Asianet Suvarna News Asianet Suvarna News

ಪ್ರವಾಸಿಗರನ್ನು ರಕ್ಷಣೆ ಮಾಡೋ ಲೈಫ್‌ಗಾರ್ಡ್ಸ್‌ಗಿಲ್ಲ ರಕ್ಷಣೆ, ಪ್ರವಾಸಿಗರಿಂದಲೇ ಹಲ್ಲೆ

ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ಉತ್ತರಕನ್ನಡ ಜಿಲ್ಲೆಯತ್ತ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದ್ದಾರೆ.  ಆದರೆ, ಇಂತಹ ಪ್ರವಾಸಿಗರ ಪಾಲಿಗೆ ಲೈಫ್ ಗಾರ್ಡ್ ಗಳು ಆಪತ್ಭಾಂದವರಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಅವರ ಮೇಲೆಯೇ ಹಲ್ಲೆ ನಡೆಯುವ ಪ್ರಕರಣಗಳು ನಡೆಯುತ್ತಿವೆ. 

tourists Lifeguards don't have protection they are attacked by the tourists themselves gow
Author
First Published Jan 17, 2023, 10:04 PM IST

ಕಾರವಾರ (ಜ.17): ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ಉತ್ತರಕನ್ನಡ ಜಿಲ್ಲೆಯತ್ತ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದ್ದಾರೆ. ಹೀಗೆ ಜಿಲ್ಲೆಗೆ ಭೇಟಿ ನೀಡುವ ಜನರು ಇಲ್ಲಿನ ಕಡಲತೀರಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಅಪಾಯದ ಮಾಹಿತಿಯಿಲ್ಲದೇ ಮೋಜು ಮಸ್ತಿಯಲ್ಲಿ ತೊಡಗಿ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಆದರೆ, ಇಂತಹ ಪ್ರವಾಸಿಗರ ಪಾಲಿಗೆ ಲೈಫ್ ಗಾರ್ಡ್ ಗಳು ಆಪತ್ಭಾಂದವರಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಅವರ ಮೇಲೆಯೇ ಹಲ್ಲೆ ನಡೆಯುವ ಪ್ರಕರಣಗಳು ನಡೆಯುತ್ತಿವೆ. 

ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಉತ್ತರಕನ್ನಡ ಜಿಲ್ಲೆಗೆ ಆಗಮಿಸುವ ದೇಶ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಕೊರೊನಾ ಕಾಟ ಕಡಿಮೆಯಾದ ಬಳಿಕ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಒಂದು ಕೋಟಿ ಮೀರಿದೆ. ಕರಾವಳಿ ಕಡಲತೀರಗಳತ್ತ ಹೆಚ್ಚು ಆಕರ್ಷಿತರಾಗುವ ಪ್ರವಾಸಿಗರು ಕಡಲತೀರಗಳಲ್ಲಿನ ಆಳ ಅಗಲ ತಿಳಿಯದೆ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಮುರುಡೇಶ್ವರ, ಗೋಕರ್ಣ ಕಡಲತೀರ ನಿತ್ಯವೂ ಪ್ರವಾಸಿಗರಿಂದಲೇ ತುಂಬಿಕೊಳ್ಳುತ್ತಿದೆ.

