Annayya Serial Joke By Nagendra Shah: ಅಣ್ಣಯ್ಯ ಧಾರಾವಾಹಿ ಗುಂಡಮ್ಮ, ಜಿಮ್‌ ಸೀನ ಆಸ್ಪತ್ರೆಗೆ ಹೋಗಿ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಏನಾಗುತ್ತದೆ? ಹೀಗೊಂದು ಜೋಕ್‌ ಹೇಳಿದ್ದಾರೆ ನಟ ನಾಗೇಂದ್ರ ಶಾ. 

ಅಣ್ಣಯ್ಯ ಧಾರಾವಾಹಿಯಲ್ಲಿ ( Annayya Serial ) ವೀರಭದ್ರನ ಪಾತ್ರದಲ್ಲಿ ಹಿರಿಯ ನಟ ನಾಗೇಂದ್ರ ಶಾ ಅವರು ನಟಿಸುತ್ತಿದ್ದಾರೆ. ಈ ಹಿಂದೆ ಪಾಸಿಟಿವ್‌ ಪಾತ್ರಗಳಿಂದ ಹಿಡಿದು, ಕಾಮಿಡಿವರೆಗೆ ಅದ್ಭುತವಾಗಿ ನಟಿಸಿ ಪಾತ್ರದ ಜೀವಾಳವಾಗಿರೋ ಅವರೀಗ ಇಲ್ಲಿ ಪಕ್ಕಾ ವಿಲನ್.‌ ಹೌದು, ಅಣ್ಣಯ್ಯ ಧಾರಾವಾಹಿಯಲ್ಲಿ ಅವರೀಗ ತನ್ನ ಸ್ವಾರ್ಥಕ್ಕಾಗಿ ಏನು ಬೇಕಿದ್ರೂ ಮಾಡೋಕೆ ರೆಡಿಯಾಗಿರೋ ಹೀರೋಯಿನ್‌ ಅಪ್ಪ. ಆದರೆ ತೆರೆ ಹಿಂದೆ ನಿರ್ದೇಶಕ, ಬರಹಗಾರ ಆಗಿರೋ ಅವರು ಜಿಮ್‌ ಸೀನ, ಗುಂಡಮ್ಮನ ಪಾತ್ರಗಳಿಗೆ ಇನ್ನಷ್ಟು ಕಾಮಿಡಿ ಟಚ್‌ ನೀಡಿದ್ದಾರೆ.

ಗುಂಡಮ್ಮ ರಶ್ಮಿಗೆ ಇಂಗ್ಲಿಷ್‌ ಹುಚ್ಚಿದ್ರೂ ಕೂಡ, ನಾಲ್ಕು ಅಕ್ಷರ ಇಂಗ್ಲಿಷ್‌ ಬರಲ್ಲ. ಇನ್ನು ಜಿಮ್‌ ಸೀನ ಕೂಡ ಓದೋದರಲ್ಲಿ ಹಿಂದೆ. ಇವರಿಬ್ಬರು ಆಸ್ಪತ್ರೆಗೆ ಹೋಗಿ ಅರ್ಧಬಂರ್ಧ ಇಂಗ್ಲಿಷ್‌ನಲ್ಲಿ ಮಾತನಾಡಿದ್ರೆ ಏನಾಗುತ್ತದೆ ಎನ್ನೋದನ್ನು ನಾಗೇಂದ್ರ ಶಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾಗೇಂದ್ರ ಶಾ ಅವರ ಈ ಕಾಮಿಡಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ನಾಗೇಂದ್ರ ಶಾ ಬರಹ ಹೀಗಿದೆ..

ಇಂಗ್ಲೀಷ್ ಹುಚ್ಚು ಹಿಡಿದಿರೋ ನಮ್ ಗುಂಡಮ್ಮ... ಅಷ್ಟೇ ಹುಚ್ಚಿರೋ ಜಿಮ್ ಸೀನನ್ನ ಕರ್ಕೊಂಡು ಡಾಕ್ಟ್ರತ್ರ ಹೋದ್ಲು.

ಡಾ : ಏನಮ್ಮ ಪ್ರಾಬ್ಲಂ ?

ಗು : ಒನ್ ವೀಕಿಂದ ನನ್ ಗಂಡಂಗೆ ಫ್ರೀ ಮೋಷನ್ನೆ ಇಲ್ಲ ಡಾಕ್ ಸಾ...

