ಬನಾರಸ್ ಎಂದು ಕರೆದರೆ ವಿಶ್ವವಿದ್ಯಾಲಯ, ವಿದ್ವಾನ್‌ಗಳ ನೆನಪು ಮಾಡಿಕೊಡುತ್ತದೆ. ಕಾಶಿ ಎಂದರೆ ವಿಶ್ವನಾಥನ ಸನ್ನಿಧಾನ, ಗಂಗೆಯ ಮಡಿಲು, ಹರಿಶ್ಚಂದ್ರ,  ಮಣಿಕರ್ಣಿಕಾ, ಅಸ್ಸಿ ಘಾಟ್ ನೆನಪಾಗುತ್ತದೆ. ಇನ್ನು ವಾರಣಾಸಿ ಎಂದರೆ ಪ್ರಧಾನಿ ಮೋದಿಯ ಕಾರಣದಿಂದ ನೆನಪಾಗುತ್ತದೆ. ಒಟ್ಟಿನಲ್ಲಿ ಹೆಸರು ಬೇರೆ ಬೇರೆ. ನಗರ ಒಂದೇ- ಬಹುಮುಖಿ ವ್ಯಕ್ತಿತ್ವದ ವಾರಣಾಸಿ. 

ಇಲ್ಲಿ ಶಿವಲಿಂಗಕ್ಕೆ ಬೆಣ್ಣೆ ಹಚ್ಚಿದ್ರೆ ಕ್ಷಣಾರ್ಧದಲ್ಲಿ ತುಪ್ಪ ಆಗುತ್ತೆ, ನೀವು ಮಾಡಬಹುದು!

ಘಾಟ್‌ಗಳ ನಗರ

ಇಲ್ಲಿ ಏನಿಲ್ಲವೆಂದರೂ ಕನಿಷ್ಠ 100 ಘಾಟ್‌ಗಳಿವೆ. ಘಾಟ್ ಎಂದರೆ ಮೆಟ್ಟಿಲುಗಳ ದಾರಿ- ಇಳಿದರೆ ಕೆಳಗೆ ನದಿಗೆ ತಲುಪುತ್ತವೆ. ಹೌದು, ಅಂಥ ನೂರಾರು ಘಾಟ್‌ಗಳು ಇಲ್ಲಿ ಪವಿತ್ರ ಗಂಗೆಗೆ ತಲುಪುತ್ತವೆ. ಈ ಎಲ್ಲ ಘಾಟ್‌ಗಳೂ 14ನೇ ಶತಮಾನದಲ್ಲಿ ನಿರ್ಮಾಣವಾದವಾದರೂ, ಬಹುತೇಕವನ್ನು ಪುನರುಜ್ಜೀವನಗೊಳಿಸಲಾಗಿದೆ. ಇವುಗಳಲ್ಲಿ ಬಹುತೇಕ ಘಾಟ್‌ಗಳಲ್ಲಿ ಗಂಗೆಯಲ್ಲಿ ಮಿಂದೇಳುವ, ಮೋಕ್ಷಕ್ಕಾಗಿ ಗಂಗಾಸ್ನಾನ  ಮಾಡಲು ಬಳಕೆಯಾಗುತ್ತವಾದರೂ, ಹರಿಶ್ಚಂದ್ರ ಘಾಟ್ ಹಾಗೂ ಮಣಿಕರ್ಣಿಕಾ ಘಾಟ್‌ಗಳನ್ನು ಶವದಹನಕ್ಕೆ ಬಳಸಲಾಗುತ್ತದೆ. 

ಸಂಪರ್ಕಮಾರ್ಗಗಳು

ಬರೋಬ್ಬರಿ 3000 ವರ್ಷಗಳಷ್ಟು ಪುರಾತನವಾದ ವಾರಣಾಸಿ ಕಂಡುಕೇಳಿದ ಅನುಭವಗಳನ್ನು ತೂಗುಹಾಕಲು ಮನುಷ್ಯಮಾತ್ರರಿಗೆ ಸಾಧ್ಯವಿಲ್ಲ. ಇತಿಹಾಸ ಆಸಕ್ತರಿಗೆ ಇಲ್ಲಿ ಮುಗಿಯದಷ್ಟು ಸರಕಿದೆ. ಕಲೋಪಾಸಕರಿಗೆ, ಭಕ್ತರಿಗೆ, ಪರಿಸರ ಪ್ರೇಮಿಗಳಿಗೆ, ಜೀವನಾಸಕ್ತರಿಗೆ, ಬರಹಗಾರರಿಗೆ ವಾರಣಾಸಿಯನ್ನು ನೋಡುವುದೇ ಹಬ್ಬ. ಇಲ್ಲಿ ಸಂಪರ್ಕ ಮಾರ್ಗಗಳು ಚೆನ್ನಾಗಿದ್ದು, ಕೋಲ್ಕತ್ತಾ, ಕಾನ್ಪುರ, ಆಗ್ರಾ ಹಾಗೂ  ದೆಲ್ಲಿಯಿಂದ  ಉತ್ತಮ  ಸಂಪರ್ಕ ಮಾರ್ಗಗಳಿವೆ. ರೈಲು(ವಾರಣಾಸಿ ಜಂಕ್ಷನ್), ವಿಮಾನ ನೆಟ್‌ವರ್ಕ್(ಲಾಲ್ ಬಹಾದ್ದೂರ್  ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಕೂಡಾ ಚೆನ್ನಾಗಿದೆ. ಹಿಂದೂ ಪುರಾಣಗಳ ಪ್ರಕಾರ, ಶಿವನು ವಾರಣಾಸಿಯನ್ನು ಕಟ್ಟಿದ. ಇದೇ ಕಾರಣಕ್ಕೆ ಬಹುಷಃ ಇಲ್ಲಿ ಬಾಂಗ್ ಎಲ್ಲೆಡೆ  ಸಿಗುತ್ತದೆ.  

