Asianet Suvarna News Asianet Suvarna News

ಕಸವೆಲ್ಲ ಎಸೆಯಬೇಕಾಗಿಲ್ಲ; ಎವರೆಸ್ಟ್‌ ಅಂಗಳದ ಅಂದಗೆಡಿಸಿದ ಕಸಗಳಿಗೆ ಮರುಜನ್ಮ!

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲೀಗ ಪಾಟ್‌ಗಳಿಂದ ಹಿಡಿದು ಲ್ಯಾಂಪ್‌ಗಳವರೆಗೆ ಬಹಳಷ್ಟು ದಿನೋಪಯೋಗಿ ವಸ್ತುಗಳು, ಕಲಾಕೃತಿಗಳು ಎವರೆಸ್ಟ್‌ನ ಸೌಂದರ್ಯಕ್ಕೆ ಎರವಾಗಿದ್ದ ಕಸದಿಂದಲೇ ಪುನರ್ಜನ್ಮ ಪಡೆದಿವೆ. ಅಷ್ಟೇ ಅಲ್ಲ, ದಶಕಗಳಿಂದ ಎವರೆಸ್ಟ್‌ನಲ್ಲಿ ತುಂಬಿದ್ದ ಕಸಗಳೀಗ ಬಿಸ್ನೆಸ್ ಆಯಾಮ ಪಡೆದುಕೊಳ್ಳುತ್ತಿವೆ. 

Everest garbage given new lease of life Trash to treasure
Author
Bangalore, First Published Oct 26, 2019, 2:38 PM IST

ಕಠ್ಮಂಡುವಿನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕುಳಿತು ನೀರನ್ನು ಹೀರುವ ಆ ಪ್ರವಾಸಿಗರಿಗೆ ತಿಳಿದಿಲ್ಲ, ತಾವು ಬಳಸುತ್ತಿರುವ ಈ ಹಸಿರು ಲೋಟಗಳು- ತಮ್ಮಂತೆಯೇ ಪ್ರವಾಸಿಗರಾಗಿ ಬಂದು ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಚಾರಣಿಗರು ಬಳಸಿ ಬಿಸಾಡಿದ ಬಾಟಲ್‌ಗಳ ಹೊಸರೂಪವೆಂದು. ಅವರು ಕುಳಿತು ಆನಂದಿಸುತ್ತಿರುವ ಆ ಟೇಬಲ್ ಮೇಲೆ ಉರಿವ ಸುಂದರ ಲ್ಯಾಂಪ್ ಕೂಡಾ ಹಿಂದೆ ಎವರೆಸ್ಟ್‌ನಲ್ಲಿಯೇ ಶಾಪವಾಗಿ ಬಿದ್ದಿದ್ದ ಕಸದ ಮರುಹುಟ್ಟು.

ಪ್ರವಾಸಿಗರಿಗೆ ಸಿಯಾಚಿನ್‌ ಮುಕ್ತ; ಈಗಲೇ ಪ್ರವಾಸ ಹೋಗಬಹುದೆ?

ಈ ವಿಷಯ ಕೇಳಲು ಎಷ್ಟು ಖುಷಿಯಾಗುತ್ತಲ್ಲವೇ? ವಿಶ್ವಪ್ರಸಿದ್ಧ ಮೌಂಟ್ ಎವರೆಸ್ಟ್ ಅಂಗಳದಲ್ಲಿ ದಶಕಗಳಿಂದ ಸಂಗ್ರಹವಾಗಿದ್ದ ಕಸಗಳೆಲ್ಲ ಈಗ ಒಂದೊಂದಾಗಿ ಶಾಪ ವಿಮೋಚನೆ ಮಾಡಿಕೊಂಡು ವಿಶಿಷ್ಠವಾಗಿ ಹೊಸರೂಪ ಪಡೆಯುತ್ತಿವೆ. ನೇಪಾಳದ ರಾಜಧಾನಿಯ ಮನೆಮನೆಗಳಲ್ಲೂ ಹೀಗೆ ಅಪ್‌ಸೈಕಲ್ ಮಾಡಿದ ಪಾಟ್‌ಗಳು, ದೀಪಗಳು ಮುಂತಾದ ಎವರೆಸ್ಟ್ ವೇಸ್ಟ್‌ಗಳ ನವಾವತರಣಿಕೆ ಕಾಣಬಹುದು. 

