Asianet Suvarna News Asianet Suvarna News

ಕೈಲಾಸ ಪರ್ವತದ ನಿಗೂಢ ವಿಷಯಗಳನ್ನು ಕೇಳಿದ್ರೆ ಅಲ್ಲಿ ದೇವರಿರೋದನ್ನ ನಂಬ್ಲೇಬೇಕು!

ಹಿಂದೂಧರ್ಮವು ಕೈಲಾಸ ಪರ್ವತವನ್ನು ಸ್ವರ್ಗ, ಆತ್ಮದ ಅಂತಿಮ ನೆಲೆ ಮತ್ತು ವಿಶ್ವದ ಪರಮೋನ್ನತ ಅಧ್ಯಾತ್ಮಿಕ ಕೇಂದ್ರವೆಂದು ಪರಿಗಣಿಸುತ್ತದೆ. ಈ ಪರ್ವತದ ಸುತ್ತ ಒಂದಿಷ್ಟು ನಿಗೂಢಗಳು, ಅಚ್ಚರಿ, ವಿಶೇಷಗಳು ಅಡಗಿವೆ. ಅವನ್ನೆಲ್ಲ ಕೇಳ್ತಿದ್ರೆ ಪುರಾಣ ಕತೆಗಳಲ್ಲಿ ಸತ್ಯವಿದೆ ಎನಿಸದಿರದು. 

mind boggling things you may not know about Mount Kailash
Author
Bangalore, First Published Nov 16, 2019, 11:12 AM IST

ಕೈಲಾಸ ಪರ್ವತವನ್ನು ಸ್ವರ್ಗದ ಮೆಟ್ಟಿಲೆಂದೇ ಪರಿಗಣಿಸಲಾಗುತ್ತದೆ. ಹಿಮಾಲಯ ಪರ್ವತಗಳ ಶ್ರೇಣಿಯಲ್ಲೇ ಬಹಳ ಕುತೂಹಲಕಾರಿಯಾಗಿರುವ, ಹಿಂದೂಗಳ ದೇವರಾದ ಶಿವನ ಮನೆಯೆಂದೇ ಪರಿಗಣಿತವಾಗಿರುವ ಕೈಲಾಸ ಪರ್ವತದ ಬಗ್ಗೆ ಹಲವು ವಿಷಯಗಳು ಬಹುತೇಕರಿಗೆ ತಿಳಿದಿಲ್ಲ. ಟಿಬೆಟ್ ನೆಲದಲ್ಲಿ ಗಗನದೆತ್ತರಕ್ಕೆ ನಿಂತಿರುವ ಕೈಲಾಸ ಪರ್ವತ ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿದ್ದು, ಇದನ್ನೇರುವುದು ದುಸ್ತರವೇ ಸರಿ. ಹಿಂದೂ, ಜೈನ ಹಾಗೂ ಬುದ್ಧರ ನಂಬಿಕೆಯ ಐದು ಶಿಖರಗಳನ್ನೊಳಗೊಂಡ ಮೇರು ಪರ್ವತದಲ್ಲೊಂದಾಗಿ ಕೈಲಾಸ ಪರ್ವತ ಗುರುತಿಸಿಕೊಂಡಿದೆ. ಜಗತ್ತಿನ ಅತಿ ಪವಿತ್ರವಾದ ಹಾಗೂ ಅಷ್ಟೇ ನಿಗೂಢವಾದ ಕೈಲಾಸ ಪರ್ವತದ ಕುರಿತ ಕೆಲ ವಿಷಯಗಳು ಇಲ್ಲಿವೆ. 

ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಕೃಷ್ಣ ಹೇಳಿದ್ದೇನು?

