ರಾಮ ಭಕ್ತರ ಆಸೆ ಕೊನೆಗೂ ಈಡೇರಿಸಿದ ಡಾ.ಬ್ರೋ: ರಾಮಲಲ್ಲಾ ಮಂದಿರದ ಮುಖ್ಯದ್ವಾರದಲ್ಲಿ ಗಗನ್ ವಿವರಣೆ...
ಡಾ.ಬ್ರೋ ಅಯೋಧ್ಯೆಗೆ ಭೇಟಿ ಕೊಟ್ಟಿದ್ದು, ಇದೀಗ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯ ನಡೆಯುವ ಸ್ಥಳಕ್ಕೂ ಹೋಗಿ ಅಲ್ಲಿಯ ಮಾಹಿತಿ ನೀಡಿದ್ದಾರೆ.
ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇದೇ 22ರಂದು ನಡೆಯಲಿರುವ ಈ ಮಹಾನ್ ಕಾರ್ಯಕ್ಕೆ ಭರ್ಜರಿ ತಯಾರಿ ನಡೆದಿದೆ. ಭಾರತ ಮಾತ್ರವಲ್ಲದೇ ಪ್ರಪಂಚದ ಹತ್ತಾರು ದೇಶಗಳು ಈ ಐತಿಹಾಸಿಕ ದಿನಕ್ಕಾಗಿ ಕಾದು ಕುಳಿತಿವೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ರಾಣಪ್ರತಿಷ್ಠೆಯ ನೇರ ಪ್ರಸಾರಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಮೆರಿಕ ಒಂದರಲ್ಲಿಯೇ ಕನಿಷ್ಠ 100 ಕಡೆಗಳಲ್ಲಿ ಈ ಸಿದ್ಧತೆ ನಡೆಯುತ್ತಿರುವುದಾಗಿ ವರದಿಯಾಗಿದೆ. ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಪ್ರಪಂಚದ ವಿವಿಧ ದೇಶಗಳ ಗಣ್ಯಾತಿಗಣ್ಯರು ಭಾರತಕ್ಕೆ ಆಗಮಿಸಿ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯರಾಗಿದ್ದುಕೊಂಡು ಅಯೋಧ್ಯೆ ಹಾಗೂ ಶ್ರೀರಾಮನ ಕುರಿತು ಅಪಹಾಸ್ಯ ಮಾಡುವವರೂ ಶಾಕ್ ಆಗುವ ರೀತಿಯಲ್ಲಿ ಇದಾಗಲೇ ಹಲವಾರು ಘಟನೆಗಳು ನಡೆದು ಹೋಗಿವೆ.
ಇದಾಗಲೇ ಅಯೋಧ್ಯೆ ನಗರಿಯಲ್ಲಿ ಬಿರುಸಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಎಲ್ಲೆಲ್ಲೂ ಶ್ರೀರಾಮನಾಮವೇ ಮೊಳಗುತ್ತಿದೆ. ಅಯೋಧ್ಯೆ ನವವಧುವಿನಂತೆ ಶೃಂಗಾರಗೊಂಡು ನಳನಳಿಸುತ್ತಿದೆ. ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ಕೆ ಇದಾಗಲೇ ಮನೆಮನೆಗೆ ತೆರಳಿ ಅಕ್ಷತೆ ನೀಡಿ ಆಮಂತ್ರಿಸುವ ಕಾರ್ಯವೂ ನಡೆಯುತ್ತಿದೆ. 500 ವರ್ಷಕ್ಕೂ ಅಧಿಕ ಕಾಲದ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ. ಇದಾಗಲೇ ಅಯೋಧ್ಯೆಗೆ ಭೇಟಿ ಕೊಟ್ಟಿರುವ ಡಾ.ಬ್ರೋ ಅಲ್ಲಿಯ ಹಲವು ಸ್ಥಳಗಳ ಪರಿಚಯ ಮಾಡಿಸುತ್ತಲೇ ಇದ್ದಾರೆ. ಆದರೆ ರಾಮಲಲ್ಲಾ ದೇವಸ್ಥಾನವನ್ನೊಮ್ಮೆ ತೋರಿಸಿ ಎಂದು ಅಭಿಮಾನಿಗಳು ಗಗನ್ ಅವರಿಗೆ ಒತ್ತಾಯ ಮಾಡುತ್ತಲೇ ಇದ್ದರು. ಆದರೆ ಟೈಟ್ ಸೆಕ್ಯುರಿಟಿ ಇದ್ದ ಕಾರಣ, ಇದು ತುಂಬಾ ಕಷ್ಟ ಎಂದಿದ್ದರು ಡಾ.ಬ್ರೋ. ಆದರೆ ಕೊನೆಗೂ ತಮ್ಮ ಅಭಿಮಾನಿಗಳ ಆಸೆಯನ್ನು ಡಾ.ಬ್ರೋ ನೆರವೇರಿಸಿದ್ದಾರೆ.