ಆದರೆ, ಬಂದಂತಹ ಪ್ರವಾಸಿಗರು ಕಡಲತೀರದ ಅಪಾಯಗಳ ಬಗ್ಗೆ ತಿಳಿಯದೆ ಎಲ್ಲೆಂದರಲ್ಲಿ ಈಜಾಡುತ್ತಿದ್ದು, ಅಲೆಗಳ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾರೆ. ಜಿಲ್ಲೆಯ ವಿವಿಧ ಕಡಲತೀರಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಹೀಗೆ ಕೊಚ್ಚಿ ಹೋಗುತ್ತಿದ್ದ 95ಕ್ಕೂ ಹೆಚ್ಚು ಪ್ರವಾಸಿಗರನ್ನು ಲೈಫ್ ಗಾರ್ಡ್ ಗಳು ರಕ್ಷಣೆ ಮಾಡಿದ್ದಾರೆ. ಕಡಲತೀರದ ಬಳಿಯೇ ಇದ್ದು ,ತಮ್ಮ ಜೀವವನ್ನು ಲೆಕ್ಕಿಸದೆ ಪ್ರವಾಸಿಗರ ಜೀವ ಉಳಿಸುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಇನ್ನು ಜಿಲ್ಲೆಯ ಕಡಲತೀರಗಳತ್ತ ಆಕರ್ಷಿತರಾಗುವ ಪ್ರವಾಸಿಗರು ಆಪತ್ತು ತಂದುಕೊಳ್ಳುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಳೆದ ಕೆಲವು ವರ್ಷದ ಹಿಂದೆ ಕಡಲತೀರ ಹಾಗೂ ಜಲಪಾತಗಳು ಸೇರಿ ಒಟ್ಟು 12 ಕಡೆ 27 ಲೈಫ್ ಗಾರ್ಡ್ ಗಳ ನೇಮಕ ಮಾಡಿದೆ. ಹೀಗೆ ನೇಮಕವಾದ ಬಳಿಕ ಅಪಾಯಕ್ಕೆ ಸಿಲುಕಿದ ಸಾಕಷ್ಟು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. ತಮ್ಮ‌ ಜೀವವನ್ನೇ ಒತ್ತೆ ಇಟ್ಟು ಪ್ರವಾಸಿಗರನ್ನು ರಕ್ಷಣೆ ಮಾಡುವ ಲೈಫ್ ಗಾರ್ಡ್‌ಗಳಿಗೇ ಇದೀಗ ಜೀವಭಯ ಕಾಡುವಂತಾಗಿದೆ.

ಸೈಂಟ್ ಮೇರಿಸ್ ದ್ವೀಪ: ಸಿಬ್ಬಂದಿ ಉದ್ಧಟತನ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ 

ಕಡಲತೀರಗಳಲ್ಲಿ ಈಜಾಡುತ್ತಿದ್ದವರಿಗೆ ಮುಂದೆ ಹೋಗದಂತೆ, ಆಳ ಇರುವ ಕಡೆ ತೆರಳದಂತೆ ಸೂಚಿಸಿದರೆ ಕೆಲವು ಪ್ರವಾಸಿಗರು ಅವರೊಂದಿಗೆ ಜಗಳವಾಡುತ್ತಾರೆ. ಅಲ್ಲದೇ, ಕಳೆದ ಎರಡು ದಿನದ ಹಿಂದೆ ಮುರುಡೇಶ್ವರದಲ್ಲಿ ಅಲೆಗೆ ಕೊಚ್ಚಿಹೋಗುತ್ತಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದರೂ, ವಿನಾ ಕಾರಣ ಕುಡಿದ ಮತ್ತಿನಲ್ಲಿ ಲೈಫ್ ಗಾರ್ಡ್ ಗಳ ಮೇಲೆಯೇ ಹಲ್ಲೆ ಮಾಡಿ ಗಾಸಿಗೊಳಿಸಲಾಗಿದೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೆಚ್ಚು ಪ್ರವಾಸಿಗರು ಸೇರುವ ತಾಣಗಳಲ್ಲಿ ಪೊಲೀಸರನ್ನು ನೇಮಕ ಮಾಡಬೇಕು. ಅಲ್ಲದೇ, ಜೀವ ಉಳಿಸುವ ಲೈಫ್‌ಗಾರ್ಡ್ಸ್‌ಗಳ ಜತೆ ಉತ್ತಮವಾಗಿ ವರ್ತಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಉತ್ತರ ಕನ್ನಡದ ಅದ್ಭುತ ರಂಗೋಲಿ ಚಿತ್ರಕಾರ ಚಂದನ್ ದೇವಾಡಿಗ

ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ಕಡಲತೀರಗಳಲ್ಲಿ ಪ್ರವಾಸಿಗರ ರಕ್ಷಣೆಗೆ ಲೈಫ್ ಗಾರ್ಡ್ಸ್‌ಗಳು ಆಪತ್ಭಾಂದವರಾಗಿದ್ದು, ಅವರ ಮೇಲಿನ ಹಲ್ಲೆ ನಿಜಕ್ಕೂ ಖಂಡನೀಯ. ಜಿಲ್ಲಾಡಳಿತ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿ ಹೆಚ್ಚು ಪ್ರವಾಸಿಗರು ಸೇರುವ ಸ್ಥಳಗಳಲ್ಲಿ ಪೊಲೀಸರನ್ನು ನಿಯುಕ್ತಿಗೊಳಿಸಿ ಲೈಫ್‌ಗಾರ್ಡ್ಸ್‌ಗಳಿಗೂ ರಕ್ಷಣೆ ಒದಗಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹ.

Follow Us:
Download App:
  • android
  • ios