1. ಹಲವು ಧರ್ಮಗಳಿಗೆ ಪವಿತ್ರವೀ ಸ್ಥಳ

ಹಿಮಾಲಯಗಳ ಹಲವು ಪರ್ವತಗಳ ಸಾಲಿನಲ್ಲಿಯೇ ಕೈಲಾಸ ಪರ್ವತವಿದ್ದರೂ, ಉಳಿದೆಲ್ಲದುದರ ಹೊರತಾಗಿ ಈ ಒಂದು ಪರ್ವತ ಮಾತ್ರ ಹಿಂದೂ, ಬೌದ್ಧ ಹಾಗೂ ಜೈನ ಧರ್ಮೀಯರಿಗೆ ವಿಶೇಷವಾದ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಪ್ರಾಮುಖ್ಯತೆಯುಳ್ಳ ಸ್ಥಳ ಎನಿಸಿದೆ ಎಂದರೆ ಇಲ್ಲೇನೋ ವಿಶೇಷವಾದ ಶಕ್ತಿ ಇರಬೇಕಲ್ಲವೇ? ಹಿಂದೂಗಳ ನಂಬಿಕೆಯಂತೆ, ಪರಶಿವನು ಕೈಲಾಸಪರ್ವತದ ಶಿಖರದ ಮೇಲೆ ಪತ್ನಿ ಪಾರ್ವತಿಯೊಂದಿಗೆ ನೆಲೆಸಿದ್ದಾನೆ. ಶಿವ ಇಲ್ಲಿ ಸದಾ ಧ್ಯಾನಮಗ್ನನಾಗಿರುತ್ತಾನೆ. ತಾಂತ್ರಿಕ ಬೌದ್ಧರು ಕೈಲಾಸಪರ್ವತವು ಆತ್ಮಾನಂದವನ್ನು ಪ್ರತಿನಿಧಿಸುವ ಡೆಮ್ ಚೋಕ್ ಬುದ್ಧನ ನೆಲೆಯೆಂದು ನಂಬುತ್ತಾರೆ. ಕೈಲಾಸಪರ್ವತವನ್ನು ಅಷ್ಟಪಾದವೆಂದು ಕರೆಯುವ ಜೈನರು ತಮ್ಮ ಧರ್ಮದ ಮೂಲಪುರುಷ ಋಷಭದೇವನು ಈ ಸ್ಥಳದಲ್ಲಿ ನಿರ್ವಾಣ ಹೊಂದಿದನೆಂದು ನಂಬುತ್ತಾರೆ. 

2. ಪರ್ವತವೋ, ಪಿರಮಿಡ್ಡೋ?

ಕೈಲಾಸ ಪರ್ವತದ ಆಕಾರವೇ ಬಹುದೊಡ್ಡ ರಹಸ್ಯ. ಇದು ಪರ್ವತವಲ್ಲ, ಇದೊಂದು ಮಾನವನಿರ್ಮಿತ ಪಿರಮಿಡ್‍ ಎಂಬುದು ಕೆಲ ರಷ್ಯನ್ ವಿಜ್ಞಾನಿಗಳೇ ಮುಂದಿಟ್ಟ ತರ್ಕ. ಏಕೆಂದರೆ ನಾಲ್ಕು ದಿಕ್ಕುಗಳಿಂದಲೂ ಸಾಪಾಟಾದ ಗೋಡೆಯಂತೆ, ಅವುಗಳ ಮೇಲೆ ಮೆಟ್ಟಿಲುಗಳಂತೆ ಕಾಣುವ ರಚನೆ ಈ ಪರ್ವತದ್ದಾಗಿದ್ದು, ತುದಿ ಚೂಪಾಗಿ ಗಗನವನ್ನು ಚುಂಬಿಸುವಂತಿದೆ. ನಾಲ್ಕು ದಿಕ್ಕಿನಲ್ಲಿ ತ್ರಿಕೋನವನ್ನಿಟ್ಟು ತುದಿಯನ್ನು ಜೋಡಿಸಿದಷ್ಟು ನಿಕರವಾಗಿದೆ ಇದರ ರಚನೆ. ಇವು ಒಳಗಿಂದ ಟೊಳ್ಳಾಗಿವೆ ಮತ್ತು ಕೈಲಾಸ ಪರ್ವತದ ಒಳಗೆ ಹೋಗುವ ಮಾರ್ಗ ಇದರ ತುತ್ತ ತುದಿಯಲ್ಲಿದೆ. ಓರ್ವ ಅಸಾಮಾನ್ಯ ಶಕ್ತಿ ಹೊಂದಿರುವ ವ್ಯಕ್ತಿ ಕೈಲಾಸ ಪರ್ವತವನ್ನು ನಿರ್ಮಿಸಿರಬಹುದು ಎಂಬುವುದು ವಿಜ್ಞಾನಿಗಳ ಅಭಿಪ್ರಾಯ. ಇದರ ಆಕಾರ ಎಷ್ಟು ಪರ್ಫೆಕ್ಟ್ ಆಗಿದೆ ಎಂದರೆ, ಇದೊಂದು ಪ್ರಾಕೃತಿಕ ಸಂಗತಿ ಮಾತ್ರವಾಗಿರಲು ಸಾಧ್ಯವೇ ಇಲ್ಲ ಎನ್ನುವಷ್ಟು. 