ದಶಕಗಳಿಂದ ಇಲ್ಲಿ ಪರ್ವತಾರೋಹಿಗಳು ಬೇಕಾಬಿಟ್ಟಿ ಎಸೆದು ಹೋಗಿ, ಜಗತ್ತಿನ ಅತಿ ಸುಂದರ ತಾಣವನ್ನು ಕಸದ ತೊಟ್ಟಿಯಾಗಿಸಿದ್ದು- ಸೌಂದರ್ಯದಿಂದ ಮೆರೆಯುತ್ತಿದ್ದ ಪರ್ವತದ ಹೆಮ್ಮೆಯನ್ನು 'ಜಗತ್ತಿನ ಅತಿ ಎತ್ತರದ ಕಸದ ತೊಟ್ಟಿ' ಎಂಬ ಅವಮಾನಕ್ಕೆ ಈಡು ಮಾಡಿದ್ದು ಕಳೆದ ಕೆಲ ವರ್ಷಗಳಿಂದ ಸುದ್ದಿಯಾಗುತ್ತಲೇ ಇತ್ತು. ಇದೀಗ ಈ ತ್ಯಾಜ್ಯಗಳಿಗೆ ತಿಲಾಂಜಲಿ ಹೇಳುವ ನಿಟ್ಟಿನಲ್ಲಿ ನೇಪಾಳ ಸರ್ಕಾರ ಇನ್ನಿಲ್ಲದ ಪ್ರಯತ್ನ ಹಾಕುತ್ತಿದೆ. 

ಜಗತ್ತಿನ ಟಾಪ್ 10 ಹಾಟ್‌ಸ್ಪಾಟ್; 2020ಯಲ್ಲಿ ಸ್ಥಾನ ಪಡೆದ ಜೋಧ್‌ಪುರ!

ಅದರ ಫಲವೇ ಈ ಕಸದಿಂದ ತೆಗೆದ ರಸ. 

ಹೀಗೆ ಎವರೆಸ್ಟ್‌ನ ಕಸವನ್ನು ರಿಸೈಕಲ್ ಮಾಡುವ ಸ್ಥಳೀಯ ತ್ಯಾಜ್ಯ ಮರುಸಂಸ್ಕರಣಾ ಸಂಸ್ಥೆ 'ಬ್ಲೂ ವೇಸ್ಟ್ ಟು ವ್ಯಾಲ್ಯೂ'ಗೆ ಎವರೆಸ್ಟ್ ಅಂಗಳದಿಂದ ಬಾಟಲ್‌ಗಳು, ಕ್ಲೈಂಬಿಂಗ್ ಗೇರ್‌ಗಳು, ಖಾಲಿ ಕ್ಯಾನ್‌ಗಳು, ಅಲ್ಯೂಮಿನಿಯಂ, ಗ್ಲಾಸ್, ಪ್ಲ್ಯಾಸ್ಟಿಕ್ ಹಾಗೂ ಐರನ್‌ನ ಕಸಗಳು ಬಂದು ಬೀಳುತ್ತವಂತೆ. 

