ಬಿಗ್‌ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ ಅವರಿಗೆ ಹಸುವಿನ ಕರು ಮುದ್ದಾದ ಸ್ವಾಗತ ಕೋರಿದ ವಿಡಿಯೋ ವೈರಲ್ ಆಗಿದೆ. ಚೈತ್ರಾ ಬಿಗ್‌ಬಾಸ್ ಅನುಭವವನ್ನು ಸುಂದರ ಹಾಗೂ ವಿಭಿನ್ನ ಎಂದಿದ್ದಾರೆ. ಜೀವನದ ಪಾಠ ಕಲಿಸಿದ ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರ ತಮ್ಮ ಜನಪ್ರಿಯತೆ ಹೆಚ್ಚಿದೆ ಎಂದಿದ್ದಾರೆ.
ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಚೈತ್ರಾ ಕುಂದಾಪುರ, ಬಿಗ್‌ಬಾಸ್‌ನಿಂದ ಹೊರಕ್ಕೆ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ. ಇವರು ತಮ್ಮ ಭಾಷಣದ ಮೂಲಕವಷ್ಟೇ ಖ್ಯಾತಿ ಪಡೆದವರು ಅಲ್ಲದೇ, ಹಾಕುವ ಬಟ್ಟೆಯಿಂದಲೂ ಗೌರವ ಉಳಿಸಿಕೊಂಡವರು. ಸದಾ ಮೈತುಂಬಾ ಬಟ್ಟೆ ತೊಡುವ ಚೈತ್ರಾ ಕುಂದಾಪುರ ಬಿಗ್ಬಾಸ್ನಲ್ಲಿ ಕೂಡ ಸೀರೆಯಲ್ಲಿಯೇ ಮಿಂಚಿದವರು. ಇದರ ಜೊತೆಗೆ ಪ್ರಾಣಿಗಳ ಜೊತೆ ಇವರು ಎಷ್ಟು ಒಡನಾಟ ಹೊಂದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿರುವಂಥ ವಿಡಿಯೋ ಒಂದು ವೈರಲ್ ಆಗಿದೆ. ಬಿಗ್‌ಬಾಸ್ ಪಯಣ ಮುಗಿಸಿ ಮನೆಗೆ ಮರಳಿರುವ ಚೈತ್ರಾ ಅವರಿಗೆ ಹಸುವಿನ ಕರುವಿನಿಂದ ಮುದ್ದು ಸ್ವಾಗತ ಸಿಕ್ಕಿದೆ. ತನ್ನ ಪ್ರೀತಿಯ ಯಜಮಾನಿಗೆ ಪ್ರೀತಿಯ ಧಾರೆಯನ್ನೇ ಹರಿಸಿದೆ ಈ ಕರು. ಅದರ ವಿಡಿಯೋ ಇದೀಗ ವೈರಲ್ ಆಗಿದೆ.
ಬಿಗ್ ಸಮಾಚಾನ ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಇದರಲ್ಲಿ ಚೈತ್ರಾ ಅವರು ಬ್ಯಾಗ್ ಹಿಡಿದು ಮನೆಗೆ ವಾಪಸಾಗುವ ಸಂದರ್ಭದಲ್ಲಿ ಕರು ಅವರನ್ನು ಬರಮಾಡಿಕೊಂಡಿದೆ. ಬಳಿಕ, ಚೈತ್ರಾ ಅವರ ಮುಖವನ್ನು ನೆಕ್ಕುವ ಮೂಲಕ ಪ್ರೀತಿಯ ಧಾರೆಯನ್ನೇ ಹರಿಸಿದೆ. ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್ ಹಾಕಿದ್ದು, ಇದು ಚೈತ್ರಕ್ಕಾರ ಪ್ರೀತಿಯನ್ನು ತೋರಿಸುತ್ತದೆ, ಬಿಗ್ಬಾಸ್ನಲ್ಲಿ ಇವರು ಕೊನೆಯವರೆಗೂ ಇರಬೇಕಿತ್ತು ಎಂದೆಲ್ಲಾ ಹೇಳುತ್ತಿದ್ದಾರೆ. ಇನ್ನು ಕೆಲವರು ವಂಚನೆ ಪ್ರಕರಣದಲ್ಲಿ ಈಕೆ ಸಿಲುಕಿರುವುದನ್ನು ಮರೆಯಬೇಡಿ ಎಂದರೆ, ಚೈತ್ರಾ ಅಭಿಮಾನಿಗಳು ರೊಚ್ಚಿಗೆದ್ದು ಅದನ್ನು ಸಾಬೀತು ಮಾಡಿ, ಯಾರೋ ಆಗದವರು ಕೇಸ್ ಹಾಕಿದ ಮಾತ್ರಕ್ಕೆ ಎಲ್ಲವೂ ನಿಜವಾಗುವುದೇ ಆದರೆ, ಎಷ್ಟೋ ಮಂದಿ ಹೀಗೆಯೇ ಕೆಟ್ಟ ಹೆಸರು ಹೊತ್ತುಕೊಂಡೇ ಇರಬೇಕಿತ್ತು ಎನ್ನುತ್ತಿದ್ದಾರೆ.