ಸಪ್ತಮಾತೆಯರು ಮನ ಸೋತ ಹಾಸನಾಂಬೆ ಕ್ಷೇತ್ರ ಮಹಿಮೆ!

3. ದೇವತೆಗಳು ಹಾಗೂ ರಾಕ್ಷಸರ ಕೊಳಗಳು

ಹಿಂದೂಗಳ ನಂಬಿಕೆಗಳಂತೆಯೇ ಈ ಕೈಲಾಸ ಪರ್ವತದ ಮಗ್ಗುಲಲ್ಲಿ ಒಂದೆಡೆ ಮಾನಸ ಸರೋವರವಿದ್ದರೆ ಮತ್ತೊಂದೆಡೆ ರಾಕ್ಷಸ್ ತಲ್ ಇದೆ. ಇದು ನಮ್ಮಲ್ಲಿರುವ ಒಳ್ಳೆತನ ಕೆಟ್ಟತನ ಎರಡನ್ನು ಪ್ರತಿನಿಧಿಸುತ್ತದೆ. ಮಾನಸ ಸರೋವರಕ್ಕೆ ಪವಿತ್ರ ಎಂಬ ಪ್ರಾತಿನಿಧ್ಯವಿದ್ದು, ಇದು ಭೂಮಿಯ ಮೇಲೆ ಅತಿ ಎತ್ತರದಲ್ಲಿರುವ ಸಿಹಿನೀರಿನ ಕೊಳ ಎನಿಸಿಕೊಂಡಿದೆ. ಇದಕ್ಕೆ ತದ್ವಿರುದ್ಧವಾಗಿ ರಾವಣನ ದುರ್ಗುಣಗಳಿಂದ ಜನಿಸಿದ ರಾಕ್ಷಸ್ ತಲ್ ಉಪ್ಪು ನೀರಿನ ಕೊಳವಾಗಿದ್ದು, ಇದರಲ್ಲಿ ಸಸ್ಯ ಸೇರಿದಂತೆ ಯಾವುದೇ ಜೀವಚರಗಳಿಲ್ಲದಿರುವುದು ಹೆಸರನ್ನು ಸಮರ್ಥಿಸುತ್ತದೆ. 