''ಕಸವನ್ನೆಲ್ಲ ಎಸೆಯಲೇಬೇಕೆಂದಿಲ್ಲ. ಇವುಗಳಲ್ಲಿ ಬಹುತೇಕವನ್ನು ಮರುಸಂಸ್ಕರಣೆ ಮಾಡಬಹುದು,'' ಎನ್ನುತ್ತಾರೆ  'ಬ್ಲೂ ವೇಸ್ಟ್ ಟು ವ್ಯಾಲ್ಯೂ' ಸಂಸ್ಥೆಯ ನಬಿನ್ ಬಿಕಾಶ್ ಮಹಾರ್ಜನ್. 
ಕಸ ಸಂಗ್ರಹಣೆ ನೇಪಾಳದ ಅತಿ ಪ್ರಮುಖ ಪ್ರಾಕೃತಿಕ ಸಂಪನ್ಮೂಲವಾದ ಮೌಂಟ್ ಎವರೆಸ್ಟ್ ಅಂಗಳ ಕಸದ ಮೈದಾನವಾಗಿದ್ದಕ್ಕೆ ಭಾರಿ ದೂರುಗಳು ಕೇಳಿಬಂದ ಬಳಿಕ ನೇಪಾಳ ಸರ್ಕಾರ ಹಾಗೂ ಮೌಂಟೆನೇರಿಂಗ್ ತಂಡಗಳು ಈ ವರ್ಷ 6 ವಾರಗಳ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದವು. ಬೇಸ್ ಕ್ಯಾಂಪ್‌ನಿಂದ ಬರೋಬ್ಬರಿ ಸುಮಾರು 26,300 ಅಡಿ ಎತ್ತರಕ್ಕೆ ತೆರಳಿ 14 ಬಲವಾದ ತಂಡಗಳು 10 ಟನ್‌ಗೂ ಹೆಚ್ಚು ಕಸವನ್ನು ಸಂಗ್ರಹಿಸಿ ಕಠ್ಮಂಡುವಿನ ರಿಸೈಕ್ಲಿಂಗ್ ಕೇಂದ್ರಗಳಿಗೆ ತಂದು ಕೊಟ್ಟಿದ್ದವು. ಅಲ್ಲಿನ ಕಾರ್ಮಿಕರು ಈ ಕಸಗಳನ್ನೆಲ್ಲ ಬೇರೆ ಬೇರೆ ವಿಭಾಗಗಳಾಗಿಸಿ, ಒಂದೊಂದು ತೆರದ ಕಸಕ್ಕೆ ಒಂದೊಂದು ಪುನರ್ಜನ್ಮದ ಕನಸನ್ನು ಬಿತ್ತಿದರು. ಕಬ್ಬಿಣವು ರಾಡ್ ತಯಾರಿಕಾ ಸಂಸ್ಥೆಗಳಿಗೆ ಹೋದರೆ, ಅಲ್ಯೂಮಿನಿಯಂ ಕ್ಯಾನ್‌ಗಳು ಪಾತ್ರೆ ತಯಾರಿಕೆಗೆ ಹೋದವು. ಇನ್ನು ಎಸೆದಿದ್ದ ಬಾಟಲ್‌ಗಳು ಮನೆಬಳಕೆಯ ವಸ್ತುಗಳಾಗಿ ಹೊಸರೂಪ ಪಡೆದವು. 

ವೀಕೆಂಡ್ ಟ್ರಿಪ್‌ಗೆ ಬೆಂಗಳೂರಿನ ಸುತ್ತ ಇರೋ ಈ ಸ್ಥಳಗಳು ಬೆಸ್ಟ್

''ನಮ್ಮ ಸಮಾಜ ಕಸವನ್ನೆಲ್ಲ ಕೊಳೆ ಎಂದು ಬಗೆಯುತ್ತದೆ. ಆದರೆ, ಅವುಗಳ ಮರುಸಂಸ್ಕರಣೆ ಬಳಿಕ ಪಡೆದ ಹೊಸ ರೂಪ ನೋಡಿದ ಜನ ವಾವ್ ಎನ್ನುತ್ತಾರೆ,'' ಎನ್ನುವುದು ಗ್ಲಾಸ್ ಸಂಸ್ಕರಣಾ ಘಟಕ ಮೊವಾರೆ ಡಿಸೈನ್ಸ್‌ನ ನಿರ್ವಾಹಕಿ ಉಜೆನ್ ವಾಂಗ್‌ಮೋ. ಇವರ ಉತ್ಪನ್ನಗಳೆಲ್ಲ ಈಗ ಕಠ್ಮಂಡು ಸುತ್ತಮುತ್ತದ ಸ್ಟಾರ್ ಹೋಟೆಲ್‌ಗಳು, ಮನೆಗಳಲ್ಲಿ ಬಳಕೆಯಾಗುತ್ತಿವೆ. ಅಲ್ಲದೆ ಈಗೀಗ ಈ ಸಂಸ್ಕರಿತ ವಸ್ತುಗಳಿಗೆ ಮಾರುಕಟ್ಟೆಯೂ ಹೆಚ್ಚಾಗಿದೆಯಂತೆ. 

ಕಸ ಕಡಿಮೆ ಮಾಡುವತ್ತ ಒಂದು ಹೆಜ್ಜೆ

''ಪರಿಸರ ಸ್ನೇಹಿ ವಸ್ತುಗಳು ಹಾಗೂ ಸಂಸ್ಕರಿತ ವಸ್ತುಗಳನ್ನು ಬಳಕೆ ಮಾಡುವುದು ನಮ್ಮ ಹೋಟೆಲ್‌ನ ಅಜೆಂಡಾ. ಇದರಿಂದ ನಮಗೆ ಹಾಗೂ ಪರಿಸರಕ್ಕೆ ಮಾತ್ರ ಒಳ್ಳೆಯದೆಂದಲ್ಲ, ಇದು ಜಗತ್ತನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿರುವ ಪ್ರತಿಯೊಬ್ಬರಿಗೂ ನಾವು ನೀಡಬೇಕಾದ ಪ್ರೋತ್ಸಾಹ. ಜಗತ್ತಿನ ಕಸವನ್ನು ಕಡಿಮೆ ಮಾಡುವ ಯತ್ನ'' ಎನ್ನುತ್ತಾರೆ ಕಠ್ಮಂಡುವಿನ ಫೈವ್ ಸ್ಟಾರ್ ಹೋಟೆಲ್ ಯಾಕ್ ಆ್ಯಂಡ್ ಯೇತಿಯ ಮಾಲೀಕ ಆಂಚಲ್ ಮಲ್ಲ. 

ದೇಶದ ಪ್ರವಾಸೋದ್ಯಮ ವಲಯಕ್ಕೆ ವರವಾಗಿರುವ ಸ್ಮಾರಕಗಳು!

ಎವರೆಸ್ಟ್ ಹಾದಿಯಲ್ಲೊಂದು ಸಂಸ್ಕರಣಾ ಘಟಕ

ಇದಿಷ್ಟೇ ಅಲ್ಲ, ಇದೀಗ ಸಿಯಾಂಬೋಚೆಯ ಎವರೆಸ್ಟ್‌ ಹಾದಿಯಲ್ಲಿ 3,800 ಮೀಟರ್ ಎತ್ತರದಲ್ಲಿ ಸಾಗರ್‌ಮಾತಾ ಎಂಬ ಹೊಸ ವೇಸ್ಟ್ ಫೆಸಲಿಟಿ ಸಿದ್ಧವಾಗುತ್ತಿದೆ. ಚಾರಣಿಗರು ಹಾಗೂ ಪರ್ವತಾರೋಹಿಗಳು ಬೇಸ್ ಕ್ಯಾಂಪ್‌ಗೆ ಹಿಂದಿರುಗುವಾಗ ಕಸಗಳನ್ನಿಲ್ಲಿ ನೀಡಿದರೆ ಸಾಕು. ಕಲಾವಿದರು ಹಾಗೂ ಆಸಕ್ತರನ್ನು ಬಳಸಿಕೊಂಡು ಕಸದಿಂದ ಹೊಸ ಉತ್ಪನ್ನಗಳನ್ನು ತಯಾರಿಸುವ ಯೋಜನೆ ಇದರದ್ದು. 

ಇಷ್ಟೆಲ್ಲ ಆದರೂ ಕೂಡಾ ಈಗ ಸಂಗ್ರಹಿಸಿರುವ ಕಸ ಅಲ್ಲಿ ತಲುಪಲಾಗದ ಎವರೆಸ್ಟ್ ಪರ್ವತದ ಸ್ಥಳಗಳಲ್ಲಿ ಉಳಿದಿದ್ದಕ್ಕೆ ಹೋಲಿಸಿದರೆ ತೃಣಕ್ಕೆ ಸಮಾನ ಎಂದು ಎಚ್ಚರಿಸುತ್ತಾರೆ ಪರ್ವತಾರೋಹಿಗಳು. 