ಹೊಸ ವರ್ಷಕ್ಕೆ ಹೊಸ ಸರ್ಪ್ರೈಸ್: ಅಯೋಧ್ಯೆ ಪುಣ್ಯಭೂಮಿಯಲ್ಲಿ ಡಾ.ಬ್ರೋ- ರಾಮಾಯಣ ನಂಟಿರೋ ನೇಪಾಳಕ್ಕೂ ಭೇಟಿ
ಅನೇಕ ಸಲ ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಲಿಲ್ಲ. ಪ್ರಾಣಪ್ರತಿಷ್ಠೆಯ ದಿನ ಸಮೀಪದಲ್ಲಿಯೇ ಇರುವ ಕಾರಣ ತುಂಬಾ ಸೆಕ್ಯುರಿಟಿ ಇದೆ ಎನ್ನುತ್ತಲೇ ಕೊನೆಯ ಪ್ರಯತ್ನ ಮಾಡುವುದಾಗಿ ಹೇಳಿದ ಗಗನ್ ಅವರು, ಕೊನೆಗೂ ಎಲ್ಲಾ ಸೆಕ್ಯುರಿಟಿ ಚೆಕ್ ಪಾಸ್ ಮಾಡಿಕೊಂಡು ದೇವಸ್ಥಾನದ ಹತ್ತಿರ ಹೋಗಿದ್ದಾರೆ. ರಾಮಲಲ್ಲಾ ಮಂದಿರದ ಮುಖ್ಯದ್ವಾರದಲ್ಲಿ ನಿಂತು ಅಲ್ಲಿಂದಲೇ ಪರಿಚಯ ಮಾಡಿಸಿದ್ದಾರೆ. ಇಲ್ಲಿಯವರೆಗೆ ಬರಲು ಆಗುವುದೇ ಇಲ್ಲವೇನೋ ಅಂದುಕೊಂಡಿದ್ದೆ. ಆದರೆ ರಾಮನ ದೆಸೆಯಿಂದ ಬಂದುಬಿಟ್ಟೆ ಎಂದಿದ್ದಾರೆ. ರಾಮ ಮಂದಿರ ಸ್ಥಾಪನೆಗೆ ಇದ್ದ ಐದು ನೂರು ವರ್ಷಗಳ ಹೋರಾಟದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿಯ ಬಲಿದಾನವಿದೆ ಎನ್ನುತ್ತಲೇ ಆ ಸ್ಥಳದ ಪರಿಚಯ ಮಾಡಿಸಿದ್ದಾರೆ.
