Asianet Suvarna News Asianet Suvarna News

ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದೆಯಾ ? ಮಾಜಿ ಸಿಎಂ ಬೊಮ್ಮಾಯಿ, ಅಶೋಕ್ ಬಂಧನಕ್ಕೆ ಕೋಟ ಗರಂ

ಮಾಜಿ ಸಿಎಂ ಬಂಧನ, ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದೆಯೇ? ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಪ್ರಶ್ನೆ 

Congress and BJP spar over rice supply  Kota Srinivas Poojary reaction kannada news gow
Author
First Published Jun 20, 2023, 9:54 PM IST

ಬೆಂಗಳೂರು (ಜೂ.20): ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನಾ ನಿರತ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹಸಚಿವ ಆರ್.ಅಶೋಕ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸುತ್ತಿರುವಾಗಲೇ ಅವರನ್ನು ಪೋಲಿಸರು ಎಳೆದೊಯ್ದಿರುವುದು ಖಂಡನೀಯ. ರಾಜ್ಯದಲ್ಲಿ ಕಾಂಗ್ರೆಸ್ ತುರ್ತು ಪರಿಸ್ಥಿತಿಯನ್ನು ಹೇರಿದೆಯಾ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದರು. ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ಸರಕಾರದ ನಡವಳಿಕೆಯ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. 

ರಾಜ್ಯದ ಜನತೆಗೆ ಐದು ಗ್ಯಾರಂಟಿ ಕೊಡುತ್ತೇವೆ ಅಂದವರು ನೀವೇ, ಈಗ ಕೊಡಲಿಲ್ಲ ಎಂದು ನಾವು ಪ್ರತಿಭಟಿಸಿದರೆ ಬಂಧನ ಮಾಡುತ್ತೀರಿ. 10 ಕೆಜಿ ಅಕ್ಕಿ ಕೊಡ್ತೇವೆ ಅಂದಿದ್ರಿ, ಈಗ ಪ್ರಧಾನಿ ಮೋದಿ ಅಕ್ಕಿ ಕೊಡಲ್ಲ ಅಂತಿದ್ದೀರಿ.10 ಕೆಜಿ ಕೊಡುತ್ತೇವೆ ಎಂದದ್ದು ನಾವಾ ಅಥವಾ ನೀವಾ? ಸಿದ್ದರಾಮಯ್ಯ ಆತ್ಮ ಸಾಕ್ಷಿಗೆ ಸರಿಯಾಗಿ ಮಾತನಾಡಲಿ ಎಂದು ಕಿಡಿ ಕಾರಿದರು.

ಹೆಂಗಸರಿಗಿಂತ ಈಗ ಗಂಡಸರೇ ಜಾಸ್ತಿ ಮೇಕಪ್‌ ಹಾಕಿಕೊಳ್ತಿದ್ದಾರೆ: ಡಿ.ಕೆ. ಶಿವಕುಮಾರ್‌

ಕೇಂದ್ರ ಸರಕಾರ ರಾಜ್ಯದ 1,17,26,703 ಬಿ.ಪಿ.ಎಲ್ ಕಾರ್ಡ್ ಹಾಗು 10,89,994 ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ 5 ಕೆಜಿ ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ ಸಿದ್ದರಾಮಯ್ಯನವರು ಅನ್ನಭಾಗ್ಯದಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೇ ವಿನಾಃ ಕೇಂದ್ರದ ಸರಕಾರ 5 ಕೆಜಿ ಉಚಿತ ಅಕ್ಕಿಯನ್ನು ಒಳಗೊಂಡಂತೆ ಎಂದು ತಿಳಿಸಿರಲಿಲ್ಲ. ಈಗ ಒಂದು ಗ್ರಾಂ ಅಕ್ಕಿ ಕೊಟ್ಟಿಲ್ಲ ಎಂದರೇ ಹೇಗೆ ಎಂದರು.

ಪ್ರಧಾನಿ ನರೇಂದ್ರ ಮೋದಿಯನ್ನು ನರಹಂತಕ್ಕ ಎಂದಿರುವ ಸಿಎಂ ಸಿದ್ದರಾಮಯ್ಯ ಈಗ ಅದೇ ಬಾಯಿಯಲ್ಲಿ ಅಕ್ಕಿ ಕೇಳ್ತೀರಿ. 10 ಕೆಜಿ ಅಕ್ಕಿ ನಾವು ಕೊಟ್ಟ ಭರವಸೆ ಅಲ್ಲ, ನೀವು ಕೊಟ್ಟ ಭರವಸೆ. ಅಕ್ಕಿಯನ್ನು ಎಲ್ಲಿ ಬೇಕಾದರೂ ಖರೀದಿ ಮಾಡಬಹುದು ಅನಗತ್ಯ ಕೇಂದ್ರದ ಮೇಲೆ ಗೂಬೆಕೂರಿಸುವುದು ಸರಿಯಲ್ಲ ಎಂದವರು ಹೇಳಿದರು.

News Hour: ಅಕ್ಕಿ ರಾಜಕೀಯಕ್ಕೆ ಕಾಂಗ್ರೆಸ್‌-ಬಿಜೆಪಿ ಪ್ರತಿಭಟನೆ!

