ಅಮೆರಿಕಾದ ರಸ್ತೆಯೊಂದು ಕೆಲ ತಿಂಗಳು ಬಂದ್ ಆಗುತ್ತೆ. ಪ್ರತಿ ವರ್ಷ ರಸ್ತೆ ಬಂದ್ ಮಾಡಲಾಗುತ್ತೆ. ರಸ್ತೆ ರಿಪೇರಿ ಇಲ್ಲ ಹಾಳದ ರಸ್ತೆ ಇದಕ್ಕೆ ಕಾರಣ ಅಲ್ವೇ ಅಲ್ಲ.
ಭಾರತದ ರಸ್ತೆಗಳ ಬಗ್ಗೆ ಮತ್ತೆ ಮತ್ತೆ ಹೇಳ್ಬೇಕಾಗಿಲ್ಲ. ಇಲ್ಲಿ ರಸ್ತೆಗಿಂತ ಹೊಂಡಗಳೇ ಜಾಸ್ತಿ. ಇಲ್ಲಿ ಸ್ಪೀಡ್ ಬ್ರೇಕ್ ಅಗತ್ಯವೇ ಇಲ್ಲ. ರಸ್ತೆ ರಿಪೇರಿ, ಗುಡ್ಡ ಕುಸಿತ ಅಂತ ಅನೇಕ ದಿನಗಳ ಕಾಲ ರಸ್ತೆ ಬಂದ್ ಆಗೋದನ್ನು ನೀವು ಕೇಳಿದ್ದೀರಿ. ಆದ್ರೆ ಅಮೆರಿಕಾದಲ್ಲಿ ಹಾವಿನ ಕಾರಣಕ್ಕೆ ರಸ್ತೆ ಬಂದ್ ಆಗುತ್ತೆ.
ಹೌದು, ಅಮೆರಿಕಾದ ರಸ್ತೆಯೊಂದರಲ್ಲಿ ಹಾವಿಗೋಸ್ಕರ ವಾಹನಗಳು ನಿಲ್ಲುತ್ವೆ. ಅಮೆರಿಕದ ಕಾಡಿನ ಮಧ್ಯೆ ಹಾದುಹೋಗುವ ಈ ರಸ್ತೆ ವರ್ಷದ ಕೆಲ ತಿಂಗಳು ಸಂಪೂರ್ಣ ಬಂದ್ ಆಗಿರುತ್ತೆ. ಹಾವು ಸೇರಿದಂತೆ ಹಲವು ಜೀವಿಗಳು ತಮ್ಮ ಋತುಮಾನಕ್ಕೆ ಅನುಗುಣವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವ ಸಂದರ್ಭದಲ್ಲಿ ಯಾವುದೇ ಅಪಾಯವಾಗಬಾರದು ಎಂಬುದು ಇದರ ಉದ್ದೇಶ. ಪ್ರಕೃತಿಯೊಂದಿಗೆ ಮನುಷ್ಯರು ಹೇಗೆ ಸಹಬಾಳ್ವೆ ನಡೆಸಬಹುದು ಎಂಬುದಕ್ಕೆ ಈ ರಸ್ತೆ ಉತ್ತಮ ಉದಾಹರಣೆಯಾಗಿದೆ.
ಹಾವುಗಳಿಗಾಗಿ ರಸ್ತೆ ಬಂದ್
ಈ ವಿಶಿಷ್ಟ ರಸ್ತೆ ಅಮೆರಿಕದ ಇಲಿನಾಯ್ಸ್ ರಾಜ್ಯದಲ್ಲಿರುವ ಶಾವ್ನೀ ನ್ಯಾಷನಲ್ ಫಾರೆಸ್ಟ್ (Shawnee National Forest) ಅರಣ್ಯ ಪ್ರದೇಶದಲ್ಲಿದೆ. ಸ್ಥಳೀಯವಾಗಿ ಇದನ್ನು ಸ್ನೇಕ್ ರೋಡ್ (Snake Road) ಎಂದು ಕರೆಯಲಾಗುತ್ತದೆ. ಇದರ ಅಧಿಕೃತ ಹೆಸರು ಫಾರೆಸ್ಟ್ ಸರ್ವಿಸ್ ರೋಡ್ 345 (Forest Service Road 345). ಸುಮಾರು ನಾಲ್ಕು ಕಿಲೋಮೀಟರ್ ಉದ್ದವಿರುವ ಈ ರಸ್ತೆಯನ್ನು ಲಾ ರೂ ರಸ್ತೆ (LaRue Road) ಎಂದೂ ಗುರುತಿಸಲಾಗುತ್ತದೆ.