ಪ್ರಾಣ ಪ್ರತಿಷ್ಠೆ ಕಾರ್ಯಕ್ಕೆ ದಿನದ 24 ಗಂಟೆ ದುಡಿಯುತ್ತಿರುವ ಕೆಲಸಗಾರರ ಪೈಕಿ ಕೆಲವರನ್ನು ಮಾತನಾಡಿಸಿದ್ದಾರೆ ಗಗನ್. ನಂತರ ಹತ್ತಿರದ ಶೃಂಗವೀರಪುರಕ್ಕೆ ಭೇಟಿ ಕೊಟ್ಟ ಗಗನ್. ಶ್ರೀರಾಮಚಂದ್ರ ಶಂಗವೀರಪುರಕ್ಕೆ ಬಂದಾಗ ವಿಶ್ರಾಂತಿ ಪಡೆದ ಮರದ ಮಾಹಿತಿ ನೀಡಿದ್ದಾರೆ. ಬಳಿಕ ಪ್ರಯಾಗರಾಜಕ್ಕೆ ಭೇಟಿ ಕೊಟ್ಟು ಭಾರದ್ವಾಜ ಮುನಿಗಳನ್ನು ರಾಮ-ಸೀತಾ ಭೇಟಿ ಮಾಡಿದ ಸ್ಥಳದ ಕುರಿತೂ ಮಾಹಿತಿ ನೀಡಿದರು. 14 ವರ್ಷ ವನವಾಸಕ್ಕೆ ಹೋಗುವ ಪೂರ್ವದಲ್ಲಿ ರಾಮ-ಸೀತಾ ಇಲ್ಲಿಗೆ ಭೇಟಿ ಕೊಟ್ಟಾಗ ಭಾರದ್ವಾಜ ಮುನಿಗಳು ಬೇಸರಿಸಿಕೊಂಡಿದ್ದನ್ನು ತಿಳಿಸಿದರು.
ಇದೇ ವೇಳೆ, ತ್ರಿವೇಣಿ ಸಂಗಮದ ಪರಿಚಯ ಮಾಡಿಸಿದ ಗಗನ್ ಇಲ್ಲಿ ನಡೆಯುವ ಕುಂಭಮೇಳದ ಮಾಹಿತಿ ನೀಡಿದರು. ಅರ್ಧ ಕುಂಭಮೇಳ, ಪೂರ್ಣ ಕುಂಭಮೇಳ, ಮಹಾ ಕುಂಭಮೇಳದ ಸಂಪೂರ್ಣ ಮಾಹಿತಿ ನೀಡಿ ಅಲ್ಲಿಯ ಸೌಂದರ್ಯವನ್ನು ಪರಿಚಯಿಸಿದರು. ಈ ಹಿಂದಿನ ವಿಡಿಯೋದಲ್ಲಿ ಗಗನ್ ಅವರು, ಅಯೋಧ್ಯೆಯ ಹಲವಾರು ಸ್ಥಳ, ದೇಗುಲಗಳ ದರ್ಶನ ಮಾಡಿಸಿದ್ದರು. ಇಲ್ಲಿ ಹಲವಾರು ದೇಗುಲಗಳು ಇದ್ದರೂ ಮೊದಲಿಗೆ ಹನುಮಾನ ಗಡಿಯಲ್ಲಿ ಹನುಮಂತನ ದರ್ಶನ ಮಾಡಿಯೇ ಜನರು ಮುಂದಿನ ದರ್ಶನ ಮಾಡುತ್ತಾರೆ. ಹನುಮಂತ ಭೂಲೋಕದಲ್ಲಿ ಶ್ರೀರಾಮನ ಜಪ ಮಾಡುತ್ತಾ ಇರುವ ಸ್ಥಳ ಇದು. ಅಯೋಧ್ಯೆಯಲ್ಲಿ ವಿರಾಜಮಾನ ನಿಲ್ಲಿಸಿರುವ ಹನುಮಂತನ ನೋಡಿ ಎನ್ನುತ್ತಲೇ ಹನುಮಂತನ ದರ್ಶನವನ್ನೂ ಮಾಡಿಸಿದ್ದರು. ಇದೇ ಸಂದರ್ಭದಲ್ಲಿ ನಮಗೆ ಇದಾಗಲೇ ಹನುಮಂತನ ಅಪ್ಪಣೆಯಾಗಿದೆ. ರಾಮನ ಹುಡುಕಿಕೊಂಡು ಹೋಗುವುದೇ ನಮ್ಮ ಕೆಲಸ ಎನ್ನುತ್ತಲೇ ಹಲವಾರು ವಿಷಯಗಳನ್ನು ತಿಳಿಸಿದ್ದರು.
ವಿಶ್ವದ ಏಕಮಾತ್ರ 7 ಸ್ಟಾರ್ ಹೋಟೆಲ್ನಲ್ಲಿ ಡಾ.ಬ್ರೋ: ಟಾಯ್ಲೆಟ್ನಿಂದ ಹಿಡಿದು ಮುಟ್ಟಿದ್ದೆಲ್ಲವೂ ಚಿನ್ನವೇ!