಬ್ಬಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬದಲಾವಣೆಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.
Drishtibottu Kannada Serial Updates: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼದೃಷ್ಟಿಬೊಟ್ಟುʼ ಧಾರಾವಾಹಿಯಿಂದ ನಟಿ ಅಂಬಿಕಾ ಅವರು ಹೊರಗಡೆ ಬಂದಿದ್ದಾರೆ. ಶರಾವತಿಯ ಬರ್ತ್‌ಡೇ ಪಾರ್ಟಿಯಲ್ಲಿ ಅಬ್ಬಕ್ಕಳ ಆಗಮನವಾಗಿದ್ದು, ಅಲ್ಲಿ ಹೊಸ ನಟಿಯ ಆಗಮನವಾಗಿದೆ. ಇದು ವೀಕ್ಷಕರಿಗೂ ಶಾಕ್ ಕೊಟ್ಟಿದೆ.
ಅಬ್ಬಕ್ಕ ಪಾತ್ರ ಹೇಗಿದೆ?
ಹೌದು, ಖ್ಯಾತ ನಟಿ ಅಂಬಿಕಾ ಅವರು ʼದೃಷ್ಟಿಬೊಟ್ಟುʼ ಧಾರಾವಾಹಿಯಲ್ಲಿ ಹೀರೋ ತಾಯಿ ಅಬ್ಬಕ್ಕ ಪಾತ್ರದಲ್ಲಿ ನಟಿಸುತ್ತಿದ್ದರು. ಅಬ್ಬಕ್ಕ ತುಂಬ ಒಳ್ಳೆಯವಳು, ಅನಾಥ ದತ್ತನನ್ನು ತನ್ನ ಮಗ ಎಂದು ಸಾರಿ, ತನ್ನ ಇಡೀ ಸಾಮ್ರಾಜ್ಯದ ಪತಾಕೆ ಹಿಡಿಯುವಂತೆ ಮಾಡಿದ್ದಳು.
ಹೊಸ ನಟಿಯ ಆಗಮನ!
ಕೆಲ ಎಪಿಸೋಡ್‌ಗಳಲ್ಲಿ ಅಬ್ಬಕ್ಕ ಕಾಣಿಸಿರಲಿಲ್ಲ. ಅಬ್ಬಕ್ಕ ಪಾತ್ರಕ್ಕೆ ಮಹತ್ವವಿದ್ದರೂ ಕೂಡ, ಧಾರಾವಾಹಿಯಲ್ಲಿ ಒಂದಷ್ಟು ಟ್ವಿಸ್ಟ್‌ಗಳು ಎದುರಾಗುತ್ತಿದ್ದರೂ ಕೂಡ ಅಲ್ಲಿ ಅಬ್ಬಕ್ಕ ಇರಲಿಲ್ಲ. ಈಗ ಶರಾವತಿ ಪಾರ್ಟಿಯಲ್ಲಿ ಅಬ್ಬಕ್ಕನ ಆಗಮನವಾಗಿದೆ. ಅಂಬಿಕಾ ಬದಲು ವಿಜಯಲಕ್ಷ್ಮೀ ಸಿಂಗ್ ಅವರು ಕಾಣಿಸಿಕೊಂಡಿದ್ದಾರೆ.
ಅಂಬಿಕಾ ಹೊರಬಂದಿದ್ದು ಯಾಕೆ?
ಯಾಕೆ ಅಂಬಿಕಾ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದರು ಎಂಬ ಬಗ್ಗೆ ಮಾಹಿತಿ ಇಲ್ಲ. ಇನ್ನೊಂದು ಕಡೆ ಈ ಬಗ್ಗೆ ವಾಹಿನಿಯಾಗಲೀ, ಧಾರಾವಾಹಿ ತಂಡವಾಗಲೀ ಉತ್ತರ ಕೊಟ್ಟಿಲ್ಲ. ಈಗಾಗಲೇ ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ವಿಜಯಲಕ್ಷ್ಮೀ ಸಿಂಗ್ ಅವರು ಈ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದು, ಧಾರಾವಾಹಿ ಕಥೆ ಯಾವ ಸ್ವರೂಪ ಪಡೆಯಲಿದೆ ಎಂದು ಕಾದು ನೋಡಬೇಕಿದೆ.
ಈಗ ಸೀರಿಯಲ್‌ನಲ್ಲಿ ಏನಾಗ್ತಿದೆ?