ಡಾ : ಓ... ಅದನ್ನೆಲ್ಲ ಯಾಕ್ ತಲೇಗ್ ಹಚ್ಕೊತಿರಿ. ಎರಡು ಮಾತ್ರೆ ಕೊಡ್ತಿನಿ. ಒಂದು ತೊಗೊಳ್ಳಿ ಸಾಕು. ಇನ್ನೂ ಮೋಷನ್ ಆಗ್ದಿದ್ರೆ ಇನ್ನೊಂದ್ ಕೊಡಿ.

ಎರಡು ದಿನಗಳ ನಂತರ...

ಗು : ಡಾಕ್ಟ್ರೆ... ಈಗ ನನ್ ಗಂಡಂಗೆ ಮೋಷನ್ನೆ ನಿಲ್ತಿಲ್ಲ... ಹಿಂಗೆ‌ ಆಗ್ತಿದ್ರೆ ಹಿ ಇಸ್ ಗೋಯಿಂಗ್ ಹೆವನ್.

ಡಾ : ವಾರದಿಂದ ಕಟ್ಕೊಂಡಿರತ್ತಲ್ವ... ಹೊಟ್ಟೆ ಕ್ಲೀನಾಗತ್ತೆ ಬಿಡು. ಮೊಸರನ್ನ ಕೊಡು. ನಿಲ್ಲತ್ತೆ ಮೋಷನ್ನು.

ಗು : ಅಯ್ಯೊ ಡಾಕ್ಟ್ರೆ.. ಅವರಗೆ ಕಾಲಿನ ಮಂಡಿ ಮೋಷನ್ ಫ್ರೀ ಇಲ್ಲ ಅಂದಿದ್ದು.

ಡಾ : ಅಯ್ಯ ನಿನ್ ಇಂಗ್ಲೀಷ್‌ಗಿಷ್ಟು ಬೆಂಕಿ ಬಿತ್ತು. ಮಂಡಿ ನೋವೂಂತ ಕನ್ನಡದಲ್ಲಿ ಬೊಗಳಕೇನಾಗಿತ್ತು ನಿನಗ್ ರೋಗ.

ಗು : ಈಗ ವಾಟುಡೂ ಡಾಕ್...

ಡಾ : ನಿನಗೂ ನಾಲಕ್ ಮಾತ್ರೆ ಕೊಡ್ತಿನಿ. ನೀನು ತೊಗೊ. ಇಬ್ರೂ ಒಟ್ಗೆ ಸ್ವರ್ಗದಲ್ಲೆ ಮೀಟ್ ಮಾಡಿ.

ಟಿಆರ್‌ಪಿಯಲ್ಲಿಯೂ ಅಣ್ಣಯ್ಯ ಧಾರಾವಾಹಿ ಕಮಾಲ್‌ ಮಾಡುತ್ತಿದೆ. ಮಾರಿಗುಡಿ ಶಿವು ಹಾಗೂ ಪಾರ್ವತಿ ಈ ಧಾರಾವಾಹಿ ಕಥಾನಾಯಕ, ನಾಯಕಿ. ಪರಿಸ್ಥಿತಿಗೆ ಕಟ್ಟುಬಿದ್ದು ಇವರಿಬ್ಬರು ಮದುವೆ ಆಗ್ತಾರೆ. ಇನ್ನೊಂದು ಕಡೆ ವೀರಭದ್ರನಿಂದ ಶಿವು ತಾಯಿ ಜೈಲಿಗೆ ಸೇರಿರುತ್ತಾಳೆ. ಇನ್ನು ವೀರಭದ್ರನಿಂದಲೇ ಶಿವು ಆಸ್ತಿ ಕೈತಪ್ಪಿ ಹೋಗಿರುತ್ತದೆ. ಅಂದಹಾಗೆ ಶಿವು ತನ್ನ ನಾಲ್ವರು ತಂಗಿಯರಲ್ಲಿ ಒಬ್ಬಳ ಮದುವೆ ಮಾಡಿದ್ದು, ಇನ್ನೂ ಮೂವರ ದಡ ಸೇರಿಸಬೇಕಿರುತ್ತದೆ. ಇದಕ್ಕೆ ವೀರಭದ್ರ ಅಡ್ಡಿ ಮಾಡುತ್ತಾನೆ. ವೀರಭದ್ರ ದೊಡ್ಡ ನೀಚ ಎನ್ನೋದು ಇನ್ನೂ ಶಿವುಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ.