ಬರ್ತಿದೆ ಹೊಸ ಧಾರಾವಾಹಿ ‘ದೃಷ್ಟಿಬೊಟ್ಟು’, ಮುಗಿಯುತ್ತಾ ಲಕ್ಷ್ಮಿ ಬಾರಮ್ಮ ಅಥವಾ ರಾಮಚಾರಿ?!
ಹೊಸ ಹೊಸ ಕಥೆಗಳನ್ನು ನೀಡೋದ್ರಲ್ಲಿ ಸದಾ ಮುಂದಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೀಗ ಮತ್ತೊಂದು ಹೊಸ ಧಾರಾವಾಗಿ ಬರೋಕೆ ಸಜ್ಜಾಗಿದೆ. ದೃಷ್ಟಿಬೊಟ್ಟು ಸೀರಿಯಲ್ ಪ್ರೊಮೊ ನೋಡಿ ಥ್ರಿಲ್ ಆಗಿದ್ದಾರೆ ಜನ.
ಇಲ್ಲಿವರೆಗೂ ಅದ್ಭುತ ಕಥೆಗಳನ್ನು, ಹೊಸ ಹೊಸ ನೀಡಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಈಗಷ್ಟೇ ನನ್ನ ದೇವ್ರು ಸೀರಿಯಲ್ ಆರಂಭವಾಗಿದೆ. ಅಷ್ಟರಲ್ಲೇ ಮತ್ತೊಂದು ಸೀರಿಯಲ್ ತೆರೆ ಕಾಣೋಕೆ ರೆಡಿಯಾಗಿದೆ. ಇನ್ನೆನು ಬರಲಿರುವ ಹೊಸ ಸೀರಿಯಲ್ ಹೆಸರು ದೃಷ್ಟಿ ಬೊಟ್ಟು.
ಈಗಾಗಲೇ ಸೀರಿಯಲ್ ಪ್ರೋಮೋ (Serial Promo) ಬಿಡುಗಡೆಯಾಗಿದ್ದು, ಸಿನಿಮಾ ರೇಂಜ್ ನಲ್ಲಿ ಮಾಡಿರುವ ಸೀರಿಯಲ್ ಪ್ರೋಮೋ ನೋಡಿ ಜನ ಇಷ್ಟಪಟ್ಟಿದ್ದಾರೆ. ಥ್ರಿಲ್ಲಿಂಗ್ ಪ್ರೊಮೋ, ಮೊದಲಿಗೆ ಶಾಂತಂ ಪಾಪಂ ಇರಬಹುದೇನೋ ಅನಿಸಿತು, ಬೆಸ್ಟ್ ಪ್ರೋಮೋ, ಸಖತ್ ಆಗಿದೆ ಎಂದು ಜನ ಕಾಮೆಂಟ್ ಮಾಡಿದ್ದಾರೆ.
ಸ್ಲಮ್ ನಂತರ ಏರಿಯಾದಲ್ಲಿ ಒಂದು ಪುಟ್ಟ ಗುಡಿಸಲಿನಲ್ಲಿ ವಾಸಿಸುವ ಹೆಂಗಸೊಬ್ಬಳು, ತನ್ನ ಮಗಳ ಮೇಲೆ ಯಾರ ಕೆಟ್ಟ ಕಣ್ಣು ಬೀಳದಿರಲಿ ಎನ್ನುವ ಅಮ್ಮ, ಚಂದದ ಗಿಳಿಗೆ ಯಾವಾಗ್ಲೂ ಪಂಜರನೇ ಗತಿ, ನೆಮ್ಮದಿಯಾಗಿ ಹಾರಾಡೊದು ಕಾಗೆಗಳು ಮಾತ್ರ, ನಿನಗೆ ನಿನ್ನ ಸೌಂದರ್ಯನೇ ಶಾಪ ಎನ್ನುತ್ತಾ ಆಕೆಗೆ ಮುಖಕ್ಕೆ ಬಣ್ಣ ಹಚ್ಚುವ ದೃಶ್ಯ ಇದಾಗಿದೆ.