ರೂಪ ಎನ್ನುವವಳನ್ನು ದತ್ತ ಪ್ರೀತಿ ಮಾಡಿರುತ್ತಾನೆ. ಅವಳು ಕೂಡ ದತ್ತನನ್ನು ತುಂಬ ಪ್ರೀತಿ ಮಾಡ್ತಿದ್ದೀನಿ ಎನ್ನುವಂತೆ ನಾಟಕ ಮಾಡಿರ್ತಾಳೆ. ಇದನ್ನೆಲ್ಲ ಶರಾವತಿಯೇ ( ದತ್ತನ ಅಕ್ಕ ) ಮಾಡಿಸಿದ್ದಳು. ಇನ್ನೊಂದು ಕಡೆ ರೂಪಾ ತಂಗಿ ದೃಷ್ಟಿ ಜೊತೆ ದತ್ತನ ಮದುವೆಯಾಗಿದೆ. ಮದುವೆ ಬಳಿಕ ದತ್ತನಿಗೆ ದೃಷ್ಟಿ ಮೇಲೆ ಲವ್ ಆಗಿತ್ತು. ತನ್ನ ಅಕ್ಕನನ್ನೇ ಮೊದಲು ಗಂಡ ಲವ್ ಮಾಡಿದ್ದು ಎನ್ನೋ ಸತ್ಯ ಕೂಡ ಅವಳಿಗೆ ಗೊತ್ತಾಗಿದ್ದು, ಸದ್ಯ ಅವಳು ಮನೆಯಿಂದ ಹೊರಗಡೆ ಹೋಗಿದ್ದಾಳೆ. ದೃಷ್ಟಿ ಮನೆಗೆ ಬರಲಿ ಅಂತ ದತ್ತ ಕಾಯುತ್ತಿದ್ದಾನೆ. ದತ್ತನ ಸಾವು ರೂಪಾಳಿಂದ ಆಗಬೇಕು ಅಂತ ಶರಾವತಿ ಬಯಸುತ್ತಿದ್ದಾಳೆ. ಇನ್ನೊಂದು ಕಡೆ ಸಿಂಚನಾ ಯಾಕೆ ತನ್ನನ್ನು ಮದುವೆ ಆಗಲಿಲ್ಲ ಎನ್ನೋ ಸತ್ಯ ಕೂಡ ದತ್ತನ ಮುಂದೆ ರಿವೀಲ್ ಆಗಬೇಕಿದೆ.
ಈ ಧಾರಾವಾಹಿ ಕಥೆ ಏನು?
ವಿಜಯ್ ಸೂರ್ಯ ಅವರು ದತ್ತಾ ಶ್ರೀರಾಮ ಪಾಟೀಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಳ್ಳಾರಿ ಜನರು ಇವರನ್ನು ದತ್ತಾ ಭಾಯ್ ಅಂತ ಕರೆಯುತ್ತಾರೆ. ಮಗು ಮನಸ್ಸಿನವನಾದ ದತ್ತ ಸ್ವಲ್ಪ ಖಡಕ್, ಕೊಟ್ಟ ಮಾತನ್ನು ತಪ್ಪಲ್ಲ. ಆದ್ರೆ ಅವನಿಗೆ ಸೌಂದರ್ಯ ಕಂಡ್ರೆ ಆಗಲ್ಲ. ತುಂಬ ಚೆಂದ ಇದ್ದ ರೂಪಾ ತನ್ನ ಪ್ರೀತಿಯನ್ನು ನಿರಾಕರಿಸಿದಳು ಅಂತಲೇ ಅವನು ಸೌಂದರ್ಯವನ್ನು ದ್ವೇಷ ಮಾಡುತ್ತಿದ್ದನು. ತನ್ನ ಸೌಂದರ್ಯ ತನಗೆ ಶತ್ರು ಆಗಬಾರದು ಅಂತ ದೃಷ್ಟಿ ಕೂಡ ಮುಖಕ್ಕೆ ಕಪ್ಪು ಮಸಿ ಬಳಿದುಕೊಂಡು, ತಾನು ಕಪ್ಪು ಎಂದು ಬಿಂಬಿಸಿಕೊಂಡು ಬದುಕುತ್ತಿದ್ದಾಳೆ. ಈ ಸತ್ಯ ಯಾವಾಗ ರಿವೀಲ್ ಆಗುವುದೋ ಏನೋ!
ಪಾತ್ರಧಾರಿಗಳು
ದೃಷ್ಟಿ- ಅರ್ಪಿತಾ ಮೋಹಿತೆ
ಶರಾವತಿ- ತನ್ಮಯಾ ಕಶ್ಯಪ್
ರೂಪಾ- ಅಮೃತಾ ಮೂರ್ತಿ