ಅರೆಬರೆ ಡ್ರೆಸ್ ಹಾಕ್ಕೊಂಡು ಏನೇನೋ ಮಾಡ್ತಾರೆ... ಚೈತ್ರಾ ಕುಂದಾಪುರ ವಿಡಿಯೋ ವೈರಲ್: ಶ್ಲಾಘನೆಗಳ ಮಹಾಪೂರ
ಒಟ್ಟಿನಲ್ಲಿ, ಚೈತ್ರಾ ಅವರ ವರ್ಚಸ್ಸು ಬಿಗ್‌ಬಾಸ್ ಬಳಿಕ ಮತ್ತಷ್ಟು ಹೆಚ್ಚಾಗುತ್ತಿದೆ. ಇದಾಗಲೇ ಚೈತ್ರಾ ಅವರು ಹಲವು ಸಂದರ್ಶನಗಳಲ್ಲಿ ಬಿಗ್‌ಬಾಸ್ ಪಯಣದ ಕುರಿತು ಮಾತನಾಡಿದ್ದಾರೆ. 'ಹೊಸ ಹೊಸ ಅನುಭವ ಹೊತ್ತುಕೊಂಡು ಹೊರಗೆ ಬಂದಿದ್ದೇನೆ. ಬಿಗ್‌ಬಾಸ್ ನನಗೆ ಸುಂದರ ಅನುಭವ ನೀಡಿದೆ. ಇದು ವಿಭಿನ್ನ ಆಗಿರುವಂಥ ಅನುಭವ. ಬದುಕಿನಲ್ಲಿ ಬಹಳ ಕಡಿಮೆ ಜನರಿಗೆ ಇಂಥದ್ದೊಂದು ಅವಕಾಶ ಸಿಗುತ್ತದೆ. ಅನಿರೀಕ್ಷಿತವಾಗಿ ನರಕಕ್ಕೆ ಹೋಗಬೇಕಾಯ್ತು. ಅಲ್ಲಿಂದ ನನ್ನ ಬಿಗ್‌ಬಾಸ್ ಪ್ರಯಾಣ ಆರಂಭವಾಯಿತು. ಹೊಡೆದಾಟ, ಕಡಿಮೆ ಮೂಲಭೂತ ಸೌಕರ್ಯ ಇವುಗಳನ್ನೆಲ್ಲಾ ಎದುರಿಸಿದೆ. ಆಗ ಅನ್ನದ ಬೆಲೆ, ಒಗ್ಗಟ್ಟಿನ ಬೆಲೆ, ಜೀವನದಲ್ಲಿ ಸರ್ವೈವ್ ಆಗುವುದು ಹೇಗೆ ಎನ್ನುವ ಬಹುದೊಡ್ಡ ಪಾಠವನ್ನು ಇದರಿಂದ ಕಲಿತೆ ಎಂದಿದ್ದಾರೆ ಚೈತ್ರಾ. ಅಲ್ಲಿಂದ ನೇರವಾಗಿ ಸ್ವರ್ಗಕ್ಕೆ ಹೋದೆ. ಅಲ್ಲಿಯೂ ಹೊಸ ಹೊಸ ಅನುಭವ ಸಿಕ್ಕಿತು. ಬದುಕಿನಲ್ಲಿ ಯಾವುದೇ ರೀತಿಯ ಏರುಪೇರು ಬಂದರೂ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಅನುಭವ ಈ ಅವಧಿಯಲ್ಲಿ ಬಿಗ್‌ಬಾಸ್ ನನಗೆ ಕೊಟ್ಟಿತು ಎಂದಿದ್ದಾರೆ.