ಭೇಟಿ ಕಾಲ

ಚಳಿಗಾಲದ ಸಮಯ ವಾರಣಾಸಿ ಭೇಟಿಗೆ ಸುಸಮಯ. ಅಂದರೆ ನವೆಂಬರ್‌ನಿಂದ ಫೆಬ್ರವರಿ ಇಲ್ಲಿಯ ಹವಾಮಾನ ಯಾತ್ರಿಕರಿಗೆ ಅನುಕೂಲಕರವಾಗಿರುತ್ತದೆ. ತದನಂತರ ಬಿಸಿಲು ಏರುತ್ತದೆ. 

ಸಪ್ತಮಾತೆಯರು ಮನ ಸೋತ ಹಾಸನಾಂಬೆ ಕ್ಷೇತ್ರ ಮಹಿಮೆ!

ನಗರದ  ಆಕರ್ಷಣೆಗಳು

ಮೊದಲು ಒಂದಿಷ್ಟು  ಪ್ರಮುಖವಾದ  ಅಂದರೆ ಅಸ್ಸಿ ಘಾಟ್, ದಶಾಶ್ವಮೇಧ ಘಾಟ್, ಗಂಗಾ ಮಹಲ್ ಘಾಟ್, ತುಳಸಿ ಘಾಟ್, ದಂಡಿ ಘಾಟ್ ಹಾಗೂ  ಹನುಮಾನ್ ಘಾಟ್‌ಗೆ ಭೇಟಿ ನೀಡಬಹುದು. ದಶಾಶ್ವಮೇಧ ಘಾಟ್ ಬಳಿ ಬೆಳ್ಳಂಬೆಳಗ್ಗೆ  ಬೋಟ್  ರೈಡ್ ತೆಗೆದುಕೊಂಡರೆ ಕಾಶಿಯ ಸೌಂದರ್ಯಕ್ಕೆ ಮಾರು ಹೋಗುವುದರಲ್ಲಿ ಆಶ್ಚರ್ಯವಿಲ್ಲ. ಇನ್ನು ಘಾಟ್‌ಗಳುದ್ದಕ್ಕೂ ಸೂರ್ಯಾಸ್ಥ ಸಮಯದಲ್ಲಿ ವಾಕ್ ಮಾಡುವುದು ಕೂಡಾ ಅವಿಸ್ಮರಣೀಯ ಅನುಭವವೇ. 

ಈ  ಘಾಟ್‌ಗಳುದ್ದಕ್ಕೂ ಸಂಜೆಯ ಆರತಿ ಬಹಳ ಜನಪ್ರಿಯ. ಕಣ್ಣಿಗೆ ಹಬ್ಬ ನೀಡುವ ಈ ಆರತಿಯನ್ನು ಕ್ಯಾಮೆರಾದಲ್ಲಿ ತುಂಬಿಕೊಳ್ಳಲು ಮರೆಯದಿರಿ.  ದಶಾಶ್ವಮೇಧ ಘಾಟ್‌ನಲ್ಲಿ ಸಂಜೆ ಹೊತ್ತಿನಲ್ಲಿ ಸುಮಾರು ನಾಲೈದು ಕೆಜಿ ತೂಕದ ಹಿತ್ತಾಳೆಯ ಆರತಿಯನ್ನು ತೀರದುದ್ದಕ್ಕೂ ಎತ್ತುವಾಗ ಹೊಮ್ಮುವ ಹೂವು ಹಾಗೂ ಊದುಬತ್ತಿಗಳ ಅರೋಮಾ, ನೋಟ, ಮಂತ್ರಘೋಷಣೆ ಸ್ವರ್ಗಸದೃಶ  ಅನುಭವವಾಗಿ ಬಹುಕಾಲ ಮನಸ್ಸಿನಲ್ಲುಳಿಯುತ್ತದೆ. 

