ಉತ್ತರ ಪ್ರದೇಶದ ಲಕ್ನೋದಲ್ಲಿರುವ ಸಿಗರೇಟ್ ಬಾಬಾ ದೇಗುಲವು ವಿಶಿಷ್ಟ ನಂಬಿಕೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಭಕ್ತರು ಸಮಾಧಿಗೆ ಸಿಗರೇಟ್ ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ, ಇದು ಹಿಂದೂ ಮತ್ತು ಮುಸ್ಲಿಂ ಭಕ್ತರನ್ನು ಆಕರ್ಷಿಸುತ್ತದೆ. ಏನಿದರ ಕಥೆ?

ನಮ್ಮ ಭಾರತದಲ್ಲಿ ಹಲವು ವಿಚಿತ್ರ ನಂಬಿಕೆಗಳಿವೆ. ಹಲವರು ವಿಚಿತ್ರ ರೀತಿಯಲ್ಲಿ ಸಂತರೂ, ಬಾಬಾಗಳೂ, ಸಾಧುಗಳೂ, ದೇವರೂ ಆಗಿಬಿಡುತ್ತಾರೆ. ಅಂಥವರಿಗೆ ಕಟ್ಟಡ ಕಟ್ಟಿ ಪೂಜೆ ಮಾಡಿ ಹರಕೆ ಸಲ್ಲಿಸಕು ಶುರು ಮಾಡುತ್ತಾರೆ. ಅಂಥದೇ ಒಂದು ವಿಶಿಷ್ಟ ಸಮಾಧಿ ದೇವಾಲಯ ಸಿಗರೇಟ್ ಬಾಬಾ ದೇಗುಲ. ಎರಡೂ ಧರ್ಮಗಳ ಜನ ಇಲ್ಲಿಗೆ ಬಹಳ ನಂಬಿಕೆಯಿಂದ ಬರುತ್ತಾರೆ. ಇಲ್ಲಿ ಬರುವ ಭಕ್ತ ಯಾವುದೇ ಧರ್ಮ ಅಥವಾ ನಂಬಿಕೆಯನ್ನು ಅನುಸರಿಸಿದರೂ ಪರವಾಗಿಲ್ಲ. ಆದರೆ ಭಕ್ತರು ದೇವಾಲಯದಲ್ಲಿ ನಂಬಿಕೆಯಿಂದ ಸಿಗರೇಟ್ ಅರ್ಪಿಸಬೇಕು ಮಾತ್ರ. ಈ ದೇವಾಲಯದಲ್ಲಿ ಜನರು ಸಿಗರೇಟ್ ಹರಿಕೆ ನೀಡುತ್ತಾರೆ, ಈ ವಿಚಿತ್ರ ಹರಕೆಯ ಕತೆ ಇಲ್ಲಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮೂಸಾ ಬಾಗ್ ಎಂಬ ಸ್ಥಳವಿದೆ. ನೀವು ಈ ಸ್ಥಳಕ್ಕೆ ಬಂದರೆ ಒಂದು ಸಮಾಧಿ ಸ್ಥಾನವನ್ನು ಗಮನಿಸಬಹುದು. ಈ ಸಮಾಧಿಯನ್ನು ಸಿಗರೇಟ್ ಬಾಬಾ ಸಮಾಧಿ ಎಂದು ಕರೆಯಲಾಗುತ್ತದೆ. ಇದರ ವಿಶೇಷತೆಯೆಂದರೆ, ಇಲ್ಲಿಗೆ ಬರುವ ಭಕ್ತರು ಸಮಾಧಿಗೆ ಸಿಗರೇಟ್ ಅರ್ಪಿಸಿ ತಮ್ಮ ಮನದ ಇಷ್ಟಾರ್ಥಗಳನ್ನು ಕೇಳುತ್ತಾರೆ. ಅವು ಈಡೇರುತ್ತವೆ ಎಂದು ನಂಬುತ್ತಾರೆ. ಈ ಸಮಾಧಿಗೆ ಹಲವು ಹೆಸರುಗಳಿವೆ. ಕೆಲವರು ಇದನ್ನು ಕ್ಯಾಪ್ಟನ್ ವೆಲ್ಸ್ ಅಲಿಯಾಸ್ ಕ್ಯಾಪ್ಟನ್ ಸಹಾಬ್ ಅಲಿಯಾಸ್ ಸಿಗರೇಟ್ ಬಾಬಾ ಅವರ ಸಮಾಧಿ ಎಂದು ಕರೆಯುತ್ತಾರೆ.

ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ಜನರು ಸಿಗರೇಟ್ ಬಾಬಾ ಅವರ ದೇಗುಲಕ್ಕೆ ಬಹಳ ನಂಬಿಕೆಯಿಂದ ಬರುತ್ತಾರೆ. ಪ್ರತಿ ಗುರುವಾರ ಈ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುತ್ತಾರೆ. ಸಿಗರೇಟ್ ಬಾಬಾ ಅವರ ದೇಗುಲವನ್ನು ಯಾವಾಗ ಮತ್ತು ಹೇಗೆ ನಿರ್ಮಿಸಲಾಯಿತು ಎಂಬುದರ ಹಿಂದೆ ಒಂದು ಕಥೆಯಿದೆ. 