'ಸಿನಿಮಾ, ಕಿರುತೆರೆಯಂಥ ಎಂಟರ್ಟೇನ್ ಪ್ರಪಂಚದಿಂದ ತುಂಬಾ ದೂರ ಇದ್ದವಳು ನಾನು. ಆದ್ದರಿಂದ ಬಿಗ್‌ಬಾಸ್ ಮನೆಯಲ್ಲಿ ಒಳಗಡೆ ಆಟ ಬರುವುದಿಲ್ಲ, ಅಡ್ಜಸ್ಟ್ ಆಗುವುದು ತುಂಬಾ ಕಷ್ಟ ಎನ್ನುವ ಭಯ ಇತ್ತು. ನನ್ನ ಪ್ರಪಂಚವೇ ಬೇರೆ. ಆದರೆ ಯಾವ ಪ್ರಪಂಚವನ್ನು ವಿರೋಧಿಸ್ತಾ ಇದ್ನೋ ಅಲ್ಲಿಯೇ ಹೋಗಬೇಕಾಯಿತು. ಎಂಟರ್ಟೇನ್ಮೆಂಟ್ ಪ್ರಪಂಚದ ಬಗ್ಗೆ ಇದ್ದ ನನ್ನ ಅನಿಸಿಕೆಗಳೂ ದೂರವಾದವು' ಎಂದರು ಚೈತ್ರಾ ಕುಂದಾಪುರ. ಚೈತ್ರಾ ಆಗಿ ಒಳಗೆ ಹೋದೆ, ಚೈತ್ರಕ್ಕಾ ಆಗಿ ಹೊರಕ್ಕೆ ಬಂದೆ. ನನ್ನ ಒಳಗಿರುವ ಪುಟ್ಟ ಮಗುವಿನ ಮನಸ್ಸು, ರೌದ್ರ ಸ್ವರೂಪ ಎಲ್ಲವನ್ನೂ ನೋಡಿದ್ದೀರಿ. ಇಷ್ಟು ದಿನ ಪ್ರೀತಿಯನ್ನು ಹರಿಸಿದ್ದೀರಿ. ಪುಟ್ಟ ಮಕ್ಕಳಿಂದ ವಯಸ್ಸಾಗಿರುವವರೂ ನನಗೆ ಹಾರೈಸಿದ್ದಾರೆ. ಬಿಗ್ಬಾಸ್ಗೆ ಆಫರ್ ಬಂದಾಗ ತುಂಬಾ ಮಂದಿ ಅವಮಾನವನ್ನೂ ಮಾಡಿದರು. ಆದರೆ ಅವಮಾನ ಮಾಡಿದವರ ಎದುರೇ ಜಯಿಸುವುದು ಸುಲಭದ ಮಾತಲ್ಲ ಎಂದಿರುವ ಚೈತ್ರಾ, ಜೀವನದಲ್ಲಿ ನಾನು ತಲೆದೂಗಿ, ತಲೆಬಾಗಿ, ಎದುರಾಡದೇ ಇದ್ದು, ಹೇಳಿದ್ದನ್ನು ಕೇಳಿದ್ದು ಎಂದರೆ ಬಿಗ್‌ಬಾಸ್ ಮಾತನ್ನು ಮಾತ್ರ ಎಂದಿದ್ದಾರೆ.
ಸಿನಿಮಾಕ್ಕೆ ಚೈತ್ರಾ ಕುಂದಾಪುರ ಎಂಟ್ರಿ? ಶಿವಣ್ಣ ಜೊತೆ ಫಿಲ್ಮ್ ಹೆಸರೂ ಘೋಷಣೆ! ಇಲ್ಲಿದೆ ನೋಡಿ ಡಿಟೇಲ್ಸ್