ಇವಲ್ಲದೆ 18ನೇ ಶತಮಾನದಲ್ಲಿ ಕಾಶಿ ನರೇಶ್ ರಾಜ ಬಲವಂತ್ ಸಿಂಗ್ ಕಟ್ಟಿದ ರಾಮನಗರ ಕೋಟೆ ನೋಡಲೇಬೇಕಾದುದು.  ಇಲ್ಲಿ ಸಾವಿರಾರು ದೇವಾಲಯಗಳಿದ್ದು, ಅವುಗಳಲ್ಲಿ ಪ್ರಮುಖವಾದುವೊಂದಿಷ್ಟಕ್ಕೆ ನೀವು ಭೇಟಿ  ನೀಡಲೇಬೇಕು. ವಿಶ್ವನಾಥನ ಸನ್ನಿಧಿ, ದುರ್ಗಾ ದೇವಸ್ಥಾನ, ತುಳಸಿ ಮಾನಸ  ದೇವಾಲಯ ಮುಂತಾದವನ್ನು ನೋಡದೆ ಹಿಂದೆ ಬರುವ ಮಾತೇ ಬೇಡ. ಇನ್ನು ವಾರಣಾಸಿಯ ಜಗತ್ಪ್ರಸಿದ್ಧ ನೇಕಾರರ ಬಗ್ಗೆ, ಬನಾರಸ್ ಸಿಲ್ಕ್ ಬಟ್ಟೆಗಳ ಬಗ್ಗೆ ಕೇಳಿರುತ್ತೀರಿ. ಅವರು ನೇಯುವುದನ್ನು ನೋಡುವುದು ಬೇಡವೇ? ಇದಕ್ಕಾಗಿ ಸರಾಯ್ ಮೊಹಾನಾ ಹಳ್ಳಿಗೆ ಭೇಟಿ ನೀಡಿ. 

101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ

ಸಮಯವಿದ್ದರೆ ವಾರಣಾಸಿಯಿಂದ 12 ಕಿಲೋಮೀಟರ್ ದೂರದಲ್ಲಿರುವ ಸಾರಾನಾಥಕ್ಕೆ ಭೇಟಿ ನೀಡಿ. ಇಲ್ಲಿಯೇ ಗೌತಮಬುದ್ಧ ಜ್ಞಾನೋದಯದ ಬಳಿಕ ಮೊದಲ ಧರ್ಮ ಪ್ರವಚನ ನೀಡಿದ್ದು. 

ಆಹಾರ ವೈವಿಧ್ಯ

ರಸ್ತೆ ಬದಿಯ ಆಹಾರ ನಗರದ ಶ್ರೀಮಂತ ಸಂಸ್ಕೃತಿಯ ಭಾಗವೇ ಆಗಿಹೋಗಿದೆ. ಬಹುತೇಕ ಸಸ್ಯಾಹಾರವೇ ಸಿಗಲಿದ್ದು, ಕಚೋರಿ ಗಲಿಯಲ್ಲಿ ಕಚೋರಿ ಸಬ್ಜಿ, ಗೋಪಾಲ್ ಮಂದಿರ್ ಗಲ್ಲಿಯಲ್ಲಿ ಚೂರಾ ಮಟರ್, ಗೋಲ್ ಗಂಜ್‌ನಲ್ಲಿ ದಹಿ ಚಟ್ನಿ ಗೋಲ್‌ಗಪ್ಪೆ, ದಶಾಶ್ವಮೇಧ್ ರಸ್ತೆಯಲ್ಲಿ ಟಮಾಟರ್ ಚಾಟ್, ಥಂಡೈ, ಬಾಟಿ ಚೋಕಾ ರುಚಿ ನೋಡಲೇಬೇಕು. ಬನಾರಸಿ ಪಾನ್ ಫೇಮಸ್ ಎಂದು ಗೊತ್ತಲ್ಲ...

ಕಾಶಿಯಲ್ಲಿ ಚಿತ್ರೀಕರಣ

ತನ್ನ ಹಳೆಯ ಕಾಲದ ಚಾರ್ಮ್ ಉಳಿಸಿಕೊಂಡು ಸಿನೆಮಟೋಗ್ರಾಫರ್‌ಗಳ ಕಣ್ಣಿಗೆ ಹಬ್ಬ ನೀಡುವ ಬನಾರಸ್‌ನಲ್ಲಿ ಹಲವಾರು ಬಾಲಿವುಡ್ ಚಿತ್ರಗಳು ಚಿತ್ರೀಕರಣ ಕಂಡಿವೆ. ಮಸಾಣ್, ರಾಂಜ್ಹಾನಾ,  ಲಗಾ ಚುನರಿ ಮೆ ದಾಗ್,  ವಾಟರ್, ಮುಕ್ತಿ ಭವನ್, ಐಸಾಕ್,  ರಾಮ್ ತೇರಿ  ಗಂಗಾ ಮೇಲಿ, ಸತ್ಯಜಿತ್ ರೇಯ ಅಪರಾಜಿತೋ ಇವೆಲ್ಲವೂ ಕಾಶಿಯ ಸೌಂದರ್ಯವನ್ನು ಬೇರೆ  ಬೇರೆ ಆಯಾಮದಲ್ಲಿ ಸೆರೆ ಹಿಡಿದಿವೆ.