4. ಕೈಲಾಸ ಏರಿದವರಿಲ್ಲ

ಜಗತ್ತಿನ ಅತಿ ಎತ್ತರದ ಪರ್ವತವೆನಿಸಿಕೊಂಡ ಮೌಂಟ್ ಎವರೆಸ್ಟನ್ನು ಕೂಡಾ ಏರಿದವರಿದ್ದಾರೆ. ಆದರೆ ಕೈಲಾಸ ಪರ್ವತವನ್ನು ಮಾತ್ರ ಏರಿದವರ ಕುರಿತು ಯಾವುದೇ ದಾಖಲೆಗಳಿಲ್ಲ. ಇದರ ಆಕಾರ, ಹವಾಮಾನ ಹಾಗೂ ಪ್ರಾಕೃತಿಕ ಸಂಗತಿಗಳಿಂದಾಗಿ ಇದು ಮನುಷ್ಯ ಮಾತ್ರರು ಏರಲು ಅಪಾಯಕಾರಿ ಮಾತ್ರವಲ್ಲ, ಅಸಾಧ್ಯವಾದ ಪರ್ವತ ಎನಿಸಿಕೊಂಡಿದೆ. ಇದರೊಂದಿಗೆ ಈ ಪರ್ವತ ಹಿಂದೂ, ಬೌದ್ಧ, ಬಾನ್ ಹಾಗೂ ಜೈನರಿಗೆ ಪವಿತ್ರವಾದ ಕಾರಣದಿಂದ ಇದರ ಮೇಲೆ ಕಾಲಿಡುವುದನ್ನು ಪಾಪ ಎಂದು ನಂಬಲಾಗುತ್ತದೆ. ಇದೇ ಕಾರಣದಿಂದ ಕೈಲಾಸ ಪರ್ವತವನ್ನು ಏರಲು ಅನುಮತಿಯೂ ಇಲ್ಲವಾಗಿದೆ. ಹೀಗಾಗಿ ಜಗತ್ತಿನ ಪ್ರಮುಖ ಶಿಖರಗಳ ಪೈಕಿ ಕೈಲಾಸಪರ್ವತವೊಂದು ಮಾತ್ರ ಆರೋಹಿಸಲ್ಪಡದೇ ಉಳಿದಿದೆ. 

ಕಸವೆಲ್ಲ ಎಸೆಯಬೇಕಾಗಿಲ್ಲ; ಎವರೆಸ್ಟ್‌ ಅಂಗಳದ ಅಂದಗೆಡಿಸಿದ ಕಸಗಳಿಗೆ ಮರುಜನ್ಮ!

5. ಬೌದ್ಧ ಗುರು ಮಿಲರೇಪ ಕೈಲಾಸ ಏರಿದ್ದಾರಾ? 

ತಾಂತ್ರಿಕ ಬೌದ್ಧಧರ್ಮದ ಮುಂದಾಳು ಮಿಲರೇಪ ಮಾತ್ರ ಕೈಲಾಸ ಪರ್ವತ ಏರಿದ್ದ ಎಂಬ ಕುರಿತ ಪುರಾಣ ಕತೆಗಳಿವೆ. ತಾಂತ್ರಿಕ ವಿದ್ಯೆಯಲ್ಲಿ ಪಾರಂಗತನಾದ ಈತನು ಬಾನ್ ಧರ್ಮದ ನಾಯಕನಾಗಿದ್ದ ನಾರೋ-ಬೊಂಚುಂಗ್‌ನೊಂದಿಗೆ ಮಾಯಮಂತ್ರಗಳ ವಿಷಯದಲ್ಲಿ ಮೇಲುಗೈ ಸಾಧಿಸಲು ಸವಾಲೆಸೆದನು. ಈರ್ವರ ಮಧ್ಯೆ ತೀವ್ರ ಕದನ ನಡೆದು ಯಾರೂ ಜಯ ಸಾಧಿಸಲಾಗಲಿಲ್ಲ. ಕೊನೆಗೆ ಇಬ್ಬರಲ್ಲಿ ಯಾರು ಕೈಲಾಸಪರ್ವತದ ಶಿಖರವನ್ನು ಹೆಚ್ಚು ವೇಗವಾಗಿ ತಲುಪುವರೋ ಅವರೇ ವಿಜಯಿಯಾಗುವರೆಂದು ತೀರ್ಮಾನಿಸಲಾಯಿತು. ಆಗ ಮಿಲರೇಪನು ಸೂರ್ಯಕಿರಣಗಳ ಮೇಲೇರಿ ಶಿಖರವನ್ನು ಮೊದಲು ತಲುಪಿದನು ಎಂಬ ಕತೆ ಬೌದ್ಧ ಧರ್ಮದಲ್ಲಿದೆ. ಆತ ಹಿಂತಿರುಗಿದಾಗ, ಅಲ್ಲಿ ಧ್ಯಾನಾಸಕ್ತನಾಗಿರುವ ದೇವರಿಗೆ ತೊಂದರೆ ನೀಡದಂತೆ ಎಚ್ಚರಿಸಿದ ಎನ್ನಲಾಗುತ್ತದೆ. 

6. ಕೈಲಾಸ ಪರ್ವತ ಜಗತ್ತಿನ ಕೇಂದ್ರಬಿಂದು?!