ಈ ರಸ್ತೆಯ ಭೌಗೋಳಿಕ ವಿನ್ಯಾಸವೇ ಇದನ್ನು ವಿಶೇಷವಾಗಿಸಿದೆ. ಒಂದು ಬದಿಯಲ್ಲಿ ಎತ್ತರದ ಸುಣ್ಣದ ಕಲ್ಲಿನ ಬಂಡೆಗಳಿದ್ದರೆ, ಮತ್ತೊಂದು ಬದಿಯಲ್ಲಿ ಜೌಗು ಪ್ರದೇಶವಿದೆ. ಈ ಎರಡು ನೈಸರ್ಗಿಕ ಆವಾಸಸ್ಥಾನಗಳ ನಡುವೆ ಸಂಚರಿಸಲು ಹಾವುಗಳು ಮತ್ತು ಇತರ ಜೀವಿಗಳು ಈ ರಸ್ತೆಯನ್ನು ದಾಟಲೇಬೇಕು.
ಈ ಪ್ರದೇಶದಲ್ಲಿ ವಾಸಿಸುವ ಹಾವುಗಳು ಮತ್ತು ಇತರ ಜೀವಿಗಳು ವರ್ಷದಲ್ಲಿ ಎರಡು ಬಾರಿ ತಮ್ಮ ವಾಸಸ್ಥಳವನ್ನು ಬದಲಾಯಿಸುತ್ತವೆ. ಈ ಋತುಮಾನದ ವಲಸೆಯ ಸಂದರ್ಭದಲ್ಲಿ ಅವುಗಳಿಗೆ ಸ್ನೇಕ್ ರೋಡ್ ದಾಟಬೇಕಾಗುತ್ತದೆ. ಚಳಿಗಾಲದಲ್ಲಿ ಹಾವುಗಳು ಸುಣ್ಣದ ಕಲ್ಲಿನ ಬಂಡೆಗಳಲ್ಲಿರುವ ಬಿರುಕುಗಳು ಹಾಗೂ ಸುರಕ್ಷಿತ ಆಳವಾದ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತವೆ. ಇದರಿಂದ ಅವುಗಳಿಗೆ ಚಳಿಯಿಂದ ರಕ್ಷಣೆ ಸಿಗುತ್ತದೆ. ಹವಾಮಾನ ಬೆಚ್ಚಗಾಗುತ್ತಿದ್ದಂತೆ ಬಂಡೆಗಳಿಂದ ಹೊರಬಂದು ಜೌಗು ಪ್ರದೇಶಗಳತ್ತ ಸಾಗುತ್ತವೆ. ಮತ್ತೆ ಚಳಿಗಾಲ ಆರಂಭವಾಗುವ ಮುನ್ನ ಬಂಡೆಗಳತ್ತ ಮರಳುತ್ತವೆ.
ಹಿಂದೆ ಈ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದಾಗ ರಸ್ತೆ ದಾಟುವ ಸಂದರ್ಭದಲ್ಲಿ ಅನೇಕ ಹಾವುಗಳು ಮತ್ತು ಸಣ್ಣ ಜೀವಿಗಳು ವಾಹನಗಳ ಚಕ್ರಗಳಿಗೆ ಸಿಲುಕಿ ಸಾವನ್ನಪ್ಪುತ್ತಿದ್ದವು. ಇದನ್ನು ತಡೆಯುವ ಉದ್ದೇಶದಿಂದ ಅಮೆರಿಕದ ಅರಣ್ಯ ಸೇವಾ ಇಲಾಖೆ ಈ ರಸ್ತೆಯಲ್ಲಿ ನಿರ್ದಿಷ್ಟ ಅವಧಿಗೆ ವಾಹನ ಸಂಚಾರವನ್ನು ನಿಷೇಧಿಸುವ ಕ್ರಮ ಕೈಗೊಂಡಿದೆ. ಮಾರ್ಚ್ 15ರಿಂದ ಮೇ 15ರವರೆಗೆ ರಸ್ತೆ ಬಂದ್ ಆಗಿರುತ್ತದೆ. ಸೆಪ್ಟೆಂಬರ್ 1ರಿಂದ ಅಕ್ಟೋಬರ್ 30ರವರೆಗೆ ಮತ್ತೆ ವಾಹನ ಸಂಚಾರವನ್ನು ನಿಲ್ಲಿಸಲಾಗುತ್ತದೆ.