ಮರುಸಂಸ್ಕರಣೆಯೊಂದೇ ಪರಿಹಾರವಲ್ಲ

ಈಗೀಗ ಜಾಗತಿಕ ತಾಪಮಾನದಿಂದಾಗಿ ಹಿಮ ಕರಗುತ್ತಿದ್ದು, ಅದರಡಿಗೆ ವರ್ಷಗಳಿಂದ ಅವಿತ ತ್ಯಾಜ್ಯಗಳು ಅಸ್ತಿಪಂಜರದಂತೆ ಹೊರಬರುತ್ತಿವೆ. ಹಿಮಾಲಯದ ನೀರು ಮೇಲಿನಿಂದ ಭೂಮಿಗಿಳಿವಾಗಲೇ ಕಸ, ಕೊಳೆ ಹೊಂದಿ ಮಲಿನವಾಗಿದೆ. ಇವನ್ನೆಲ್ಲ ತೆಗೆಯುವುದು ಇಲ್ಲಿನ ತಾಪಮಾನ, ಎತ್ತರ, ಪ್ರಾಕೃತಿಕ ಅಡೆತಡೆಗಳಿಗೆ ಹೋಲಿಸಿದರೆ ಅತಿ ದೊಡ್ಡ ಸವಾಲೇ. ಆರು ವರ್ಷಗಳ ಹಿಂದೆ ನೇಪಾಳ ಸರ್ಕಾರ ಎವರೆಸ್ಟ್ ಏರುವ ಪರ್ವತಾರೋಹಿಗಳ ತಂಡಗಳಿಗೆ ಕನಿಷ್ಠ 8 ಕೆಜಿಯಷ್ಟು ಕಸ ಹೆಕ್ಕಿ ತಂದರೆ 4000 ಡಾಲರ್‌ನಷ್ಟು ಹಣ ಹಿಂತಿರುಗಿಸುವುದಾಗಿ ಘೋಷಿಸಿತ್ತು.

ಜಗತ್ತಿನ ಎತ್ತರದ ಯುದ್ಧಭೂಮಿಯಲ್ಲಿ ಯೋಧರ ಬದುಕು ಹೇಗಿರುತ್ತದೆ ಗೊತ್ತಾ?

ಆದರೆ, ಅರ್ಧದಷ್ಟು ಜನ ಮಾತ್ರ ಕಸದೊಂದಿಗೆ ಹಿಂತಿರುಗಿದರು. 2020ರೊಳಗೆ ಎವರೆಸ್ಟ್ ಪ್ರದೇಶದಲ್ಲಿ ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್‌ಗಳು ಹಾಗೂ ಪ್ಲ್ಯಾಸ್ಟಿಕ್‌ ಬಾಟಲ್‌ಗಳನ್ನು ನಿಷೇಧಿಸುವ ಯೋಜನೆ ಜಾರಿ ಹಂತದಲ್ಲಿದೆ. ಪರ್ವತಾರೋಹಿಗಳಿಗೆ ಕನಿಷ್ಠ 1 ಕೆಜಿ ಕಸವನ್ನು ಹಿಂದಿರುಗುವಾಗ ತಂದು ಸಂಸ್ಕರಣಾ ಘಟಕಕ್ಕೆ ನೀಡಲು ಉತ್ತೇಜಿಸಲಾಗುತ್ತಿದೆ. ಈ ಮೂಲಕ ತಪ್ಪು ಮಾಡುವವರಿಂದಲೇ ಅದನ್ನು ಸರಿಪಡಿಸುವ ಸಣ್ಣ ಭರವಸೆ ಇದೆ. ಒಟ್ಟಿನಲ್ಲಿ ಎವರೆಸ್ಟ್ ಸ್ವಚ್ಛತೆ ಒಂದೋ ಎರಡೋ ವರ್ಷದ ಪ್ರಯತ್ನಕ್ಕಂತೂ ಅಸಾಧ್ಯ. ಇದೊಂದು ನಿರಂತರ ಪ್ರಯತ್ನವಾಗಿ ಮುಂದುವರಿದರೆ ಮಾತ್ರ ಮುಂದೊಂದು ದಿನ ಸ್ವಚ್ಛ ಎವರೆಸ್ಟನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಬಹುದು. 

Follow Us:
Download App:
  • android
  • ios