ಮಲ್ಪೆ ಕಡಲ ತೀರದಲ್ಲಿ ಎಲ್ಲಿ ನೋಡಿದರಲ್ಲಿ ಗಂಗೆಯ ಕೂದಲು! ಏನಿದರ ವಿಶೇಷ?
ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಅಪರೂಪದ ಪ್ರಾಕೃತಿಕ ವಿದ್ಯಮಾನ ಸಂಭವಿಸಿದೆ. ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ನಾರು ಬೇರುಗಳು ಬಂದು ಬಿದ್ದಿವೆ. ಈ ವಿಶಿಷ್ಟ ಸಸ್ಯ ಜನ್ಯ ನಾರುಗಳನ್ನು ಗಂಗೆಯ ಕೂದಲು ಎಂದು ಕರೆಯುತ್ತಾರೆ.
ವರದಿ: ಶಶಿಧರ ಮಾಸ್ತಿ ಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜೂ.20): ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಅಪರೂಪದ ಪ್ರಾಕೃತಿಕ ವಿದ್ಯಮಾನ ಸಂಭವಿಸಿದೆ. ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ನಾರು ಬೇರುಗಳು ಬಂದು ಬಿದ್ದಿವೆ. ರಾತ್ರಿ ಬೆಳಗಾಗುವುದರೊಳಗಾಗಿ ಕಡಲು ಈ ಕಸದ ರಾಶಿಯನ್ನು ತಂದು ಗುಡ್ಡೆ ಹಾಕಿದೆ. ಹಾಗಂತ ಇದನ್ನು ಕಲ್ಮಶ ಅಥವಾ ಕಸ ಎನ್ನಲು ಸಾಧ್ಯವಿಲ್ಲ. ಸ್ಥಳೀಯ ಆಡು ಭಾಷೆಯಲ್ಲಿ ಈ ವಿಶಿಷ್ಟ ಸಸ್ಯ ಜನ್ಯ ನಾರುಗಳನ್ನು ಗಂಗೆಯ ಕೂದಲು ಎಂದು ಕರೆಯುತ್ತಾರೆ. ಸಮುದ್ರ ತೀರದ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಗಂಗೆಯ ಕೂದಲು ರಾಶಿ ಬಿದ್ದಿದೆ. ಕಡಲ ತೀರದ ಮರಳಿನ ರಾಶಿ ಕಾಣದಷ್ಟು ದಟ್ಟವಾಗಿ ಹಬ್ಬಿಕೊಂಡಿದೆ.
ಇತ್ತೀಚೆಗೆ ಬಿಫರ್ ಜಾಯ್ ಚಂಡಮಾರುತ ತನ್ನ ಅಬ್ಬರ ತೋರಿಸಿತ್ತು. ಯಾವುದೇ ಚಂಡಮಾರುತ ಬಂದಾಗ ಕಡಲು ತನ್ನ ಒಡಲಿನಲ್ಲಿರುವ ಎಲ್ಲಾ ವಸ್ತುಗಳನ್ನು ತಂದು ದಡಕ್ಕೆ ರಾಶಿ ಹಾಕುತ್ತದೆ. ದಶಕಗಳ ಬಳಿಕ ಗಂಗೆಯ ಕೂದಲು ಕಡಲತೀರದಲ್ಲಿ ರಾಶಿ ಬಿದ್ದಿದೆ. ನೋಡಲು ಕಲ್ಮಶದಂತೆ ಕಂಡರೂ ಇದಕ್ಕೆ ಯಾವುದೇ ದುರ್ವಾಸನೆ ಇಲ್ಲ. ಹುಲ್ಲು ರಾಶಿಯ ರೀತಿಯಲ್ಲಿ ಅಥವಾ ನಾವು ಆಹಾರವಾಗಿ ಸ್ವೀಕರಿಸುವ ಶಾವಿಗೆಯ ಎಳೆಯಂತೆ ಕಾಣುತ್ತದೆ.
ಫಸಲ್ ಭೀಮಾ ಯೋಜನೆ ನೋಂದಣಿ ಪ್ರಾರಂಭಿಸಿ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಹಾಗಂತ ಈ ಗಂಗೆಯ ಕೂದಲನ್ನು ಯಾರು ತೆರವು ಮಾಡುವುದಿಲ್ಲ. ಮತ್ತೊಮ್ಮೆ ಅಬ್ಬರದ ಕಡಲಿನ ಅಲೆಗಳು ತೀರ ಪ್ರದೇಶಕ್ಕೆ ಬಂದಾಗ, ಅವು ಈ ರಾಶಿಯನ್ನು ಹೊತ್ತು ಮತ್ತೆ ಕಡಲಿನ ಒಡಲಿಗೆ ಹಾಕುತ್ತದೆ. ಮೀನಿಗೆ ಇದು ಅತ್ಯುತ್ತಮ ಆಹಾರ. ಹಾಗಾಗಿ ಯಾರು ಕೂಡ ಇದರ ಗೋಜಿಗೆ ಹೋಗುವುದಿಲ್ಲ.
ಸುಮಾರು ಹತ್ತು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ಗಂಗೆಯ ಕೂದಲು ಕಡಲತೀರಕ್ಕೆ ರಾಶಿ ಬಿದ್ದಿತ್ತು. ಈ ಬಾರಿ ಈ ರಾಶಿಯಲ್ಲಿ ಜನರು ಹಾಕಿರುವ ಕಸ, ಕಡ್ಡಿ ,ಪ್ಲಾಸ್ಟಿಕ್ ಗಳು ಕೂಡ ಸೇರವೆ. ಕಡಲು ತನ್ನೊಳಗೆ ಏನು ಇಟ್ಟುಕೊಳ್ಳುವುದಿಲ್ಲ, ಹಾಗಾಗಿ ಕಡಲು ಸೇರಿದ ಕಸಗಳು ಕೂಡ ಇಲ್ಲಿ ಬಂದು ಗುಡ್ಡೆ ಬಿದ್ದಿದೆ.
ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದೆಯಾ ? ಮಾಜಿ ಸಿಎಂ ಬೊಮ್ಮಾಯಿ, ಅಶೋಕ್ ಬಂಧನಕ್ಕೆ ಕೋಟ ಗರಂ
ಬಿಫರ್ ಜಯ ಚಂಡಮಾರುತ ಬಂದಾಗ ಅಲೆಗಳ ಆರ್ಭಟ ಹೆಚ್ಚಾಗಿತ್ತು. ಮೂರರಿಂದ ನಾಲ್ಕು ಅಡಿ ಎತ್ತರದ ಅಲೆಗಳು ಕಡಲ ತೀರದಲ್ಲಿ ಕಾಣಿಸಿದ್ದವು. ಚಂಡಮಾರುತಗಳು ಬಂದಾಗಲೆಲ್ಲ ಈ ರೀತಿಯ ವಿಚಿತ್ರ ಪ್ರಾಕೃತಿಕ ವಿದ್ಯಮಾನಗಳು ಸಂಭವಿಸುವುದಿದೆ. ಇದೀಗ ರಾಶಿ ಬಿದ್ದಿರುವ ಗಂಗೆಯ ಕೂದಲನ್ನು ಕಾಣಲು, ಅನೇಕ ಜನ ಸಮುದ್ರ ತೀರಕ್ಕೆ ಭೇಟಿ ನೀಡುತ್ತಿದ್ದಾರೆ.