ಭಾರ್ಗವಿ LLB ಧಾರಾವಾಹಿಯಲ್ಲಿ ಇದ್ದಕ್ಕಿದ್ದಂತೆ ಮುಖ್ಯ ಪಾತ್ರಧಾರಿಯ ಬದಲಾವಣೆಯಾಗಿದೆ. ಜೆಪಿ ಪಾಟೇಲ್ ಪತ್ನಿ ನಿರ್ಮಲಾ ಪಾಟೀಲ್ ಪಾತ್ರದಲ್ಲಿ ನಟಿಸುತ್ತಿದ್ದ ಸುಜಾತ ಅಕ್ಷಯ್ ಧಾರಾವಾಹಿಯಿಂದ ಹೊರ ಬಿದ್ದಿದ್ದಾರೆ. ಇದೀಗ ನಟಿ ತಮ್ಮ ಪಾತ್ರ ಬದಲಾವಣೆ ಆಗಿರುವುದರ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ಭಾರ್ಗವಿ LLB ಧಾರಾವಾಹಿಯಿಂದ ಹೊರ ಬಿದ್ದ ನಟಿ ಸುಜಾತ ಅಕ್ಷಯ್
ಕಲಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಭಾರ್ಗವಿ LLB’. ಈ ಧಾರಾವಾಹಿಯಲ್ಲಿ ಸದ್ಯ ಜೆಪಿ ಪಾಟೀಲ್ ಜೈಲು, ಕೋರ್ಟ್ ಕೇಸ್ ಹಾಗೂ ಭಾರ್ಗವಿಯ ವಾದ ವಿವಾದ ಕಥೆ ಪ್ರಸಾರವಾಗುತ್ತಿದೆ. ಆರಂಭದಲ್ಲಿ ಟಾಪ್ ನಲ್ಲಿದ್ದ ಟಿಆರ್’ಪಿ ಕಳೆದ ಕೆಲವು ದಿನಗಳಲ್ಲಿ ತೀರ ಇಳಿದಿದೆ. ಶೀಘ್ರದಲ್ಲಿ ಬಿಗ್ ಬಾಸ್ ಆರಂಭವಾಗುವ ಕಾರಣದಿಂದ ‘ಭಾರ್ಗವಿ LLB’ ಮುಕ್ತಾಯವಾಗಲಿದೆ ಎನ್ನುವ ಸುದ್ದಿಯೂ ಇದೆ. ಇದೇ ಸಂದರ್ಭದಲ್ಲಿ ಧಾರಾವಾಹಿಯಲ್ಲಿ ಜೆಪಿ ಪಾಟೀಲ್ ಪತ್ನಿ ನಿರ್ಮಲಾ ಪಾತ್ರ ಬದಲಾಗಿದೆ. ಇಲ್ಲಿವರೆಗೂ ನಿರ್ಮಲಾ ಪಾತ್ರದಲ್ಲಿ ಜನಪ್ರಿಯ ನಟಿ ಸುಜಾತ ಅಕ್ಷಯ್ ನಟಿಸುತ್ತಿದ್ದರು. ಇದೀಗ ಇದ್ದಕ್ಕಿದ್ದಂತೆ ಧಾರಾವಾಹಿಯಲ್ಲಿ ಪಾತ್ರ ಬದಲಾವಣೆಯ ಕುರಿತು ನಟಿ ವಿಡಿಯೋ ಶೇರ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ವಿಡೀಯೋ ಹಂಚಿಕೊಂಡಿರುವ ನಟಿ ಸುಜಾತಾ ಹೇಳಿದ್ದೇನು?
''ಹಾಯ್ ಎಲ್ಲರಿಗೂ ನಮಸ್ಕಾರ. ನಾನು ಈಗ ಬ್ಯಾಂಕಾಕ್‌ನ ಸುವರ್ಣಭೂಮಿ ಏರ್ಪೋರ್ಟ್‌ನಲ್ಲಿ ಇದ್ದೀನಿ. ವಾಪಸ್ ಬೆಂಗಳೂರಿಗೆ ಬರುತ್ತಿದ್ದೇನೆ. ಈ ವಿಡಿಯೋ ಯಾಕೆ ಮಾಡ್ತಿದ್ಧೀನಿ ಅಂದ್ರೆ.. ಸಡನ್ ಆಗಿ ನನಗೆ ಒಂದು ಮೆಸೇಜ್ ಬಂತು.. 'ಭಾರ್ಗವಿ LLB’ ಸೀರಿಯಲ್‌ನಲ್ಲಿ ನಿರ್ಮಲಾ ಪಾಟೀಲ್ ಕ್ಯಾರೆಕ್ಟರ್‌ನ ರಿಪ್ಲೇಸ್ ಮಾಡ್ತಾ ಇದ್ದಾರೆ' ಅಂತ. ಹಾಗೇ ಹಲವಾರು ಟ್ರೋಲ್ ಪೇಜಸ್‌ನವರು ವೈಯಕ್ತಿಕ ಕಾರಣದಿಂದ ಸುಜಾತ ಅಕ್ಷಯ ಸೀರಿಯಲ್ ಬಿಡ್ತಾ ಇದ್ದಾರೆ' ಅಂತ ಹಾಕಿದ್ದಾರೆ. ಎಷ್ಟೊಂದು ಜನ ನನಗೆ ಮೆಸೇಜ್ ಮಾಡ್ತಾ ಇದ್ದಾರೆ.. ಹೇಗಿದ್ದೀರಾ? ಎಲ್ಲಾ ಓಕೆನಾ?'', 'ಯಾಕೆ ಏನಾಯ್ತು', ಹೆಲ್ತ್ ಏನಾದ್ರೂ ಪ್ರಾಬ್ಲಮ್ ಆಯ್ತಾ?'' ಅಂತೆಲ್ಲಾ. ಥ್ಯಾಂಕ್ಯೂ ಸೋ ಮಚ್ ಕಾಳಜಿಗೆ. ನಾನು ಹುಷಾರಾಗೇ ಇದ್ದೀನಿ. ಚೆನ್ನಾಗೇ ಇದ್ದೀನಿ. ವೆಕೇಶನ್ ಮೋಡ್‌ನಲ್ಲಿದ್ದೀನಿ. ಇದೊಂದು ಸುಂದರವಾದ ವೆಕೇಶನ್ ಆಗಿದೆ. ನಾನು ಮತ್ತು ನನ್ನ ಫ್ರೆಂಡ್ಸ್ ತುಂಬಾನೇ ಖುಷಿಯಾಗಿದ್ದೀವಿ. ನಾನು ಯಾಕೆ ಇದನ್ನ ಹೇಳ್ತಾ ಇದ್ದೀನಿ ಅಂತಂದ್ರೆ ಒಬ್ಬೊಬ್ಬರು ಒಂದೊಂದು ಕಲ್ಪನೆ ಮಾಡಿಕೊಳ್ಳೋದು ಬೇಡ ಅಂತ.
ಇನ್ನು ಧಾರಾವಾಹಿಯಿಂದ ಪಾತ್ರ ಬದಲಾವಣೆಯ ಕುರಿತು ಮಾತನಾಡಿದ ನಟಿ, ಚಾನೆಲ್ ನನ್ನನ್ನ ಯಾವಾಗಲೂ ಉತ್ತಮ ರೀತಿಯಲ್ಲಿ ನಡೆಸಿಕೊಂಡಿದೆ. ಆದರೆ ಪ್ರೊಡಕ್ಷನ್ ಹೌಸ್‌ನವರು ಯಾಕೆ ಈ ನಿರ್ಧಾರ ತೆಗೆದುಕೊಂಡರು ಅಂತ ನನಗೆ ಗೊತ್ತಿಲ್ಲ.ನನ್ನ ಡೇಟ್ ಕೇಳಲಿಲ್ಲ. ಶೂಟಿಂಗ್‌ಗೆ ಬಾ ಅಂತಾನೂ ಹೇಳಲಿಲ್ಲ. ಇದೆಲ್ಲದರ ಹಿಂದಿನ ಉದ್ದೇಶ ಏನು ಅಂತನೂ ನನಗೆ ಗೊತ್ತಿಲ್ಲ. ಆದರೆ ಈಗ ರೀಪ್ಲೇಸ್ ಅಂತೂ ಮಾಡಿದ್ದಾರೆ. ಏನೇ ಇರಲಿ ನಾನು ಇನ್ನೊಂದು ಸುಂದರವಾದ ಪ್ರಾಜೆಕ್ಟ್ ಮೂಲಕ ವಾಪಸ್ ಬರ್ತೀನಿ. ನಿಮ್ಮೆಲ್ಲರ ಪ್ರೀತಿ, ಶುಭ ಹಾರೈಕೆ, ಕಾಳಜಿಗೆ ತುಂಬು ಹೃದಯದ ಧನ್ಯವಾದಗಳು. ನಾನು ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. ನಿಮ್ಮ ಪ್ರೀತಿಗೆ ಥ್ಯಾಂಕ್ಯೂ ಸೋ ಮಚ್.
'ಭಾರ್ಗವಿ LLB' ಸೀರಿಯಲ್ ಶುರುವಾಗಿ ಸುಮಾರು ಒಂದು ವರ್ಷ 8 ತಿಂಗಳು ಆಗಿರಬಹುದು. ಇವತ್ತಿನವರೆಗೂ ಪ್ರತಿದಿನ ನಾನು ನಿರ್ಮಲಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದೀನಿ. ಪಾತ್ರ ಚೆನ್ನಾಗಿ ಬಂದಿದೆ. ಹೊಸದಾಗಿ ನನ್ನ ಪಾತ್ರವನ್ನ ಯಾರು ಮಾಡ್ತಿದ್ದಾರೋ.. ಅವರಿಗೂ ಆಲ್ ದಿ ಬೆಸ್ಟ್. ಅವರೂ ಮಿಂಚಲಿ. ನನಗೆ ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದ. ಹಾಗೂ ನನ್ನನ್ನು, ನನ್ನ ಪಾತ್ರವನ್ನು ಮೆಚ್ಚಿಕೊಂಡ ಎಲ್ಲಾ ವೀಕ್ಷಕರಿಗೂ ಧನ್ಯವಾದಗಳನ್ನು ತಿಳಿಸಿ ವಿಡಿಯೋ ಶೇರ್ ಮಾಡಿದ್ದಾರೆ ನಟಿ.