ಮಗಳು ಅಂದವಾಗಿದ್ರೆ, ಯಾರ್ಯಾರೋ ಬಂದು ಆಕೆಯನ್ನ ಉಪಯೋಗಿಸುತ್ತಾರೆ ಎಂದು ಗೊತ್ತಿರೋ ಅಮ್ಮ, ಮಗಳ ಅಂದವನ್ನು ಮರೆಮಾಚೋದಕ್ಕೆ ಮುಖಕ್ಕೆ ಕಪ್ಪು ಬಳಿದು, ಮಗಳು ಇರೋದೆ ಕಪ್ಪು ಎಂದು ಬಿಂಬಿಸುವ, ಕೆಟ್ಟ ಕಣ್ಣುಗಳಿಂದ ಮಗಳನ್ನು ದೂರ ಇಡುವ ಕಥೆ ಇದಾಗಿದೆ.
ಸೀರಿಯಲ್ ಪ್ರೋಮೋ ನೋಡಿ ಜನ ಮೆಚ್ಚಿಕೊಂಡಿದ್ದಾರೆ ನಿಜ. ಆದರೆ ಇದು ರಿಮೇಕ್ ಸೀರಿಯಲ್ ಎಂದು ಗೊತ್ತಾದ ಮೇಲೆ ಕೆಲವು ಜನ ಕಿಡಿ ಕಾರಿದ್ದಾರೆ. ಯಾಕೆ ರಿಮೇಕ್ ಮಾಡ್ತೀರಾ, ಸ್ವಂತವಾಗಿ ಮಾಡೋಕೆ ಬರಲ್ವಾ? ಎಲ್ಲಾ ಚಾನೆಲ್ ಗಳಲ್ಲೂ ಬರೀ ರಿಮೇಕ್ ಧಾರಾವಾಹಿಗಳದ್ದೇ ಸದ್ದು ಎಂದು ಬರೆದುಕೊಂಡಿದ್ದಾರೆ.
ದೃಷ್ಟಿ ಬೊಟ್ಟು ಸೀರಿಯಲ್ ಹಿಂದಿ ಕಿರುತೆರೆಯಲ್ಲಿ ಕೆಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಮಾಹಿ ವಿಜ್ ಮತ್ತು ಮಿಶಲ್ ರಹೇಜಾ ಮುಖ್ಯಪಾತ್ರದಲ್ಲಿ ನಟಿಸಿದ ಲಾಗಿ ಲುಜ್ಸಿ ಲಗನ್ ಸೀರಿಯಲ್ ನ ರಿಮೇಕ್. ಇನ್ನು ಹೊಸ ಪ್ರೋಮೋ ನೋಡಿ ಲಕ್ಷ್ಮೀ ಬಾರಮ್ಮ ಮುಗಿತಿದ್ಯಾ ಅಥವಾ ರಾಮಾಚಾರಿ ಸೀರಿಯಲ್ ಮುಗಿಯುತ್ತಾ ಅಂತ ಕೇಳ್ತಿದ್ದಾರೆ ಜನ.
ಇನ್ನು ಸಿಕ್ಕಿದ ಮಾಹಿತಿಯಂತೆ ದೃಷ್ಟಿ ಬೊಟ್ಟು ಧಾರಾವಾಹಿಯನ್ನು ಗಟ್ಟಿಮೇಳ ಫೇಮ್ ನಟ ರಕ್ಷ್ ಗೌಡ (Raksh Gowda) ಮತ್ತು ಅನುಷಾ ದಂಪತಿ ತಮ್ಮ ಶ್ರೀ ಸಾಯಿ ಆಂಜನೇಯ ಕಂಪನಿ ಮೂಲಕ ನಿರ್ಮಾಣ ಮಾಡುತ್ತಿದ್ದು, ನಟ ವಿಜಯ್ ಸೂರ್ಯ (Vijay Surya) ನಾಯಕನಾಗಿ ನಟಿಸ್ತಿದ್ದಾರೆ ಎನ್ನಲಾಗಿದೆ. ನಾಯಕಿ ಯಾರು ಅನ್ನೋದು ತಿಳಿದು ಬಂದಿಲ್ಲ.