ವಿದ್ಯುತ್ ದರ ಏರಿಕೆಗೂ ಬಿಜೆಪಿ ಸರಕಾರದ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ. ನಮ್ಮ ಸರಕಾರದ ಅವಧಿಯಲ್ಲಿ ಕೆಇಆರ್‌ಸಿ ಪ್ರಸ್ತಾಪಕ್ಕೆ ಅನುಮೋದನೆ ಕೊಟ್ಟಿಲ್ಲ, ವಿದ್ಯುತ್ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗಿಂತ ದೊಡ್ಡವರಾ..? ನೀವ್ಯಾಕೆ ವಿದ್ಯುತ್ ದರ ಏರಿಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ರಾಜ್ಯದ ಕೈಗಾರಿಕೆ ಉದ್ಯಮಿಗಳು ಅನ್ಯ ರಾಜ್ಯಕ್ಕೆ ಗುಳೆ ಹೋಗ್ತೇವೆ ಅಂತಿದ್ದಾರೆ. ಆವತ್ತು ವಿದ್ಯುತ್ ಬಿಲ್ ಉಚಿತ ಎಂದು, ಈಗ ಬಿಲ್ ಮೊತ್ತ ಜಾಸ್ತಿ ಮಾಡಿದ್ದೀರಿ ಎಂದು ದೂರಿದರು.

ಒಂದೇ ಒಂದು ಬಸ್ಸಿನ ಸಂಖ್ಯೆ ಹೆಚ್ಚು ಮಾಡದೇ, ಸರಿಯಾದ ಪೂರ್ವ ತಯಾರಿ ಇಲ್ಲದೆ ಶಕ್ತಿ ಯೋಜನೆ ಜಾರಿ ಮಾಡಿದಲ್ಲದೇ, ಮಹಿಳಾ ಪ್ರಯಾಣಿಕರು ಹೆಚ್ಚಿರುವುದರಿಂದ ಬಸ್ ಗಳ ಬಾಗಿಲು ಮುರಿದು ಹೋಗಿದೆ. ಮಹಿಳೆಯರು ಮಕ್ಕಳು ಕೈ ಅಡ್ಡ ಹಾಕಿದರೂ ಸರ್ಕಾರಿ ಬಸ್ ನಿಲ್ಲೋದಿಲ್ಲ. ಆಟೋ ಚಾಲಕರು ಪ್ರಯಾಣಿಕರಿಲ್ಲದೆ ಕಂಗಾಲಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅತ್ತೆಗೋ ಸೊಸೆಗೊ ಎಂಬ ಗೊಂದಲ ಇದ್ದು, ಈಗಾಗಲೇ ಕೌಟುಂಬಿಕ ಕಲಹಗಳು ಆರಂಭವಾಗಿದೆ ಎಂದರು. 

ಬಿಜೆಪಿ ವಿಪಕ್ಷ ನಾಯಕ ವಿಳಂಬ ವಿಚಾರ:
ವಿರೋಧ ಪಕ್ಷದ ನಾಯಕರನ್ನು ಸಿದ್ದರಾಮಯ್ಯ ಡಿಕೆಶಿ ಹೇಳಿ ನೇಮಕ ಮಾಡಬೇಕಾಗಿಲ್ಲ. ಸೋಲು ಗೆಲುವಿಗೆ ಎಲ್ಲರೂ ಹೊಣೆಗಾರರಾಗಬೇಕು ಒಬ್ಬನೇ ನಾಯಕನನ್ನು ಹೊಣೆ ಮಾಡುವುದು ಸರಿಯಲ್ಲ. ಬಿಜೆಪಿಯ ಚುನಾವಣಾ ನಿರ್ವಹಣೆಯ ಸಫಲತೆಯಲ್ಲಿ ಕಾರ್ಯಕರ್ತರ ಪರಿಶ್ರಮ ಇದೆ. ಇದು ಬಿಜೆಪಿ ರಾಜ್ಯಾಧ್ಯಕ್ಷರ ವಿಫಲತೆ ಅಲ್ಲ, ಗ್ಯಾರೆಂಟಿ ಯೋಜನೆಯ ಪರಿಣಾಮವನ್ನು ಅಂದಾಜಿಸಲು ಸಾಧ್ಯವಾಗಿರಲಿಲ್ಲ ಎಂದರು. 

ಈ ಸರಕಾರಕ್ಕೆ ಹಿಂದುಗಳ ಹೆಸರು ಕೇಳಿದರೆ ಆಗಲ್ಲ, ಧಾರ್ಮಿಕ ಸಂರಕ್ಷಣಾ ಕಾಯ್ದೆ ವಂಚನೆ, ಸಂಚು, ಆಮಿಷ, ಬಲತ್ಕಾರದ ಮತಾಂತರವನ್ನು ಮಾತ್ರ ನಿಷೇಧ ಮಾಡಿದೆ. ಯಾರಾದರೂ ಸ್ವ ಇಚ್ಛೆಯಿಂದ ಹೋಗುವುದಾದರೆ ಮುಕ್ತ ಅವಕಾಶ ಇದೆ. ಹಿಂದೂ ಧರ್ಮಕ್ಕೆ ಆಗುವ ಅನ್ಯಾಯ ತಡೆಯುವ ಮಸೂದೆ ಎಂಬ ಕಾರಣಕ್ಕೆ ರದ್ದು ಮಾಡುತ್ತಿದ್ದಾರೆ. ಟೌನ್ ಹಾಲ್ ಎದುರು ಗೋಮಾಂಸ ತಿನ್ನುವವರಿಗೆ ಹಿತವಾಗಲಿ ಎಂದು ಈ ನಿರ್ಧಾರ ಮಾಡಿದ್ದಾರೆ. ಸರಕಾರದ ಈ ಹಿಂದೂ ವಿರೋಧಿ ನಿಲುವಿನ ವಿರುದ್ಧ ಸದನದ ಹೊರಗೆ ಒಳಗೆ ಹೋರಾಟ ಮಾಡುತ್ತೇವೆ ಎಂದರು.

Follow Us:
Download App:
  • android
  • ios