ಮಾರ್ಚ್ 21, 1858 ರಂದು, ಮೂಸಾ ಬಾಗ್‌ನಲ್ಲಿ ಬ್ರಿಟಿಷ್ ಸೈನಿಕರು ಮತ್ತು ಅವಧ್‌ನ ಸ್ವಾತಂತ್ರ್ಯ ಹೋರಾಟಗಾರರ ನಡುವೆ ಯುದ್ಧ ನಡೆಯಿತು. ಬ್ರಿಟಿಷರಿಗೆ ಕ್ಯಾಪ್ಟನ್ ವೆಲ್ಸ್ ನೇತೃತ್ವ ವಹಿಸಿದ್ದ. ಮತ್ತು ಅವಧ್ ಹೋರಾಟಗಾರಿಗೆ ಮೌಲ್ವಿ ಅಹ್ಮದ್ ಉಲ್ಲಾ ಶಾ ನೇತೃತ್ವ ವಹಿಸಿದ್ದರು. ಬ್ರಿಟಿಷ್ ಸೈನ್ಯವು ಈ ಯುದ್ಧವನ್ನು ಗೆದ್ದಿತು. ಆದರೆ ಕ್ಯಾಪ್ಟನ್ ವೆಲ್ಸ್ ಅದರಲ್ಲಿ ಕೊಲ್ಲಲ್ಪಟ್ಟನು. ನಂತರ ಅವನ ಸ್ನೇಹಿತ ಇಲ್ಲಿ ಅವರ ಸಮಾಧಿಯನ್ನು ನಿರ್ಮಿಸಿದರು. ಸಮಾಧಿಯ ಮೇಲೆ ಇನ್ನೂ ಒಂದು ಕಲ್ಲು ಇದೆ, ಅದರ ಮೇಲೆ ಮಾರ್ಚ್ 21, 1858 ರ ದಿನಾಂಕ ಮತ್ತು ಕ್ಯಾಪ್ಟನ್ ವೆಲ್ಸ್ ಹೆಸರನ್ನು ಬರೆಯಲಾಗಿದೆ. 

ಭಾರತದ ಈ ಊರಿನಲ್ಲಿ ನವವಧು 7 ದಿನಗಳವರೆಗೆ ಬಟ್ಟೆಯನ್ನೇ ಧರಿಸೊಲ್ಲ!

ಕ್ಯಾಪ್ಟನ್ ವೆಲ್ಸ್ ಸಿಗರೇಟ್ ಅನ್ನು ತುಂಬಾ ಪ್ರೀತಿಸುತ್ತಿದ್ದ. ಆದ್ದರಿಂದ ಅವರ ಸ್ನೇಹಿತರು ಪ್ರತಿದಿನ ಅಲ್ಲಿಗೆ ಸಿಗರೇಟ್ ಅರ್ಪಿಸಲು ಬರುತ್ತಿದ್ದರು. ಅವರ ಕಾಲಾನಂತರ ಇತರರೂ ಅಲ್ಲಿಗೆ ಬಂದು ಹಾಗೇ ಮಾಡತೊಡಗಿದರು. ಇಲ್ಲಿಯವರೆಗೆ ಜನರು ಅದೇ ಸಂಪ್ರದಾಯವನ್ನು ಬಹಳ ನಂಬಿಕೆಯಿಂದ ಅನುಸರಿಸುತ್ತಿದ್ದಾರೆ. ಇಲ್ಲಿ ಹರಕೆ ಹೇಳಿಕೊಂಡು ಸಿಗರೇಟ್‌ ನೀಡಿದರೆ ಇಷ್ಟಾರ್ಥ ಈಡೇರುವುದು ಎಂದು ನಂಬುತ್ತಾರೆ.

ಇದೇ ರೀತಿ ಅರುಣಾಚಲದಲ್ಲೂ ಒಬ್ಬ ಸೈನ್ಯದ ಕ್ಯಾಪ್ಟನ್‌ ದೇವಾಲಯವಿದೆ. ಅಲ್ಲಿ ಕ್ಯಾಪ್ಟನ್‌ನ ಫೋಟೋ ಇದೆ. ಅದಕ್ಕೆ ಸೈನಿಕರು ಭಕ್ತಿಭಾವದಿಂದ ನಡೆದುಕೊಳ್ಳುತ್ತಾರೆ. ಈತ 1962ರ ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ಹುತಾತ್ಮನಾದನಂತೆ. ಅಂದಿನಿಂದ ಪ್ರತಿದಿನವೂ ಆ ಕ್ಯಾಪ್ಟನ್‌ ಧರಿಸಿದ್ದ ಯುನಿಫಾರ್ಮ್‌ ಅನ್ನು ಒಗೆದು ಒಣಗಿಸಿ ಇಸ್ತ್ರಿ ಮಾಡಿ ಅಲ್ಲಿ ಇಡಲಾಗುತ್ತದೆ. ಆತ ಅದನ್ನು ಧರಿಸುತ್ತಾನೆ ಎಂಬ ನಂಬಿಕೆ ಇದೆ. ಆ ಕ್ಯಾಪ್ಟನ್‌, ಈಗಲೂ ಸೈನಿಕರಿಗೆ ಕೊರೆಯುವ ಚಳಿಯಲ್ಲಿ, ಹಿಮ ಸುರಿಯುತ್ತಿರುವ ಸಂದರ್ಭದಲ್ಲಿ, ದಾರಿ ಕಾಣದಾದಂಥ ಹೊತ್ತಿನಲ್ಲಿ ಬಂದು ನೆರವಾಗುತ್ತಾನೆ ಎಂದು ನಂಬುತ್ತಾರೆ. 

ವೀಡಿಯೋಗಾಗಿ ಕಿಟಕಿ ಬದಿ ಕುಳಿತು ಪ್ರಯಾಣಿಸುತ್ತಿದ್ದವನ ಕೆನ್ನೆಗೆ ಬಾರಿಸಿದ ಯೂಟ್ಯೂಬರ್‌ ಅರೆಸ್ಟ್