ವಿಷ್ಣುಪುರಾಣದ ಪ್ರಕಾರ ಕೈಲಾಸ ಪರ್ವತವು ಜಗತ್ತಿನ ಕೇಂದ್ರಬಿಂದು, ಆಧಾರಸ್ಥಂಭ. ಸುತ್ತ ಪದ್ಮಾಕೃತಿಯಲ್ಲಿ ಹಬ್ಬಿರುವ ಆರು ಪರ್ವತಶ್ರೇಣಿಗಳ ಕೇಂದ್ರಸ್ಥಾನದಲ್ಲಿದೆ. ಆಸಕ್ತಿಕರ ವಿಷಯವೆಂದರೆ ಗೂಗಲ್ ಮ್ಯಾಪ್ ಹಾಗೂ ನಾಸಾ ಚಿತ್ರಗಳು ಕೂಡಾ ಕೈಲಾಸ ಪರ್ವತವು ಜಗತ್ತಿನ ಕೇಂದ್ರ ಭಾಗದಲ್ಲಿದೆ ಎಂಬುದನ್ನು ತೋರಿಸಿವೆ. ಈ ಪರ್ವತದ ನಾಲ್ಕು ದಿಕ್ಕಿನಲ್ಲಿ ನಾಲ್ಕು ನದಿಗಳು ಹರಿಯುವುದು ಕೂಡಾ ವಿಶೇಷ. ಸಿಂದೂ, ಸಟ್ಲೆಜ್, ಬ್ರಹ್ಮಪುತ್ರ ಹಾಗೂ ಕರ್ನಾಲಿ ನದಿಗಳು ಇಲ್ಲಿಯೇ ಹುಟ್ಟುತ್ತವೆ. 

ಪ್ರವಾಸಿಗರಿಗೆ ಸಿಯಾಚಿನ್‌ ಮುಕ್ತ; ಈಗಲೇ ಪ್ರವಾಸ ಹೋಗಬಹುದೆ?

7. ಕೈಲಾಸ ಯಾತ್ರೆ

ಕೈಲಾಸ ಯಾತ್ರೆ ಹಿಂದೂ ಭಕ್ತರ ಕನಸು. ಸ್ವರ್ಗಕ್ಕೆ ಸುತ್ತು ಬರುವುದೆಂದರೆ ಸಾಮಾನ್ಯವೇ? ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಆಸ್ತಿಕರು ಪ್ರತಿ ವರ್ಷ ಕೈಲಾಸ ಯಾತ್ರೆ ಕೈಗೊಳ್ಳುತ್ತಾರೆ. ಇಲ್ಲಿ ಪರ್ವತದ ಸುತ್ತ ಕಾಲ್ನಡಿಗೆಯಲ್ಲಿ ಒಂದು ಸುತ್ತು ಬಂದು ನಮಸ್ಕರಿಸುತ್ತಾರೆ. ಇದರಿಂದ ಪರ್ವತದೊಳಗೆ 21,000 ವರ್ಷಗಳಿಂದ ಧ್ಯಾನಮಗ್ನನಾಗಿರುವ ಶಿವನಿಗೇ ಸುತ್ತು ಬಂದಂತಾಗುತ್ತದೆಂಬುದು ನಂಬಿಕೆ. ಇನ್ನೂ ಕೆಲವರು ಇಲ್ಲಿ ಹೆಜ್ಜೆ ನಮಸ್ಕಾರ ಮಾಡುವ ಸಾಹಸವನ್ನೂ, ಭಕ್ತಿಯನ್ನೂ ಮೆರೆಯುತ್ತಾರೆ. ಬೌದ್ಧರು, ಜೈನರು, ಬಾನ್ ಧರ್ಮೀಯರೂ ಕೈಲಾಸಕ್ಕೆ ಸುತ್ತು ಬರುತ್ತಾರೆ. ಪರ್ವತವನ್ನು ಒಂದು ಬಾರಿ ಸುತ್ತಲು 52 ಕಿಲೋಮೀಟರ್ ದಾರಿ ಸವೆಸಬೇಕು. 

Follow Us:
Download App:
  • android
  • ios